ಸೋಮವಾರ, ಡಿಸೆಂಬರ್ 16, 2019
17 °C
ಹುಣಸೂರು ಜಿಲ್ಲಾ ಕೇಂದ್ರದ ಪ್ರಸ್ತಾಪ; ಪರ–ವಿರೋಧ

ಹುಣಸೂರು ಜಿಲ್ಲೆಗೆ ಬೇಡಿಕೆ: ಮೈಸೂರಿನಲ್ಲಿ ಮುಂದುವರಿದ ಪರ–ವಿರೋಧ ವಾಗ್ವಾದಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹುಣಸೂರು ಜಿಲ್ಲೆ ರಚನೆಗೆ ಸಂಬಂಧಿಸಿದ ಪ್ರಸ್ತಾಪದ ಪರ–ವಿರೋಧದ ವಾದಗಳು ಜಿಲ್ಲೆಯಲ್ಲಿ ಮಂಗಳವಾರವೂ ವ್ಯಕ್ತವಾಯಿತು.

ತಮ್ಮ ಪ್ರಸ್ತಾಪ, ನಿಲುವನ್ನು ಟೀಕಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ‘ಕೂಪ ಮಂಡೂಕ’ ಎಂದು ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಇದನ್ನೂ ಓದಿ: ಹುಣಸೂರು ’ಅರಸು ಜಿಲ್ಲೆ’ ಘೋಷಣೆಗೆ ವಿಶ್ವನಾಥ್ ಮನವಿ

‘ದೇಶವೇ ವಿಭಜನೆಯಾಗಿದೆ. ಅಭಿವೃದ್ಧಿಗಾಗಿ, ಆಡಳಿತದ ಅನುಕೂಲಕ್ಕಾಗಿ ಜಿಲ್ಲೆ ಏಕೆ ವಿಭಜನೆಯಾಗಬಾರದು ? ಕಿ.ಮೀ. ಲೆಕ್ಕ ಇಲ್ಲಿ ಬರಲ್ಲ. ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಟೀಕಿಸುವುದಕ್ಕಿಂತ ಮುಂಚೆ ಹುಂಡೇಕಾರ್, ವಾಸುದೇವರಾವ್ ವರದಿಯನ್ನು ಒಮ್ಮೆ ಅಧ್ಯಯನ ನಡೆಸಿ ಪ್ರತಿಕ್ರಿಯಿಸಲಿ’ ಎಂದು ವಿಶ್ವನಾಥ್ ಕಿಡಿಕಾರಿದರು.

‘ಜೆ.ಎಚ್‌.ಪಟೇಲ್ ಮುಖ್ಯಮಂತ್ರಿಯಿದ್ದ ಸಂದರ್ಭ ಹಲವು ಜಿಲ್ಲೆಗಳನ್ನು ವಿಭಜಿಸಲಾಗಿದೆ. ಆಗ ವಿರೋಧ ವ್ಯಕ್ತಪಡಿಸದ ಸಿದ್ದರಾಮಯ್ಯ ಇದೀಗ ವಿರೋಧಿಸುತ್ತಿರುವುದು ಏತಕ್ಕಾಗಿ’ ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಅರಸು ಜಿಲ್ಲೆಗೆ ಅನರ್ಹ ಶಾಸಕ ವಿಶ್ವನಾಥ್ ಬೇಡಿಕೆ

‘ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವ್ಯಕ್ತಿಗಳ ಹೆಸರಿನ ಜಿಲ್ಲೆಗಳಿವೆ. ಇದನ್ನು ಅರಿಯದ ನನ್ನ ಸ್ನೇಹಿತ ಸಿದ್ದರಾಮಯ್ಯ ವ್ಯಕ್ತಿ ಹೆಸರಿನ ಜಿಲ್ಲೆ ರಚನೆ ಬೇಡ ಎಂಬ ತಕರಾರು ತೆಗೆದಿದ್ದಾರೆ’ ಎಂದು ವಿಶ್ವನಾಥ್ ದೂರಿದರು.

ಆಕ್ರೋಶ: ‘ಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕುಗಳಿಗೆ ಸಾ.ರಾ.ಮಹೇಶ್ ಮಾಲೀಕರಲ್ಲ. ಅಲ್ಲಿನ ಜನರು ಮಾಲೀಕರು. ಈಗ ವಿಭಜನೆಯ ಮಾತು ? ಈ ಹಿಂದೆ ಕೆ.ಆರ್.ನಗರದಿಂದ ಸಾಲಿಗ್ರಾಮವನ್ನು ಪ್ರತ್ಯೇಕಿಸಿದ್ದು ಯಾರು ?’ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

‘ಇದು ಚುನಾವಣೆಯ ಗಿಮಿಕ್ ಅಲ್ಲ. ವರ್ಷದಿಂದಲೂ ಈ ಪ್ರಕ್ರಿಯೆ ನಡೆದಿದೆ. ಹಿಂದಿನ ಸರ್ಕಾರದಲ್ಲಿ ಡಿ.ಸಿ.ತಮ್ಮಣ್ಣ ಸಾರಿಗೆ ಸಚಿವರಾಗಿದ್ದಾಗ ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯನ್ನು ಹುಣಸೂರಿಗೆ ಮಂಜೂರು ಮಾಡಲಾಗಿದೆ. ಹೆಸ್ಕಾಂನ ಸರ್ಕಲ್ ಆಫೀಸ್ ಮಂಜೂರಾಗಿದೆ. ಇದೀಗ ಡಿಡಿಪಿಐ ಕಚೇರಿ ಮಂಜೂರಾತಿ ಪ್ರಕ್ರಿಯೆ ನಡೆದಿದೆ. ಈ ಎಲ್ಲವನ್ನೂ ಹುಣಸೂರು ಜಿಲ್ಲಾ ಕೇಂದ್ರ ರಚನೆಗಾಗಿಯೇ ಮಾಡುತ್ತಿರುವೆ. ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು’ ಎಂದು ಅನರ್ಹ ಶಾಸಕರು ತಿಳಿಸಿದರು.

ಪ್ರತಿಭಟನೆ: ಮೈಸೂರು ಜಿಲ್ಲೆಯನ್ನು ವಿಭಜಿಸಿ, ಹುಣಸೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಪ್ರಸ್ತಾಪ ಮಾಡಿರುವ ಅನರ್ಹ ಶಾಸಕ ಅಡಗೂರು ಎಚ್.ವಿಶ್ವನಾಥ್ ನಡೆ ಖಂಡಿಸಿ ಕರ್ನಾಟಕ ಸೇನಾ ಪಡೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿತು. ಇದೇ ಸಂದರ್ಭ ವಿಶ್ವನಾಥ್ ವಿರುದ್ಧ ಹರಿಹಾಯ್ದಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು