ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸು ಮೇಳದಿ ಬಗೆಬಗೆ ತಿನಿಸು

Last Updated 14 ಮೇ 2013, 19:59 IST
ಅಕ್ಷರ ಗಾತ್ರ

ನಗರದ ಹೊರವಲಯದ ದೊಡ್ಡಾನೆಕ್ಕುಂದಿಯಲ್ಲಿನ ಸಾವಯವ ಹೋಟೆಲ್ `ಲೂಮಿಯರ್' ಒಳಹೊಕ್ಕರೆ ಇದೀಗ ಹಲಸಿನ ಹಣ್ಣಿನದೇ ಘಮಘಮ. ಹಲಸಿನ ಹಣ್ಣಿನ ಅವಿಯಲ್, ತೀಯಲ್, ಕಾಳನ್, ಗ್ರಿಲ್ಡ್ ಜಾಕ್, ತವಾ ಫ್ರೈ.... ಅಬ್ಬಬ್ಬಾ... ಖಾದ್ಯ ವೈವಿಧ್ಯ. ಈ ಖಾದ್ಯಗಳನ್ನು ನೋಡಿದರೆ ಇದೆಲ್ಲ ಹಲಸಿನದ್ದೇ ಎಂಬ ಅನುಮಾನ ಮೂಡುವುದರಲ್ಲಿ ಎರಡು ಮಾತಿಲ್ಲ.

ನಮ್ಮದೇ ಮನೆಯ ಹಿತ್ತಲಲ್ಲಿ ಬೆಳೆಯುವ, ಮೈ ಸುತ್ತ ಮೇಣ ತುಂಬಿಕೊಂಡ ಹಲಸಿನ ಹಣ್ಣಿನಿಂದ ಇಷ್ಟೊಂದು ಖಾದ್ಯಗಳೇ? ನೋಡಿದವರು, ತಿಂದವರು ಒಮ್ಮೆ ದಂಗಾಗುವುದು ಗ್ಯಾರಂಟಿ. ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡಿದರೆ, `ಎಲ್ಲವೂ ಸಾಧ್ಯ' ಎನ್ನುತ್ತಾರೆ ರೆಸ್ಟೋರೆಂಟ್ ಮಾಲೀಕರಾದ ಮಂಜುನಾಥ್.

`ಇದು ಕೇವಲ ಹಲಸಿನಹಣ್ಣಿನ ಆಹಾರ ಮೇಳ ಮಾತ್ರವಲ್ಲ, ಇದೊಂದು ಉತ್ಸವ ಎನ್ನುತ್ತಾರೆ' ಅವರು. ಈ ಉತ್ಸವದಲ್ಲಿ ಬೆಂಗಳೂರಿನ ಎಲ್ಲರೂ ಪಾಲ್ಗೊಂಡು ಅವರ ನಾಲಿಗೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಅವರು ಕಳೆದ ಒಂದೂವರೆ ತಿಂಗಳಿನಿಂದ ಆ ಆಹಾರ ಮೇಳದ ಬೆನ್ನುಹತ್ತಿದ್ದಾರೆ. ಅದಕ್ಕಾಗಿ ಶ್ರಮಿಸುತ್ತಿದ್ದಾರೆ.

ಮೇ 15ರಿಂದ 19ರವರೆಗೆ ನಡೆಯಲಿರುವ ಹಲಸಿನ ಹಣ್ಣಿನ ಆಹಾರ ಮೇಳದಲ್ಲಿ ಕೇರಳ, ಕರ್ನಾಟಕ ಮಾತ್ರವಲ್ಲ; ಗೋವಾ, ಉತ್ತರ ಭಾರತದ ಖಾದ್ಯಗಳೂ ಇವೆ. ಪೋರ್ಚುಗೀಸ್, ಥಾಯ್ ಸೇರಿದಂತೆ ವಿದೇಶಿ ಆಹಾರವನ್ನೂ ಇದರಲ್ಲಿ ಸೇರಿಸಿ ಮೇಳಕ್ಕೆ ಸಾಂಪ್ರದಾಯಿಕ ಹಾಗೂ ಆಧುನಿಕತೆಯ ಸ್ಪರ್ಶ ನೀಡಲಾಗಿದೆ.

ಸಾವಯವ ಆಹಾರ ಕ್ರಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಹೋಟೆಲ್ ಆರಂಭಗೊಂಡಿರುವುದರಿಂದ ಈ ಮೇಳಕ್ಕೂ ಸಾವಯವದ ಸ್ಪರ್ಶವಿದೆ ಎನ್ನುವುದು ವೈಶಿಷ್ಟ್ಯ.

`ಏಪ್ರಿಲ್, ಮೇ ತಿಂಗಳು ಸಾಮಾನ್ಯವಾಗಿ ಮಾವು ಮತ್ತು ಹಲಸಿನ ಕಾಲ. ನಮ್ಮ ಮನೆಯ ಹಿತ್ತಲಲ್ಲೇ ಬೆಳೆಯುವ ಹಲಸಿನ ಹಣ್ಣಿನ ಉಪಯೋಗ ಅದೆಷ್ಟೋ ಜನರಿಗೆ ತಿಳಿಯದು. ರಾಸಾಯನಿಕ ಬಳಸದೆ ಸಾವಯವ ರೀತಿಯಲ್ಲಿ ಬೆಳೆದ ಹಲಸಿನ ಹಣ್ಣುಗಳನ್ನು ನಾವು ಈ ಆಹಾರ ಮೇಳದಲ್ಲಿ ಬಳಸಿದ್ದೇವೆ. ಅದಕ್ಕೆಂದೇ ಕೇರಳದ ವಯನಾಡ್, ಕರ್ನಾಟಕದ ಶಿವಮೊಗ್ಗ ಹಾಗೂ ನಮ್ಮದೇ ತೋಟದಲ್ಲಿ ಬೆಳೆದ ಹಲಸಿನ ಹಣ್ಣುಗಳನ್ನು ಇದರಲ್ಲಿ ಬಳಸಲಾಗಿದೆ' ಎಂದು ಮಂಜುನಾಥ್ ಇದರ ಹಿಂದಿನ ಉದ್ದೇಶವನ್ನು ವಿವರಿಸುತ್ತಾರೆ.

ಸಾಮಾನ್ಯವಾಗಿ ಹಲಸಿನ ಹಣ್ಣನ್ನು ಕೇವಲ ಹಣ್ಣಾಗಿ ಎಲ್ಲರೂ ತಿನ್ನುತ್ತಾರೆ. ಅದರಿಂದಲೂ ಬಗೆಬಗೆಯ ತಿನಿಸುಗಳನ್ನು ಮಾಡಬಹುದೆಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇಲ್ಲಿ ಸುಮಾರು 100 ಬಗೆಯ ತಿನಿಸುಗಳಿವೆ ಎನ್ನುತ್ತಾ ಅವರು ಮೇಳದಲ್ಲಿ ಉಣಬಡಿಸುವ ಖಾದ್ಯಗಳ ಪಟ್ಟಿ ತೋರಿಸಿದರು. ಹೌದು. ಹಲಸಿನ ಹಣ್ಣಿನ ಅವಿಯಲ್, ತೀಯಲ್, ಕಾಳನ್, ಕಟ್ಟಿಕಾಳನ್, ಎರಿಶೇರಿ, ಪ್ರಥಮನ್, ಪುಳಿಶೇರಿ, ತೋರನ್, ಉಲರ್ತಿಯದು... ಅಬ್ಬಾ! ಪಟ್ಟಿ ಇನ್ನೂ ಉದ್ದವಾಗಿತ್ತು.

ಮತ್ತೂ ಕಣ್ಣು ಮುಂದಕ್ಕೆ ಹಾಯಿಸಿದಾಗ ಅದೋ ಅಲ್ಲಿ ಜ್ಯೂಸ್‌ಗಳ ವೆರೈಟಿ. ಸುಮಾರು 12 ಬಗೆಯ ಜ್ಯೂಸ್‌ಗಳು ಅಲ್ಲಿದ್ದವು. ಪಾಯಸವೂ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಮತ್ತೂ ಮುಂದಕ್ಕೆ ಹೋದರೆ... ಹಲಸಿನ ಹಣ್ಣಿನ ಚಿಪ್ಸ್, ಹಲ್ವ, ಜಾಮ್, ಕುಲ್ಫಿ, ಕೇಕ್, ಬ್ರೆಡ್, ಮಫಿನ್ಸ್, ಕುಕ್ಕೀಸ್, ಆಹಾ! ಪಟ್ಟಿಗೆ ಕೊನೆಯೇ ಇಲ್ಲ ಎಂದೆನಿಸಿತ್ತು.

`ನಮ್ಮದೇ ಹಿತ್ತಲಲ್ಲಿ ಬೆಳೆಯುವ ಹಲಸಿನ ಹಣ್ಣಿನ ಮಹತ್ವ ಹೆಚ್ಚಿನ ಜನರಿಗೆ ತಿಳಿಯದು. ಹಲಸಿನ ಹಣ್ಣು ಮಾತ್ರವಲ್ಲ, ಹಲಸಿನ ಮರ ಕೂಡ ಅಡಿಯಿಂದ ಮುಡಿಯವರೆಗೆ ಮಾನವನಿಗೆ ಪ್ರಯೋಜನಕಾರಿ. ಹಲಸಿನ ಹಣ್ಣು ತಿನ್ನಲು ರುಚಿ ಮಾತ್ರವಲ್ಲ, ಪೌಷ್ಟಿಕಾಂಶವೂ ಅದರಲ್ಲಿ ಹೇರಳವಾಗಿದೆ.  ನಮ್ಮದೇ ಸಾಂಪ್ರದಾಯಿಕ ಹಣ್ಣುಗಳಾದ ಇಂಥವುಗಳು ನಮ್ಮ ಹಿತ್ತಲಲ್ಲೇ ದೊರೆಯುವಾಗ ಅದನ್ನು ಮರೆತು ನಾವು ವಿದೇಶದಿಂದ ಹಣ್ಣುಗಳನ್ನು ಆಮದು ಮಾಡಿಕೊಂಡು ತಿನ್ನುತ್ತೇವೆ.

ಅದರಲ್ಲೂ ಸಾವಯವ ರೀತಿಯಲ್ಲಿ ಬೆಳೆದ ಹಣ್ಣುಗಳ ರುಚಿಯೇ ಬೇರೆ. ಇವುಗಳನ್ನೆಲ್ಲ ಜನರಿಗೆ ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಈ ಹಲಸಿನಹಣ್ಣಿನ ಆಹಾರ ಮೇಳವನ್ನು ಆಯೋಜಿಸಿದ್ದೇವೆ' ಎಂದು ಮಂಜುನಾಥ್ ಮೇಳದ ಹಿಂದಿನ ಉದ್ದೇಶವನ್ನು ವಿವರಿಸಿದರು.

ಅದೂ ಹೌದೆನ್ನಿ. ಸಾವಯವ ಆಹಾರದ ಹಾಗೂ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಮರೆತ ಜನರಿಗೆ ಅದನ್ನು ಮತ್ತೆ ಪರಿಚಯಿಸುವುದೇ ಈ ಮೇಳದ ಉದ್ದೇಶವಾಗಿದೆ.

ಕಳೆದ ವರ್ಷ ಕೊಚ್ಚಿಯಲ್ಲಿನ ನಮ್ಮ ರೆಸ್ಟೋರೆಂಟ್‌ನಲ್ಲಿ ಮಾವಿನ ಹಣ್ಣಿನ ಆಹಾರ ಮೇಳವನ್ನು ಮಾಡಿ ಯಶಸ್ವಿಯಾಗಿದ್ದೆವು. ಅದೂ ಈ ಆಹಾರ ಮೇಳಕ್ಕೆ ಪ್ರೇರಣೆ ಎಂದು ಹೇಳಲೂ ಅವರು ಮರೆಯಲಿಲ್ಲ. ಆಹಾರ ಮೇಳಕ್ಕೆ ಬಂದವರು ಇಲ್ಲಿನ ಬಫೆ ಉಣ್ಣಬಹುದು. ಅಲ್ಲಿ ಹಲಸಿನ ಖಾದ್ಯಗಳೇ ಹೆಚ್ಚಿರುತ್ತವೆ. ಜೊತೆಗೆ ಅಲ್ಲೇ ಇರುವ ಬೇಕರಿಯಲ್ಲಿ ಮಾರಾಟಕ್ಕಿಟ್ಟಿರುವ ಹಲಸಿನ ತಿನಿಸುಗಳ ರುಚಿ ನೋಡಬಹುದು ಅಥವಾ ಖರೀದಿಸಿ ಮನೆಗೆ ಕೊಂಡೊಯ್ಯಬಹುದು.

`ಈ ಆಹಾರ ಮೇಳದ ಯಶಸ್ಸಿಗೆಂದೇ ಇಲ್ಲಿ ಬಾಣಸಿಗರು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಹಲಸಿನ ಹಣ್ಣಿನ ಈ ವೈವಿಧ್ಯಕ್ಕೆ ಇಲ್ಲಿನ ಮುಖ್ಯ ಬಾಣಸಿಗ ಅನಿಯನ್ ಕುಂಜು ಹಾಗೂ ಇತರರ ಪಾತ್ರವನ್ನು ಮರೆಯಲಾಗದು' ಎನ್ನುತ್ತಾರೆ ಮಂಜುನಾಥ್. ಜೊತೆಗೆ ಪಾಲುದಾರ ಆಂಬ್ರೋಸ್ ಶ್ರಮವೂ ಇದೆ ಎನ್ನಲು ಅವರು ಮರೆಯುವುದಿಲ್ಲ.

ಇಲ್ಲಿ ಬಂದು ಹಲಸಿನ ಹಣ್ಣಿನ ವಿವಿಧ ಖಾದ್ಯಗಳನ್ನು ತಿಂದು ಹಿಂತಿರುಗುವ ವೇಳೆ ನಿಮಗೂ ಮನೆಯ ಹಿಂದೆ ಇರುವ ಸ್ವಲ್ಪವೇ ಹಿತ್ತಲಲ್ಲಿ ಒಂದು ಹಲಸಿನ ಮರವೊಂದಿದ್ದರೆ... ಅಥವಾ ಹಲಸಿನ ಗಿಡ ನೆಡಲು ಆಸೆಯಾದರೆ...  ಚಿಂತೆ ಬೇಡ, ನಿಮಗೆಂದೇ ಹಲಸಿನ ಗಿಡವೂ ಅಲ್ಲಿ ಮಿತವಾದ ಬೆಲೆಗೆ ಲಭ್ಯ. ಇದಕ್ಕೆಂದೇ ದೊಡ್ಡಬಳ್ಳಾಪುರದಿಂದ ಹಲಸಿನ ಗಿಡಗಳನ್ನು ಮಂಜುನಾಥ್ ತಂದಿರಿಸಿದ್ದಾರೆ.

ಅಂದಹಾಗೆ, ಮೇ 15ರಿಂದ 19ರವರೆಗೆ ಈ ಮೇಳ ನಡೆಯಲಿದೆ. ಸಮಯ: ಬೆಳಿಗ್ಗೆ 11ರಿಂದ ರಾತ್ರಿ 11 ಸ್ಥಳ: ಲೂಮಿಯರ್ ರೆಸ್ಟೊರೆಂಟ್, ಶ್ರೀ ಕೋಟೆ ಆಶೀರ್ವಾದ ಟವರ್, ಮಾರತ್‌ಹಳ್ಳಿ-ಕೆ.ಆರ್.ಪುರ ಹೊರ ವರ್ತುಲ ರಸ್ತೆ, ದೊಡ್ಡಾನೆಕ್ಕುಂದಿ. ದೂ: 6534 1133, 6537 2244, 90350 19803.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT