ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳ ದಾಖಲಾತಿ

7
ಚಿಕ್ಕಬಾಣಾವರ ನಮ್ಮೂರು ಶಾಲೆಯ ಶಿಕ್ಷಕರ ಪರಿಶ್ರಮ

ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳ ದಾಖಲಾತಿ

Published:
Updated:
Deccan Herald

ಬೆಂಗಳೂರು: ಚಿಕ್ಕಬಾಣಾವರದ ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಯಲಹಂಕ ಕ್ಷೇತ್ರದಲ್ಲಿಯೇ ಅತಿ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ.

ಕಳೆದ ಐದು ವರ್ಷಗಳಿಂದ ಮಕ್ಕಳ ದಾಖಲಾತಿ ಹೆಚ್ಚುತ್ತಲೇ ಇದೆ. ಶಾಲಾ ಆರಂಭಕ್ಕೆ ಮುನ್ನ ಶಿಕ್ಷಕರು ಮನೆಮನೆಗೆ ಭೆಟಿ ನೀಡಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳನ್ನು ಮನದಟ್ಟು ಮಾಡುವುದು, ಈ ಶಾಲೆಯಲ್ಲಿ ಓದಿ ಉನ್ನತ ಶ್ರೇಣಿ ಪಡೆದವರ ಯಶೋಗಾಥೆಗಳನ್ನು ಹೇಳಿ ಮನವೊಲಿಸುವುದು ಇದಕ್ಕೆ ಕಾರಣ. ಶಿಕ್ಷಕರ ಈ ಪರಿಶ್ರಮಕ್ಕೆ ಒಳ್ಳೆಯ ಫಲ ದೊರಕಿದೆ.

‘ಕಳೆದ ಎರಡು ವರ್ಷಗಳಿಂದ ಇಡೀ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿದ್ದೇವೆ. ಅನುಕೂಲಸ್ಥ ಪೋಷಕರು ಕೂಡ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಮನವಿ ಮಾಡಿದ್ದೇವೆ. ಅವರಲ್ಲಿದ್ದ ಸಂಶಯಗಳನ್ನು ದೂರ ಮಾಡಿ ಅವರ ಮಕ್ಕಳನ್ನು ಶಾಲೆಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ.

ಸರ್ಕಾರಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ನೀಡುವುದಿಲ್ಲ ಎಂಬುದು ಪೋಷಕರಲ್ಲಿರುವ ಆತಂಕ. ಆದರೆ ಇಲ್ಲಿಯೂ ಒಳ್ಳೆಯ ಶಿಕ್ಷಣ ನೀಡಲು ಸಾಧ್ಯ ಎನ್ನುವುದನ್ನು ನಾವು ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇವೆ’ ಎಂದು ಮುಖ್ಯಶಿಕ್ಷಕಿ ಯಶೋದಮ್ಮ ಮಾಹಿತಿ ನೀಡಿದರು.

‘ಶಾಲಾ ಆರಂಭಕ್ಕೂ ಮುನ್ನ ಎಸ್‌ಡಿಎಂಸಿಯಿಂದ ದಾಖಲಾತಿ ಹೆಚ್ಚಿಸಲು ಬೇಕಾದ ರೂಪು ರೇಷೆ ಸಿದ್ಧಪಡಿಸುತ್ತೇವೆ. ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ನಿವಾಸಿಗಳ ತಂಡ ಕಟ್ಟಿಕೊಂಡು ಮನೆಮನೆಗೆ ಹೋಗುತ್ತೇವೆ. ಮಕ್ಕಳು ಗೈರಾದರೆ ಸಮಸ್ಯೆ ತಿಳಿದುಕೊಳ್ಳುತ್ತೇವೆ. ಮತ್ತೆ ಕರೆ ತರುತ್ತೇವೆ’ ಎಂದರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಯ್ಯ.

‘ಇದೇ ಸರ್ಕಾರಿ ಶಾಲೆಯಲ್ಲಿ ಓದಿ ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದೇನೆ. ಈ ಶಾಲೆಗೆ ಅರವತ್ತು ವರ್ಷಗಳ ಇತಿಹಾಸವಿದೆ. ಈ ಶಾಲೆಯನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಂಕಲ್ಪ ನಮ್ಮದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೇಶವಮೂರ್ತಿ ಹೇಳಿದರು. ಗ್ರಾಮದ ನಿವಾಸಿ ಸಂತೋಷ್‌ ಸಹ ಅವರ ಮಾತಿಗೆ ಧ್ವನಿಗೂಡಿಸಿದರು.

ಉತ್ತರವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣ್ ಪ್ರತಿಕ್ರಿಯಿಸಿ ‘ಚಿಕ್ಕಬಾಣಾವರ ಶಾಲೆ ಇಡೀ ಬೆಂಗಳೂರಿಗೆ ಮಾದರಿ ಶಾಲೆಯಾಗಿದೆ. ದಾಖಲಾತಿ ದೃಷ್ಟಿಯಿಂದ ಮಾತ್ರವಲ್ಲ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡುತ್ತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !