ಪೆರಿಫೆರಲ್‌ ವರ್ತುಲ ರಸ್ತೆಗೆ ಎನ್‌ಜಿಟಿ ತಡೆ: ‘ಸುಪ್ರೀಂ’ಗೆ ಮೇಲ್ಮನವಿ

ಸೋಮವಾರ, ಮಾರ್ಚ್ 18, 2019
31 °C

ಪೆರಿಫೆರಲ್‌ ವರ್ತುಲ ರಸ್ತೆಗೆ ಎನ್‌ಜಿಟಿ ತಡೆ: ‘ಸುಪ್ರೀಂ’ಗೆ ಮೇಲ್ಮನವಿ

Published:
Updated:

ನವದೆಹಲಿ: ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ರೂಪಿಸಲಾದ ಅಷ್ಟಪಥದ ಪೆರಿಫೆರಲ್‌ ವರ್ತುಲ ರಸ್ತೆಯ ನಿರ್ಮಾಣ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿರುವ ತಡೆಯಾಜ್ಞೆಯ ಸಿಂಧುತ್ವ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

2005ರಲ್ಲಿ ರೂಪಿಸಿರುವ ಈ ಯೋಜನೆಯ ವೆಚ್ಚ ₹ 1,000 ಕೋಟಿಯ ಬದಲಿಗೆ, ಇದೀಗ 12 ಪಟ್ಟು ಹೆಚ್ಚಿದೆ. ಎನ್‌ಜಿಟಿ ನೀಡಿರುವ ಅನಿರ್ದಿಷ್ಟ ತಡೆಯಿಂದಾಗಿ ಯೋಜನೆ ಸಾಕಾರಗೊಳ್ಳಲು ಮತ್ತೆ 10 ವರ್ಷ ವಿಳಂಬವಾದಲ್ಲಿ ವೆಚ್ಚ ಇನ್ನಷ್ಟು ಹೆಚ್ಚಲಿದೆ ಎಂದು ವಕೀಲ ಸಂಜಯ್‌ ನುಲಿ ಅವರ ಮೂಲಕ ಸಲ್ಲಿಕೆಯಾಗಿರುವ ಮೇಲ್ಮನವಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತಿಳಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಹಾಗೂ ಹೇಮಂತ್‌ ಗುಪ್ತಾ ನೇತೃತ್ವದ ಪೀಠ ಶುಕ್ರವಾರ ಈ ಮೇಲ್ಮನವಿಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಇದನ್ನೂ ಓದಿ... ಪೆರಿಫೆರಲ್‌ ವರ್ತುಲ ರಸ್ತೆಗೆ ಮರುಜೀವ

ಯೋಜನೆ ಆರಂಭಿಸಬೇಕಾದರೆ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಹೊಸದಾಗಿ ಪರಿಸರ ಪರಿಣಾಮ ಅಧ್ಯಯನ ನಡೆಸಬೇಕು ಎಂದು ತಡೆಯಾಜ್ಞೆ ನೀಡಿರುವ ಎನ್‌ಜಿಟಿ ಸೂಚಿಸಿದೆ. ಆದರೆ, ಯೋಜನೆ ಮುಂದಕ್ಕೆ ಹೋದರೆ ಆರ್ಥಿಕ ಹೊರೆ ಹೆಚ್ಚಲಿದೆ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

ಬೆಳೆಯುತ್ತಿರುವ ಬೆಂಗಳೂರು ನಗರದ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆ ಸಾಕಾರಗೊಂಡರೆ ನಗರದ ಮಾಲಿನ್ಯ ಪ್ರಮಾಣವೂ ತಗ್ಗಲಿದೆ ಎಂದು ಸರ್ಕಾರ ತಿಳಿಸಿದೆ.

ಬೆಂಗಳೂರಿನ ತುಮಕೂರು ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆ ಮತ್ತು ಹಳೆ ಮದ್ರಾಸ್‌ ರಸ್ತೆಗಳನ್ನು ಸಂಪರ್ಕಿಸುವ 65 ಕಿಲೋ ಮೀಟರ್‌ ಉದ್ದದ ಅಷ್ಟಪಥದ ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆ ಕುರಿತು ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರ ಸಲ್ಲಿಸಿದ್ದ ವರದಿಯನ್ನು ಪ್ರಶ್ನಿಸಿ ಸುಧಾಕರ ಹೆಗಡೆ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವ ಎನ್‌ಜಿಟಿ ಯೋಜನೆಗೆ ತಡೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !