ಕೈ ಬರಹದೊಳಗಣ ವ್ಯಕ್ತಿತ್ವ

7

ಕೈ ಬರಹದೊಳಗಣ ವ್ಯಕ್ತಿತ್ವ

Published:
Updated:

ಕೈಬರಹ ನಮ್ಮದೇ ಅನನ್ಯತೆಯ ಸಂಕೇತವೂ ಹೌದು. ಅದು ನಮ್ಮ ಮನೋಧರ್ಮ, ಮಾನಸಿಕ ಸ್ಥಿತಿಯ ಕನ್ನಡಿಯೂ ಹೌದು. ಬಳಪದಿಂದ ಶುರುವಾಗಿ ಪೆನ್ಸಿಲ್‌, ಪೆನ್‌ ಕಂಡಿದ್ದ ಕೈಬರಹ ಇದೀಗ ಪೆನ್‌ ಟ್ಯಾಬ್‌, ಕಂಪ್ಯೂಟರ್‌ ಕೀಲಿ ಮಣೆ ಕುಟ್ಟುವಿಕೆಗೆ ಬಂದು ತಲುಪಿದೆ.

ಕೈಯಲ್ಲಿ ಬಳಪ, ಚಾಕ್‌ಪೀಸ್‌ ಹಿಡಿದು ಬರೆದ ಬಾಲ್ಯದ ಅನುಭವದ ಮಜವೇ ಬೇರಿತ್ತು. ಆಮೇಲೆ ಪೆನ್ಸಿಲ್, ಪೆನ್‌ನಿಂದ  ಬರೆಯುವಾಗ ಅಕ್ಷರಗಳು ದುಂಡಾಗಿ, ಮುದ್ದಾಗಿ ಕಂಡು ಹೊಗಳಿಕೆ ಬಂದರೆ ಕೇಳಬೇಕೆ ಇನ್ನಷ್ಟು ಹಿಗ್ಗು ಮನದಲ್ಲಿ. ಆದರೆ ಆ ಸುಂದರ ಕ್ಷಣಗಳು ಈಗ ತೀರಾ ವಿರಳ. ಇದಕ್ಕೆ ಮೂಲ ಕಾರಣ ಆಧುನಿಕ ಸಾಧನಗಳೇ.

ಇವು ಕೈಬರಹ ಮರೆಸಿವೆ. ಕಂಪ್ಯೂಟರ್‌, ಮೊಬೈಲ್‌ ಕೈಬರಹದ ಅಧಿಪತ್ಯವನ್ನು ಅವಸಾನದತ್ತ ತಳ್ಳಿವೆ. ಆದರೆ ಇದೀಗ ಕೈಬರಹ ಮನಸಿನ ಥೆರಪಿಯಾಗಿ ಬಳಕೆಯಾಗುತ್ತಿದೆ ಎಂಬುದು ಅಚ್ಚರಿಯ ಸಂಗತಿ. ಹೌದು ಕೈಬರಹ ವ್ಯಕ್ತಿತ್ವದ ಕನ್ನಡಿಯಾಗಿ ಚಾಲ್ತಿಗೆ ಬರುತ್ತಿದ್ದು, ನಾವು ಬರೆಯುವ ಅಕ್ಷರದ ಗಾತ್ರ, ಆಕಾರ, ಎತ್ತರದ ಮೂಲಕ ವ್ಯಕ್ತಿತ್ವ ಹೇಳುವ, ವ್ಯಕ್ತಿಯ ಆಂತರ್ಯ, ಬಾಹ್ಯ ವ್ಯಕ್ತಿತ್ವ ಅರಿಯುವ ಸೇತುವೆಯಾಗಿ, ಶಾಂತ ಮನಸ್ಸಿನ ದಡ ತಲುಪಿಸುವ ಅಂಬಿಗನಾಗಿದೆ ಈ ಕೈಬರಹ.

ಅಂದರೆ ನಮ್ಮಲ್ಲಿ ನಮ್ಮ ಅರಿವಿಗೆ ಬಾರದ ಮನಸ್ಸು ಸದಾ ಜಾಗೃತದಲ್ಲಿರುತ್ತದೆ. ಅದರೊಳಗಿನ ಆಲೋಚನೆಗಳು, ದುಗುಡ-ದುಮ್ಮಾನ, ನೋವು-ನಲಿವು, ಭಯ- ಆತಂಕ, ಹಿಂಜರಿಕೆಗಳು, ನಮಗೆ ನಿಲುಕುವುದು ಕಷ್ಟ ಸಾಧ್ಯ. ಇವೆಲ್ಲವನ್ನು ಕೈಬರಹದ ಮೂಲಕ ತಿಳಿದುಕೊಂಡು, ನಿವಾರಿಸಿ ಉತ್ತಮ ವ್ಯಕ್ತಿತ್ವ ರೂಪಿಸಬಹುದಾಗಿದೆ. ಇದನ್ನು ಕೈಬರಹ ವಿಶ್ಲೇಷಣೆ ಎಂದು ಕರೆಯಲಾಗುತ್ತದೆ. ಇದಕ್ಕೆ ಗ್ರಾಫಾಲಜಿ ಎಂಬ ಹೆಸರು ಕೂಡ ಇದೆ.

ಮಕ್ಕಳ ವರ್ತನೆ ಗುರುತಿಸಲು: ಮಕ್ಕಳು ಮುಗ್ದರು. ಆಟದ ನಲಿವಿನಲ್ಲಿ ತೇಲಾಡುವ ಚೇತನಗಳು. ಆದರೆ ಇತ್ತೀಚಿನ ಜಂಜಡದ ಬದುಕಿನಲ್ಲಿ ಮಕ್ಕಳ ಮನಸ್ಸು ಹಲವು ಬಾರಿ ಆಘಾತಕ್ಕೊಳಗಾಗುತ್ತಿರುತ್ತದೆ. ಪೋಷಕರ ಜೀವನ ಶೈಲಿ, ಸ್ನೇಹಿತರ ವರ್ತನೆ, ಗುರುಗಳ ಶಿಸ್ತಿನ ಪಾಠ...ಇನ್ನಿತರ ಅಂಶಗಳು ಮಕ್ಕಳನ್ನು ಮಂಕಾಗಿಸಬಹುದು. ಉಲ್ಲಾಸಭರಿತ ಮನಸ್ಸನ್ನು ಜರ್ಜರಿತಗೊಳಿಸಬಹುದು. ಇದೆಲ್ಲದರಿಂದ ತಪ್ಪಿಸಿ ಮಕ್ಕಳ ಮನಸ್ಸನ್ನು ಸುಂದರ ಉದ್ಯಾನವನ್ನಾಗಿ ರೂಪಿಸುವಲ್ಲಿ ಈ ವಿಶ್ಲೇಷಣೆ ಅನುಕೂಲದಾಯಕ.

‘25 ವಯಸ್ಸಿನ ನಂತರ ರೂಪುಗೊಳ್ಳುವ ವ್ಯಕ್ತಿತ್ವವನ್ನು ಚಿಕ್ಕ ವಯಸ್ಸಿನಲ್ಲಿಯೇ ತಿದ್ದಿ ತೀಡಿ ಸುಂದರ ಆಕಾರ ಕೊಡುವುದು ಬಹುಮುಖ್ಯ. ಹಾಗಾಗಿ ಮಕ್ಕಳ ಬರಹ ಸಾಮರ್ಥ್ಯದ ಆಧಾರದ ಮೇಲೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುವು ಮಾಡಿಕೊಡುವುದಕ್ಕೆ ಈ ಥೆರಪಿ ಮೂಲ ಸಾಧನ’ ಎನ್ನುತ್ತಾರೆ ಕೈಬರಹ ತಜ್ಞೆ ಶೃತಿ ಚಂದ್ರಶೇಖರ್.

ಇದು ಕೇವಲ ಮಕ್ಕಳು ಮಾತ್ರವಲ್ಲದೇ ಮದುವೆಯ ತಯಾರಿಯಲ್ಲಿರುವವರು, ದಂಪತಿ ಹಾಗೂ ಪೋಷಕರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗಲಿದೆ.

ಮಗುವಿನ ವಿಶ್ಲೇಷಣೆ ಹೇಗೆ?: ಮೊದಲು ಮಕ್ಕಳನ್ನು ಕೈಬರಹ ಸುಧಾರಿಸುವ ನೆಪದಲ್ಲಿ ತರಗತಿಗೆ ಸೇರಿಸಿಕೊಳ್ಳಲಾಗುತ್ತದೆ. ತರುವಾಯ ಅವರೊಂದಿಗೆ ನಿಧಾನವಾಗಿ ಒಡನಾಡುತ್ತಾ, ಸ್ನೇಹಿತರಂತೆ ಕಾಣುತ್ತಾ, ಬರಹವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಅಂತರಾಳದಲ್ಲಿನ ನೋವು, ಭಯ ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ಮುಖ್ಯವಾಗಿ ಇಲ್ಲಿ ತರಗತಿ ಪಾಠಗಳಿರುವುದಿಲ್ಲ. ಸಾಮಾನ್ಯ ಮಗುವಿನ ಭಾವನಾತ್ಮಕ ವಿಶ್ಲೇಷಣೆಗೆ ಒಂದು ಗಂಟೆಗಿಂತಲೂ ಹೆಚ್ಚು ಕಾಲಾವಧಿ ಬೇಕಾಗುತ್ತದೆ. ಒಟ್ಟಿನಲ್ಲಿ ಮಗುವಿನ ಮನಸ್ಥಿತಿಯನ್ನು ಇದು ಅವಲಂಬಿಸಿದೆ.

ಸವಾಲುಗಳು: ಮಕ್ಕಳ ಮನಸ್ಸಿನಲ್ಲಿರುವುದೇನು ಎಂಬುದನ್ನು ತಿಳಿಯುವುದು ಹಾಗೂ ಮಕ್ಕಳಿಗೆ ಗೊತ್ತಾಗದೇ ಅವರೊಳಗಿನ ಭಯ, ನೋವೆಂಬ ಕಲ್ಮಶವನ್ನು ಕಿತ್ತೊಗೆಯುವುದು, ನಂಬಿಕೆ ಹುಟ್ಟಿಸುವುದು, ಮನಸಿನಾಳದಲ್ಲಿ ಹುದುಗಿರುವುದನ್ನು ಹೊರಗೆಳೆಯುವುದೇ ಎದುರಾಗುವ ಸವಾಲು.

ಅಳೆಯುವುದು ಹೇಗೆ?: ಮನುಷ್ಯರು ಒಬ್ಬರಿಗಿಂತ ಒಬ್ಬರು ಹೇಗೆ ಭಿನ್ನವಾಗಿರುತ್ತಾರೋ ಅದೇ ರೀತಿ ಬರಹಗಳೂ. ಶೇ 90ರಷ್ಟು ಕೈಬರಹಗಳು ಬದಲಾಗುವುದಿಲ್ಲ. ಮುಖ್ಯವಾಗಿ ಕೈ ಬರಹ ಎಷ್ಟು ಚೆನ್ನಾಗಿ ಇದೆ ಎಂಬುದರ ಆಧಾರದ ಮೇಲೆ ಅಳೆಯವುದಿಲ್ಲ. ಅಕ್ಷರಗಳ ಮೂಲಕ ವ್ಯಕ್ತಿತ್ವ ಅಳೆಯಬಹುದು. ಪ್ರತಿ ಅಕ್ಷರವೂ ಹಲವು ವಿಧಗಳನ್ನು ಒಳಗೊಂಡಿದೆ. ಅಕ್ಷರ ನೋಡಿ ಮಗುವಿನ ವರ್ತನೆ ಯಾವ ರೀತಿಯದ್ದು ಎಂದು ತಿಳಿಯುತ್ತದೆ. ಅಂದರೆ ಬರೆಯುವಾಗಿನ ಅಕ್ಷರಗಳ ಓರೆ–ಕೋರೆ, ಒತ್ತಡ, ಎಷ್ಟು ಡಿಗ್ರಿಯವರೆಗೆ ಬಾಗಿದೆ, ಅಕ್ಷರದ ಗಾತ್ರ ಇವುಗಳನ್ನು ಅಳೆದು ಅಧ್ಯಯನ ಮಾಡಿ ಮಗು ಅಂತರ್ಮುಖಿಯೋ ಅಥವಾ ಬಹಿರ್ಮುಖಿಯೋ ಎಂದು ತಿಳಿಯಬಹುದು.

ಮಕ್ಕಳ ಕೈಬರಹದಲ್ಲಿ ಏನೆಲ್ಲಾ ನೋಡಬಹುದು?

* ಮನೆ ಹೊಂದಾಣಿಕೆ

* ಭಾವನಾತ್ಮಕ ಹೊಂದಾಣಿಕೆ

* ಶಾಲಾ ಹೊಂದಾಣಿಕೆ

* ಶೈಕ್ಷಣಿಕ ಹೊಂದಾಣಿಕೆ

ಮನಃಶಾಸ್ತ್ರ ಓದಿದವರಿಗೆ ಆದ್ಯತೆ
ವ್ಯಕ್ತಿತ್ವವನ್ನು ಅರಿಯುವ ಉದ್ದೇಶದಿಂದ ಶಿವಾನಂದ ನಾಯಕ್ ಅವರು ಬೆಂಗಳೂರಿನಲ್ಲಿ ಕೈಬರಹ ಸಂಸ್ಥೆ ಸ್ಥಾಪಿಸಿದ್ದಾರೆ. 10 ವರ್ಷಗಳಿಂದ ಇದು ಕಾರ್ಯನಿರ್ವಹಿಸುತ್ತಿದೆ. ವಿಜಯನಗರದ ರವಿಶಂಕರ್ ಬಾಲ ಮಂದಿರ, ವಾಸವಿ ಶಾಲೆ, ಹೊಸಕೆರೆಹಳ್ಳಿಯ ಆಡನ್ ಶಾಲೆಗಳಲ್ಲಿ ಶಾಖೆಗಳಿವೆ. ಮುಖ್ಯ ಶಾಖೆಯಿರುವುದು ಬನಶಂಕರಿ ಮೂರನೇ ಹಂತದಲ್ಲಿರುವ ಇಟ್ಟುಮಡುವಿನಲ್ಲಿ. ಮನ:ಶಾಸ್ತ್ರ ಓದಿದವರಿಗೆ ಮಾತ್ರ ಆದ್ಯತೆ.

ವಿಶೇಷ ಕಾರ್ಯ: ಈ ಸಂಸ್ಥೆಯು ಕ್ಯಾನ್ಸರ್, ಎಚ್‌ಐವಿ ಪೀಡಿತರಿಗೆ ಲಿಖಿತ ನಾಮ ಜಪ ಎಂಬ ಪ್ರಯೋಗ ಕೈಗೊಂಡಿತ್ತು. ಅಂದರೆ ಅವರ ಇಷ್ಟ ದೇವತೆಯ ಜಪವನ್ನು ಬರೆದುಕೊಡಲಾಗುತ್ತದೆ. ಇದನ್ನು ಆ ರೋಗಿ ದಿನಕ್ಕೆ 21 ಬಾರಿ ಬರೆಯಬೇಕು. ಈ ಮೂಲಕ ಅವರೊಳಗಿನ ನಕಾರಾತ್ಮಕ ಆಲೋಚನೆಯನ್ನು ಹೊರಗೆಳೆದು ಸಕಾರಾತ್ಮಕ ಚಿಂತನೆ ಬೆಳೆಸಲು, ಅವರೊಳಗಿನ ಆಂತರ್ಯವನ್ನು ಸ್ವತಃ ಸದೃಢಗೊಳಿಸಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಟ್ಟಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !