ಶನಿವಾರ, ಆಗಸ್ಟ್ 15, 2020
26 °C
ನದಿಗಳ ಮಾಲಿನ್ಯ ತಡೆಗೆ ಕಠಿಣ ಕಾನೂನಿನ ಸಮರ್ಪಕ ಅನುಷ್ಠಾನ ಬೇಕು

ಗಂಗೆಯ ಮೈಲಿಗೆ ತೊಳೆಯುವುದೆಂದು?

ಡಾ. ಎಂ.ವೆಂಕಟಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಪರಿಸರವಾದಿ ಪ್ರೊ. ಜಿ.ಡಿ.ಅಗರವಾಲ್ ಅವರು ಗಂಗಾ ನದಿ ಶುದ್ಧೀಕರಣಕ್ಕೆ ಆಗ್ರಹಿಸಿ ಆಂದೋಲನ ನಡೆಸಿದ ಬಳಿಕ, ವಾರಾಣಸಿಯ ಗಂಗಾ ನದಿ ದಡದಲ್ಲಿ 112 ದಿನ ಉಪವಾಸ ಕೈಗೊಂಡು, 2018ರ ಅ. 11ರಂದು ಪ್ರಾಣ ಕಳೆದುಕೊಂಡರು. ಅವರು ಸಾಯುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ಪತ್ರಗಳನ್ನು ಬರೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. 2014ರ ಲೋಕಸಭಾ ಚುನಾವಣೆ ಸಮಯದಲ್ಲಿ ‘ಗಂಗಾಮಯಿ, ವಾರಾಣಸಿಗೆ ನನ್ನನ್ನು ಕರೆದುಕೊಂಡಿದ್ದಾಳೆ’ ಎಂದು ಮೋದಿ ಹೇಳಿದ್ದರು. ಈ ವಿಷಯವನ್ನು ಅಗರವಾಲ್ ತಮ್ಮ ಪತ್ರದಲ್ಲಿ ಮೋದಿ ಅವರಿಗೆ ಜ್ಞಾಪಿಸಿದ್ದರು.

ಗಂಗಾ ನದಿಯ ಬಗ್ಗೆ ಆರ್‌ಟಿಐ ಅಡಿ ಕೇಳಿದ ಕೆಲವು ಪ್ರಶ್ನೆಗಳಿಗೆ ಈಗ ಉತ್ತರಗಳು ಸಿಕ್ಕಿವೆ. ಐದು ವರ್ಷಗಳಿಂದ ಕೇಂದ್ರ ಸರ್ಕಾರ ಸುರಿದಿರುವ ₹ 3,867 ಕೋಟಿ ಹಣದಿಂದ ಗಂಗೆ ಸ್ವಚ್ಛವಾಗಿಲ್ಲ. ಬದಲಿಗೆ, ಬಹಳಷ್ಟು ಸ್ಥಳಗಳಲ್ಲಿ ಇನ್ನಷ್ಟು ಹೆಚ್ಚು ಮಲಿನಗೊಂಡಿದ್ದಾಳೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ನೀಡಿರುವ ಉತ್ತರ ಹೀಗಿದೆ: ನದಿಯಲ್ಲಿನ ಜೈವಿಕ ರಾಸಾಯನಿಕ ಆಮ್ಲಜನಕ (ಬಯೊಕೆಮಿಕಲ್‌ ಆಕ್ಸಿಜನ್‌ ಡಿಮ್ಯಾಂಡ್‌– BOD) 2017ರಲ್ಲಿ ಅತಿ ಹೆಚ್ಚಾಗಿತ್ತು. ಆನಂತರ ಅದು ನಿರಂತರವಾಗಿ ಕಡಿಮೆಯಾಗುತ್ತಲೇ ಬರುತ್ತಿದೆ.

ನೀರಿನಲ್ಲಿ ಬಿಒಡಿ ಪ್ರಮಾಣ ಹೆಚ್ಚಾದಲ್ಲಿ ಆಮ್ಲಜನಕದ ಅಂಶ ಕಡಿಮೆಯಾಗುತ್ತದೆ. ಇದರಿಂದ ನೀರು ಮತ್ತು ಜಲಚರಗಳಿಗೆ ಅಪಾಯ ಉಂಟಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಮಾಲಿನ್ಯ ಹೆಚ್ಚಾದಷ್ಟೂ ಆಮ್ಲಜನಕ ಕಡಿಮೆಯಾಗುತ್ತದೆ.

ನೀರಿನಲ್ಲಿ ವೈಜ್ಞಾನಿಕವಾಗಿ ಬಿಒಡಿ ಮಟ್ಟವು ಹೆಚ್ಚೆಂದರೆ ಒಂದು ಲೀಟರಿಗೆ 3 ಮಿ.ಗ್ರಾಂ ಇರಬಹುದು. ಅದಕ್ಕಿಂತ ಹೆಚ್ಚಾದರೆ ಆ ನೀರು ಕುಡಿಯುವುದಕ್ಕೆ ಇರಲಿ, ಮನೆಯ ಇತರ ಯಾವುದೇ ಕೆಲಸಕ್ಕೂ ಉಪಯೋಗಿಸಲು ಲಾಯಕ್ಕಿರುವುದಿಲ್ಲ. ಹಾಗೆಯೇ, ಆಮ್ಲಜನಕದ ಮಟ್ಟ ಒಂದು ಲೀಟರಿಗೆ 4 ಮಿ.ಗ್ರಾಂಗಿಂತ ಹೆಚ್ಚಾಗಿರಬೇಕು. 2017ರ ಸಿಪಿಸಿಬಿ ವರದಿಯಂತೆ, ಗಂಗಾ ನದಿಯ 80 ಸ್ಥಳಗಳಲ್ಲಿ ನಡೆಸಿದ ನೀರಿನ ಮಾದರಿ ವಿಶ್ಲೇಷಣೆಗಳಿಂದ, 36 ಸ್ಥಳಗಳಲ್ಲಿ ಬಿಒಡಿ 3 ಮಿ.ಗ್ರಾಂಗಿಂತ ಹೆಚ್ಚಿದ್ದರೆ, ಇನ್ನು 30 ಸ್ಥಳಗಳಲ್ಲಿ 2-3 ಮಿ.ಗ್ರಾಂ ಇದೆ.

ಸಿಪಿಸಿಬಿಯು ಗಂಗಾ ನದಿ ಪ್ರಾರಂಭವಾಗುವ ಗಂಗೋತ್ರಿಯಿಂದ ಹಿಡಿದು ಪಶ್ಚಿಮ ಬಂಗಾಳದ ಬಂಗಾಳ ಕೊಲ್ಲಿಯವರೆಗೂ ಮೇಲ್ವಿಚಾರಣೆ ಮಾಡುತ್ತದೆ. ಗಂಗೋತ್ರಿ, ರುದ್ರಪ್ರಯಾಗ್, ದೇವ್‍ಪ್ರಯಾಗ್ ಮತ್ತು ಹೃಷಿಕೇಶ್‍ಗಳಲ್ಲಿ ಮಾತ್ರ ಗಂಗೆಯ ನೀರಿನಲ್ಲಿ ಬಿಒಡಿ 1 ಮಿ.ಗ್ರಾಂ ಮತ್ತು ಆಮ್ಲಜನಕ 9-10 ಮಿ.ಗ್ರಾಂ ಇದೆ. ಅಲ್ಲಿಂದ ನದಿಯ ಕೆಳಹಂತಕ್ಕೆ ಬರುತ್ತಿದ್ದಂತೆ ಮಾಲಿನ್ಯದ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಹರಿದ್ವಾರದಲ್ಲಿ ಮಾಲಿನ್ಯದ ಪರಿಸ್ಥಿತಿ ಕರುಣಾಜನಕವಾಗಿದೆ. ಕಾನ್ಪುರ, ಅಲಹಾಬಾದ್, ವಾರಾಣಸಿ, ಕನೌಜ್‌, ಪಟ್ನಾ, ದರ್ಬಂಗ್ ಘಾಟ್, ದಕ್ಷಿಣೇಶ್ವರ, ಹೌರಾ ಮತ್ತು ಆ ದಾರಿಯಲ್ಲಿ ಬರುವ ಎಲ್ಲಾ ಸ್ಥಳಗಳಲ್ಲೂ ನೀರು ಉಪಯೋಗಿಸುವ ಮಟ್ಟದಲ್ಲಿ ಇಲ್ಲ.

ಮೋದಿ ನೇತೃತ್ವದ ಸರ್ಕಾರ 2015ರಲ್ಲಿ ‘ನಮಾಮಿ ಗಂಗೆ’ ಕಾರ್ಯಕ್ರಮವನ್ನು ಅನುಮೋದಿಸಿ, ನದಿ ಶುದ್ಧೀಕರಣಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು. ಈ ಯೋಜನೆಯಲ್ಲಿ ನಗರಗಳ ಕೊಳಚೆ ನೀರಿನ ಸಂಸ್ಕರಣೆ, ಕೈಗಾರಿಕಾ ಮಾಲಿನ್ಯ ಸಂಸ್ಕರಣೆ, ನದಿ ಮೇಲ್ಮೈ ಸ್ವಚ್ಛಗೊಳಿಸುವುದು, ಗ್ರಾಮೀಣ ನೈರ್ಮಲ್ಯ, ಸಮಾಧಿ ಘಾಟುಗಳ ನಿರ್ಮಾಣ, ಮರಗಳನ್ನು ನೆಡುವುದು ಮತ್ತು ಜೀವವೈವಿಧ್ಯ ಸಂರಕ್ಷಣೆ ಸೇರಿವೆ.

ಅಗರವಾಲ್ ಅವರು ಪ್ರಧಾನಿಗೆ ಬರೆದಿದ್ದ ಪತ್ರದಲ್ಲಿ, ಗಂಗೆಗೆ ಸಂಬಂಧಿಸಿದ ಯೋಜನೆಗಳ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇವು ಸಾಂಸ್ಥಿಕ ಮತ್ತು ವ್ಯಾಪಾರಿ ವಲಯಗಳಿಗಷ್ಟೇ ಪ್ರಯೋಜಕ ಎಂದಿದ್ದರು. ಕೇಂದ್ರೀಯ ಲೆಕ್ಕಪರಿಶೋಧಕರು ಸಹ ಕೆಲವು ಯೋಜನೆಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. 2017ರ ವರದಿಯಲ್ಲಿ, ಐಐಟಿ ಜೊತೆಗಿನ ಆರೂವರೆ ವರ್ಷಗಳ ಒಪ್ಪಂದದ ನಂತರವೂ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಯೋಜನೆಯನ್ನು ಯಾಕೆ ಮುಗಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ದೇಶದ 11 ರಾಜ್ಯಗಳಲ್ಲಿ ಹರಿಯುವ ಗಂಗಾ ನದಿ ಶೇ 40ರಷ್ಟು ಜನರಿಗೆ ನೀರು ಒದಗಿಸುತ್ತದೆ. ಈ ವಲಯದಲ್ಲಿ 50 ಕೋಟಿ ಜನ ವಾಸಿಸುತ್ತಾರೆ. ಪ್ರಸ್ತುತ ಗಂಗಾ ನದಿಯು ಜಗತ್ತಿನ ಅತಿ ಮಾಲಿನ್ಯಕಾರಕ ನದಿಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.

ಒಟ್ಟಿನಲ್ಲಿ ನದಿಯನ್ನು ಸ್ವಚ್ಛ ಮಾಡಲು ತೆಗೆದುಕೊಂಡ ಎಲ್ಲ ಬಗೆಯ ಪ್ರಯತ್ನಗಳೂ ವಿಫಲವಾಗಿವೆ. ಭಾರತದಲ್ಲಿ ನದಿಗಳು ಮಲಿನಗೊಳ್ಳುವುದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು, ಜನರಲ್ಲಿ ಯಾವುದೇ ಶಿಸ್ತು ಇಲ್ಲದೇ ಇರುವುದು. ಎರಡು, ಬಹುಶಃ ಕೆಲವು ಧಾರ್ಮಿಕ ಸಂಪ್ರದಾಯಗಳು. ಈ ಎರಡನ್ನೂ ಬದಲಿಸದೆ ನಮ್ಮ ನದಿಗಳನ್ನು ನಾವು ಸ್ವಚ್ಛವಾಗಿ ನೋಡಲಾರೆವು. ಅದಕ್ಕಾಗಿ ಕಟ್ಟುನಿಟ್ಟಿನ ಕಾನೂನುಗಳನ್ನು ಸರ್ಕಾರ ತರಬೇಕಾಗಿದೆ. ಇಲ್ಲದಿದ್ದರೆ ಹುಣಿಸೆ ಹಣ್ಣನ್ನು ನೀರಿನಲ್ಲಿ ತೊಳೆದಂತೆ, ಕೋಟ್ಯಂತರ ಹಣ ಸುರಿದರೂ ನದಿಗಳ ಶುದ್ಧೀಕರಣ ಮಾತ್ರ ಕನಸಾಗಿಯೇ ಉಳಿಯುತ್ತದೆ.

ಲೇಖಕ: ಭೂವಿಜ್ಞಾನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು