ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕೋಸು ಬರೀ ಪಲ್ಯಕ್ಕಲ್ಲ; ಮಂಚೂರಿಗೂ ಬೇಕು!

Last Updated 6 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಎಲೆಕೋಸು ಎಂದಾಕ್ಷಣ ನೆನಪಾಗುವುದು ರುಚಿಯಾದ ಪಲ್ಯ. ಪಕಳೆಗಳಿಂದ ಕೂಡಿರುವ ಎಲೆಕೋಸನ್ನು ಸಣ್ಣದಾಗಿ ಹೆಚ್ಚಿ ತೆಂಗಿನತುರಿ ಸೇರಿಸಿ ಪಲ್ಯ ಮಾಡಿದರೆ ಅದರ ರುಚಿಯೇ ಬೇರೆ. ಹೂಕೋಸಿನಷ್ಟು ಎಲೆಕೋಸಿಗೆ ಬೇಡಿಕೆ ಇಲ್ಲದಿದ್ದರೂ ಈಗ ಎಲೆಕೋಸಿನಲ್ಲೇ ಬಾತ್, ಮಂಚೂರಿ, ತಾಲಿಪಟ್ಟಿನಂತಹ ರುಚಿಯಾದ ತಿಂಡಿಗಳನ್ನು ತಯಾರಿಸುತ್ತಿದ್ದಾರೆ. ಸರ್ವಕಾಲದಲ್ಲೂ ಸಿಗುವ ಎಲೆಕೋಸಿನಲ್ಲಿ ನೀವು ರುಚಿಯಾದ ಖಾದ್ಯಗಳನ್ನು ತಯಾರಿಸಿ ತಿನ್ನಿ ಎನ್ನುತ್ತಾರೆ ಅರ್ಚನಾ ಜಿ. ಬೊಮ್ನಳ್ಳಿ

ಎಲೆಕೋಸಿನ ಹುಡಿ ಪಲ್ಯ

ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಹೆಚ್ಚಿಕೊಂಡ ಎಲೆಕೋಸು – 2 ಕಪ್, ಕಡಲೆಬೇಳೆ – ಅರ್ಧ ಕಪ್, ಉದ್ದಿನಬೇಳೆ – 2 ಚಮಚ, ಜೀರಿಗೆ – 1 ಚಮಚ, ಕೊತ್ತಂಬರಿ – 1 ಚಮಚ, ಕೆಂಪುಮೆಣಸಿನ ಕಾಯಿ – 4, (ಮೆಣಸಿನ ಪುಡಿಯನ್ನು ಬೇಕಿದ್ದರೂ ಬಳಸಬಹುದು) ಸಾಸಿವೆ – ಕಾಲು ಚಮಚ, ವಾಟೆಹುಳಿಪುಡಿ ಅಥವಾ ಮಾವಿನಕಾಯಿ ಪುಡಿ – 1 ಚಮಚ, ಬೆಲ್ಲ – 2ರಿಂದ 3 ಚಮಚ, ರುಚಿಗೆ ಉಪ್ಪು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಅರಿಸಿನ ಪುಡಿ.

ತಯಾರಿಸುವ ವಿಧಾನ: ಮೊದಲು ಒಂದು ಬಾಣಲೆಗೆ ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಕೊತ್ತಂಬರಿ, ಸಾಸಿವೆ, ಮೆಣಸಿನಕಾಯಿಯನ್ನು ಬೇರೆ ಬೇರೆಯಾಗಿ ಕಮ್ಮಗೆ ಹುರಿದುಕೊಂಡು, ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ನೀರು ಹಾಕದೆ ಪುಡಿ ಮಾಡಿಕೊಳ್ಳಿ. ನಂತರ ದಪ್ಪ ತಳದ ಪಾತ್ರೆಗೆ ಒಗ್ಗರಣೆಯ ಎಣ್ಣೆ ಕಾಯಿಸಿಕೊಂಡು, ಸಾಸಿವೆ, ಅರಿಸಿನಪುಡಿ ಹಾಕಿ ಬೆಂದ ಮೇಲೆ ಹೆಚ್ಚಿಕೊಂಡ ಎಲೆಕೋಸನ್ನು ಹಾಕಿ, ಉಪ್ಪು, ಹುಳಿ ಸೇರಿಸಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಬೆಲ್ಲ ಹಾಕಿ ಸಂಪೂರ್ಣವಾಗಿ ನೀರು ಆರಿದ ಮೇಲೆ, ಮೊದಲು ಮಾಡಿಟ್ಟುಕೊಂಡ ಪುಡಿಯನ್ನು ಹಾಕಿ ಕೆಳಗಿಳಿಸಿರಿ. ಇದು ಬಿಸಿ ಆರಿದ ಮೇಲೆ ಬೇರೆ ಪಾತ್ರೆಗೆ ಹಾಕಿಟ್ಟುಕೊಳ್ಳಿ. ಹುಡಿಯಾದ ಪಲ್ಯವನ್ನು ಎರಡು ದಿನಗಳವರೆಗೆ ಇಡಬಹುದು. ತೆಂಗಿನಕಾಯಿ ತುರಿ ಬೇಕಿದ್ದರೆ ಬೆಲ್ಲ ಹಾಕುವಾಗಲೇ ಹಾಕಬೇಕು.

ಎಲೆಕೋಸು ‌ಮಂಚೂರಿ

ಬೇಕಾಗುವ ಸಾಮಗ್ರಿಗಳು: ಸಣ್ಣಗೆ ಹೆಚ್ಚಿಕೊಂಡ ಎಲೆಕೋಸು – 2 ಕಪ್, ಜೋಳದಹಿಟ್ಟು – ಒಂದೂವರೆ ಕಪ್, ಅಕ್ಕಿಹಿಟ್ಟು – ಅರ್ಧ ಕಪ್, ಕಡ್ಲೆಹಿಟ್ಟು – 2 ಚಮಚ, ಜೀರಿಗೆ – ಅರ್ಧ ಚಮಚ, ರುಚಿಗೆ ಉಪ್ಪು, ನಿಂಬೆಹೋಳು – 1, ಶುಂಠಿ – 1 ಇಂಚು, ಬೆಳ್ಳುಳ್ಳಿ – 10 ಎಸಳು, ಕೊತ್ತಂಬರಿ ಸೊಪ್ಪು – ಅರ್ಧಕಟ್ಟು, ಹೆಚ್ಚಿಕೊಂಡ ಈರುಳ್ಳಿ – 1 ಕಪ್, ಹಸಿಮೆಣಸು – 3(ಖಾರ ಜಾಸ್ತಿ ಬೇಕಿದ್ದರೆ ಮೆಣಸನ್ನು ಜಾಸ್ತಿ ಹಾಕಬಹುದು), ಕರಿಯಲು ಎಣ್ಣೆ, ಟೊಮೆಟೊ ಸಾಸ್ ಸ್ವಲ್ಪ.

ತಯಾರಿಸುವ ವಿಧಾನ: ಹೆಚ್ಚಿಕೊಂಡ ಎಲೆಕೋಸಿಗೆ ಜೋಳದಹಿಟ್ಟು, ಅಕ್ಕಿಹಿಟ್ಟು, ಕಡ್ಲೆಹಿಟ್ಟು, ಜೀರಿಗೆ, ಉಪ್ಪು, ಹುಳಿ ಸೇರಿಸಿ ನೀರು ಹಾಕದೆ ಚೆನ್ನಾಗಿ ಕಲೆಸಿ. ಅರ್ಧ ಗಂಟೆ ಬಿಟ್ಟು ಕಾದ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಉಂಡೆಯಂತೆ ಬಿಟ್ಟು ಹೊಂಬಣ್ಣ ಬರುವವರೆಗೆ ಕರಿದು ತೆಗೆದಿಟ್ಟಕೊಳ್ಳಿ. ನಂತರ ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿಯನ್ನು ನೀರು ಹಾಕದೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ದಪ್ಪ ತಳದ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ಮೇಲೆ ಹೆಚ್ಚಿಕೊಂಡ ಈರುಳ್ಳಿ ಹಾಕಿ ಕಮ್ಮಗೆ ಹುರಿದು ಇದಕ್ಕೆ ರುಬ್ಬಿಕೊಂಡ ಪೇಸ್ಟ್‌ ಅನ್ನು ಹಾಕಿ, ಕರಿದುಕೊಂಡ ಎಲೆಕೋಸನ್ನು ಸೇರಿಸಿ, ಟೊಮೆಟೊ ಸಾಸ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ಬಿಸಿ ಇರುವಾಗಲೆ ಗರಿ ಗರಿ ಮಂಚೂರಿಯನ್ನು ಸವಿಯಿರಿ.

ಎಲೆಕೋಸು ತಾಲಿಪಟ್ಟು

ಬೇಕಾಗುವ ಸಾಮಗ್ರಿಗಳು: ಹೆಚ್ಚಿಕೊಂಡ ಎಲೆಕೋಸು – 2 ಕಪ್, ಹೆಚ್ಚಿದ ಈರುಳ್ಳಿ – 1 ಕಪ್, ಅಕ್ಕಿಹಿಟ್ಟು – 3 ಕಪ್, ಹೆಚ್ಚಿಕೊಂಡ ಕೊತ್ತಂಬರಿಸೊಪ್ಪು – ಸ್ವಲ್ಪ, ಶುಂಠಿ, ಹಸಿಮೆಣಸಿನ ಪೇಸ್ಟ್ ಸ್ವಲ್ಪ, ಕರಿಬೇವಿನ ಎಸಳು – 1, ರುಚಿಗೆ ಉಪ್ಪು, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಗೆ ಹೆಚ್ಚಿದ ಎಲೆಕೋಸು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ, ಹಸಿಮೆಣಸಿನ ಪೇಸ್ಟ್‌ ಅನ್ನು ಹಾಕಿ, ಉಪ್ಪು ಸೇರಿಸಿ, ಒಂದೂವರೆ ಕಪ್ ನೀರು ಹಾಕಿ ಕುದಿಸಿರಿ. ನಂತರ ಇದಕ್ಕೆ ಅಕ್ಕಿಹಿಟ್ಟು ಹಾಕಿ ಕೆಳಗಿಳಿಸಿಕೊಂಡು, ಬಿಸಿ ಆರಿದ ಮೇಲೆ, ಹಿಟ್ಟನ್ನು ಹದ ಮಾಡಿಕೊಂಡು, ಚಿಕ್ಕ, ಚಿಕ್ಕ ಉಂಡೆ ಮಾಡಿ ಸಣ್ಣದಾಗಿ ವಡೆಯಂತೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿದು, ಕಾಯಿಚಟ್ನಿಯೊಂದಿಗೆ ಬಿಸಿ ಇರುವಾಗಲೇ ತಿನ್ನಿರಿ.

ಎಲೆಕೋಸು ಬಾತ್‌

ಬೇಕಾಗುವ ಸಾಮಗ್ರಿಗಳು: ಹೆಚ್ಚಿಕೊಂಡ ಎಲೆಕೋಸು – 1 ಕಪ್, ಹೆಚ್ಚಿದ ಈರುಳ್ಳಿ – ಅರ್ಧ ಕಪ್, ಉದುರಾದ ಅನ್ನ – 1 ಕಪ್, ಶುಂಠಿ – 1 ಇಂಚು, ಬೆಳ್ಳುಳ್ಳಿ – 6 ಎಸಳು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಪಾಲಕ್ ಸೊಪ್ಪು – ಅರ್ಧ ಕಟ್ಟು, ಹಸಿಮೆಣಸು – 3, ರುಚಿಗೆ ಉಪ್ಪು, ಹುಳಿ, ಒಗ್ಗರಣೆಗೆ ಎಣ್ಣೆ – 3 ಚಮಚ, ಜೀರಿಗೆ – ಅರ್ಧ ಚಮಚ.

ತಯಾರಿಸುವ ವಿಧಾನ: ಮೊದಲು ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿಯನ್ನು ನೀರು ಹಾಕದೆ ಮಿಕ್ಸಿಗೆ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ದಪ್ಪ ತಳದ ಪಾತ್ರೆಗೆ ಒಗ್ಗರಣೆ ಎಣ್ಣೆ ಹಾಕಿ, ಕಾದ ಮೇಲೆ ಜೀರಿಗೆ ಹಾಕಿ, ಬೆಂದ ಮೇಲೆ ಹೆಚ್ಚಿದ ಎಲೆಕೋಸು, ಈರುಳ್ಳಿ ಸೇರಿಸಿ ನೀರು ಹಾಕದೆ ಹುರಿಯಿರಿ. ಇದಕ್ಕೆ ರುಬ್ಬಿದ ಪೇಸ್ಟ್‌ ಅನ್ನು ಹಾಕಿ, ಉಪ್ಪು, ಹುಳಿ ಬೆರೆಸಿ, ಚೆನ್ನಾಗಿ ಫ್ರೈ ಮಾಡಿ. ಅನ್ನ ಹಾಕಿ ಮಿಕ್ಸ್ ಮಾಡಿದರೆ ಬಿಸಿ ಬಿಸಿ ಬಾತ್ ಸವಿಯಲು ಸಿದ್ಧ. ಇದಕ್ಕೆ ಬೇಕಿದ್ದರೆ ಬಟಾಣಿಕಾಳನ್ನು ಬೇಯಿಸಿ ಸೇರಿಸಬಹುದು.

ಮೊಸರು ಬಜ್ಜಿ

ಬೇಕಾಗುವ ಸಾಮಗ್ರಿಗಳು: ಹೆಚ್ಚಿಕೊಂಡ ಎಲೆಕೋಸು – 1 ಕಪ್, ಹೆಚ್ಚಿದ ಈರುಳ್ಳಿ – ಅರ್ಧ ಕಪ್, ಟೊಮೆಟೊ – 1/2 ಕಪ್‌, ತೆಂಗಿನಕಾಯಿ ತುರಿ – ಕಾಲು ಕಪ್ , ಹಸಿಮೆಣಸು – 1, ಮೊಸರು – 1 ಕಪ್, ರುಚಿಗೆ ಉಪ್ಪು, ಒಗ್ಗರಣೆಗೆ ಎಣ್ಣೆ ಸ್ವಲ್ಪ, ಉದ್ದಿನಬೇಳೆ, ಸಾಸಿವೆಕಾಳು ತಲಾ ಅರ್ಧ ಚಮಚ.

ತಯಾರಿಸುವ ವಿಧಾನ: ತೆಂಗಿನಕಾಯಿಯನ್ನು ಹಸಿಮೆಣಸಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಹೆಚ್ಚಿದ ಎಲೆಕೋಸು, ಟೊಮೆಟೊ, ಈರುಳ್ಳಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ರುಬ್ಬಿದ ಕಾಯಿ ಹಾಕಿ ಮೊಸರು ಬೆರೆಸಿ ಒಗ್ಗರಣೆ ಮಾಡಿದರೆ ಬಜ್ಜಿ ಊಟಕ್ಕೆ ರೆಡಿ. (ಇದಕ್ಕೆ ನೀರನ್ನು ಜಾಸ್ತಿ ಸೇರಿಸಬೇಡಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT