ಶನಿವಾರ, ಅಕ್ಟೋಬರ್ 16, 2021
22 °C

ದಪ್ಪ ಗರ್ಭಕೋಶಕ್ಕೆ ಕಾರಣವೇನು?

ಡಾ. ವೀಣಾ ಎಸ್‌. ಭಟ್‌ Updated:

ಅಕ್ಷರ ಗಾತ್ರ : | |

ನನಗೆ 37 ವರ್ಷ. ಮದುವೆ ತಡವಾಗಿದೆ. ನನಗೆ ಪ್ರತಿ ತಿಂಗಳು ಮುಟ್ಟು ಸರಿಯಾಗಿ ಆಗುತ್ತದೆ. ಸ್ಕ್ಯಾನಿಂಗ್ ವರದಿಯಲ್ಲಿ ಬಲ್ಕಿ ಯುಟೆರಸ್‌ ಮತ್ತು ಫ್ಯಾಟಿಲಿವರ್ ಆಗಿದೆ ಅಂತ ಬಂದಿದೆ. ನನಗೆ ಮಗು ಆಗುತ್ತದೆಯೇ?

ಹೆಸರು, ಊರು ತಿಳಿಸಿಲ್ಲ

ನಿಮಗೆ 37 ವರ್ಷ ಈಗಾಗಲೇ ಆಗಿದೆ. ಅಂದರೆ ಆದಷ್ಟು ಬೇಗ ತಜ್ಞ ವೈದ್ಯರ ಹತ್ತಿರ ಸಲಹೆ, ಚಿಕಿತ್ಸೆ ತೆಗೆದುಕೊಂಡು ಮಗುವನ್ನು ಪಡೆಯಲು ಪ್ರಯತ್ನಿಸಿ. ಗರ್ಭಕೋಶ ನಿಮಗೆ ದಪ್ಪಗಿರುವುದು ಹಾರ್ಮೋನುಗಳ ಅಸಮನತೋಲನದಿಂದ ಇರಬಹುದು. ಜೊತೆಗೆ ನಿಮಗೆ ಫ್ಯಾಟಿಲಿವರ್ ಇದೆಯೆಂದು ತಿಳಿಸಿದ್ದೀರಾ. ಆದರೆ ಇಂತಹ ಫ್ಯಾಟಿಲಿವರ್ ಸಮಸ್ಯೆ ಮದ್ಯ ವ್ಯಸನಿಗಳಲ್ಲಿ ಹೆಚ್ಚು. ಅದಲ್ಲದೇ ಬೊಜ್ಜು ದೇಹ ಉಳ್ಳವರಿಗೂ ಇರುತ್ತದೆ. ಅನಾರೋಗ್ಯಕರ ಕುರುಕಲು ತಿಂಡಿ ತಿನ್ನುವವರಿಗೆ, ಸಕ್ಕರೆ ಕಾಯಿಲೆ, ಥೈರಾಯಿಡ್ ಸಮಸ್ಯೆ, ಕೆಲವೊಮ್ಮೆ ವಂಶವಾಹಿ ಕಾರಣದಿಂದ ತೆಳ್ಳಗಿರುವವರಲ್ಲೂ ಕಂಡುಬರಬಹುದು. ಮೊದಲು ವಿದೇಶದಲ್ಲಿ ಹೆಚ್ಚಿದ್ದ ಈ ಫ್ಯಾಟಿಲಿವರ್ ಸಮಸ್ಯೆ ಈಗ ಭಾರತದಲ್ಲೂ ಹೆಚ್ಚಾಗುತ್ತಿದೆ. ಇದನ್ನ ರ್ನಿಲಕ್ಷಿಸಿ ಹಾಗೆಯೇ ಬಿಟ್ಟರೆ ಸಿರೋಸಿಸ್‌ನಂತಹ ಸರಿಪಡಿಸಲಾಗದ ಹಂತಕ್ಕೆ ಮುಂದುವರಿಯಬಹುದು. ಆಗ ಯಕೃತ್‌ ಕಸಿ ಮಾಡುವುದೊಂದೆ ಚಿಕಿತ್ಸೆಯಾಗಿ ಉಳಿಯುತ್ತದೆ. ಆ ಹಂತಕ್ಕೆ ಹೋಗಲು ಬಿಡದೆ ಆರಂಭಿಕ ಹಂತದಲ್ಲೇ ಅತಿಯಾದ ತೂಕವಿದ್ದರೆ ಕಡಿಮೆ ಮಾಡಿಕೊಳ್ಳಿ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿಟ್ಟು, ನಿಯಮಿತ ದೈಹಿಕ ಚಟುವಟಿಕೆಯಿಂದ ಫ್ಯಾಟಿಲಿವರ್‌ ಅನ್ನು ಸರಿಪಡಿಸಬಹುದು. ಯಾವುದಕ್ಕೂ ತಜ್ಞರನ್ನು ಭೇಟಿಮಾಡಿ.

ನನಗೆ ಮುಟ್ಟು ನಿಂತು ಒಂದು ವರ್ಷವಾಗಿತ್ತು. ಆದರೆ 1 ವರ್ಷದ ನಂತರ ಮತ್ತೆ ಪೀರಿಯಡ್ಸ್ ಆಗಿದೆ. ಯಾಕೆ ಹೀಗೆ ಅಂತಾ ಗೊತ್ತಾಗಲಿಲ್ಲ. ನನ್ನ ವಯಸ್ಸು 48. ಮದುವೆ ಆಗಿಲ್ಲ. ಆದರೆ ಈಗ ನನಗೆ ಮದುವೆ ಮಾಡಲು ಮನೆಯಲ್ಲಿ ಮಾತಾಡುತ್ತಿದ್ದಾರೆ. ನನಗೆ ಸೆಕ್ಸ್‌ ಬಗ್ಗೆ ಭಯವಿದೆ. ದಯವಿಟ್ಟು ಪರಿಹಾರ ಹೇಳಿ.

ಹೆಸರು ತಿಳಿಸಿಲ್ಲ, ಮೈಸೂರು

ಈಗಲೂ ಕಾಲ ಮಿಂಚಿಲ್ಲ. ನಿಮಗೆ ಸರಿಹೋಗುವ ಸೂಕ್ತ ವರ ಸಿಕ್ಕರೆ ಮದುವೆ ಆಗಿ. 48 ವರ್ಷದ ನಂತರವೂ ಸೆಕ್ಸ್ ಬಗ್ಗೆ ಭಯ, ಆತಂಕ ಆಗೋದು ಬೇಡ. ನೀವು ಸೂಕ್ತ ತಜ್ಞವೈದ್ಯರ ಸಲಹೆ ಪಡೆದುಕೊಂಡು ಮುಂದುವರೆಯಿರಿ. ನಿಮಗೆ ಒಳ್ಳೆಯದಾಗಲಿ.

ನನಗೆ ಹೆರಿಗೆಯಾದ ಒಂದು ವರ್ಷಕ್ಕೆ ಸರಿಯಾಗಿ ಮುಟ್ಟು ಆಗಿದೆ. ಈಗ ಕಳೆದ ತಿಂಗಳು ಮುಟ್ಟು ಆಗಿ, 15 ದಿನಗಳ ನಂತರ ಮತ್ತೆ ರಕ್ತಸ್ರಾವ ಆಗುತ್ತಿದೆ. ಕಾರಣ ತಿಳಿಸಿ?

ಲಕ್ಷ್ಮಿ, ಊರು ತಿಳಿಸಿಲ್ಲ

ಕೆಲವೊಮ್ಮೆ ಹೆರಿಗೆಯಾದ ನಂತರ ತಡವಾಗಿ ಮುಟ್ಟು ಆರಂಭವಾಗಿ ಬೇಗನೆ ಮುಟ್ಟು ಕಾಣಿಸಿಕೊಳ್ಳಬಹುದು. ಅಂಡೋತ್ಪತ್ತಿಯಾಗದೆ ಇರುವ ಋತುಚಕ್ರದಲ್ಲಿ ಈ ರೀತಿಯಾಗಬಹುದು.

ನನಗೆ 2 ವರ್ಷದ ಒಂದು ಮಗುವಿದೆ. ಈಗ ಎರಡನೇ ಮಗು ಬೇಕೆಂದು ಯತ್ನಿಸುತ್ತಿದ್ದೇವೆ. 36 ದಿನವಾದರೂ ಪೀರಿಯಡ್ ಆಗಿಲ್ಲ ಏನು ಮಾಡೋದು ಮೇಡಂ ಹೇಳಿ?

ಹೆಸರು, ಊರು ತಿಳಿಸಿಲ್ಲ

ಮೊದಲನೆಯದಾಗಿ ಈಗ ಗರ್ಭ ಧರಿಸಿದ್ದಿರೋ ಇಲ್ಲವೋ ಎಂದು ಮೂತ್ರ ಪರೀಕ್ಷೆ ಮಾಡಿಕೊಳ್ಳಿ (ಗ್ರಾವಿಂಡೆಕ್ಸ್). ಗರ್ಭ ಧರಿಸಿದ್ದರೆ ಮೂರು ತಿಂಗಳವರೆಗೆ ತಜ್ಞರ ಸಲಹೆಯ ಮೇರೆಗೆ ಫೋಲಿಕ್‌ಆಸಿಡ್ ಮಾತ್ರೆಯನ್ನ ತೆಗೆದುಕೊಳ್ಳಿ. ನಂತರವೂ ನಿಗದಿತ ತಪಾಸಣೆ ಮಾಡಿಕೊಂಡು ಆರೋಗ್ಯವಂತ ಮಗುವನ್ನು ಪಡೆದುಕೊಳ್ಳಿ.

ವಯಸ್ಸು 31. ನನಗೆ ಮತ್ತು ನನ್ನ ಪತಿಗೆ ಜನನಾಂಗದಲ್ಲಿ ಫಂಗಸ್‌ ಸೋಂಕು ಆಗಿದ್ದು ಸಾಕಷ್ಟು ಆಸ್ಪತ್ರೆಗೆ ತೋರಿಸಿದರೂ ವಾಸಿಯಾಗುತ್ತಿಲ್ಲ. ಇದರಿಂದ ಮಗು ಆಗಲು ಏನಾರೂ ಸಮಸ್ಯೆಯಾಗುತ್ತದೆಯೆ? ಇನ್ನೂ ನಮಗೆ ಮಕ್ಕಳಾಗಿಲ್ಲ.

ಶೋಭಾ, ಕೊಪ್ಪಳ

ಫಂಗಸ್‌ ಸೋಂಕು ಡರ್ಮಟೋಫೈಟ್‌ ಎಂಬ ಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ಸೋಂಕಾಗಿದ್ದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದಕ್ಕೆ ನೀವು ಮತ್ತು ನಿಮ್ಮ ಪತಿ ಇಬ್ಬರೂ ಕೂಡಾ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ತೆಗೆದುಕೊಳ್ಳಿ. ಮಗು ಆಗಲು ಫಂಗಸ್ ಸೋಂಕಿನಿಂದ ಏನೂ ಸಮಸ್ಯೆಯಾಗುವುದಿಲ್ಲ. ಚಿಕಿತ್ಸೆ ಶುರು ಮಾಡಿದ ತಕ್ಷಣ ಫಂಗಸ್ ಸೋಂಕು ಸ್ವಲ್ಪ ಗುಣವಾದ ಹಾಗೇ ಅನಿಸುತ್ತದೆ. ಇದರಿಂದ ಹೆಚ್ಚಿನವರು ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ. ಇದರಿಂದ ಪದೇ ಪದೇ ಸೋಂಕಾಗುವುದು, ದೀರ್ಘಾವಧಿಯವರೆಗೂ
ಸೋಂಕು ಗುಣವಾಗದೇ ಇರುವುದು. ಚಿಕಿತ್ಸೆ ತೆಗೆದುಕೊಂಡರೂ ನಿಮಗೆ ಈ ಸೋಂಕು ಕಡಿಮೆ ಆಗದೆ ಇರುವುದಕ್ಕೆ ಇದೇ ಕಾರಣ ಇರಬಹುದು. ಚಿಕಿತ್ಸೆಯಿಂದ ಫಂಗಸ್‌ ಸೂಕ್ಷ್ಮಾಣು ಜೀವಿಯು ನಾಶವಾಗಲು ಕನಿಷ್ಠ ಆರು ವಾರವಾದರೂ ಬೇಕೇ ಬೇಕು ಮತ್ತು ತೊಡೆಸಂದಿಯಲ್ಲಿ ತೇವಾಂಶವು ಇರದ ಹಾಗೇ ನೋಡಿಕೊಳ್ಳಬೇಕು, ತೊಡೆಸಂದಿಯಲ್ಲಿ ಗಾಳಿ ಆಡುವ ಹಾಗೇ ನೋಡಿಕೊಳ್ಳಬೇಕು. ಸೂಕ್ತ ಚಿಕಿತ್ಸೆಯನ್ನು ಸೂಕ್ತ ಅವಧಿಯವರೆಗೆ ತೆಗೆದುಕೊಂಡಾಗ ಮಾತ್ರ ಫಂಗಸ್‌ ಸೋಂಕನ್ನು ಗುಣಪಡಿಸಿಕೊಳ್ಳಬಹುದು.

ನನಗೆ ವಯಸ್ಸು 20. ಇನ್ನೂ ಮದುವೆ ಆಗಿಲ್ಲ. ಸರಿಯಾಗಿ ಮುಟ್ಟು ಆಗುವುದಿಲ್ಲ. ಕಳೆದ ಏಪ್ರಿಲ್ 10ಕ್ಕೆ ಆಗಿದ್ದು ನಂತರ ಆಗೇ ಇಲ್ಲ. ಪ್ರತಿ ಸಲ ಹೀಗೇ ಆಗುತ್ತದೆ. 2 ಬಾರಿ ಆಸ್ಪತ್ರೆಗೆ ತೋರಿಸಿದ್ದೆ. ಆವಾಗ ಸರಿ ಆಗಿತ್ತು. ಈಗ ಮತ್ತದೇ ಸಮಸ್ಯೆ.

ತೃಪ್ತಿ, ಊರು ತಿಳಿಸಿಲ್ಲ

ನಿಮಗೆ ಪಿಸಿಒಡಿ ಸಮಸ್ಯೆ ಇರಬಹುದು ಕಳೆದ ಸಂಚಿಕೆಯಲ್ಲಿ ಅದರ ನಿರ್ವಹಣೆಯ ಬಗ್ಗೆ ತಿಳಿಸಿದ್ದೇವೆ. ಅದನ್ನು ಅನುಸರಿಸಿ.

ವಯಸ್ಸು 32. ನನ್ನ ಮದುವೆಯಾಗಿ 2 ತಿಂಗಳಾಗಿದೆ. ಮದುವೆ ಆದ ನಂತರ ನನಗೆ 18-20 ದಿನಕ್ಕೆ ಮುಟ್ಟು ಆಗುತ್ತಿದೆ ಮತ್ತು ಮುಟ್ಟು ತುಂಬಾ ಕಡಿಮೆ ಆಗುತ್ತಿದೆ. ಗರ್ಭ ಧರಿಸಬೇಕೆಂದು ಬಹಯಕೆಯಿದ್ದು, ಸಂತಾನ ಪ್ರಾಪ್ತಿ ಆಗಬಹುದೇ?

ಪವಿತ್ರ, ಊರು ತಿಳಿಸಿಲ್ಲ

ನೀವು ತಜ್ಞವೈದ್ಯರನ್ನು ಸಂಪರ್ಕಿಸಿ ಸಲಹೆ, ಚಿಕಿತ್ಸೆ ಪಡೆದುಕೊಳ್ಳಿ. ನಿಮಗೆ ಪಿಸಿಒಡಿ ಸಮಸ್ಯೆ ಇರಬಹುದು. ಕಳೆದ ಸಂಚಿಕೆಯಲ್ಲಿ ಜೀವನಶೈಲಿ ಬದಲಾವಣೆ ಹಾಗೂ ಪಿಸಿಒಡಿ ಬಗ್ಗೆ ಬರೆದಿದ್ದು, ಓದಿಕೊಳ್ಳಿ.

ಸ್ಪಂದನ... ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

ಡಾ. ವೀಣಾ ಎಸ್‌. ಭಟ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು