ಸಂಯೋಜಕರನ್ನು ಹೊಂದಿ; ವಿಮಾ ಕಂಪನಿಗಳಿಗೆ ಸೂಚನೆ

7
ವಿಜಯಪುರದಲ್ಲಿ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಹೇಳಿಕೆ

ಸಂಯೋಜಕರನ್ನು ಹೊಂದಿ; ವಿಮಾ ಕಂಪನಿಗಳಿಗೆ ಸೂಚನೆ

Published:
Updated:
Prajavani

ವಿಜಯಪುರ: ‘ಬೆಳೆ ವಿಮೆಗೆ ಸಂಬಂಧಿಸಿದ ವಿಮಾ ಕಂಪನಿಗಳು, ಜಿಲ್ಲಾ ಕೇಂದ್ರಗಳಲ್ಲಿ ಸಂಯೋಜಕರು ಹಾಗೂ ತಾಲ್ಲೂಕು ಮಟ್ಟದಲ್ಲಿ ಏಜೆಂಟರುಗಳನ್ನು ಕಡ್ಡಾಯವಾಗಿ ಹೊಂದಿರಬೇಕು’ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

‘ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬಿಮಾ ವಿಮಾ ಯೋಜನೆಯಡಿ ರೈತರಿಗೆ ವಿಮೆ ಮೊತ್ತ ಪಾವತಿಸುವಲ್ಲಿ, ರೈತರ ನೋಂದಣಿ ಮಾಡಿಸುವಲ್ಲಿ ಬ್ಯಾಂಕ್ ಹಾಗೂ ವಿಮಾ ಕಂಪನಿಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ. ಇದರಿಂದ ರೈತರು ಬೆಳೆ ವಿಮೆ ಪಡೆಯಲು ಕಷ್ಟವಾಗುತ್ತಿದೆ. ರೈತರಿಗೆ ಸರಿಯಾದ ಮಾಹಿತಿ ಸಹ ಸಿಗುತ್ತಿಲ್ಲ’ ಎಂದು ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

‘ವಿಮಾ ಕಂಪನಿಗಳು ವಾಣಿಜ್ಯ ಬ್ಯಾಂಕುಗಳೆಡೆಗೆ ಹೆಚ್ಚಿನ ಆಸಕ್ತಿ ವಹಿಸುತ್ತವೆ. ಅದರೊಂದಿಗೆ ವಿಮೆಗೆ ಸಂಬಂಧಿಸಿದ ಬ್ಯಾಂಕ್‌ಗಳೊಂದಿಗೆ ಸಹಕರಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತಿನಿಧಿಗಳನ್ನು ನೇಮಿಸಲು, ಮುಂದಿನ ಬಾರಿಯ ಟೆಂಡರ್ ಅಧಿಸೂಚನೆಯಲ್ಲಿ ಕಡ್ಡಾಯಗೊಳಿಸುವುದಾಗಿ’ ರೆಡ್ಡಿ ಹೇಳಿದರು.

ಜಿಲ್ಲೆಯಲ್ಲಿ ನಿರ್ಮಿಸಿದ 19,850 ಕೃಷಿ ಹೊಂಡಗಳ ಕುರಿತು ಮಾಹಿತಿ ಪಡೆದ ಸಚಿವರು, ‘ಕೃಷಿ ಹೊಂಡದ ವಿಸ್ತೀರ್ಣ, ಭೂಮಿಯ ವಿಸ್ತೀರ್ಣದನುಸಾರ ಹೊಂಡದ ಸುತ್ತ ಫೆನ್ಸಿಂಗ್ ಹಾಕಬೇಕು. ಪ್ರಾಣಿ ಹಾಗೂ ಮಕ್ಕಳ ಜೀವಹಾನಿಯನ್ನು ತಡೆಯಲು ಹೊಂಡದ ಎತ್ತರವನ್ನು ಭೂ ಮಟ್ಟದಿಂದ ಹೆಚ್ಚಿಸಲು ಹೊಂಡದಲ್ಲಿ ಜೀವರಕ್ಷಕ ಟ್ಯೂಬ್ ಹಾಗೂ ಹಗ್ಗವನ್ನು ಬಿಡಿ’ ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸ್ಪ್ರಿಂಕ್ಲರ್ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಸಚಿವ ಶಿವಾನಂದ ಪಾಟೀಲ, ‘ಆಸ್ಟ್ರೇಲಿಯಾ ಮಾದರಿಯಲ್ಲಿ ಸ್ಪ್ರಿಂಕ್ಲರ್ ಅಳವಡಿಸುವ ವ್ಯವಸ್ಥೆಯ ಬಗ್ಗೆ ತಿಳಿಸಿ, ಒಂದೇ ಬಾರಿಗೆ ಒಂದು ಎಕರೆಯಷ್ಟು ಭೂಮಿಗೆ ನೀರೊದಗಿಸಬಲ್ಲ ಮಾದರಿಯನ್ನು ಇಲ್ಲೂ ಅಳವಡಿಸುವ ಸಾಧ್ಯತೆಗಳ ಬಗ್ಗೆ ಕ್ರಮ ವಹಿಸಿ’ ಎಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲಾಖೆಯ ಆತ್ಮ ಯೋಜನೆಯಡಿ ರೈತರಿಗೆ ಕೃಷಿ ವಿಜ್ಞಾನಿಗಳಿಂದ, ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಂದ ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲು ಕೃಷಿ ಸಚಿವರು ಇದೇ ಸಂದರ್ಭ ಸೂಚಿಸಿದರು.

‘ಹನಿ ನೀರಾವರಿಯನ್ನು ಕೇವಲ ಕಬ್ಬು ಬೆಳೆಯಲು ಸೀಮಿತಗೊಳಿಸಬೇಡಿ. ತೊಗರಿ, ಹತ್ತಿ ಬೆಳೆಗೂ ವಿಸ್ತರಿಸಿ. ಈ ಕುರಿತು ರೈತರಿಗೆ ಹನಿ ನೀರಾವರಿಯ ಮಹತ್ವ ತಿಳಿಸಬೇಕು. ಮಿಶ್ರ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು. ಬೆಳೆ ವಿಮೆ ಸಂದರ್ಭದಲ್ಲಿ ರೈತರಿಗೆ ಇದರಿಂದ ಅನುಕೂಲವಾಗುತ್ತದೆ. ಒಂದು ವೇಳೆ ಯಾವುದೋ ಒಂದು ಬೆಳೆ ನಷ್ಟವಾದರೂ; ಉಳಿದೆರಡು ಬೆಳೆಯಿಂದ ಪ್ರಯೋಜನವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬೀಜ ಖರೀದಿಗೆ ಬಂದಾಗ, ರೈತರಿಗೆ ಮಿಶ್ರ ಬೆಳೆಯ ಬಗ್ಗೆ ಜಾಗೃತಿ ಮೂಡಿಸಿ, ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಗೋಡ ಬರಹ, ಭಿತ್ತಿ ಪತ್ರದ ಮೂಲಕ ಜಾಗೃತಿ ಮೂಡಿಸಿ’ ಎಂದು ಸೂಚನೆ ನೀಡಿದರು.

ವಿವಿಧ ಕೃಷಿ ಯೋಜನೆಗಳು, ಸಂಬಂಧಿಸಿದ ವಿಮಾ ಯೋಜನೆಗಳ ಪ್ರಗತಿ ಕುರಿತು ಸಚಿವರು ಮಾಹಿತಿ ಪಡೆದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ್ ಕಿಶೋರ್ ಸುರಳಕರ, ಜಿಲ್ಲಾ ಪಂಚಾಯ್ತಿ ಹಂಗಾಮಿ ಅಧ್ಯಕ್ಷ ಪ್ರಭುಗೌಡ ದೇಸಾಯಿ, ಜಂಟಿ ಕೃಷಿ ನಿರ್ದೇಶಕ ಶಿವಕುಮಾರ ಸೇರಿದಂತೆ ಕೃಷಿ ಇಲಾಖೆಯ ವಿವಿಧ ಅಧಿಕಾರಿಗಳು, ಸಚಿವರ ಸಲಹೆಗಾರ ಎ.ಬಿ.ಪಾಟೀಲ, ಕೃಷಿ ವಿಶ್ವವಿದ್ಯಾಲಯಗಳ ಮಂಡಳಿ ಸದಸ್ಯ ಸುರೇಶ ಘೊಣಸಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !