ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ– ಕುಶಲ | ಧೈರ್ಯದ ಪರಿ ಪರಿಧಿ

Published 8 ಜುಲೈ 2024, 21:30 IST
Last Updated 8 ಜುಲೈ 2024, 21:30 IST
ಅಕ್ಷರ ಗಾತ್ರ

ಧೈರ್ಯವೆಂಬುದು ಬದುಕಿನ ಮೂಲ ಬಂಡವಾಳ. ಮಗುವಾಗಿ ಮೊದಲ ಹೆಜ್ಜೆಯಿಂದ ಮೊದಲುಗೊಂಡು ಸಾವಿನ ಬಾಗಿಲು ಬಡಿಯುವವರೆಗೆ ಗಟ್ಟಿ ಗುಂಡಿಗೆಯಿಂದ ಬದುಕನ್ನು ಎದುರಿಸುವ ಪ್ರಯತ್ನವನ್ನು ಪ್ರತಿಯೊಬ್ಬ ಮನುಷ್ಯನೂ ಮಾಡುತ್ತಾನೆ. ಧೈರ್ಯವನ್ನು ಕುರಿತು ಕೆಲವು ಮುಖ್ಯ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು

ಧೈರ್ಯವು ಅತ್ಯಂತ ಶ್ರೇಷ್ಠ ಗುಣ. ಇದು ಮನುಷ್ಯನಿಗೆ ಕಷ್ಟಗಳನ್ನು ಎದುರಿಸಲು ಮತ್ತು ತನ್ನ ನಂಬಿಕೆಗಳಿಗಾಗಿ ನಿಲ್ಲಲು ಸಹಾಯ ಮಾಡುತ್ತದೆ.
ಭಯ, ಅನಿಶ್ಚಿತತೆ ಅಥವಾ ಭೀತಿಯನ್ನು ಎದುರಿಸುವ ಸಾಮರ್ಥ್ಯವಾಗಿದೆ. ಧೈರ್ಯವು ಸಾಮಾಜಿಕ ಬದಲಾವಣೆ, ವೈಜ್ಞಾನಿಕ ಆವಿಷ್ಕಾರ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ಧೈರ್ಯವು ತನ್ನ ಮಿತಿಗಳನ್ನು ಹೊಂದಿದೆ. ವಿವೇಚನೆಯಿಲ್ಲದ ಧೈರ್ಯವು ಅಪಾಯಕಾರಿಯೂ ಆಗಬಹುದು. ಧೈರ್ಯವನ್ನು ಜ್ಞಾನ ಮತ್ತು ವಿವೇಕಗಳೊಂದಿಗೆ ಬೆಳೆಸಬೇಕು.ಕೇವಲ ಧೈರ್ಯವೊಂದೇ ಯಶಸ್ಸನ್ನು ಖಾತ್ರಿಪಡಿಸುವುದಿಲ್ಲ. ಇದು ಇತರ ಗುಣಗಳು ಮತ್ತು ಕೌಶಲಗಳೊಂದಿಗೆ ಪೂರಕವಾಗಿರಬೇಕು.

ಧೈರ್ಯವನ್ನು ಕುರಿತು ವೇದ, ಉಪನಿಷತ್ತು, ಭಗವದ್ಗೀತೆಯಂಥ ಪ್ರಾಚೀನ ಸಾಹಿತ್ಯದಲ್ಲೂ ಉಲ್ಲೇಖಿಸಲಾಗಿದೆ. ಅದು ಹೇಗೆ ಬದುಕನ್ನು ಕಟ್ಟಿಕೊಡುತ್ತದೆ ಎಂಬುದನ್ನು ಪರಿಪರಿಯಾಗಿ ಹೇಳಲಾಗಿದೆ. ಗೀತೆಯಂತೂ ಅರ್ಜುನನಿಗೆ ಧೈರ್ಯ ತುಂಬಲು ಮಾಡಿದ ಯಶಸ್ವಿ ಪ್ರಯತ್ನವೇ ಸರಿ. ಬಹಳ ಜನರು ಜೀವನದ ಸೊಗಸನ್ನು ಅದರ ಪೂರ್ಣ ಸೊಬಗನ್ನು ಆಸ್ವಾದಿಸಲು ಸೋಲುವ ಕಾರಣ ಅವರು ಧೈರ್ಯಶಾಲಿಗಳಾಗಿಲ್ಲದಿರುವುದು. ಅಮೆರಿಕದ ಪ್ರಸಿದ್ಧ ಕವಿ ರಾಲ್ಫ್ ವಾಲ್ಡೊ ಎಮೆರ್ಸನ್, ‘ಪ್ರತಿಯೊಬ್ಬ ಮನುಷ್ಯನೂ ಧೈರ್ಯಶಾಲಿಯೇ. ಆದರೆ ಅವನು ವಂಚಿತನಾಗುವುದು ಏಕೆಂದರೆ ಈ ಧೈರ್ಯದ ಪುಷ್ಟಿಯನ್ನು ಅವನು ಇತರರಿಂದ ಬಯಸುತ್ತಾನೆ’ ಎಂದು ಹೇಳಿದ್ದಾನೆ. ಎಂದರೆ ಧೈರ್ಯವು ಆರ್ಜಿತಗುಣವೇ ಹೊರತು ಆರೋಪಿತ ಗುಣವಾಗಲಾರದು. ಚಿಂತಕ ಮತ್ತು ಲೇಖಕ ರಾಯ್ ಟಿ ಬೆನೆಟ್ ತನ್ನ ‘ದಿ ಲೈಟ್ ಇನ್ ದಿ ಹಾರ್ಟ್’ ಕೃತಿಯಲ್ಲಿ, ‘ಇದು ನಿಮ್ಮ ಬದುಕು. ನಿಮಗೆ ಬೇಕಾದಂತೆ ಬದುಕಲು ಯಾರ ಅಪ್ಪಣೆಯೂ ಬೇಕಿಲ್ಲ. ನೀವು ಹೃದಯಪೂರ್ವಕವಾಗಿ ಬದುಕುವ ಧೈರ್ಯಶಾಲಿಗಳಾಗಿ’ ಎನ್ನುತ್ತಾನೆ.

ಬೆನೆಟ್‌ನ ಮಾತುಗಳಿಗೆ ಸಂವಾದಿಯಾಗಿ ಸ್ವಾಮಿ ವಿವೇಕಾನಂದರ ಮಾತುಗಳನ್ನೂ ನೋಡಬಹುದು; ಅವರೆನ್ನುತ್ತಾರೆ: ‘ನೀವೊಂದು ಕಾರ್ಯವನ್ನು ಕೈಗೆತ್ತಿಕೊಂಡರೆ, ಯಾವುದೇ ಕಾರಣಕ್ಕೂ ಅದನ್ನು ಬಿಡಬೇಡಿ. ನಿಮ್ಮ ಹೃದಯದ ಮಾತುಗಳನ್ನು ಆಲಿಸಿ ಮತ್ತು ಪಾಲಿಸಿ, ಬೇರೆಯವರ ಮಾತುಗಳನ್ನಲ್ಲ.’ ಸ್ವಾಮಿ ವಿವೇಕಾನಂದರ ಉಕ್ತಿಗಳಂತೂ ಧೀರತೆಯ ದುಂದುಭಿಯಂತೆ ಮೊಳಗುತ್ತವೆ. ಅವರೆಂದೂ ಹೇಡಿತನವನ್ನು ಒಪ್ಪಲಿಲ್ಲ. ‘ನಾಯಕನಂತೆ ಬೆಳಗು. ಯಾವಾಗಲೂ ಹೇಳು, ‘ನನಗೆ ಭಯವೆಂಬುದಿಲ್ಲ’; ಮತ್ತು ಎಲ್ಲರಿಗೂ ಸಾರು, ‘ಭಯ ಪಡಬೇಡಿ’.’ ನಿರ್ಭೀತಿ ಎಂಬುದು ಲೌಕಿಕಕ್ಕೆ ಅನ್ವಯವಾಗುವಂತೆ ಆಧ್ಯಾತ್ಮಿಕ ಜೀವನಕ್ಕೂ ಅನ್ವಯ ಎನ್ನುತ್ತಾರೆ, ಸ್ವಾಮೀಜಿ. ‘ಧೈರ್ಯಶಾಲಿಗಳಾಗಿ! ಬಲಶಾಲಿಗಳಾಗಿ! ನಿರ್ಭಯರಾಗಿರಿ! ಆಧ್ಯಾತ್ಮಿಕ ಜೀವನಕ್ಕೆ ಬಂದಮೇಲೆ ಜೀವನಪರ್ಯಂತ ಹೋರಾಟವೇ. ಸಾವೇ ಎದುರಾದರೂ ಹೆದರದೆ ಹೋರಾಡಿ. ಹೆದರಿಕೆಯಿಂದ ‘ಸಾಯದಿರಿ’, ಹೋರಾಡುತ್ತ ‘ಸಾಯಿರಿ’.’

ಸ್ವಾಮೀಜಿ ಅವರ ಪ್ರಕಾರ ಧೈರ್ಯವು ಆಂತರಿಕ ಶಕ್ತಿ ಮತ್ತು ನೈತಿಕ ದೃಢತೆಯೊಂದಿಗೆ ಸಂಬಂಧವನ್ನು ಹೊಂದಿದೆ. ಮಹಾತ್ಮ ಗಾಂಧಿ ಅವರ ಮಾತಿನಂತೆ, ಶಕ್ತಿಯು ದೈಹಿಕ ಸಾಮರ್ಥ್ಯದಿಂದ ಬರುವುದಿಲ್ಲ, ಬದಲಾಗಿ ಅಜೇಯ ಇಚ್ಛಾಶಕ್ತಿಯಿಂದ ಬರುತ್ತದೆ. ಹೀಗಿದ್ದಾಗ ಮಾತ್ರ ಮನುಷ್ಯ ಧೈರ್ಯಶಾಲಿಯಾಗುತ್ತಾನೆ. ರವೀಂದ್ರನಾಥ ಟ್ಯಾಗೋರ್‌ ಪ್ರಕಾರ, ಧೈರ್ಯಶಾಲಿಯಾಗಿರುವುದು ಎಂದರೆ ಭಯರಹಿತನಾಗಿರುವುದಲ್ಲ; ಬದಲಾಗಿ ನಮ್ಮ ಭಯಗಳನ್ನು ಎದುರಿಸುವುದಾಗಿದೆ. ಚರಿತ್ರೆ ಎಂಬುದು ಇಂತಹ ಕೆಲವು ಧೈರ್ಯವಂತರ ಗಾಥೆಯೇ ಆಗಿರುತ್ತದೆ ಎಂಬುದು ಗಮನೀಯ.ಧೈರ್ಯಶಾಲಿಯಾಗಿರಬೇಕು ಎಂಬುದೇನೋ ನಿಜ. ಆದರೆ ಧೈರ್ಯವು ತನ್ನದೇ ಆದ ಮಿತಿಗಳನ್ನೂ ಹೊಂದಿದೆ. ಹಿತೋಪದೇಶದಲ್ಲಿ ಹೇಳಿರುವಂತೆ, ಯೋಚಿಸದ ಧೈರ್ಯವು ಮರಣಕ್ಕೆ ಕೂಡ ಕಾರಣವಾಗಬಹುದು. ಧೈರ್ಯವು ಬುದ್ಧಿವಂತಿಕೆ ಮತ್ತು ಎಚ್ಚರಿಕೆಯ ಪರಿಗಣನೆಯೊಂದಿಗೆ ಸಮತೋಲನಗೊಳ್ಳಬೇಕು ಎನ್ನುತ್ತಾನೆ, ಚಾಣಕ್ಯ. ಅವನೆನ್ನುತ್ತಾನೆ: ‘ಸರ್ಪ, ರಾಜ, ಹುಲಿ, ಕಣಜ, ಹಸುಗೂಸು ಮತ್ತು ಇತರರು ಸಾಕಿದ ನಾಯಿ – ಇವುಗಳನ್ನು ನಿದ್ರೆಯಿಂದ ಎಬ್ಬಿಸಬಾರದು.’ ಎಂದರೆ ಧೈರ್ಯವಿದೆ ಎಂದು ಈ ಬಗೆಯ ಹುಂಬತನದ ಕಾರ್ಯಗಳಿಗೆ ಕೈಯಿಕ್ಕಬಾರದೆಂಬ ತಾತ್ಪರ್ಯ. ಪಂಚತಂತ್ರದ ಅನೇಕ ಕಥೆಗಳು ಧೈರ್ಯ ಮತ್ತು ವಿವೇಕದ ಸೂಕ್ಷ್ಮ ವಿವೇಚನೆಗಳನ್ನೊಳಗೊಂಡ ಭಾಷ್ಯಗಳಾಗಿವೆ. ಈ ಬಗೆಯ ಸಮತೋಲನವನ್ನು ಕುರಿತ ಕಗ್ಗದ ಪದ್ಯ ಹೀಗಿದೆ: ‘ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು, ಸನ್ನಿವೇಶದ ಸೂಕ್ಷ್ಮವರಿತು, ಧೃತಿದಳೆದು, ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ ಪುಣ್ಯಶಾಲಿಯ ಪಾಡು – ಮಂಕುತಿಮ್ಮ.’  ಧೃತಿಯನ್ನು ತಳೆಯುವ ಪೂರ್ವಭಾವಿಯಲ್ಲಿ, ತನ್ನ ಶಕ್ತಿಯನ್ನು ಅಳೆದು, ಗುಣಗಳನ್ನು ಎಣಿಸಿ, ಸನ್ನಿವೇಶದ ಸೂಕ್ಷ್ಮವನ್ನು ತಿಳಿದು ಕಾರ್ಯಕೈಗೊಂಡು ಯಶಸ್ವಿಯಾಗುವುದು ಪುಣ್ಯಶಾಲಿಯ (ಯಶಸ್ವೀ ಪುರುಷ) ಲಕ್ಷಣ ಎನ್ನುತ್ತದೆ, ಕಗ್ಗ. ಈ ಬಗೆಯಲ್ಲಿ ಧೈರ್ಯ ಮತು ಅದರ ಪರಿಧಿಯನ್ನು ಅರಿತ ವಿವೇಕಯುತ ಬಾಳು ನಮ್ಮದಾಗಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT