ಬುಧವಾರ, ಫೆಬ್ರವರಿ 19, 2020
16 °C
ಕೈಗಾರಿಕೀಕೃತ ದೇಶಗಳ ಜನರು ಅಂತರ್ಜಲ ಮಾಲಿನ್ಯಕ್ಕೆ ಭಾರಿ ಬೆಲೆ ತೆತ್ತಿದ್ದಾರೆ

ಬೇಕಾಗಿದ್ದಾರೆ ಅಂತರ್ಜಲ ಸಾಕ್ಷರರು

ಡಾ. ಶ್ರೀಹರಿ ಚಂದ್ರಘಟಗಿ Updated:

ಅಕ್ಷರ ಗಾತ್ರ : | |

Prajavani

ರಾಜಕೀಯ ಕ್ಷೇತ್ರದ ತಾರೆಗಳು ತುಂಬಿದ್ದ ‘ಪ್ರವಾಸಿ ಭಾರತೀಯ ದಿವಸ’ ಕಾರ್ಯಕ್ರಮ ಈಚೆಗೆ ವಾರಾಣಸಿಯಲ್ಲಿ ನಡೆಯಿತು. ತ್ಯಾಜ್ಯ ನಿರ್ವಹಣೆ ಮತ್ತು ನೀರಿಗೆ ಸಂಬಂಧಿಸಿದ ವಿಚಾರಗಳಲ್ಲಿ ನೀತಿ ನಿರೂಪಣೆಗೆ ಸಲಹೆ ನೀಡಲು ನನ್ನನ್ನು ಆಹ್ವಾನಿಸಲಾಗಿತ್ತು. ನನ್ನನ್ನೂ ಸೇರಿಸಿ ಏಳು ಜನ ಪರಿಸರ ತಜ್ಞರು ಇದ್ದರು. ಅಂತರ್ಜಲ ಶುದ್ಧೀಕರಣದ ಕೆಲಸದಲ್ಲಿ ನನಗಿರುವ ಅನುಭವದ ಆಧಾರದ ಮೇಲೆ ನಾನು, ಮುಕ್ತ ಚರ್ಚೆಯ ವೇಳೆ ಅಂತರ್ಜಲ ಕಾಪಾಡುವ ಬಗ್ಗೆ ಮಾತನಾಡಿದೆ. ‘ಅಂತರ್ಜಲ ಶುದ್ಧೀಕರಿಸುವ ಕೆಲಸವನ್ನು ಭಾರತವು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕು. ಅದಾಗದಿದ್ದರೆ, ತೆರಿಗೆದಾರರ ಸಾವಿರಾರು ಕೋಟಿ ರೂಪಾಯಿಗಳನ್ನು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೇಲೆ ವೆಚ್ಚ ಮಾಡುತ್ತಾ ಇರಬೇಕು’ ಎಂದು ಕಳೆದ ಜೂನ್‌ನಲ್ಲಿ ನವದೆಹಲಿಯಲ್ಲಿ ನಡೆದಿದ್ದ ಪ್ರವಾಸಿ ಭಾರತೀಯ ದಿವಸದ ಸಂದರ್ಭದಲ್ಲಿ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ  ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವೆ ಉಮಾ ಭಾರತಿ ಅವರ ಎದುರಿನಲ್ಲಿ ಹೇಳಿದ್ದೆ.

ಭಾರತದ ಶೇಕಡ 60ರಷ್ಟಕ್ಕಿಂತ ಹೆಚ್ಚು ಜನ ಕೃಷಿಗೆ ಮತ್ತು ಮನೆ ಬಳಕೆಗೆ ಅಂತರ್ಜಲವನ್ನೇ ನೆಚ್ಚಿಕೊಂಡಿದ್ದಾರೆ. ಈ ಪ್ರಮಾಣ ವಿಶ್ವದಲ್ಲಿ ಅತಿಹೆಚ್ಚು. ಅತಿಯಾದ ಬಳಕೆ ಹಾಗೂ ಮಳೆರಾಯನ ಅನಿಶ್ಚಿತತೆ ದೇಶದಾದ್ಯಂತ ಅಂತರ್ಜಲ ಮಟ್ಟ ಕುಸಿಯುವಂತೆ ಮಾಡಿವೆ. ಇದೇ ಸ್ಥಿತಿ ಮುಂದುವರಿದರೆ ಇಪ್ಪತ್ತು ವರ್ಷಗಳಲ್ಲಿ, ದೇಶದಲ್ಲಿ ಅಂತರ್ಜಲ ಹಿಡಿದಿಟ್ಟುಕೊಳ್ಳುವ ಶೇಕಡ 60ರಷ್ಟು ಶಿಲಾಪದರಗಳು ಅಪಾಯಕ್ಕೆ ಸಿಲುಕಲಿವೆ. ಕೈಗಾರಿಕೆಗಳು ಮತ್ತು ಕೃಷಿ ಚಟುವಟಿಕೆಗಳಿಂದ ಉತ್ಪತ್ತಿಯಾಗುತ್ತಿರುವ ತ್ಯಾಜ್ಯಗಳಿಂದಾಗಿ ಪರಿಸ್ಥಿತಿ ವಿಷಮಗೊಳ್ಳುತ್ತಿದೆ. ವಾತಾವರಣದಲ್ಲಿ ಹೊಂಜು (ಹೊಗೆ ಮತ್ತು ಮಂಜು) ಇದ್ದರೆ ಅಥವಾ ಭೂಮಿಯ ಮೇಲ್ಮೈ ನೀರು ಕಲುಷಿತಗೊಂಡಿದ್ದರೆ ಅದನ್ನು ಮಾಧ್ಯಮಗಳು ಮತ್ತು ಸಾರ್ವಜನಿಕರು ತಕ್ಷಣ ಗುರುತಿಸುತ್ತಾರೆ. ಆದರೆ, ಅಂತರ್ಜಲ ಕಲುಷಿತ ಆಗುತ್ತಿರುವುದನ್ನು ತಕ್ಷಣಕ್ಕೆ ಗುರುತಿಸುವುದು ಕಷ್ಟ. ಇದನ್ನು ಗುರುತಿಸುವ ಮೊದಲೇ ವಿಷಕಾರಿ ವಸ್ತುಗಳು ಆಹಾರ ಸರಪಣಿಯಲ್ಲಿ ಜಾಗ ಪಡೆದು, ಸರಿಪಡಿಸಲು ಸಾಧ್ಯವಾಗದಂತಹ ಪರಿಣಾಮವನ್ನು ಜನರ ಮೇಲೆ ಉಂಟುಮಾಡುತ್ತವೆ. ದೇಶದಲ್ಲಿ ನೀರು ಕಲುಷಿತ ಆಗಿದ್ದರಲ್ಲಿ ಮನುಷ್ಯನ ಪಾಲು ಎಷ್ಟು, ಪರಿಸರದ ಪಾಲು ಎಷ್ಟು ಎಂಬುದನ್ನು ಪಟ್ಟಿ ಮಾಡಿದ್ದೇನೆ. ಪರಿಸ್ಥಿತಿ ನಿರೀಕ್ಷಿಸಿದ್ದಕ್ಕಿಂತ ಕಠಿಣವಾಗಿದೆ ಎಂಬುದನ್ನು ಇದು ತೋರಿಸಿದೆ.

ಫ್ಲೋರೈಡ್‌, ಆರ್ಸೆನಿಕ್‌ ಮತ್ತು ಕಬ್ಬಿಣದ ಅಂಶಗಳು ಕಲ್ಮಷಗಳಾಗಿ ಸಹಜವಾಗಿಯೇ ಅಂತರ್ಜಲಕ್ಕೆ ಸೇರುತ್ತವೆ. 20 ರಾಜ್ಯಗಳಲ್ಲಿ ಫ್ಲೋರೈಡ್‌ನಿಂದ ಅಂತರ್ಜಲ ಕಲುಷಿತಗೊಂಡಿದೆ. 10 ರಾಜ್ಯಗಳಲ್ಲಿ, ನೀರಿನಲ್ಲಿರುವ ಆರ್ಸೆನಿಕ್‌ ಪ್ರಮಾಣವು ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಿದೆ. ಈ ಪ್ರದೇಶಗಳಲ್ಲಿ 6.2 ಕೋಟಿಗಿಂತ ಹೆಚ್ಚುಜನ– ಇವರಲ್ಲಿ 60 ಲಕ್ಷ ಮಕ್ಕಳೂ ಸೇರಿದ್ದಾರೆ– ಮೂಳೆಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲೇ ಒಂದು ಕೋಟಿಗೂ ಹೆಚ್ಚು ಜನರಲ್ಲಿ ಆರ್ಸೆನಿಕೋಸಿಸ್‌ ಸಮಸ್ಯೆ ಇರುವುದಾಗಿ ವರದಿಯಾಗಿದೆ.

ಕೃಷಿ ಜಮೀನುಗಳಲ್ಲಿ ರಸಗೊಬ್ಬರ, ಕೀಟನಾಶಕಗಳನ್ನು ಎಗ್ಗಿಲ್ಲದೆ ಬಳಸಿದ್ದರ ಪರಿಣಾಮವಾಗಿ ಅಂತರ್ಜಲದಲ್ಲಿ ನೈಟ್ರೇಟ್‌ ಮಟ್ಟ ಹೆಚ್ಚಿದೆ. ಇದು ಬ್ಲೂ ಬೇಬಿ ಸಿಂಡ್ರೋಮ್‌ಗೆ ಕಾರಣವಾಗಬಲ್ಲದು. 21 ರಾಜ್ಯಗಳ 387 ಜಿಲ್ಲೆಗಳ ಅಂತರ್ಜಲದಲ್ಲಿ ನೈಟ್ರೇಟ್‌ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿದೆ. ಕೃಷಿ ಚಟುವಟಿಕೆಗಳಿಗೆ ರಾಸಾಯನಿಕಗಳನ್ನು ಅತಿಹೆಚ್ಚು ಬಳಸುವ ಉತ್ತರಪ್ರದೇಶ, ಪಂಜಾಬ್‌, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಿದೆ. ಇದು ಕಾಕತಾಳೀಯವೋ ಅಲ್ಲವೋ ಎಂಬುದನ್ನು ಅಂತರ್ಜಲ ಮಾಲಿನ್ಯ ಹಾಗೂ ಕ್ಯಾನ್ಸರ್‌ ರೋಗದ ಬಗೆಗಿನ ವ್ಯವಸ್ಥಿತ ಅಧ್ಯಯನದ ಮೂಲಕವಷ್ಟೇ ಕಂಡುಕೊಳ್ಳಬಹುದು.

ದೇಶದಲ್ಲಿ ಕೈಗಾರಿಕಾ ಚಟುವಟಿಕೆಗಳ ಕಾರಣದಿಂದ ಸಹಸ್ರಾರು ಸ್ಥಳಗಳಲ್ಲಿ ನೀರು ಕಲುಷಿತಗೊಳ್ಳುತ್ತಿದೆ ಎಂದು ಅಂದಾಜಿಸಲಾಗಿದೆ. ಆಟೊಮೊಬೈಲ್‌, ಜವಳಿ, ಪಾಲಿಮರ್‌, ಎಲೆಕ್ಟ್ರಾನಿಕ್ಸ್‌, ಬಣ್ಣಗಳು, ಗಾಜು, ರಬ್ಬರ್‌ ಇತ್ಯಾದಿಗಳನ್ನು ತಯಾರಿಸುವ ಕೈಗಾರಿಕೆಗಳು ಹತ್ತು ಹಲವು ವಿಷಕಾರಿ ರಾಸಾಯನಿಕಗಳನ್ನು ಬಳಸುತ್ತವೆ. ಘನ ಲೋಹಗಳು, ಸಯನೈಡ್‌, ಪೆಟ್ರೋಲಿಯಂ ಹೈಡ್ರೊಕಾರ್ಬನ್‌ ಮುಂತಾದವು ಅವುಗಳು ಹೊರಸೂಸುವ ಕೆಲ ರಾಸಾಯನಿಕಗಳು. ಈ ರಾಸಾಯನಿಕಗಳನ್ನು ಹರಿಸುವ ಕೊಳವೆಗಳಲ್ಲಿ ಸೋರಿಕೆ ಉಂಟಾಗಿ, ನೆಲದ ಅಡಿಯಲ್ಲಿನ ಟ್ಯಾಂಕ್‌ನಲ್ಲಿ ಸೋರಿಕೆಯಾಗಿ ಅಥವಾ ಆಕಸ್ಮಿಕವಾಗಿ ಈ ರಾಸಾಯನಿಕಗಳು ಮಣ್ಣಿಗೆ ಸೇರುತ್ತವೆ. ದುರದೃಷ್ಟದ ವಿಚಾರವೆಂದರೆ, ಕೆಲವು ಕೈಗಾರಿಕೆಗಳು ಸಂಸ್ಕರಿಸದ ತ್ಯಾಜ್ಯವನ್ನು ನೆಲದ ಮೇಲೆ ಹಾಗೇ ಸುರಿಯುತ್ತವೆ. ಇದು ಅಂತರ್ಜಲದ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗೆ ಮಣ್ಣಿಗೆ, ಅಂತರ್ಜಲಕ್ಕೆ ಸೇರುವ ರಾಸಾಯನಿಕಗಳು ಕ್ಯಾನ್ಸರ್‌ಕಾರಕ, ಮಕ್ಕಳ ಬೆಳವಣಿಗೆ ಕುಂಠಿತಗೊಳಿಸುವುವು, ಗರ್ಭಪಾತ, ಹೃದ್ರೋಗ ಸಮಸ್ಯೆ ತರುವುವು, ಮೂತ್ರಕೋಶ ವೈಫಲ್ಯಕ್ಕೆ ದಾರಿ ಮಾಡಿಕೊಡುವುವು ಎಂದೂ ಗುರುತಿಸಿಕೊಂಡಿವೆ.

ಅಂತರ್ಜಲ ಮಾಲಿನ್ಯದ ಸಮಸ್ಯೆಯು ವಿಶ್ವವ್ಯಾಪಿ; ಇದು ಭಾರತಕ್ಕೆ ಮಾತ್ರ ಸೀಮಿತವಾಗಿದ್ದಲ್ಲ. ಇದರ ಕಾರಣದಿಂದಾಗಿ ಕೈಗಾರಿಕೀಕೃತ ದೇಶಗಳ ಜನ ಭಾರಿ ಬೆಲೆ ತೆತ್ತಿದ್ದಾರೆ. ಆದರೆ, ಅದಾದ ನಂತರ ಅಲ್ಲಿನ ಸರ್ಕಾರಗಳು ಜಲಮೂಲಗಳನ್ನು ರಕ್ಷಿಸಲು ಕಠಿಣ ಕಾನೂನುಗಳನ್ನು ರೂಪಿಸಿವೆ. ಇತ್ತೀಚಿನ ವರ್ಷಗಳಲ್ಲಿ ಚೀನಾ, ತೈವಾನ್‌, ಥಾಯ್ಲೆಂಡ್‌ ದೇಶಗಳು ಕೂಡ ಇದೇ ರೀತಿಯ ಕ್ರಮ ಕೈಗೊಂಡಿವೆ. ಆಶ್ಚರ್ಯದ ಸಂಗತಿಯೆಂದರೆ, ಅಂತರ್ಜಲದ ಮೇಲೆ ಅತಿಹೆಚ್ಚಿನ ಅವಲಂಬನೆ ಇದ್ದರೂ ಭಾರತ ಮಾತ್ರ ಅಂತಹ ಯಾವ ಕಾನೂನನ್ನೂ ಅನುಷ್ಠಾನಕ್ಕೆ ತಂದಿಲ್ಲ. ಕಾರ್ಖಾನೆಗಳು ಅಂತರ್ಜಲದ ಗುಣಮಟ್ಟವನ್ನು ಕಾಲಕಾಲಕ್ಕೆ ಪರಿಶೀಲಿಸುತ್ತ ಇರಬೇಕು, ಅದನ್ನು ಸರ್ಕಾರಕ್ಕೆ ವರದಿ ಮಾಡಬೇಕು, ಅಂತರ್ಜಲವನ್ನು ಉದ್ದೇಶಪೂರ್ವಕವಾಗಿ ಕಲುಷಿತಗೊಳಿಸುವುದನ್ನು ತಡೆಯಬೇಕು, ಸರ್ಕಾರದ ಕಡೆಯಿಂದ ನಿಧಿಯೊಂದನ್ನು ಸ್ಥಾಪಿಸಿ ಅಂತರ್ಜಲ ಹೆಚ್ಚು ಕಲುಷಿತವಾಗಿರುವಲ್ಲಿ ಆದ್ಯತೆಯ ಮೇಲೆ ಶುದ್ಧೀಕರಣ ಕ್ರಮ ಕೈಗೊಳ್ಳಬೇಕು ಎಂಬುದನ್ನೆಲ್ಲ ಕಾನೂನು ಹೇಳುತ್ತದೆ.

ಲಕ್ಷಾಂತರ ಜನ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಇದ್ದಾರೆ ಎಂದು ಜಂಬಪಟ್ಟುಕೊಳ್ಳುವ ದೇಶದಲ್ಲಿ ಅಂತರ್ಜಲ ತಜ್ಞರ ಸಂಖ್ಯೆ ತೀರಾ ನಗಣ್ಯ. ಕಾನೂನು ಜಾರಿ ಸಂಸ್ಥೆಗಳನ್ನು, ಸಂಶೋಧನಾ ಸಂಸ್ಥೆಗಳನ್ನು, ಕೈಗಾರಿಕಾ ರಂಗದ ನಾಯಕರನ್ನು ಮತ್ತು ಸಾರ್ವಜನಿಕರನ್ನು ಅಂತರ್ಜಲ ಸಾಕ್ಷರರನ್ನಾಗಿ ಮಾಡುವುದು ಆದ್ಯತೆಯ ಕೆಲಸವಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹತ್ತು ಹಲವು ವಿಭಾಗಗಳು ಅಂತರ್ಜಲಕ್ಕೆ ಸಂಬಂಧಿಸಿದಂತೆ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿವೆ. ಈ ಸಂಸ್ಥೆಗಳನ್ನು ಪುನರ್‌ ರಚಿಸುವುದು, ಸಂಸ್ಥೆಗಳ ನಡುವೆ ಉತ್ತಮ ಸಂವಹನ ಸಾಧ್ಯವಾಗಿಸುವುದು, ಅವರಲ್ಲಿ ಉತ್ತರದಾಯಿತ್ವದ ಪ್ರಜ್ಞೆ ಮೂಡಿಸುವುದು, ಸಮಗ್ರ ಯೋಜನೆಗಳನ್ನು ರೂಪಿಸುವುದು ಹಾಗೂ ಲಭ್ಯ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಸರ್ಕಾರದ ಅಜೆಂಡಾ ಆಗಬೇಕು.

2017ರ ರಾಷ್ಟ್ರೀಯ ಆರೋಗ್ಯ ನೀತಿಯು ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಉತ್ತೇಜನಕಾರಿ ಗುರಿಗಳನ್ನು ಹಾಕಿಕೊಂಡಿದೆ. ಇದನ್ನು ಸಾಧಿಸಲು ದೇಶದ ಒಟ್ಟು ಜಿಡಿಪಿಯ ಶೇಕಡ 2.5ರಷ್ಟನ್ನು ಖರ್ಚು ಮಾಡುವ ಅಂದಾಜು ಸರ್ಕಾರದ್ದು. ರೋಗವನ್ನು ವಾಸಿ ಮಾಡಲು ಸಿಕ್ಕಾಪಟ್ಟೆ ಹಣ ಖರ್ಚು ಮಾಡುವುದಕ್ಕಿಂತ ಅಂತರ್ಜಲ ಗುಣಮಟ್ಟ ಹೆಚ್ಚಿಸಿ ರೋಗ ಬರುವುದನ್ನು ತಡೆಯುವತ್ತ ಸರ್ಕಾರದ ನೀತಿ ಹೆಚ್ಚಿನ ಗಮನ ನೀಡಬೇಕು. ಹಾಗೆಯೇ, ಈ ಸಮಸ್ಯೆ ಸರ್ಕಾರಕ್ಕೆ ಮಾತ್ರ ಸಂಬಂಧಿಸಿದ್ದು ಎಂದು ಸಾರ್ವಜನಿಕರು ಸುಮ್ಮನಿರುವಂತಿಲ್ಲ. ಅಮೂಲ್ಯ ನೀರನ್ನು ಉಳಿಸುವುದು ಪ್ರತಿ ನಾಗರಿಕನ ಕರ್ತವ್ಯ

ಲೇಖಕ: ಜಪಾನ್‌ನ ಇಕೊಸೈಕಲ್‌ ಕಾರ್ಪೊರೇಷನ್‌ನ ಸಿಇಒ ಹಾಗೂ ಅಂತರ್ಜಲ ತಜ್ಞ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು