ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಜಿ | ಕಿವಿಗಳಿಗೆ ಬೇಕಾದ ಮಾತುಗಳು

Published 17 ಜುಲೈ 2023, 23:30 IST
Last Updated 17 ಜುಲೈ 2023, 23:30 IST
ಅಕ್ಷರ ಗಾತ್ರ

ಗುಣಮಟ್ಟದ ಜೀವನವನ್ನು ಹೊಂದುವಲ್ಲಿ ಕಿವಿಗಳ ಕಾಳಜಿ ಕೂಡ ಮಹತ್ವದ್ದು. ಹೊರ, ಮಧ್ಯ ಮತ್ತು ಒಳಕಿವಿ – ಎಂಬ ಮೂರು ಭಾಗಗಳಿರುವ ಈ ಇಂದ್ರಿಯವು ಮುಖ್ಯವಾಗಿ ಶ್ರವಣೇಂದ್ರಿಯವಾದರೂ, ಒಳಕಿವಿಯು ಶರೀರದ ಸಮತೋಲನವನ್ನು ಕಾಪಾಡುವಲ್ಲಿಯೂ ಪಾತ್ರವನ್ನು ವಹಿಸುತ್ತದೆ. ನಿರ್ಲಕ್ಷ್ಯ ಮಾಡಿದ ಕಿವಿಗಳ ಸಮಸ್ಯೆ ಒಮ್ಮೊಮ್ಮೆ ಶಾಶ್ವತ ಕಿವುಡುತನಕ್ಕೂ ಕಾರಣವಾಗಿ, ಬದುಕು ಅಸಹನೀಯವಾಗಬಹುದು. ಆದ್ದರಿಂದಲೇ ಸಮಸ್ಯೆ ತಲೆದೋರಿದಾಗ ಆರಂಭದಲ್ಲಿಯೇ ತಜ್ಞವೈದ್ಯರಲ್ಲಿ ಸಲಹೆ ಪಡೆಯುವುದು ಸೂಕ್ತ.

ಸಾಮಾನ್ಯ ಸಮಸ್ಯೆಗಳು ಯಾವುವು?
• ಹೊರಕಿವಿಯಲ್ಲಿ ಹೆಚ್ಚಾಗುವ ಮೇಣದಂತಹ ವಸ್ತು:
ಸಾಮಾನ್ಯವಾಗಿ ಹೊರಕಿವಿಯಲ್ಲಿ ಉತ್ಪತ್ತಿಯಾಗುವ ಮೇಣದಂತಹ ವಸ್ತುವು ಕಿವಿಗಳನ್ನು ಧೂಳು, ಸೂಕ್ಷ್ಮಾಣು ಮತ್ತು ಇತರ ಹೊರಗಿನ ವಸ್ತುಗಳಿಂದ ಸಂರಕ್ಷಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಆದರೆ ಕೆಲವೊಮ್ಮೆ ಕಿವಿಯ ಪ್ರವೇಶದ್ವಾರ ಚಿಕ್ಕದಾಗಿದ್ದು ಅಥವಾ ಹೊರಗಿನ ಕೊಳವೆಯಂತಿರುವ ಭಾಗವು ಹೆಚ್ಚು ಉದ್ದದ್ದಾಗಿದ್ದರೆ ಈ ಮೇಣದಂತಹ ವಸ್ತು ಅಲ್ಲಿಯೇ ಸಂಗ್ರಹವಾಗಿಬಿಡಬಹುದು. ಇದು ವ್ಯಕ್ತಿಯಲ್ಲಿ ಕಿವಿನೋವು, ಕಿವಿಯಲ್ಲಿ ಏನೋ ತಡೆಯಿದ್ದಂತಹ ಅಥವಾ ತಲೆ ಭಾರವಾದಂತಹ ಅನುಭವವನ್ನು ಉಂಟುಮಾಡಬಹುದು.

• ಮಧ್ಯಕಿವಿಯಲ್ಲಿ ಸೋಂಕು: ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಸಮಸ್ಯೆಯಲ್ಲಿ ಮಧ್ಯಕಿವಿಯ ಭಾಗದಲ್ಲಿ ಸೋಂಕು ಮತ್ತು ಉರಿಯೂತ ಉಂಟಾಗಿರುತ್ತದೆ. ಅಣುಜೀವಿ ಅಥವಾ ವೈರಾಣುಗಳು ಗಂಟಲಿನ ಭಾಗದಿಂದ ಅಲ್ಲಿರುವ ಕೊಳವೆಯಂತಹ ಸಂಪರ್ಕದ ಮೂಲಕ ಮಧ್ಯಕಿವಿಯನ್ನು ತಲುಪುತ್ತವೆ. ಮಕ್ಕಳು ಕಿವಿನೋವು ಅಥವಾ ಕಿವಿ ಕೇಳಿಸದಿರುವುದು ಅಥವಾ ಕಿವಿಯಲ್ಲಿ ಏನೋ ತುಂಬಿಕೊಂಡಂತಹ ಅನುಭವ ಎಂದು ದೂರಬಹುದು.

• ಹೊರಕಿವಿಯಲ್ಲಿ ಸೋಂಕು: ಹೊರ ಕಿವಿಯಲ್ಲಿ ತೇವಾಂಶ ಹೆಚ್ಚಾಗಿ, ಸೂಕ್ಷ್ಮಾಣುಗಳು ಮತ್ತು ಶಿಲೀಂಧ್ರದ ಬೆಳವಣಿಗೆಗೆ ಪೂರಕವಾದಾಗ ಅಲ್ಲಿ ಸೋಂಕು ಉಂಟಾಗಬಹುದು. ಒಮ್ಮೊಮ್ಮೆ ಇದು ಹೊರ ಕಿವಿಯಲ್ಲಿ ತುರಿಕೆ, ದ್ರವದಂತಹ ವಸ್ತವಿನ ಸ್ರವಿಕೆ ಮತ್ತು ಕಿವಿನೋವಿಗೆ ಕಾರಣವಾಗಬಹುದು. ಈಜುಗೊಳಕ್ಕೆ ನಿಯಮಿತವಾಗಿ ಭೇಟಿ ನೀಡುವವರಲ್ಲಿ ಮತ್ತು ಮಧುಮೇಹಿಗಳಲ್ಲಿ ಈ ಸಮಸ್ಯೆ ಸಾಮಾನ್ಯ.

• ಕಿವಿಯಲ್ಲಿ ಒಂದು ಬಗೆಯ ಶಬ್ದ: ಒಮ್ಮೊಮ್ಮೆ ಕಿವಿಯಲ್ಲಿ ನಿರಂತರವಾಗಿ ಗಂಟೆ ಬಾರಿಸಿದಂತಹ, ‘ಗುಯ್’, ‘ಬಸ್ಸ್’ ಅಥವಾ ’ಹಿಸ್ಸ್’ ಎಂಬ ಶಬ್ದ ಕೇಳಿದಂತಾಗಬಹುದು. ಹೊರಗೆ ಯಾವುದೇ ಶಬ್ದವಿಲ್ಲದಿದ್ದರೂ ಇಂತಹ ಅನುಭವವಾದಲ್ಲಿ ಕೂಡಲೇ ವೈದ್ಯರ ಸಲಹೆಯನ್ನು ಪಡೆಯಬೇಕು. ಹೊರಕಿವಿಯಲ್ಲಿ ಮೇಣದಂತಹ ವಸ್ತು ಹೆಚ್ಚು ಶೇಖರವಾದಾಗ, ಜೋರಾದ ಕರ್ಕಶ ಶಬ್ದವನ್ನು ಬಹಳ ಹೊತ್ತು ಆಲಿಸಿದಾಗ ಮತ್ತು ಕಿವುಡುತನದ ಆರಂಭದ ಹಂತದಲ್ಲಿ ಈ ಅಸಹಜ ಶಬ್ದ ಕೇಳಿದ ಅನುಭವವಾಗಬಹುದು.

• ಕಿವಿಯ ಯಾವುದೇ ಭಾಗವು ಸೋಂಕಿಗೆ ತುತ್ತಾದಾಗ ವ್ಯಕ್ತಿಯನ್ನು ಜ್ವರ, ಕಿವಿನೋವು, ಕಿವಿ ಮುಚ್ಚಿಕೊಂಡಂತಾಗುವುದು ಮತ್ತು ಕಿವಿಯಿಂದ ಸ್ರಾವ ಸ್ರವಿಸುವಿಕೆ (ಕಿವಿ ಸೋರುವುದು) ಮೊದಲಾದ ಸಮಸ್ಯೆಗಳು ಬಾಧಿಸಬಹುದು.

• ಒಳಕಿವಿಯಲ್ಲಿನ ಸೋಂಕು ವ್ಯಕ್ತಿಯಲ್ಲಿ ತಲೆಸುತ್ತುವಿಕೆಗೂ ಕಾರಣವಾಗಬಹುದು.

ನವಜಾತಶಿಶುಗಳಲ್ಲಿ ಕಿವುಡುತನ
ನವಜಾತಶಿಶುಗಳಲ್ಲಿ ಕಿವುಡುತನ ಕಾಣಿಸಿಕೊಳ್ಳಲು ಕಾರಣಗಳು ಹಲವು. ಮಗುವು ತಾಯಿಯ ಗರ್ಭಾಶಯದಲ್ಲಿರುವಾಗ ತಾಯಿಗೆ ತಗುಲುವ ಕೆಲವು ಸೋಂಕುಗಳು, ತಾಯಿಯಿಂದ ಕಿವುಡುತನ ಉಂಟುಮಾಡಬಹುದಾದ ಔಷಧಗಳ ಸೇವನೆ ಅಥವಾ ಜನನದ ಸಮಯದಲ್ಲಿ ಮಗುವಿಗೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯ – ಮೊದಲಾದವು ಮುಖ್ಯವಾದುವು. ಆನುವಂಶೀಯ ಕಾರಣಗಳಿಂದಾಗಿಯೂ ಒಮ್ಮೊಮ್ಮೆ ಕಿವುಡುತನ ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ ಶಿಶುಗಳಿಗೆ ತಜ್ಞರಿಂದ ತಪಾಸಣೆ ಮಾಡಿಸಬೇಕು. ಮುಖ್ಯವಾಗಿ ತಲೆಯ ಭಾಗದ ‘ಎಂ. ಆರ್. ಐ.’ ಮತ್ತು ‘ಸಿ. ಟಿ. ಸ್ಕ್ಯಾನ್’ ಮಾಡಿ ನರಗಳ ತೊಂದರೆ ಇಲ್ಲ ಎಂಬ ಅಂಶವು ದೃಢಪಟ್ಟು, ಒಳ ಕಿವಿಯಲ್ಲಿನ ‘ಕಾಕ್ಲಿಯ’ ಎಂಬ ಮುಖ್ಯ ಭಾಗದ ನ್ಯೂನತೆ ಇದ್ದಾಗ ಕೃತಕ ಕಾಕ್ಲಿಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಬೇಕಾಗುತ್ತದೆ. ಈ ಶಸ್ತ್ರಚಿಕಿತ್ಸೆಯನ್ನು ಮಗುವಿಗೆ ಆರು ವರ್ಷ ತುಂಬುವ ಮೊದಲೇ ಮಾಡಿಸಿದರೆ ಉತ್ತಮ. ಇದರಿಂದ ಮಗುವಿನ ಎಲ್ಲ ಬಗೆಯ ಕಲಿಕೆ ಸೂಕ್ತ ವಯಸ್ಸಿನಲ್ಲಿಯೇ ಉತ್ತಮಗೊಳ್ಳುತ್ತದೆ. ಇಂತಹ ಶಸ್ತ್ರಚಿಕಿತ್ಸೆಯ ನಂತರ ವೈದ್ಯರೊಂದಿಗೆ, ವಾಕ್ ಮತ್ತು ಶ್ರವಣತಜ್ಞರೊಂದಿಗೆ ನಿಯಮಿತ ತಪಾಸಣೆ ಮತ್ತು ತರಬೇತಿ ಅತ್ಯವಶ್ಯ. ಈ ಸಂಪೂರ್ಣ ಪ್ರಕ್ರಿಯೆ ಯಶಸ್ವಿಯಾಗಲು ಪೋಷಕರು ಅತ್ಯಂತ ಸಹನೆಯಿಂದ ಮಗುವನ್ನು ಬೆಂಬಲಿಸಬೇಕಾಗುತ್ತದೆ.

ಸತ್ಯಾಂಶ ಮತ್ತು ಮಿಥ್ಯಾಂಶಗಳು

• ಮಿಥ್ಯಾಂಶ: ಕೇವಲ ವಯಸ್ಸಾದವರಲ್ಲಿ ಕಿವುಡುತನ ಕಾಣಿಸಿಕೊಳ್ಳುತ್ತದೆ.
ಸತ್ಯಾಂಶ: ಸೋಂಕು, ಜೋರಾದ ಕರ್ಕಶ ಶಬ್ದಕ್ಕೆ ಹೆಚ್ಚು ಹೊತ್ತು ತೆರೆದುಕೊಂಡಿರುವುದು ಮೊದಲಾದ ಕಾರಣಗಳಿಂದಾಗಿ ಸಣ್ಣವಯಸ್ಸಿನವರಲ್ಲಿಯೂ ಕಿವುಡುತನ ಕಾಣಿಸಿಕೊಳ್ಳಬಹುದು.

• ಮಿಥ್ಯಾಂಶ: ಶ್ರವಣ ಸಾಧನಗಳು ಕಿವುಡುತನವನ್ನು ಸಂಪೂರ್ಣ ಗುಣಪಡಿಸುತ್ತವೆ.
ಸತ್ಯಾಂಶ: ಅವು ಶಬ್ದವನ್ನು ವರ್ಧಿಸುತ್ತವೆಯಷ್ಟೆ.

• ಮಿಥ್ಯಾಂಶ: ಶ್ರವಣ ಸಾಧನಗಳು ಕಿವಿಗಳಿಗೆ ಅಪಾಯ.
ಸತ್ಯಾಂಶ: ಕಿವಿಯ ಗಾತ್ರಕ್ಕೆ ಸೂಕ್ತವಾದ ಸಾಧನಗಳ ಬಳಕೆಯಿಂದ ಕಿವಿಗಳಿಗೆ ಯಾವುದೇ ಅಪಾಯವಿಲ್ಲ.

ಮಿಥ್ಯಾಂಶ: ಕಿವುಡುತನ ವ್ಯಕ್ತಿಯ ಸಂಪೂರ್ಣ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದು.
ಸತ್ಯಾಂಶ: ಕಿವುಡುತನದಿಂದ ವ್ಯಕ್ತಿಯ ಮೆದುಳಿನ ಗ್ರಹಿಕಾಶಕ್ತಿಯಷ್ಟೇ ಅಲ್ಲದೆ, ಸ್ಮರಣಶಕ್ತಿಯೂ ಕಡಿಮೆಯಾಗಿ ಆತ ಸಮಾಜದಿಂದ ದೂರವಿದ್ದು, ಒಂಟಿತನಕ್ಕೆ ಶರಣಾಗಬಹುದು ಮತ್ತು ಖಿನ್ನತೆಗೂ ಜಾರಬಹುದು.

ಮಿಥ್ಯಾಂಶ: ಕಿವುಡುತನ ತೀವ್ರವಾದ ನಂತರವೇ ಶ್ರವಣಸಾಧನಗಳನ್ನು ಬಳಸಬೇಕು.
ಸತ್ಯಾಂಶ: ಆರಂಭಿಕ ಹಂತಗಳಲ್ಲಿಯೇ ಶ್ರವಣ ಸಾಧನಗಳನ್ನು ಬಳಸುವುದು ಉತ್ತಮ. ಇಲ್ಲದಿದ್ದಲ್ಲಿ ಕ್ರಮೇಣ ಮೆದುಳು ಶಬ್ದತರಂಗಗಳನ್ನು ಗುರುತಿಸುವಲ್ಲಿ ವಿಫಲವಾಗಬಹುದು (ಶ್ರವಣೇಂದ್ರಿಯ ಕೊರತೆ).

ಏನು ಮಾಡಬಾರದು?:
• ಕಿವಿಯೊಳಗೆ ಅಂಗಡಿಗಳಲ್ಲಿ ಸಿಗುವ ಬಡ್ಸ್ ಅಥವಾ ಯಾವುದೇ ವಸ್ತುಗಳನ್ನು ತೂರಿಸಿ ಕೊಳ್ಳಬಾರದು.
• ಮಕ್ಕಳ ಕಿವಿಯೊಳಗೆ ಬಿಸಿ ಮಾಡಿದ ಎಣ್ಣೆ, ಉಪ್ಪಿನ ದ್ರಾವಣ ಅಥವಾ ಮತ್ತಿತರ ದ್ರಾವಣಗಳನ್ನು ಹಾಕಬಾರದು.
• ಕಿವಿಗಳನ್ನು ಮುಚ್ಚಲು ಹತ್ತಿ ಉಂಡೆಗಳ ಬಳಕೆಯನ್ನು ಮಾಡಬಾರದು. ಅದು ಬೆವರಿನೊಡನೆ ಬೆರೆತು ಸೋಂಕಿಗೆ ಕಾರಣವಾಗಬಹುದು. ದೊಡ್ಡ ಬಟ್ಟೆಯ ತುಂಡು ( ಸ್ಕಾರ್ಫ) ಬಳಸುವುದು ಉತ್ತಮ.
• ದೀರ್ಘಾವಧಿಯವರೆಗೆ ‘ಇಯರ್ ಫೋನ್’ ಅನ್ನು ಬಳಕೆ ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT