ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು: ಹೆಣ್ಣಿನ ಅಂಗಾಂಗಗಳನ್ನ ನೋಡುವ ಚಟವಿದೆ- ಪರಿಹಾರವೇನು?

ಡಾ.ನಡಹಳ್ಳಿ ವಸಂತ್ ಅವರ ಅಂಕಣ
Published 29 ಸೆಪ್ಟೆಂಬರ್ 2023, 23:01 IST
Last Updated 29 ಸೆಪ್ಟೆಂಬರ್ 2023, 23:01 IST
ಅಕ್ಷರ ಗಾತ್ರ

*ನನಗೆ ವಿಪರೀತ ಕುಡಿತದ ಚಟವಿದೆ. ಮನುಷ್ಯನಾಗಿ ಒಳ್ಳೆಯವನೇ ಎಂದುಕೊಳ್ಳುವೆ. ಆದರೆ ಈ ಚಟ ನನ್ನೊಳಗೆ ನನ್ನ ಬಗ್ಗೆ ಕೀಳರಿಮೆ ಮೂಡಿಸಿದೆ. ಜೊತೆಗೆ ಆಗಾಗ್ಗೆ ಎದುರು ಸಿಕ್ಕ ಹೆಣ್ಣಿನ ದೇಹದ ಅಂಗಾಂಗಗಳನ್ನ ನೋಡುವ ಚಟವಿದೆ. ಇದಕ್ಕೆ ಪರಿಹಾರವೇನು?

–ಹೆಸರು ಊರು ತಿಳಿಸಿಲ್ಲ

ನಿಮ್ಮ ವಯಸ್ಸು, ವೃತ್ತಿ, ಕುಟುಂಬದ ಸ್ಥಿತಿಗತಿಗಳು, ಮುಂತಾದ ವೈಯಕ್ತಿಕ ವಿವರಗಳಿದ್ದರೆ ಉತ್ತರಿಸಲು ಹೆಚ್ಚಿನ ಸಹಾಯವಾಗುತ್ತಿತ್ತು. ನಿಮ್ಮ ಪತ್ರದಲ್ಲಿ ಆತ್ಮಶೋಧನೆ ಮಾಡಿಕೊಳ್ಳುವ ಪ್ರಾಮಾಣಿಕತೆಯಿದೆ ಮತ್ತು ಬದಲಾಗಬೇಕೆನ್ನುವ ತುಡಿತವಿದೆ. ಇವೆರೆಡೂ ನಿಮ್ಮ ದೊಡ್ಡ ಆಸ್ತಿಗಳು. ಇವುಗಳನ್ನು ಬಳಸಿಕೊಂಡು ಬದಲಾಗುವುದು ಮತ್ತು ಬೆಳೆಯುವುದು ಹೇಗೆ ಎನ್ನುವುದನ್ನು ನೀವು ಕಲಿಯಬೇಕಾಗಿದೆ.

ನೀವು ಚಟ ಎನ್ನುವ ಶಬ್ದವನ್ನು ಎರಡು ಕಡೆ ಬಳಸಿದ್ದೀರಿ. ಇದು ಜನಸಾಮಾನ್ಯರು ಬಳಸುವ ಶಬ್ದ ಎನ್ನುವುದೇನೋ ನಿಜ. ಆದರೆ ಚಟ ಎನ್ನುವ ಶಬ್ದದಲ್ಲಿಯೇ ಕೀಳರಿಮೆಯ ಅಂಶವಿದೆ. ಹಾಗಾಗಿ ನಿಮಗೆ ನಿಮ್ಮ ಬಗ್ಗೆ ಕೀಳರಿಮೆ ಮೂಡುವುದು ಸಹಜವಲ್ಲವೇ? ಸದ್ಯಕ್ಕೆ ಇವುಗಳನ್ನು ನಿಮಗಿಷ್ಟವಾಗದ ಅಭ್ಯಾಸಗಳು ಎಂದುಕೊಳ್ಳಿ.

ಈ ಅಭ್ಯಾಸಗಳನ್ನು ಬದಲಾಯಿಸುವುದು ಹೇಗೆ? ಹೆಣ್ಣಿನ ಅಂಗಾಂಗಗಳನ್ನು ನೋಡುವುದು ನಿಮ್ಮೊಳಗೆ ಕಾಮಾಸಕ್ತಿ ಕೆರಳುತ್ತಿರುವುದರ ಸೂಚನೆ. ಇದು ಸರಿಯಾದ ಸ್ಥಳ ಸಂದರ್ಭಗಳಲ್ಲಿ, ಸೂಕ್ತವಾದ ವ್ಯಕ್ತಿಯೊಡನೆ ತೋರಿಸಬೇಕಾದ ವರ್ತನೆಯಲ್ಲವೇ? ಹಾಗೆ ಮಾಡಲು ಸಾಧ್ಯವಾಗದಿದ್ದಾಗ ಅದು ಅಸಭ್ಯ ವರ್ತನೆಯಾಗುತ್ತದೆ. ಈ ವಿವೇಚನೆಯನ್ನು ಬಳಸಲು ನೀವು ಕಷ್ಟಪಡುತ್ತಿದ್ದೀರಿ.

ಮದ್ಯಪಾನ ಮಾಡಿದಾಗ ನಿಮ್ಮ ಮಾತು ವರ್ತನೆಗಳು ಹಿಡಿತ ತಪ್ಪುತ್ತವೆ. ಹಾಗಾಗಿ ವಿವೇಚನೆ ಹಿಂದೆ ಸರಿಯುತ್ತದೆ. ನಿಮ್ಮ ಕಾಮಾಸಕ್ತಿಯನ್ನು ಪೂರೈಸಿಕೊಳ್ಳಲು ಸಾಮಾಜಿಕವಾಗಿ ಒಪ್ಪಿತವಾಗುವ ದಾರಿಗಳನ್ನು ಕಂಡುಕೊಳ್ಳಬೇಕು. ಮದ್ಯಪಾನದ ವ್ಯಸನವನ್ನು ಕೇವಲ ಧೃಡ ನಿರ್ಧಾರದಿಂದ ಹಿಡಿತಕ್ಕೆ ತರುವುದು ಸಾಧ್ಯವಿಲ್ಲ.

ಇಂಥ ವ್ಯಸನಗಳಿಗೆ ಅಂಟಿಕೊಳ್ಳುವ ಹಿಂದಿರುವ ಮನಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಮದ್ಯಪಾನ ಮಾಡಿದಾಗ ನಿಮಗೆ ಹೇಗೆನ್ನಿಸುತ್ತದೆ? ಎಲ್ಲದರಿಂದ ಮುಕ್ತವಾದಂತೆ? ಬಂಧನಗಳನ್ನು ಕಳಚಿಕೊಂಡಂತೆ? ನೀವು ನೀವಾಗಿರಲು ಸಾಧ್ಯವಾಗಿರುವಂತೆ? ಒತ್ತಡಗಳಿಂದ ಮುಕ್ತಿಪಡೆದಂತೆ? ಚಿಂತೆಗಳನ್ನು ಮರೆತಂತೆ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ ನಿಮಗೆ ಜೀವನದಲ್ಲಿ ನಾನು ಸಹಜವಾಗಿ ಕಳೆದುಕೊಂಡದ್ದೇನು ಎಂದು ತಿಳಿಯುತ್ತದೆ.

ಸಿಗಲಾಗದ್ದನ್ನು ಸಹಜವಾಗಿ ಪಡೆದುಕೊಳ್ಳುವುದರ ಬದಲು ಮದ್ಯಪಾನದ ಮೂಲಕ ಅತೃಪ್ತಿ ಅಸಮಾಧಾನಗಳನ್ನು ಮರೆಯಲು ಪ್ರಯತ್ನ ಮಾಡಿದಾಗ ಅದು ವ್ಯಸನವಾಗಿ ಅಂಟಿಕೊಳ್ಳುತ್ತದೆ. ಇದರ ಅರ್ಥವೇನೆಂದರೆ ಇಂಥ ವ್ಯಸನಗಳು ನಮಗೆ ಸಮಸ್ಯೆಗಳಿಂದ ತಾತ್ಕಾಲಿಕವಾಗಿ ಓಡಿಹೋಗಿ ಸಮಾಧಾನ ಕಂಡುಕೊಳ್ಳುವ ಪ್ರವೃತ್ತಿಯನ್ನು ಕಲಿಸುತ್ತವೆ. ತಕ್ಷಣಕ್ಕೆ ಸಮಧಾನ ದೊರೆತರೂ ದೂರಗಾಮಿಯಾಗಿ ದುಷ್ಪರಿಣಾಮಗಳನ್ನು ಬೀರುತ್ತದೆ. ಆದರೆ ಮೂಲ ಸಮಸ್ಯೆಗಳು ಹಾಗೆಯೇ ಉಳಿದಿರುತ್ತದೆ. ನಾವು ಸಮಸ್ಯೆಗಳಿಂದ ಹೆಚ್ಚು ದೂರ ಓಡಲು ಪ್ರಯತ್ನಿಸಿದಂತೆ ವ್ಯಸನಗಳಿಂದ ಮುಕ್ತವಾಗುವುದು ಕಷ್ಟವಾಗುತ್ತದೆ.

ಮೊದಲು ಮದ್ಯಪಾನವನ್ನು ಚಟವೆಂದು ದ್ವೇಷಿಸದೆ ಅದು ನಿಮಗೆ ತಾತ್ಕಾಲಿಕವಾಗಿ ನೀಡುತ್ತಿರುವ ಸಮಾಧಾನಗಳೇನು ಎಂದು ಯೋಚಿಸಿ. ಅಂಥ ಸಂತೋಷ ಸಮಾಧಾನಗಳನ್ನು ಸಹಜವಾಗಿ ಸ್ನೇಹ ಪ್ರೀತಿ ಸಂಬಂಧಗಳ ಮೂಲಕ ಪಡೆದುಕೊಳ್ಳುವ ದಾರಿಗಳನ್ನು ಕಂಡುಕೊಳ್ಳಬೇಕು. ಆಗ ಮಾತ್ರ ತಾತ್ಕಾಲಿಕವಾಗಿ ಪರಿಹಾರ ನೀಡುತ್ತಾ ದೂರಗಾಮಿಯಾಗಿ ಅಪಾಯಗಳನ್ನು ಮಾಡುವ ಮದ್ಯಪಾನದ ವ್ಯಸನದಿಂದ ಮುಕ್ತವಾಗಲು ಸಾಧ್ಯ. ಗೆ ನಮ್ಮನ್ನು ನಾವು ಅರ್ಥಮಾಡಿಕೊಂಡು ಬದಲಾವಣೆಗಳಿಗೆ ಪ್ರಯತ್ನಿಸಲು ಇನ್ನೊಬ್ಬರ ಸಹಾಯದ ಅಗತ್ಯವಿದೆ. ಹತ್ತಿರದಲ್ಲಿ ತಜ್ಞ ಮನೋಚಿಕಿತ್ಸಕರಿದ್ದರೆ ಸಹಾಯ ಪಡೆಯಿರಿ. ಅಥವಾ ವ್ಯಸನ ಮುಕ್ತಿ ಕೇಂದ್ರಗಳಲ್ಲಿ(Deaddiction Centre) ಒಮ್ಮೆ ಚಿಕಿತ್ಸೆ ಪಡೆಯಿರಿ.

ವ್ಯಕ್ತಿಯಾಗಿ ನೀವು ಕೆಟ್ಟವರೇನಲ್ಲ ಎನ್ನುವ ನಿಮ್ಮ ಅನಿಸಿಕೆ ನಿಜ. ಆದರೆ ನಿಮ್ಮೊಳಗಿನ ಒಳ್ಳೆಯತನ ಹೊರಬರಬೇಕಾದರೆ ಮದ್ಯವ್ಯಸನದಿಂದ ಮುಕ್ತಿಪಡೆಯಬೇಕು. ಶುಭವಾಗಲಿ.

ಏನಾದ್ರೂ ಕೇಳ್ಬೋದು

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT