ಭೂತಗಳ ಲೋಕದಲ್ಲಿ ಒಂದು ಸುತ್ತು...

7

ಭೂತಗಳ ಲೋಕದಲ್ಲಿ ಒಂದು ಸುತ್ತು...

Published:
Updated:
Prajavani

ದೆವ್ವ ಎಂಬ ಪದವೇ ನಮ್ಮಲ್ಲಿ ಅನೇಕ ಆಲೋಚನೆಗಳನ್ನು ಅರಳಿಸುತ್ತದೆ. ಎದೆ ನಡುಗಿಸಿ ಹಿಂದೆ ಯಾರೋ ಇರಹುದೆಂಬ ಭಾವ ಹುಟ್ಟಿಸುತ್ತದೆ. ಭೂತಗಳ ಅಸ್ತಿತ್ವ ನಿಜವೋ, ಸುಳ್ಳೋ ಇರಬಹುದು. ಆದರೆ, ದೆವ್ವಗಳಿಲ್ಲದ ರಸಹೀನ ಲೋಕವೇ ನಮಗೆ ಬೇಡ. ಅಂಥದೊಂದು ಸೌಂದರ್ಯಹೀನ ಪ್ರಪಂಚದಲ್ಲಿ ಇರುವುದಾದರೂ ಹೇಗೆ ಎನ್ನುವ ಜನರೂ ಇದ್ದಾರೆ.

ನಾವೆಲ್ಲಾ ಪಾರಂಪರಿಕವಾಗಿ ದೇವರು ಮತ್ತು ದೆವ್ವಕ್ಕೆ ಸಮಾನ ಗೌರವ ನೀಡುವವರು. ಕತ್ತಲೆಂದರೆ ಅದೊಂದು ಕೆಟ್ಟಲೋಕ. ಕೆಲಮೊಮ್ಮೆ ಅರ್ಧರಾತ್ರಿಗಳಲ್ಲಿ ಎಚ್ಚರವಾದಾಗ ಮನೆಯಲ್ಲಿಟ್ಟ ಕುರ್ಚಿ, ನೇತು ಹಾಕಿದ ಕೊಡೆ, ಟೇಬಲ್‌ಗಳು ವಿವಿಧ ಭೂತಗಳ ರೂಪ ತಳೆದು ಹೆದರಿಸುತ್ತವೆ. ಗಡಿಯಾರದ ಟಿಕ್ ಟಿಕ್ ಶಬ್ದ, ಅಕ್ಕಪಕ್ಕದವರ ಗೊರಕೆಗೆ ಎಂತವರಿಗೂ ಎದೆ ನಡುಗಿ ಅಲ್ಲಿಯೇ ಅದೂ- ಇದೂ ಆಗುವಂತೆ ಮಾಡುತ್ತವೆ. ಇಂಥಾ ಥ್ರಿಲ್ ಇಲ್ಲದ್ದೂ ಒಂದು ಜೀವನವೇ?

ದೆವ್ವಗಳನ್ನು ಕುರಿತ ಕಥೆಗಳು ಪ್ರತಿದಿನ ರಕ್ತಕಣಗಳಿಗಿಂತ ವೇಗವಾಗಿ ಹುಟ್ಟುತ್ತವೆ. ಮನುಷ್ಯರ ಕಾಲುಗಳಿಗೂ, ಭೂತಗಳಿಗೂ ಅವಿನಾಭಾವ ಸಂಬಂಧ. ದೆವ್ವ ಒಂದು ಈತನನ್ನು ಎದುರಿಸಬಹುದೋ, ಎದುರಿಸಲಾಗದೋ ಎಂದು ಪರೀಕ್ಷಿಸುವುದು ನಮ್ಮ ಕಾಲುಗಳ ಮೂಲಕವೇ. ಈಗ ನೀವೆಲ್ಲೋ ಅಪರಿಚಿತ ಸ್ಥಳದಲ್ಲಿ ನಿಂತಿದ್ದೀರಿ. ಅಲ್ಲಿನ ಸ್ಥಳೀಯ ಭೂತಕ್ಕೆ ನಿಮ್ಮನ್ನು ಚೇಷ್ಟೆ ಮಾಡುವ ಮನಸ್ಸಾಗುತ್ತದೆ. ಅದು ನಿಮ್ಮ ಬಳಿ ಬಂದು ಕೀಟಲೆ ಕೊಡುವ ಮುನ್ನ ನೀವು ಘಾಟಿಯಾ? ಎಂದು ಪರೀಕ್ಷಿಸುತ್ತದೆ. ನೀವು ಹೆದರುವವರಾದರೆ ಹೆದರಿಸಿ ಮಜಾ ಪಡೆಯುತ್ತದೆ!

ಆದರೆ, ಪರೀಕ್ಷ್ಷೆಯಲ್ಲಿ ನೀವು ಗೆದ್ದಿರೋ ಇವನು ನನಗಿಂತ ದೊಡ್ಡ ದೆವ್ವವೆಂದು ನಿಮ್ಮನ್ನು ಬೈದುಕೊಳ್ಳುತ್ತಾ ಹೋಗುತ್ತದಂತೆ. ಪರೀಕ್ಷೆ ಮಾಡಲು ಬರುವ ದೆವ್ವಕ್ಕೆ ನಿಮ್ಮ ಅಂದ ಚೆಂದಕ್ಕಿಂತ ನಿಮ್ಮ ಕಾಲುಗಳೇ ಮುಖ್ಯ. ಬಳಿ ಬಂದ ದೆವ್ವವು ಹಿಮ್ಮಡಿಗಳಿಗೆ ಮೂರು– ನಾಲ್ಕು ಬಾರಿ ಬೆರಳಿನಿಂದ ಹೊಡೆಯತ್ತದೆ. ಆಗ ನಿಮ್ಮ ಕಾಲಿನಲ್ಲಿ ನಡುಕ ಬಂದರೆ ನೀವು ಪುಕ್ಕಲರು ಎಂದು ಖಾತ್ರಿಯಾಗಿ ದೆವ್ವ ಆ ಕ್ಷಣಕ್ಕೆ ನಿಂತಲ್ಲಿ ನಿಲ್ಲಲಾರೆ ಹ್ಹ ಹ್ಹ ಹ್ಹ... ಎಂದು ಹಾಡಿ ಕುಣಿದು ಕೀಟಲೆ ಮಾಡಲು ಪ್ರಾರಂಭಿಸುತ್ತದೆ. ಬೀಡಿ, ಸಿಗರೇಟ್, ಎಲೆ ಅಡಿಕೆ ಇತ್ಯಾದಿ ಅದು ಬದುಕಿದ್ದಾಗ ಏನೇನು ತಿನ್ನುತ್ತಿತ್ತೋ ಅದನ್ನು ಕೇಳುವುದು, ನಿಮ್ಮ ಪ್ಯಾಟ್ ಎಳೆಯುವುದು, ಕೂಗುವುದು ಏನನ್ನಾದರೂ ಮಾಡಬಹುದು. ಒರಟು ಸ್ವಭಾವದ ದೆವ್ವಗಳ ಕೈಗೆ ನೀವು ಸಿಕ್ಕರಂತೂ ನಿಮಗೆ ಮಾರಿ ಹಬ್ಬವೇ ಸರಿ. ಅವಕ್ಕೆ ಬರೀ ಕೀಟಲೆಯಿಂದ ಮಜಾ ಸಿಗುವುದಿಲ್ಲ. ನಿಮ್ಮನ್ನು ಬೀಳಿಸಿ, ಓಡಿಸಿ, ಉರುಳಾಡಿಸಿ ಬೆಕ್ಕು, ಇಲಿ ಆಟ ತೋರುತ್ತವೆ.

ಬಹುತೇಕ ಮನೆಗಳಲ್ಲಿ ನೆಲದ ಮೇಲೆ ಚಾಪೆಹಾಸಿ ಎಲ್ಲರೂ ಸಾಲಾಗಿ ಮಲಗುತ್ತಾರೆ. ಹಾಗೆ ಹಾಸಿ ಮಲಗುವಾಗ ಎಷ್ಟು ಜನ ಮಲಗಲು ಅವಶ್ಯವಿದೆಯೋ ಅಷ್ಟೇ ಹಾಸಿಗೆ ಹಾಕಬೇಕು. ಒಬ್ಬರು ಮಲಗುವ ಜಾಗಕ್ಕೆ ಇಬ್ಬರಿಗೆ ಆಗುವಷ್ಟು ಹಾಸಿಗೆ ಹಾಕಿದಿರೋ ನೀವಾಗಿ ನೀವೇ ದೆವ್ವಕ್ಕೆ ಪ್ರವೇಶ ಪರವಾನಗಿ ನೀಡಿದಂತೆ. ದೆವ್ವಗಳು ದೇವರಂತೆ ಸರ್ವಶಕ್ತವು. ಒಮ್ಮೆ ದೆವ್ವವಾದರೆ ಮುಗಿಯಿತು. ಅವು ಎಲ್ಲಿಗೆ ಬೇಕಾದರೂ ಹೋಗುವ, ಬರುವ ಹಕ್ಕು ಹೊಂದಿರುತ್ತವೆ. ಅವನ್ನು ಅಡ್ಡಹಾಕಿ ಆಧಾರ್, ವೋಟರ್ ಐ.ಡಿ ಕೇಳುವ ಯಾವನೂ ಇರುವುದಿಲ್ಲ. ಅವಕ್ಕೆ ಅಣಿಮಾ, ಮಹಿಮಾ ವಿದ್ಯೆಗಳೆಲ್ಲಾ ತಂತಾನೇ ಸಿದ್ಧಿಸುತ್ತವೆ. ಹಾಗಾಗಿ, ನಿಮ್ಮ ಹಾಸಿಗೆಯಲ್ಲಿ ಬಿಟ್ಟಸ್ಥಳವನ್ನು ತುಂಬಲು ಮನೆಯೊಳಕ್ಕೆ ಧಾವಿಸುತ್ತವೆ. ಅವನ್ನು ತಡೆಯಲಾದೀತೇ ಮೊದಲೇ ಅವು ಗಾಳಿಗಳು!

ಇವಾಗ ಚಳಿಗಾಲ ದೆವ್ವಗಳಿಗೆ ಸ್ವೆಟರ್, ರಗ್ಗು ಇರುತ್ತದೋ, ಇಲ್ಲವೋ ಯಾರಿಗೆ ಗೊತ್ತು. ದೆವ್ವಗಳ ಚುನಾವಣೆ ಇದ್ದಿದ್ದರೆ ಓಟಿಗಾಗಿಯಾದರೂ ಚುನಾವಣೆಗೆ ನಿಂತ ದೆವ್ವ ಅದೂ ಇದೂ ಕೊಡಿಸುತ್ತಿತ್ತು. ನಮ್ಮ ಸರ್ಕಾರಗಳಂತೂ ಸತ್ತ ಮೇಲೆ ಓಟಿಲ್ಲ ಎಂದು ದೆವ್ವಗಳಿಗೆ ಯಾವ ಸೌಲಭ್ಯವನ್ನೂ ನೀಡುವುದಿಲ್ಲ. ಸಾಯುವಾಗ ಧರಿಸಿದ್ದ ಬಟ್ಟೆಗಳೇ ದೆವ್ವಗಳಿಗೆ ಕಾಯಂ. ಕಾಲ ಕಳೆದಂತೆ ಆ ಬಟ್ಟೆಗಳು ಸವೆಯುವುದಿಲ್ಲವೇ? ಹಾಗಾಗಿ ಇವು ಮಲಗಿರುವವರ ಪಕ್ಕ ಜಾಗ ಇದೆಯಾ ನೋಡುತ್ತವೆ. ಜಾಗ ಇದ್ದರೆ ಅವರ ಪಕ್ಕ ಮಲಗುತ್ತವೆ. ಇಲ್ಲದಿದ್ದರೆ ಮುಂದಿನ ಮನೆ. ಆಚೆ ಮಲಗಲು ಅವಕ್ಕೂ ಭಯ. ದೆವ್ವಗಳೇ ಇರಬಹುದು ಅವು ಮರ್ಯಾದೆಗೆ ಅಂಜುತ್ತವೆ. ಈ ಹಾಳು ಮನುಷ್ಯರು ರಾತ್ರಿವೇಳೆ ತಾವು ಮಾಡಿದ ಘನ ಕೆಲಸಗಳನ್ನು ನಮ್ಮ ಮೇಲೆ ಕಟ್ಟುತ್ತಾರೆ ಎಂಬುದು ಅವುಗಳ ಆಲೋಚನೆಯಾಗಿರಹುದು.

ಊಟ ಮಾಡುತ್ತಿರುತ್ತೀರಿ. ಇದ್ದಕ್ಕಿದ್ದಂತೆ ಕರೆಂಟ್ ಹೋಗುತ್ತದೆ. ಮನೆಯವರು ಮತ್ತೊಂದು ಬೆಳಕಿನ ವ್ಯವಸ್ಥೆ ಮಾಡುವವರೆಗೆ ಊಟ ಮಾಡುವುದುದನ್ನು ನಿಲ್ಲಿಸುವುದು ಜಾಮೀನುರಹಿತ ಅಪರಾಧ. ಆ ಕರೆಂಟ್ ಹೋಗಿ ಬರುವ ವೇಳೆಗೆ ನಿಮ್ಮ ತಟ್ಟೆಯಲ್ಲಿರುವ ಐಟಂ ಒಂದನ್ನು ಪಕ್ಕದವರು ಎಗರಿಸಬಹುದು. ಹಾಗಾಗಿ, ಊಟ ಮೂಡುವಾಗ ಕೈ ನಿಲ್ಲಿಸಬಾರದು ಎನ್ನುತ್ತಾರೆ ಹಿರಿಯರು. ತಿಳಿದವರು ಹೇಳುವಂತೆ ಅಪ್ಪಾಜಿ ಕ್ಯಾಂಟೀನ್,ಇಂದಿರಾ ಕ್ಯಾಂಟೀನ್, ರಮ್ಯ ಕ್ಯಾಂಟೀನ್‌ಗಳಲ್ಲಿ ಅಶರೀರರಾದ ಕಾರಣಕ್ಕೆ ಊಟ ಪಡೆಯಲು ಅನರ್ಹವಾದ ದೆವ್ವಗಳು ಹಾದಿಬೀದಿಯಲ್ಲಿ ಅಲೆಯುತ್ತಿರುತ್ತವಂತೆ. ಊಟ ಮಾಡುವಾಗ ಕೈ ನಿಲ್ಲಿಸಿದರೆ ಆ ಸಮಯದಲ್ಲಿ ಅವು ತಟ್ಟೆಯಿಂದ ಚೂರು ತಿನ್ನುತ್ತವೆಯಂತೆ. ಊಟದ ರುಚಿ ಅವಕ್ಕೆ ಹಿಡಿಸಿತೋ ನೀವೇ ಪುಣ್ಯವಂತರು. ಅವು ದಿನಾ ನಿಮ್ಮ ಮನೆಗೆ ಕಾಯಂ ಆಗುತ್ತವೆ. ಅದಕ್ಕೆ ಸಾರನ್ನು ಚೂರು ಹಿಂದೆ ಮುಂದೆ ಮಾಡಬೇಕು ಎನ್ನುತ್ತಾರೆ. ಸಾರು ಮಾಡಲು ಬರದವರು.

ಈಗಲೂ ಊಟಕ್ಕೆ ಕುಳಿತಾಗ ಪಕ್ಕದಲ್ಲಿರುವ ಆಪ್ತರ ತಟ್ಟೆಗೆ ಕೈಹಾಕಿ ತಿಂಡಿಯೊಂದನ್ನು ಎತ್ತಿಕೊಳ್ಳುವ ಅಥವಾ ಕಾಣದಂತೆ ಅವರ ತಟ್ಟೆಗೆ ಹಾಕುವ ಕಲೆಯಲ್ಲಿ ನಾವೆಲ್ಲಾ ಪ್ರವೀಣರು. ಸುಮಾರು ವರ್ಷಗಳ ಹಳೆಯ ಕಥೆ. ಇಪ್ಪತ್ತು ಮನೆಗಳ ಪುಟ್ಟಹಳ್ಳಿಯಲ್ಲಿ ನಾನ್ವೆಜ್ ಅಜ್ಜಿಯೊಂದಿತ್ತು. ಅದಕ್ಕೆ ದಿನಾಲು ಮೊಟ್ಟೆ, ಮೀನು ಕನಿಷ್ಠ ಮಾಂಸದ ಒಂದು ತುಂಡಾದರೂ ಬೇಕು. ಇದ್ಯಾವುದೂ ಇಲ್ಲದಿದ್ದರೆ ಈ ಅಜ್ಜಿ ಊಟ ಮಾಡುವ ಮಾತೇ ಇಲ್ಲ. ಅದರಲ್ಲೂ ಅಜ್ಜಿಗೆ ಮೊಟ್ಟೆಯೆಂದರೆ ಪ್ರಾಣ.

ಮನೆಯಲ್ಲಿ ತಪ್ಪದೆ ಮೊಟ್ಟೆ ಬೇಯಿಸಲೇ ಬೇಕಿತ್ತು. ಸೊಸೆಯನ್ನಂತು ಮೊಟ್ಟೆ ಹುರಿದಂತೆ ಹುರಿದು ಮುಕ್ಕುತ್ತಿತ್ತು. ಹಾಗೋ- ಹೀಗೋ ಮುದುಕಿ ಸತ್ತಿತು. ತಿಂಗಳುರುಳಿತು ನೆನಪೂ ಮಾಸಿತು. ಒಂದು ದಿನ ಮನೆಯ ಸೊಸೆ ಅನುಪಮೆ ಬೇಯಿಸಿದ ಮೊಟ್ಟೆ ಸುಲಿದಿಟ್ಟು ಮುದ್ದೆ ಮಾಡಿ ಮೇಲೇಳುತ್ತಾಳೆ. ಬೇಯಿಸಿದ ನಾಲ್ಕು ಮೊಟ್ಟೆಗಳಲ್ಲಿ ಮೂರು ಮೊಟ್ಟೆಗಳಿಲ್ಲ. ಗಾಬರಿಯಿಂದ ಚೀರಿದಳು. ಗಂಡ, ಮಾವ, ನಾದಿನಿ ಅಡುಗೆ ಮನೆಗೆ ಬಂದರು. ಯಾಕೆ, ಎಲ್ಲಿ, ಹೇಗೆ, ಎಂದು ಯಾವ ಪೊಲೀಸರಿಗೂ ಕಡಿಮೆಯಿಲ್ಲದೆ ತನಿಖೆ ನಡೆಸಿದರು. ಫಲಿತಾಂಶ ದುಂಡು ಮೊಟ್ಟೆ. ಎಲ್ಲರ ಯೋಚನೆ ಒಂದೇ ಇದು ಅಜ್ಜಿಯದೇ ಕೆಲಸ.

ಮನೆಯವರೆಲ್ಲಾ ಮಾತಾಡಿಕೊಂಡರು ಮಾಂತ್ರಿಕನ ಕರೆಸಿದರು. ಆತ ಅದೂ- ಇದೂ ಮಾಡಿ ಮನೆಯ ತುಂಬಾ ಸಾಂಬ್ರಾಣಿ ಹೊಗೆ ಹಾಕಿ ಮನೆಯಲ್ಲಿರುವ ಎಲ್ಲಾ ಸೊಳ್ಳೆಗಳನ್ನೂ ಓಡಿಸಿದ. ಪೂಜೆ ಬಹಳ ಪವರ್‌ಫುಲ್ ಆಗಿತ್ತು. ಮಾಂತ್ರಿಕ ಪರೀಕ್ಷಾರ್ಥವಾಗಿ ಮೊಟ್ಟೆ ಬೇಯಿಸಿಟ್ಟು ಕ್ರಾಸ್ ಚೆಕ್ ಮಾಡಿದ ಮೊಟ್ಟೆಯನ್ನು ಅಜ್ಜಿಯ ದೆವ್ವ ತಿನ್ನಲಿಲ್ಲ. ಮನೆಯವರೆಲ್ಲಾ ಫುಲ್‌ಖುಷ್. ಆದರೆ, ಮರುದಿನ ಮತ್ತೆ ಮೊಟ್ಟೆಗಳು ಮಾಯವಾದವು. ಮೊಟ್ಟೆ ಕಣ್ಮರೆ ಪ್ರಕರಣ ಕುರುಕ್ಷೇತ್ರದ ಚಕ್ರವ್ಯೂಹಕ್ಕಿಂತ ಬಿಗುವಾಯಿತು.

ಮಾತು ಕಿವಿಯಿಂದ ಕಿವಿಗೆ ಹಬ್ಬಿತು. ಈ ಮನೆಯವರು ಮೊಟ್ಟೆ ಬೇಯಿಸುವುದನ್ನೇ ನಿಲ್ಲಿಸಿದರು. ಇವರು ಮೊಟ್ಟೆ ತರುವುದು ಯಾವಾಗ ನಿಂತಿತೋ ಪಕ್ಕದ ಮನೆಗಳಲ್ಲಿಯೂ ಮೊಟ್ಟೆ ಕಾಣೆಯಾಗತೊಡಗಿದವು. ಅಜ್ಜಿಯ ಕೈಚಳಕ ಊರಿಗೇ ಹಬ್ಬಿ ಇಡೀ ಊರು ಮೊಟ್ಟೆಕೊಳ್ಳಲು ಧೈರ್ಯ ಮಾಡಲಿಲ್ಲ.

ಅಂಗಡಿ ಮುಂದೆ ಯಾರೋ ನಡೆದು ಬರುವುದು ಕಾಣಿಸಿತು. ಅಂಗಡಿಯವನು ನೋಡಿದ ತಿಂಗಳ ಹಿಂದೆ ಸತ್ತು ಹೋಗಿದ್ದ ನಾನ್ವೆಜ್ ಅಜ್ಜಿ ನಡೆದು ಬರುತ್ತಿದ್ದಾಳೆ! ಅಂಗಡಿಯವನು ಹೆದರಿದ ಮನೆದೇವರ ನೆನೆದ, ಹೆಂಡತಿಯನ್ನೂ ಸ್ಮರಿಸಿದ ಪ್ರಯೋಜನವಾಗಲಿಲ್ಲ. ಎರಡೇ ಹೆಜ್ಜೆಗೆ ಎದುರು ಬಂದ ಅಜ್ಜಿ ಹ್ಹಿಹ್ಹಿಹ್ಹಿ... ಎಂದು ಬೊಚ್ಚು ಬಾಯಲ್ಲಿ ನಗುತ್ತಾ ‘ರಂಗ್ಸಾಮಿ ಊರಾಗೆ ಯಾರೂ ಮೊಟ್ಟೆ ಬೇಸ್ತಿಲ್ಲ ನಾಕು ಮೊಟ್ಟೆಕೊಡ್ಲ’ ಎಂದದ್ದೇ ತಡ ರಂಗಸ್ವಾಮಿ ಗಾಬರಿಯಲ್ಲಿ ಎದ್ದಿದ್ದ ಕನಸಾ ನಿಟ್ಟುಸಿರು ಬಿಟ್ಟ. ಪಂಚೆ ಒದ್ದೆಯಾಗಿತ್ತು. ಹೆಂಡತಿಗೆ ತಿಳಿದರೆ ಪಂಚೆಯ ಜೊತೆಗೆ ನನ್ನನ್ನೂ ಒಗೆಯುವಳೆಂದು ಮೆಲ್ಲಗೆ ಹೋಗಿ ಬೇರೆ ಪಂಚೆ ಧರಿಸಿ ಉಟ್ಟಿದ್ದ ಪಂಚೆಯನ್ನು ಗಾಳಿಗೆ ಒಣಗಿ ಹಾಕಿ ಏನೂ ಅರಿಯದವನಂತೆ ಮಲಗಿದ. ಕನಸಿನ ಪರಿಣಾಮದಿಂದ ತಾನು ಪಂಚೆಯಲ್ಲಿಯೇ ಮಾಡಿಕೊಂಡ ಬಹು ಪರಾಕ್ರಮದ ಕೆಲಸವನ್ನು ಹೆಂಡತಿಯಿಂದ ಮುಚ್ಚಿಟ್ಟ. ಅಂಗಡಿಗೆ ಮೊಟ್ಟೆ ಹಾಕದಿರಲು ತೀರ್ಮಾನಿಸಿ ಮಲಗಿದ.

ನಾದಿನಿಯ ಜೊತೆ ಅನುಪಮೆ ತವರಿನ ಹಬ್ಬಕ್ಕೆ ಹೋದಳು. ಅಂದು ಅವಳ ಗಂಡನೇ ಅಡುಗೆ ಮಾಡಲು ಹೋದ ಬೇಯಿಸದೇ ಉಳಿದಿದ್ದ ಮೊಟ್ಟೆ ಕಂಡ ತಾಯಿ ನೆನಪಾದಳು. ಎರಡು ಮೊಟ್ಟೆ ಬೇಯಿಸಿ ಅವ್ವ ತಿನ್ನು ಎಂದು ಅಲ್ಲೇ ಇಟ್ಟು ಹೊರಬಂದು ಅಪ್ಪನೊಂದಿಗೆ ಊಟ ಮಾಡಿ ಮಲಗಿದ. ಬೆಳಿಗ್ಗೆ ಎದ್ದು ನೋಡುತ್ತಾನೆ. ಸುಲಿದ ಎರಡು ಮೊಟ್ಟೆ ಹಾಗೇ ಇವೆ. ಮಗನಿಗೆ ದುಃಖವಾಯಿತು ಯಾವ ಕಾರಣಕ್ಕೆ ನಾನಿಟ್ಟ ಮೊಟ್ಟೆ ತಿಂದಿಲ್ಲವೆಂದು ಮೂಗಿನಿಂದ ಕಣ್ಣಿನಿಂದ ನೀರು ಬರುವಂತೆ ಗಳಗಳ ಅತ್ತು ಮತ್ತೆರಡು ಫ್ರೆಶ್‌ ಮೊಟ್ಟೆ ಬೇಯಿಸಿಟ್ಟ ಅವ್ವ ತಿನ್ನು ಎಂದು ಕೊರಗಿದ ಇಲ್ಲಾ ಅಜ್ಜಿ ಇವನ ಮಾತಿಗೆ ಕರಗಲೇ ಇಲ್ಲ.

ಮರುದಿನ ಹೆಂಡತಿ ಬಂದಳು ಮೊಟ್ಟೆ ಬೇಯಿಸಿ ಮುದ್ದೆ ಮಾಡಲು ಸೂಚಿಸಿ ತಾನೆಲ್ಲಿಗೋ ಹೋದ. ಅಡುಗೆ ಮುಗಿಸಿದಳು. ಮೊಟ್ಟೆಯೊಂದನ್ನು ಸುಲಿದು ತಿಂದು, ನೀರು ಕುಡಿದು ರೀ... ಬನ್ನಿ ಅತ್ತೆ ಮೊಟ್ಟೆ ತಿಂದಿದೆ. ಮನೆಯ ಮೇಲಿನ ಬೆಳಕಿನೆಂಚಲ್ಲಿ ಎಲ್ಲ ನೋಡುತ್ತಿದ್ದ ಗಂಡ ಇಳಿದು ಬರ‍್ತೀನಿ ತಡಿರೀ... ಎಂದ ಅಷ್ಟೇ ರಾಗವಾಗಿ. ಸುದ್ದಿ ಕತ್ತಲಲ್ಲಿ ನಡೆದಿದ್ದರೂ ಊರನ್ನು ಬೆಳಗಿಸಿತು. ಎಲ್ಲರೂ ನಕ್ಕರು. ಹೀಗೆ ದೆವ್ವದ ಮೇಲೆ ಬಂದಿದ್ದ ಆರೋಪವೊಂದು ಇಲ್ಲವಾಗಿ ನಾನ್ವೆಜ್ ಅಜ್ಜಿಯ ದೆವ್ವ ನಿರಪರಾಧಿಯೆಂದೂ, ಮೊಟ್ಟೆ ಇಲ್ಲವಾಗಲು ಸೊಸೆಯೇ ಕಾರಣವೆಂದೂ ಸರ್ವಜನವೂ ಒಪ್ಪಿತು. ಇತರರ ಮನೆಗಳಲ್ಲಿ ಮೊಟ್ಟೆ ಕಳುವಾಗಲು ಕಾರಣರಾದ ಜೀವಂತ ತುಂಟ ದೆವ್ವಗಳು ತಾವಾಗಿ ನಗುತ್ತಾ ಶರಣಾದವು. ಹೀಗೆ ನಾನ್ವೆಜ್ ಅಜ್ಜಿಯ ಭೂತ ದೋಷಮುಕ್ತವಾಗಿ ನಿಟ್ಟುಸಿರು ಬಿಟ್ಟಿತು.

ಮನೋವಿಜ್ಙಾನಿ ಡಾ.ಕೋವೂರ್ ಹೇಳುವಂತೆ ದೆವ್ವ ಹಿಡಿಯುವುದೆಂದರೆ ಛಿದ್ರ ಮಾನಸಿಕ ಸ್ಥಿತಿಯಿಂದ ಆವೇಶ ಬಂದತೆ ವರ್ತಿಸುವುದು. ಈ ಮನೋರೋಗಕ್ಕೆ ಕ್ಸೆನೋಗ್ಲಾಸಿ ಎನ್ನುತ್ತಾರಂತೆ. ಇದಕ್ಕೆ ತುತ್ತಾದವರು ಸತ್ತನೆಂದು ಹೇಳಲಾಗುವ ವ್ಯಕ್ತಿಯ ಭಾಷೆ, ನಡೆ- ನುಡಿಯನ್ನು ಅನುಕರಿಸುತ್ತಾರೆ. ದುರ್ಬಲ ಮನಸ್ಸು ಹೊಂದಿರುವ ಇವರ ಅಸಹಜ ವರ್ತನೆಯನ್ನು ಜನ ಭೂತ ಮೈಮೇಲೆ ಬಂತೆಂದು ಹೇಳುತ್ತಾರಂತೆ. ಅದೇನೇ ಇರಲಿ ಚಿಕ್ಕ ಮಕ್ಕಳಿಗೆ ಈಗಲೂ ಚೆನ್ನಾಗಿ ಗೊತ್ತಿರುವು ಎರಡೇ. ಒಂದು ಅಮ್ಮ ಇನ್ನೊಂದು ಗುಮ್ಮ. ಅಮ್ಮ ನಿಲ್ಲದೆ ಮಕ್ಕಳು ಹೇಗೆ ಮಲಗುವುದಿಲ್ಲವೋ ಹಾಗೆ ಗುಮ್ಮನಿಲ್ಲದೆಯೂ ಮಲಗುವುದಿಲ್ಲ. ಮಲಗಲು ಹಠ ಮಾಡುವ ಮಕ್ಕಳನ್ನು ನಿತ್ಯ ಮಲಗಿಸುತ್ತಿರುವುದು ಭೂತಗಳೇ ಆಗಿವೆ. ಇದಕ್ಕೆ ಶಾಂತಿನೊಬೆಲ್ ಆದರೂ ಬೇಡವೇ? 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !