ಶನಿವಾರ, ಅಕ್ಟೋಬರ್ 23, 2021
20 °C

ಇದೇ ಅಂತರಂಗ ಶುದ್ಧಿ.. ಇದೇ ಬಹಿರಂಗ ಶುದ್ಧಿ...

ಡಾ. ಸತ್ಯನಾರಾಯಣ ಭಟ್ ಪಿ. Updated:

ಅಕ್ಷರ ಗಾತ್ರ : | |

Prajavani

ಶುಚಿತ್ವದ ಕಲ್ಪನೆಗಳು ಇಂದು ಎಂದಿಗಿಂತ ಹೆಚ್ಚು ಪ್ರಸ್ತುತ. ಹೆಜ್ಜೆಹೆಜ್ಜೆಗೆ ಕೈ ತೊಳೆದು ರೋಗ ಗೆಲ್ಲುವ ತವಕ. ಶುಚಿತ್ವ ಮತ್ತು ಆರೋಗ್ಯದ ದೇಸೀ ಚಿಂತನೆಗಳೆಂತಿವೆ? ಓದಿರಿ.

‘ಅಣುರೇಣು ತೃಣ ಕಾಷ್ಠ ಕಾರಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೇ ಆನಂದ, ಗೋವಿಂದಾ ನಿನ್ನ ನಾಮವೇ ಚಂದಾ...’ ಪುರಂದರದಾಸವರೇಣ್ಯರ ಹಾಡಿನ ಸೊಲ್ಲು ಎಷ್ಟು ಪರಿಪೂರ್ಣ! ಅಂತಹ ನಿರ್ಮಲ ಆತ್ಮಚಿಂತನೆ ಮತ್ತು ಮನಃಸ್ಥಿತಿಯಿಂದ ಪರಿಪೂರ್ಣ ಆನಂದವನ್ನು ಸಂಪಾದಿಸುವ ಸರಳ ವಿಧಾನ ದಾಸರು ಬರೆದಿರಿಸಿದರು. ಧ್ಯಾನದ ಸುಗಮ ಹಾದಿಗೆ ದಾಸರು ಒತ್ತು ನೀಡಿದರು. ಇದು ಯಾರಿಗೂ ಅಸಾಧ್ಯವಲ್ಲ. ಅಸಾಧುವೂ ಖಂಡಿತ ಅಲ್ಲ. ಅಂತಹ ಹಾದಿಯ ಆಯ್ಕೆಯೊಂದೇ ಹಿತಾಯು, ಸುಖಾಯುಷ್ಯದ ಸೋಪಾನ. ಯೋಗ ಮತ್ತು ಧ್ಯಾನದ ಸುಲಭ ಹಾದಿ ನಮ್ಮ ನೆಲದ್ದು. ಆತ್ಮ–ಪರಮಾತ್ಮರ ಸಂಯೋಗದ ಸುಲಭ ಸೋಪಾನ. ಅರೆ ತಾಸಿನ ಧ್ಯಾನದಿಂದ ಎಷ್ಟೆಷ್ಟೋ ಲಾಭಗಳಿವೆ. ಪ್ರಾಣಾಯಾಮದಂತಹ ಸರಳ ವಿಧಾನಗಳಿವೆ. ಉಸಿರಾಟದ ಗತಿಯ ನಿಯಂತ್ರಣದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.

ಸ್ನಾನಮೂಲಂ ಕ್ರಿಯಾ ಸರ್ವಂ ಎನ್ನುತ್ತದೆ ಮನುಸ್ಮೃತಿ. ಅಂದರೆ ಎಲ್ಲ ದಿನವೂ ಎಲ್ಲ ಕಾಲವೂ ಸ್ನಾನದ ಮೂಲಕವೇ ದಿನಾರಂಭವಾಗಲಿ. ಹೊಟ್ಟೆ ತುಂಬ ಉಂಡು ಸ್ನಾನ ಮಾಡುವುದು ಅನುಚಿತ. ಅನಾರೋಗ್ಯದ ಹಾದಿ ಖಂಡಿತ. ಉಂಡಾಗ ದೇಹದ ರಕ್ತಪರಿಚಲನೆ ಉದರದೆಡೆಗೆ ಸುಗಮಗೊಳುವುದು ಸಹಜ ಪ್ರಕ್ರಿಯೆ. ಆದರೆ ಸ್ನಾನದ ಅನಂತರ ರಕ್ತಪರಿಚಲನೆ ದೇಹದ ಮೂಲೆ ಮೂಲೆ ಕಡೆಗೆ ಧಾವಿಸುವುದು ಸಹಜ. ತಿಂಡಿಯ ಅನಂತರ, ಉಂಡೊಡನೇ ಸ್ನಾನದ ಮನೆಗೋಡುವಿರೇ? ಆರೋಗ್ಯಕ್ಕೆ ಖಂಡಿತ ಅಪಾಯವಿದೆ ಎಂಬುದು ನಮ್ಮ ನೆಲದ ತಿಳಿವಳಿಕೆ. ಉದರಗತ ರಕ್ತಪರಿಚಲನೆ ಕುಂಠಿತವಾದೊಡನೆ ಜೀರ್ಣಪ್ರಕ್ರಿಯೆಗೆ ಲೋಪ ಸಹಜ. ಎರಡು ಹೊತ್ತು ಮಿಂದವನು ಖಂಡಿತ ನಿರೋಗಿ.

ಸ್ಯಾನಿಟೈಸರ್ ಎಂಬುದು ಇಂದು ಎಳೆಗೂಸಿನಿಂದ ಹಿರಿ ಹರೆಯದ ಮಂದಿಗೂ ತಿಳಿದ ದ್ರವ. ಏನೇ ಮುಟ್ಟಿದರೂ ಮತ್ತೆ ಮತ್ತೆ ಹಾಕಿ ಉಜ್ಜಿಕೊಳ್ಳುವ ಚಪಲ ಗೀಳುತನ ಅರಂಭವಾಗಿದೆ. ಮುಂಗೈಗೆ ಹಿಡಿಯುವ ಥರ್ಮಾಮೀಟರ್ ಮತ್ತು ಅಂಗೈಗೆ ಪೂಸುವ ನೀಲಿ ದ್ರವದ ರಾಸಾಯನಿಕ ಜನರಿಗೆ ಇಂದು ಸಹಜ ಎನಿಸಿಬಿಟ್ಟಿದೆ. ದಂಡಾಣು ನಾಶಕ ಎಂದು ಭಾವಿಸಲಾಗುವ ರಾಸಾಯನಿಕಗಳ ನ್ಯಾನೋ ಅಂಶಗಳು ಉದರ ಸೇರಿದರೆ ವಿಷವಷ್ಟೇ ಅಲ್ಲ. ಅವುಗಳು ನಮ್ಮ ಕರುಳಿನ ಉಪಕಾರಿ ಬ್ಯಾಕ್ಟೀರಿಯ ಕಾಲೊನಿಯನ್ನು ಕುಲಗೆಡಿಸುತ್ತವೆ. ಹೊಸ ಕಾಯಿಲಿಗೆ ಹಾದಿ ಮಾಡುತ್ತವೆ. ರಾಸಾಯನಿಕಗಳ ಸತತ ಸಂಪರ್ಕದಿಂದ ಉಗುರು, ಬೆರಳು ತುದಿಗಳ ಒಗ್ಗದಿಕೆ (ಅಲರ್ಜಿ) ಪ್ರಕ್ರಿಯೆಗಳು ಕೂಡ ಅನೇಕರಿಗೆ ಉಂಟಾಗಹತ್ತಿವೆ. ಮಕ್ಕಳು ಕಿವಿ, ಕಣ್ಣು ಮುಟ್ಟಿಕೊಂಡರಂತೂ ಉರಿ, ಉರಿಯೂತ ಸಂದರ್ಭಗಳು ಹೇರಳ. ಅದಕ್ಕೆ ಚಿಕಿತ್ಸೆ ಪಡೆಯಬೇಕಾದ ಹೊಸ ಪ್ರಮೇಯಗಳು ಹಲವು. ಮನೆಗೆಲಸಗಿತ್ತಿಯರಿಗೆ, ಹೋಟೆಲ್ ಕಾರ್ಮಿಕರಿಗೆ, ಗೃಹಿಣಿಯರು ಬಳಸುವ ಸಾಬೂನು, ಮಾರ್ಜಕಗಳೂ ಸಹ ಇಂತಹ ಒಗ್ಗದಿಕೆಯ ಪರಿಧಿಯಿಂದ ಹೊರತಾಗಿಲ್ಲ. ಬೂದಿ ಬಳಸಿ ಪಾತ್ರೆ ಬೆಳಗುತ್ತಿದ್ದ ನಮ್ಮಮ್ಮನ ಬೆರಳು ಎಂದೂ ತುರಿಗಜ್ಜಿ ಪಡೆದಿಲ್ಲ. ತಾಜಾ ಗೋಮಯ ಬಳಸಿ ಸಾರಿಸಿದ ಅಂಗಳದ ಶುಚಿತ್ವ ಎಂದೂ ಮಾಸುತ್ತಿರಲಿಲ್ಲ. ಬದಲಾಗಿ ಚೇತೋಹಾರಿಯಾಗಿತ್ತು ಸಹ. ದಿನಗಟ್ಟಲೆ ಅದರ ಸೊಂಪುತನ ಉಳಿಯುತ್ತಿತ್ತು. ನೀರಿಗಿಂತ ಮಿಗಿಲಾದ ಶುಚಿತ್ವಕಾರಕ ವಸ್ತು ಬೇರಿಲ್ಲ. ಅಷ್ಟೂ ಭಯವೇ? ಬಿಸಿ ನೀರು ಬಳಸಿರಿ. ಕೈತೊಳೆದುಕೊಳ್ಳಿರಿ. ಅತಿಯಾದ ಸ್ಯಾನಿಟೈಸರ್ ಬಳಕೆ ಬಗ್ಗೆ ಎಚ್ಚರ ಇರಲಿ.

ಉಪವಾಸದಿಂದ ಆರೋಗ್ಯ ಎಂದು ಪ್ರತಿಪಾದಿಸಿದವನ ಹೆಸರು ಓ.ಯೋಷಿನೊರಿ. ಈ ಜಪಾನೀ ಜೀವಕಣವಿಜ್ಞಾನಿ ಬಯಲಾಗಿಸಿದ ಈ ಸಂಗತಿಗೆ ನೊಬೆಲ್ ಪ್ರಶಸ್ತಿ ದಕ್ಕಿದ ಸುದ್ದಿ ಢಣಾಡಂಗುರವಾಗಿದೆ. ಲಂಘನ ಎಂಬ ಅಪ್ಪಟ ದೇಸೀ ಚಿಂತನೆಯಿದು. ಕಾಯಿಲೆಗಳಲ್ಲಿ ಎರಡು ವಿಧ. ಮೊದಲಿನದು ಅತಿಯಾಗಿ ಕೃಶತ್ವಗೊಳುವ ಕ್ಷಯದಂತಹ ರೋಗಗಳ ಸಮೂಹ. ಅಲ್ಲಿ ಕುಪೋಷಣೆ, ಮಿಥ್ಯಾಪೋಷಣೆಯದೇ ಸಿಂಹಪಾಲು. ಎರಡನೆಯದು ಅತಿ ಪೋಷಣೆ. ಸಂತರ್ಪಣಜನ್ಯ ವ್ಯಾಧಿ ಎಂಬ ವರ್ಗವದು. ಅತಿ ಬೊಜ್ಜು, ಮಧುಮೇಹ, ಏರಿದ ರಕ್ತದೊತ್ತಡ, ಮೂತ್ರಪಿಂಡದ ವೈಫಲ್ಯತೆಗಳಂತಹ ರೋಗಗಳ ದಂಡು ಅಧಿಕಾಧಿಕ ಉಂಡು ಬರಿಸಿಕೊಳ್ಳುವ ವರ್ಗದವು. ಈಗ ನೀವೇ ನಿರ್ಧರಿಸಿರಿ. ಏಕಾದಶಿಯ ಉಪವಾಸದ ಹಿಂದೆ ದೇಹಶುದ್ಧಿಯ ಸಬಲ, ಸಫಲ ಉಪಾಯವಿದೆ. ಮನಸ್ಸನ್ನು ಹಿಡಿತದಲ್ಲಿಡಬೇಕೆ? ಉಪವಾಸ ಮಾಡಿರಿ. ಗಾಂಧೀಜಿಯ ಅತಿ ದೊಡ್ಡ ಅಸ್ತ್ರವಿದಾಗಿತ್ತು. ಲಂಘನಂ ಪರಮೌಷಧಂ ಸೊಲ್ಲಿನಲ್ಲಿದೆ ಇದೇ ಧ್ಯೇಯ. ದೇಹದ ವಿಷಗಳೆಲ್ಲ ಕರಗಿ ಹೋಗುವ ಪಥ (ಸ್ರೋತಸ್ಸು) ಶುಚಿಗೊಳಿಸುವ ಉಪವಾಸ ದೇಹಶುದ್ಧಿಯ ಉತ್ತಮ ವಿಧಾನ. ಪಥ್ಯ ಎಂಬ ಪದ ಸುಪರಿಚಿತ. ಪಥ ಎಂದರೆ ಹಾದಿ ಅಥವಾ ಸ್ರೋತಸ್ಸು. ಅದನ್ನು ಶುದ್ಧೀಕರಿಸಲು ನಮಗೆ ಪಥ್ಯ ಅತ್ಯಗತ್ಯ. ಅರಿತು ಉಣುವ, ಕಾಲ ಕಾಲಕ್ಕೆ ಉಪವಾಸವಿರುವ ವಿಧಿವಿಧಾನಗಳವು. ಇದನ್ನು ಪ್ರಾಯಶ್ಚಿತ್ತವೆಂದಾದರೂ ಕರೆಯಿರಿ. ರೋಗ ತಡೆಯ ಹಾದಿಯಿದು. ಖಂಡಿತ ಇದು ಒಳ ಅಂಗಗಳ ಸಂಪೂರ್ಣ ವಿಶ್ರಾಂತಿ ಎಂದು ಬಗೆಯಿರಿ. ಪರಿಣಾಮ ಒಂದೇ. ದೇಹದ ಅನಗತ್ಯ ವಿಷ ವಸ್ತು ಸಂಚಯನಕ್ಕೆ ಪೂರ್ಣ ವಿರಾಮ. ದಸರೆಯ ಹತ್ತು ದಿನಗಳ ಆಚರಣೆಯಲ್ಲಿ ಉಪವಾಸ, ಲಘೂಪಹಾರಕ್ಕಿದೆ ಬಹಳ ಮಹತ್ವ. ಪೂಜಾಕೈಂಕರ್ಯಗಳಷ್ಟೇ ಅದು ಪ್ರಮುಖ. ಉಪವಾಸವಿರಿ. ಕಾಯ ಮತ್ತು ಚಿತ್ತಶುದ್ಧಿಯನ್ನನುಭವಿಸಿರಿ. ಎರಡೇ ಸಾಲಿನ ಸರ್ವಜ್ಞ ವಚನದ ಅರ್ಥ ತಿಳಿದರೆ ಆರೋಗ್ಯ ಖಂಡಿತ. ‘ಹಸಿವಿಲ್ಲದುಣಬೇಡ, ಹಸಿದು ಮತ್ತಿರಬೇಡ, ಬಿಸಿಗೂಡಿ ತಂಗೂಳನುಣಬೇಡ, ವೈದ್ಯನಾ ಬೆಸಸಲೇ ಬೇಡ ಸರ್ವಜ್ಞ!’

ಮೂರು ಸಾವಿರ ವರ್ಷ ಹಿಂದಿನ ಆಯುರ್ವೇದ ಸಂಹಿತೆಯ ಸಾರವೇ ಆಚಾರ ರಸಾಯನ. ಅಂದರೆ ಸಾವು, ಮುಪ್ಪು ಮುಂದೂಡುವ ಹಾದಿ. ಹಿತಾಹಾರ, ಹಿತಮಿತ ಆಚರಣೆ, ಒಳಿತು ಕೆಡುಕುಗಳ ಸಮೀಕ್ಷ್ಯಕಾರಕ ಭಾವ, ವಿಷಯ ಸುಖಗಳಿಂದ ವಿಮುಕ್ತತೆ, ದಾನಶೀಲತೆ, ಸತ್ಯಪರತೆ, ಕ್ಷಮಾಗುಣದಿಂದ ರೋಗ ಬಾರದ ಸ್ಥಿತಿ ಖಂಡಿತ!

ಸ್ನಾನ

ಸ್ನಾನದಿಂದ ಸಕಲ ಶ್ರಮ ಪರಿಹಾರ. ಋತುಸುಖದ ನೀರು ಅಂದರೆ ದೀವಳಿಗೆಯಂ ಕುಳಿರು ಚಳಿಗಿರಲಿ ಹದ ಬಿಸಿಯ ನೀರು ಸ್ನಾನ. ವೈಶಾಖದ ಧಗೆಗಿರಲಿ ಮೈಗೆ ತಂಪೆರವ ಋತುಸುಖದ ಜಳಕದ ಪುಳಕ. ಸೀಗೆ, ಬಾಗೆಯ ಸಂಗಡ ಕಡಲೆ, ಹೆಸರಿನ ಹಿಟ್ಟಿನ ಸ್ನಾನಚೂರ್ಣಗಳೇ ಹಿಂದಿನವರ ಚರ್ಮ–ಕೂದಲಿನ ಆರೋಗ್ಯದ ಚಮತ್ಕಾರ. ಅಂದು ಅದು ಸಲ್ಲುತ್ತಿತ್ತು. ಇಂದೇಕೆ ಅದು ಸಲ್ಲಬಾರದು? ಪರಿಸರಕ್ಕೆ ದೇಹದೇಶಕ್ಕೆ ಹಾನಿಗೈವ ಅಗ್ಗದ ರಾಸಾಯನಿಕ ಸರಕು ಬೇಕೆ? ಅಗ್ಗದ ದಾಸವಾಳ, ಬೋರೆ ಎಲೆ ಶಾಂಪೂ, ಚುಜ್ಜಲು, ಕಾಡು ಸೀಗೆ, ಮಂಡಸೀಗೆ, ಬಾಗೆ ಪುಡಿಗಳೇ ಸಾಕೇ? ಯೋಚಿಸಿ ಯೋಜಿಸಿರಿ. ಬಳಸಿ ನೋಡಿರಿ.

(ಲೇಖಕರು ಆಯುರ್ವೇದ ವೈದ್ಯರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು