ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬ್ ರಸಗುಲ್ಲಾ ಮಾಡಿದ ಎಡವಟ್ಟು!

ನಟಿ ಅಪೂರ್ವ ಭಾರದ್ವಾಜ್ ಅನುಭವ
Last Updated 30 ಜನವರಿ 2019, 19:31 IST
ಅಕ್ಷರ ಗಾತ್ರ

‘ಅನುರೂಪ’, ‘ಚಕ್ರವ್ಯೂಹ’, ‘ವಾರಸ್ದಾರ’ ಧಾರಾವಾಹಿಗಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವವರು ಕಿರುತೆರೆ ನಟಿ ಅಪೂರ್ವ ಭಾರದ್ವಾಜ್. ಬಿ.ಸುರೇಶ್ ನಿರ್ದೇಶನದ ‘ಉಪ್ಪಿನ ಕಾಗದ’ ಹಾಗೂ ದಿನೇಶ್ ಬಾಬು ನಿರ್ದೇಶನದ ದ್ವಿಭಾಷಾ ಚಲನಚಿತ್ರ (ತೆಲುಗು–ಮಲಯಾಳಂ) ’ಕೃಷ್ಣಂ’ನಲ್ಲೂ ತಮ್ಮ ಪ್ರತಿಭೆ ತೋರಿರುವ ಚೆಲುವೆ ಅಪೂರ್ವ, ಸದ್ಯಕ್ಕೆ ಸ್ಟಾರ್ ಸುವರ್ಣವಾಹಿನಿಯ ‘ಸತ್ಯಂ ಶಿವಂ ಸುಂದರಂ’ಧಾರಾವಾಹಿಯಲ್ಲಿ ನಾಯಕಿಯಾಗಿದ್ದಾರೆ. ಈ ಬಾರಿಯ ಸೆಲೆಬ್ರಿಟಿ ಕಿಚನ್‌ನಲ್ಲಿ ಅವರು ಹಂಚಿಕೊಂಡ ಅನುಭವ ಇಲ್ಲಿದೆ...

ಊಟ–ತಿಂಡಿ ಅಂದ್ರೆ ಸದಾ ಅಚ್ಚುಮೆಚ್ಚು ಎನ್ನುವ ಅಪೂರ್ವಗೆ ಸಿಹಿಸಿಹಿ ರಸಗುಲ್ಲಾ ಪಂಚಪ್ರಾಣವಂತೆ. ಅಂಥ ರಸಗುಲ್ಲಾವನ್ನು ಮೊದಲ ಬಾರಿಗೆ ತಯಾರಿಸಲು ಹೋದಾಗ ಮಾಡಿದ ಎಡವಟ್ಟಿನಿಂದ ಅವರು ಇಂದಿಗೂ ಹೊಸರುಚಿ ಮಾಡಲು ಹಿಂದೇಟು ಹಾಕುತ್ತಾರಂತೆ. ರಸಗುಲ್ಲಾ ಪುರಾಣವನ್ನು ಅವರ ಮಾತಿನಲ್ಲೇ ಓದಿ...

‘ನಾನಾಗ ಪ್ರಥಮ ಪಿಯುಸಿ ಓದುತ್ತಿದ್ದೆ. ನನಗೆ ರಸಗುಲ್ಲಾ ಅಂದ್ರೆ ತುಂಬಾ ಇಷ್ಟ. ಒಮ್ಮೆ ನಮ್ಮನೆಯಲ್ಲಿ ಹಾಲು ಒಡೆದುಹೋಗಿತ್ತು. ಯುಟ್ಯೂಬ್‌ನಲ್ಲಿ ಒಡೆದ ಹಾಲಿನಿಂದ ರಸಗುಲ್ಲಾ ಮಾಡುವುದನ್ನು ನೋಡಿದ್ದ ನೆನಪಿತ್ತು. ಸರಿ ರಸಗುಲ್ಲಾ ಮಾಡಿದಾಯಿತು ಅಂದುಕೊಂಡು ಒಡೆದ ಹಾಲನ್ನು ಚೆನ್ನಾಗಿ ನಾದಿ ಹಿಟ್ಟಿನಂತೆ ಮಾಡಿಕೊಳ್ಳುವ ಬದಲು, ಅದಕ್ಕೆ ಮೈದಾಹಿಟ್ಟು ಹಾಕಿ ಚೆನ್ನಾಗಿ ನಾದಿ ಉಂಡೆ ಕಟ್ಟಿ ರಸಗುಲ್ಲಾ ತಯಾರಿಸಿ ಸಿಹಿ ಪಾಕದಲ್ಲಿ ಇಟ್ಟೆ.

ಅದನ್ನು ಮೊದಲು ಅಪ್ಪನಿಗೇ ತಿನ್ನಲು ಕೊಡಬೇಕೆಂದು ನಾನೂ ರುಚಿ ನೋಡದೆ ಅಪ್ಪನಿಗಾಗಿ ಕಾದುಕುಳಿತೆ. ಅಪ್ಪ ಬಂದ ತಕ್ಷಣ ಅವರಿಗೆ ರಸಗುಲ್ಲಾ ಹಾಕಿಕೊಟ್ಟೆ. ಅಪ್ಪ ಅದನ್ನು ಬಾಯಿಗಿಟ್ಟ ತಕ್ಷಣ ರಸಗುಲ್ಲಾ ತುಂಡಾಗಲೇ ಇಲ್ಲ. ಮೈದಾಹಿಟ್ಟು ಹಾಕಿದ್ದರಿಂದ ರಸಗುಲ್ಲಾ ಗಟ್ಟಿಯಾಗಿಬಿಟ್ಟಿತ್ತು. ನನಗೆ ಬೇಸರವಾಗುತ್ತೆ ಅಂತ ಅಪ್ಪ ರಸಗುಲ್ಲಾ ಚೆನ್ನಾಗಿದೆ. ಆದರೆ, ಸ್ವಲ್ಪ ಗಟ್ಟಿಯಾಗಿದೆಯಷ್ಟೇ ಅಂದ್ರು. ಸರಿ ಸ್ವಲ್ಪ ಗಟ್ಟಿತಾನೆ ಅಂತ ನಾನು ರಸಗುಲ್ಲಾ ಬಾಯಿಗಿಟ್ಟರೆ ಅದು ಕಲ್ಲಿನಂತಾಗಿತ್ತು. ಕೊನೆಗೆ ಅದನ್ನು ಯಾರಿಗೂ ತಿನ್ನಲು ಕೊಡದೇ ಬಿಸಾಕಿಬಿಟ್ಟೆ. ಅಂದಿನಿಂದ ಹೊಸರುಚಿ ಮಾಡಬೇಕು ಅಂದ್ರೆ ಸ್ವಲ್ಪ ಹಿಂದೇಟು ಹಾಕ್ತೀನಿ. ಅದ್ಯಾಕೋ ಗೊತ್ತಿಲ್ಲ ಹೊಸರುಚಿ ಮಾಡಿದಾಗಲೆಲ್ಲಾ ಏನಾದ್ರೂ ಒಂದು ಎಡವಟ್ಟು ಆಗುತ್ತೆ...

ಉಳಿದಂತೆ ನನಗೆ ದಕ್ಷಿಣ ಭಾರತೀಯರು ಮಾಡುವ ಎಲ್ಲಾ ಅಡುಗೆಗಳು ಬರುತ್ತವೆ. ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ, ಅನ್ನ–ಸಾಂಬಾರ್ ಎಲ್ಲವನ್ನೂ ತಪ್ಪಿಲ್ಲದೇ ಸರಿಯಾಗಿ ಮಾಡ್ತೀನಿ. ನಾನು ಆಹಾರಪ್ರಿಯೆ. ಹಾಗಂತ ಸಿಕ್ಕಿದ್ದನ್ನೆಲ್ಲಾ ತಿನ್ನಲ್ಲ. ಚೂಸಿ. ನಟನಾ ವೃತ್ತಿಯಲ್ಲಿರುವುದರಿಂದ ಡಯೆಟ್ ಫಾಲೋ ಮಾಡ್ತೀನಿ. ತೂಕ ಕಡಿಮೆ ಮಾಡಿಕೊಳ್ಳಲು ನನ್ನದೇ ಶೈಲಿಯಲ್ಲಿ ಡಯೆಟ್ ಪಾಸ್ತಾ, ಡಯೆಟ್ ಬ್ರೆಡ್ ಉಪ್ಪಿಟ್ಟು, ಕೆಂಪಕ್ಕಿ ಅನ್ನ ಮಾಡಿಕೊಳ್ತೀನಿ.

ನನ್ನ ಗಂಡನಿಗೆ ನಾನು ಮಾಡುವ ಎಲ್ಲಾ ರೀತಿಯ ಬಾತ್‌ಗಳು ಇಷ್ಟ. ನನಗೆ ಅಮ್ಮ ಮಾಡುವ ಫುಲಾವ್, ಅತ್ತೆ ಮಾಡುವ ಬಿಸಿಬೇಳೆ ಬಾತ್ ಅಂದ್ರೆ ಇಷ್ಟ. ದಕ್ಷಿಣ ಭಾರತೀಯ ಅಡುಗೆ ಮತ್ತು ಇಟಾಲಿಯನ್ ಕ್ಯುಸಿನ್ ಇಷ್ಟಪಟ್ಟು ತಿನ್ತೀನಿ. ತರಕಾರಿಯಲ್ಲಿ ಬದನೇಕಾಯಿ–ಆಲೂಗಡ್ಡೆ ಫೇವರೀಟ್. ಸೆಟ್‌ನಲ್ಲಿ ಯಾರಾದ್ರೂ ಬದನೇಕಾಯಿ ತಂದ್ರೆ ಎಷ್ಟೇ ಡಯೆಟ್ ಮಾಡ್ತಾ ಇದ್ರೂ ತಿನ್ತೀನಿ.

ಅಪೂರ್ವ ಡಯೆಟ್: ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟಕ್ಕೆ ಬಿಸಿನೀರು, ನಿಂಬೆರಸ ಮತ್ತು ಜೇನು ಸೇರಿಸಿ ಕುಡಿಯುತ್ತೀನಿ. ನಂತರ ಅತ್ತೆ ಮಾಡಿದ ರಾಗಿ ಮಿಲ್ಕ್‌ಶೇಕ್ ಸೇವನೆ. ಮಧ್ಯಾಹ್ನ 12ರ ಹೊತ್ತಿಗೆ ರಾಗಿ ಹುರಿಹಿಟ್ಟಿನಲ್ಲಿ ಲಡ್ಡು ಮಾಡಿಕೊಂಡು ತಿನ್ತೀನಿ. ಮಧ್ಯಾಹ್ನದ ಊಟಕ್ಕೆ ವೀಟ್ ಪಾಸ್ತಾ, ವೀಟ್ ಬ್ರೆಡ್ ಉಪ್ಪಿಟ್ಟು ತಿನ್ತೀನಿ. ಮಧ್ಯೆಮಧ್ಯೆ ಹಸಿವಾದರೆ ಉಗುರು ಬೆಚ್ಚಗಿನ ಬಿಸಿನೀರು ಕುಡಿತೀನಿ. ಸಂಜೆ 4ಕ್ಕೆ ಗ್ರೀನ್ ಟೀ. ರಾತ್ರಿ ರಾಗಿ ಮಾಲ್ಟ್‌. ತೀರ ತಿನ್ನಲೇಬೇಕನಿಸಿದರೆ ಕೆಂಪಕ್ಕಿ ಅಥವಾ ನವಣೆ ಅನ್ನಕ್ಕೆ ಜಾಸ್ತಿ ತರಕಾರಿ ಇರೋ ಸಾಂಬಾರ್ ಹಾಕಿಕೊಂಡು ಊಟ ಮಾಡ್ತೀನಿ.

ಸೆಟ್‌ನಲ್ಲಿ ಹಸಿವಾದಾಗ ಎಳನೀರು, ಸೌತೇಕಾಯಿ ಇದ್ದೇ ಇರುತ್ತದೆ. ಪ್ರತಿ 15 ದಿನಕ್ಕೊಮ್ಮೆ ಡಯೆಟ್ ಬ್ರೇಕ್ ಆಗುತ್ತೆ. ಆಗ ತರಕಾರಿ ಹೆಚ್ಚಿರುವ ಭಾರತೀಯ ಚಾಟ್ಸ್ ತಿಂದು ಆಸೆ ತೀರಿಸಿಕೊಳ್ತೀನಿ. ನೋ ಜಂಕ್ ಫುಡ್.

ಬ್ರೆಡ್ ಉಪ್ಪಿಟ್ಟು

ಬೇಕಾಗುವ ಸಾಮಾಗ್ರಿ: ಒಂದು ಪೌಂಡ್ ವೀಟ್ ಬ್ರೆಡ್. ಒಗ್ಗರಣೆಗೆ ಬೇಕಾಗುವಷ್ಟು ಜೀರಿಗೆ, ಸಾಸಿವೆ, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು. ಒಂದು ಚಮಚ ತೆಂಗಿನ ಎಣ್ಣೆ, ಮೂರು ಹಸಿಮೆಣಸಿನಕಾಯಿ.

ಮಾಡುವ ವಿಧಾನ: ಒಂದು ಪೌಂಡ್ ವೀಟ್ ಬ್ರೆಡ್ ಅನ್ನು ಸಣ್ಣ ಸಣ್ಣ ಚೌಕಾರದಲ್ಲಿ ತುಂಡು ಮಾಡಿಟ್ಟುಕೊಳ್ಳಿ. ಒಂದು ಬಾಣಲೆಯಲ್ಲಿ ಒಂದು ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಜೀರಿಗೆ, ಸಾಸಿವೆ, ಚಿಟಿಕೆ ಅರಿಶಿಣಪುಡಿ, ಕರಿಬೇವು ಹಾಕಿ. ನಂತರ ಮೂರು ಉದ್ದುದ್ದ ಸೀಳಿದ ಹಸಿಮೆಣಸಿನಕಾಯಿ ಹಾಕಲಿ. ಅದು ಚಟಪಟ ಅಂದ್ಮೇಲೆ ತುಂಡು ಮಾಡಿದ ಬ್ರೆಡ್ ಹಾಕಿ ಮಿಶ್ರಣ ಮಾಡಿ. ಅದು ಕಂದು ಬಣ್ಣ ಬರುವವರಗೆ ಬಾಣಲೆಯಲ್ಲಿಡಲಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಈಗ ನಿಮ್ಮ ಬ್ರೆಡ್ ಉಪ್ಪಿಟ್ಟು ತಿನ್ನಲು ರೆಡಿ.

ಬ್ರೆಡ್ ಉಪ್ಪಿಟ್ಟಿಗೆ ಬ್ರೋಕಲಿ ಅನ್ನು ಹಾಕಿಕೊಳ್ಳಬಹುದು. ಬ್ರೋಕಲಿ ಅನ್ನು ಎಣ್ಣೆ ಹಾಕದೇ ಕಂದು ಬಣ್ಣ ಬರುವವರೆಗೆ ಬಾಡಿಸಿ, ಇದಕ್ಕೆ ಸೇರಿಸಿಕೊಳ್ಳಿ. ಡಯೆಟ್ ಪ್ರಜ್ಞೆಯುಳ್ಳವರಿಗೆ ಬ್ರೆಡ್ ಉಪ್ಪಿಟ್ಟು ಹೇಳಿಮಾಡಿಸಿದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT