ಗೇಟ್ ವೇ ಆಫ್ ಆರ್ಚ್

7

ಗೇಟ್ ವೇ ಆಫ್ ಆರ್ಚ್

Published:
Updated:
Prajavani

ಬೆಳಿಗ್ಗೆ ಏಳು ಗಂಟೆಗೆ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್‍ನಿಂದ ಕಾರಿನಲ್ಲಿ ಹೊರಟ ನಾವು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಲಿನಾಯ್ಸ್ ಮೂಲಕ ಮಿಜೌರಿಯ ರಾಜಧಾನಿ ‘ಸೇಂಟ್ ಲೂಯಿಸ್’ ತಲುಪಿದೆವು. ಒಟ್ಟು 425 ಕಿ.ಮೀ. ದೂರ, ಒಟ್ಟು 5.30 ಗಂಟೆ ಪ್ರಯಾಣ.

ಸೇಂಟ್‌ಲೂಯಿಸ್ ಪ್ರವೇಶಿಸುತ್ತಿದ್ದಂತೆ, 630 ಅಡಿ ಎತ್ತರದ ಆಕರ್ಷಕ ‘ಗೇಟ್ ವೇ ಆಫ್ ಆರ್ಚ್’ ಎದುರಾಯಿತು. ಇದು ವಿಶ್ವದಲ್ಲೇ ಅತಿ ಎತ್ತರವಾದ ಮಾನವ ನಿರ್ಮಿತ ಸ್ಮಾರಕ ಎಂದು ಪ್ರಸಿದ್ಧಿಯಾಗಿದೆ.

ಸೇಂಟ್ ಲೂಯಿಸ್, ಮಿಸ್ಸಿಸಿಪ್ಪಿ ಹಾಗೂ ಮಿಜೌರಿ ನದಿಗಳ ಸಂಗಮ ಸ್ಥಾನದಲ್ಲಿರುವ, ಐತಿಹಾಸಿಕ ತಾಣ. 13 ನೇ ಶತಮಾನದಲ್ಲಿದ್ದ ಫ್ರಾನ್ಸ್‌ ದೊರೆ ಲೂಯಿಸ್ ಹಾಗೂ ಕ್ಯಾಥೊಲಿಕ್ ಸೇಂಟ್ ಎಂಬ ಪದಗಳಿಂದ ‘ಸೇಂಟ್ ಲೂಯಿಸ್’ ಹೆಸರು ಬಂದಿದೆ. ಇಲ್ಲಿಯ ಮಿಸ್ಸಿಸಿಪ್ಪಿ ನದಿಯ ಪಶ್ಚಿಮ ತೀರದ ನ್ಯಾಷನಲ್ ಪಾರ್ಕ್‍ನಲ್ಲಿ 91 ಎಕರೆಯಲ್ಲಿ `ಗೇಟ್ ವೇ ಆರ್ಚ್’ ನಿರ್ಮಿಸಲಾಗಿದೆ. ಈ ಆರ್ಚ್‍ನೊಳಗೆ ಪ್ರವೇಶಿಸುತ್ತಿದ್ದಂತೆ ನಿರ್ಮಾಣ ಹಂತದ ವಿವರಣೆಯಿರುವ ಹಲವು ಚಿತ್ರಗಳಿವೆ.

ಅಮೆರಿಕದ ಪಶ್ಚಿಮ ಭಾಗವು ಬೆಳೆಯುತ್ತಿರುವ ಸಂಕೇತವಾಗಿ ನಿರ್ಮಿಸಿರುವ `ಗೇಟ್ ವೇ ಆಫ್ ಆರ್ಚ್’, `ಪಶ್ಚಿಮದ ಮುಖ್ಯದ್ವಾರ’ ಎಂದು ಮೆಚ್ಚುಗೆ ಪಡೆದಿದೆ. ಈ ಸ್ಮಾರಕಕ್ಕೆ ‘ಗೇಟ್ ವೇ ಟು ದ ಮಿಡ್ ವೆಸ್ಟ್’ ಮತ್ತು `ಸೇಂಟ್ ಲೂಯಿಸ್ ಆರ್ಚ್’ ಎಂಬ ಹೆಸರುಗಳೂ ಇವೆ.

1957ರಲ್ಲಿ ಅಮೆರಿಕದ ಶಿಲ್ಪಿ `ಈರೋ ಸಾರನಿನ್’ ಇದನ್ನು ವಿನ್ಯಾಸಗೊಳಿಸಿದ್ದಾರೆ. ಫೆಬ್ರುವರಿ 12, 1962 ರಂದು ನಿರ್ಮಾಣ ಆರಂಭವಾಗಿ ಅಕ್ಟೋಬರ್ 28 1965 ರಲ್ಲಿ ಪೂರ್ಣಗೊಂಡಿದೆ. 43,226 ಟನ್ ತುಕ್ಕು ಹಿಡಿಯದ ಉಕ್ಕಿನಿಂದ ಅರ್ಧ ಗೋಲಾಕಾರದಲ್ಲಿ ನಿರ್ಮಿಸಿರುವ ಇದರ ಉತ್ತರದ ಬಾಗಿಲು 1967 ರಲ್ಲಿ, ದಕ್ಷಿಣದ ಬಾಗಿಲು 1968 ರಲ್ಲಿ ಅಧ್ಯಕ್ಷ ಲಿಂಡನ್ ಬಿ ಜಾನ್ಸನ್‍ ಅವರಿಂದ ಉದ್ಘಾಟನೆಗೊಂಡಿತು. ಮೇ 18, 1966 ರಂದು ಆರ್ಚ್‌ಗೆ ದೀಪಗಳನ್ನು ಅಳವಡಿಸಲಾಗಿದೆ.

ಆರ್ಚ್‌ನಲ್ಲಿ `ಡಿಕ್ ಬ್ರೌಜರ್’ರವರಿಂದ ವಿನ್ಯಾಸಗೊಂಡ 2 ಟ್ರ್ಯಾಮ್‌ಗಳಿವೆ. ಇವು ಪ್ರತಿ 10 ನಿಮಿಷಗಳಿಗೊಮ್ಮೆ ಎಲಿವೇಟರ್ ಮೂಲಕ ಹತ್ತಿ ಇಳಿಯುತ್ತಿರುತ್ತವೆ. ಈ ಟ್ರ್ಯಾಮ್‍ಗಳು ನೇರವಾಗಿ ಚಲಿಸದೆ `ಜಿಗ್ ಜಾಗ್’ ವಿನ್ಯಾಸದಲ್ಲಿ ಚಲಿಸುವುದರಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಗುವುದಿಲ್ಲ. ಒಂದು ಟ್ರ್ಯಾಮ್‌ನಲ್ಲಿ 8 ಕಾರುಗಳಿವೆ. ಒಂದು ಕಾರಿನಲ್ಲಿ 5 ಜನ ಕುಳಿತುಕೊಳ್ಳಬಹುದು. ಒಟ್ಟಿಗೆ 40 ಜನ ಪ್ರಯಾಣಿಸಬಹುದು.

ಎಲಿವೇಟರ್ ಹತ್ತಲು 4 ನಿಮಷ ಇಳಿಯಲು 3 ನಿಮಿಷ ತೆಗೆದುಕೊಳ್ಳುತ್ತದೆ. ಇದರಲ್ಲಿ ಪಯಣಿಸುವುದು ನಿಜಕ್ಕೂ ಅದ್ಭುತ ಅನುಭವ. 1 ಘಂಟೆಗೆ 6 ಬಾರಿ ಹೋಗಿಬರುವ ಇದರಲ್ಲಿ ಸುಮಾರು 240 ಜನ, 2 ಬಾಗಿಲಿನಿಂದ 480 ಜನ ಹೋಗಿ ಬರುವ ವ್ಯವಸ್ಥೆ ಇದೆ.

13 ದಶಲಕ್ಷ ಡಾಲರ್ ವೆಚ್ಚದಲ್ಲಿ ಕಟ್ಟಿರುವ ಈ ಆರ್ಚ್‌ ಮೇಲೆ 65 ಅಡಿ ಉದ್ದ ಮತ್ತು 7 ಅಡಿ ಅಗಲದ ಡೆಕ್ (ನಿಲ್ಲುವ ಸ್ಥಳ) ಇದೆ. ಇಲ್ಲಿ ಒಂದು ಬಾರಿಗೆ 160 ಜನ ನಿಲ್ಲಬಹುದು. ಎರಡೂ ಕಡೆಯೂ ದೊಡ್ಡದಾದ ಕಿಟಕಿಗಳಿವೆ. ಇಲ್ಲಿ ನಿಂತರೆ, 30 ಕಿ. ಮೀ ದೂರದವರೆಗಿನ ದೃಶ್ಯಗಳನ್ನು ವೀಕ್ಷಿಸಬಹುದು. ಇವುಗಳಲ್ಲಿ ಒಂದೆಡೆ ಮಿಸ್ಸಿಸಿಪ್ಪಿ ನದಿ ಇನ್ನೊಂದೆಡೆ ಸೇಂಟ್ ಲೂಯಿಸ್ ನಗರದ ಸುಂದರ ದೃಶ್ಯಗಳು ಕಾಣಿಸುತ್ತವೆ. ಈ ಡೆಕ್ ನಲ್ಲಿ ಹಲವಾರು ಸಿನಿಮಾಗಳ ಚಿತ್ರೀಕರಣ ನಡೆದಿದೆ. ಒಂದು ವಿವಾಹಮಹೋತ್ಸವ ಕೂಡ ಆಗಿದೆ.

ಗೇಟ್ ವೇ ಆರ್ಚ್ ನೋಡಲು ಪ್ರವೇಶ ಶುಲ್ಕ 13 ಡಾಲರ್. ಮಕ್ಕಳಿಗೆ 10 ಡಾಲರ್. ಶಾಲಾ-ಕಾಲೇಜ್ ಮಕ್ಕಳಿಗೆ ರಿಯಾಯಿತಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !