ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಝಳಕ್ಕೆ ಬಸವಳಿದ ವಿಜಯಪುರಿಗರು!

ಬೇಸಿಗೆಯ ಆರಂಭದಲ್ಲೇ 39 ಡಿಗ್ರಿ ಸೆಲ್ಷಿಯಸ್‌ಗೆ ತಲುಪಿದ ತಾಪಮಾನ
Last Updated 30 ಮಾರ್ಚ್ 2018, 6:58 IST
ಅಕ್ಷರ ಗಾತ್ರ

ವಿಜಯಪುರ: ಬೇಸಿಗೆ ಆರಂಭದಲ್ಲೇ ಬಿಸಿಲಿನ ಪ್ರಖರತೆ ಮತ್ತು ಬಿಸಿಗಾಳಿಗೆ ಜಿಲ್ಲೆಯ ಜನರು ಬಸವಳಿದಿದ್ದಾರೆ. ನಗರದಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಷಿಯಸ್‌ ದಾಟಿದ್ದು, ಭೂಮಿ ಕಾದ ಕಾವಲಿಯಂತಾಗಿದೆ.

ಹಗಲಿಡೀ ಸೂರ್ಯನ ಕಿರಣಗಳಿಗೆ ಕಾದ ಭೂಮಿ, ರಾತ್ರಿಯಿಡೀ ಕಾವನ್ನು ಹೊರ ಉಗುಳುತ್ತಿದೆ. ಇದು ಬಿಸಿ ಗಾಳಿಯಾಗಿ ಪರಿವರ್ತನೆಗೊಂಡು, ಉಸಿರಾಡಲು ಕಷ್ಟ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಮುಂಜಾನೆ ಒಂಬತ್ತು ಗಂಟೆ ದಾಟಿದರೆ ಸಾಕು,  ಮನೆಯಿಂದ ಹೊರ ಬರಲಾಗದ ಸ್ಥಿತಿ. ಬಿಸಿಲ ಝಳಕ್ಕೆ ಒಳಗೂ ಇರಲಾಗದು. ಏರ್‌ ಕೂಲರ್‌, ಫ್ಯಾನ್‌ ಇದ್ದರೂ ಪ್ರಯೋಜನಕ್ಕೆ ಬಾರವು ಎಂಬಂತಾಗಿದೆ.

‘ರಾತ್ರಿಯಿಡೀ ಸೆಕೆ ಕಾಡುತ್ತಿದ್ದು, ನಿದ್ದೆಯೇ ಬಾರದಾಗಿದೆ. ನಸುಕಿನಲ್ಲಿ ಸ್ವಲ್ಪ ಹೊತ್ತು ನಿದ್ರೆ ಮಾಡಿದರೆ ನಮ್ಮ ಪುಣ್ಯ ಎನ್ನುವಂತಾಗಿದೆ’ ಎಂದು ವಿಜಯಪುರದ ಬಂಜಾರ ನಗರ ನಿವಾಸಿ ಪ್ರಸಾದ ಹುನ್ನೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಸಿಲಿಗೆ ಚಿಕ್ಕ ಮಕ್ಕಳು ತತ್ತರಿಸಿವೆ. ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಹಾಸಿಗೆಯಲ್ಲಿ ಹೊರಳಾಡುತ್ತವೆ. ಆಗಾಗ್ಗೆ ಎಚ್ಚರಗೊಂಡು ನೀರು ಬೇಡುತ್ತಿವೆ. ಮುಂದಿನ ಎರಡು ತಿಂಗಳು ಕಡು ಬೇಸಿಗೆ; ಹೇಗೆ ನಿಭಾಯಿಸಬೇಕು ಎಂಬುದೇ ತೋಚುತ್ತಿಲ್ಲ’ ಎನ್ನುತ್ತಾರೆ ಖಾಸಗಿ ಶಿಕ್ಷಣ ಸಂಸ್ಥೆಯ ಉದ್ಯೋಗಿ ಗೀತಾ.

ತಾಪಮಾನ: ‘ಬೇಸಿಗೆ ಆರಂಭದ ದಿನಗಳಲ್ಲೇ ಗರಿಷ್ಠ ತಾಪಮಾನ 33, 34, 35 ಡಿಗ್ರಿ ಸೆಲ್ಷಿಯಸ್‌ ದಾಟಿತ್ತು. ಮಾರ್ಚ್‌ 15ರ ನಂತರ ಹಂತ ಹಂತವಾಗಿ ಹೆಚ್ಚಿದ್ದು, ಇದೀಗ 39 ಡಿಗ್ರಿ ಸೆಲ್ಷಿಯಸ್‌ ಆಸುಪಾಸು ದಾಖಲಾಗಿದೆ. ಮಳೆಯಾಗದಿದ್ದರೆ 43, 44 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ತಾಪಮಾನ ಜಿಲ್ಲೆಯ ವ್ಯಾಪ್ತಿಯಲ್ಲಿ ದಾಖಲಾಗಬಹುದು’ ಎಂದು ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದ ಹವಾಮಾನ ಮುನ್ಸೂಚನಾ ವಿಭಾಗದ ತಾಂತ್ರಿಕ ಅಧಿಕಾರಿ ಶಂಕರ ಕುಲಕರ್ಣಿ ತಿಳಿಸಿದರು.

‘ನಮ್ಮ ಹವಾಮಾನ ಮುನ್ಸೂಚನಾ ಕೇಂದ್ರ ನಗರದ ಹೊರ ವಲಯದಲ್ಲಿದೆ. ಇಲ್ಲಿನ ವಾತಾವರಣದ ಜತೆಗೆ ಹೊರಗಿನ ವಾತಾವರಣ ಹೋಲಿಸಿದರೆ ಕೊಂಚ ವ್ಯತ್ಯಾಸ ಕಂಡು ಬರಲಿದೆ. ನಗರ, ‘ಬಿಸಿಯ ದ್ವೀಪ’ದ ವ್ಯಾಪ್ತಿಯೊಳಗೆ ಬರುವುದರಿಂದ ಅಲ್ಲಿನ ತಾಪಮಾನ ಹವಾಮಾನ ಕೇಂದ್ರದಲ್ಲಿ ದಾಖಲಾಗುವ ಗರಿಷ್ಠ ತಾಪಮಾನಕ್ಕಿಂತ ಕನಿಷ್ಠ 1ರಿಂದ 2 ಡಿಗ್ರಿ ಸೆಲ್ಷಿಯಸ್‌ ಹೆಚ್ಚಿರುತ್ತದೆ’ ಎಂದು ಹೇಳಿದರು.

ಗರಿಷ್ಠ ದಾಖಲೆ: ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಹವಾಮಾನ ಮುನ್ಸೂಚನಾ ವಿಭಾಗದಲ್ಲಿನ 27 ವರ್ಷದ ದಾಖಲೆ ಪ್ರಕಾರ, ಜಿಲ್ಲೆಯಲ್ಲಿ 43 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ತಾಪಮಾನ 2010ರ ಮೇ 12, 19ರಂದು ದಾಖಲಾಗಿದೆ. 2017ರ ಏ.20ರಂದು 42.5 ಡಿಗ್ರಿ ಸೆಲ್ಷಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

1996ರ ಮಾರ್ಚ್‌ 26ರಿಂದ 31ರವರೆಗೆ ನಿರಂತರವಾಗಿ ಐದು ದಿನ ವಿಜಯಪುರ ಜಿಲ್ಲೆಯ ಗರಿಷ್ಠ ತಾಪಮಾನ 40ರಿಂದ 41 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿತ್ತು. 2004ರ ಮಾರ್ಚ್‌ 19, 21, 22, 24ರಂದು ಸಹ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿದೆ ಎಂಬುದನ್ನು ಅಂಕಿ– ಅಂಶಗಳು ದೃಢೀಕರಿಸಿವೆ.

**

ಇನ್ನೂ 8–10 ದಿನ ಮಳೆಯ ಮುನ್ಸೂಚನೆ ಇಲ್ಲ. ಹದ ಮಳೆ ಸುರಿಯುವ ತನಕ ಬಿಸಿಲ ತಾಪ ತಗ್ಗಲ್ಲ.
-ಶಂಕರ ಕುಲಕರ್ಣಿ, ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ

**

ಹಿಂದಿನ ವರ್ಷಗಳಿಗಿಂತ ಈ ಬಾರಿ ಬಿಸಿಲ ಝಳ ಹೆಚ್ಚಿದೆ. ಚಹಾ ಕುಡಿಯೋದನ್ನೇ ನಿಲ್ಲಿಸಿದ್ದೇನೆ. ಅನಿವಾರ್ಯವಿದ್ದರೆ ಮಾತ್ರ ಮನೆಯಿಂದ ಹೊರಹೋಗುತ್ತೇನೆ

-ಪ್ರಸಾದ ಹುನ್ನೂರ, ವಿಜಯಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT