ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲನ ಸೌಖ್ಯಕ್ಕೆ ತೊಡಕು ಸ್ಖಲನ ಸಮಸ್ಯೆ

Last Updated 17 ಮೇ 2019, 19:31 IST
ಅಕ್ಷರ ಗಾತ್ರ

ಮಿಲನಕ್ರಿಯೆಯಲ್ಲಿ ಅನೇಕ ಪುರುಷರನ್ನು ಕಂಗಾಲಾಗಿಸುವುದು ಶೀಘ್ರ ಸ್ಖಲನ ಸಮಸ್ಯೆ. ಈ ಬಗ್ಗೆ ಎಷ್ಟು ಬರೆದರೂ ಸಾಲದು. ಹಲವು ವಿಧಗಳಲ್ಲಿ ಪುರುಷರ ಲೈಂಗಿಕ ಜೀವನವನ್ನು ಕಾಡುವ ಸಮಸ್ಯೆ ಇದು. ಇದರಲ್ಲಿ ಶೀಘ್ರ ಸ್ಖಲನ, ವಿಳಂಬ ಸ್ಖಲನ ಮುಖ್ಯ ಪ್ರಕಾರಗಳು. ಯಾರಲ್ಲಿಯೂ ಹೇಳಿಕೊಳ್ಳಲಾಗದ ಈ ಸಮಸ್ಯೆಗೆ ಪುರುಷರು ಒಳಗೊಳಗೇ ದಿಗಿಲುಗೊಳ್ಳುವುದಿದೆ.

ಹೆಸರೇ ಸೂಚಿಸುವಂತೆ ಶೀಘ್ರ ಸ್ಖಲನವು, ಸ್ಖಲನದಲ್ಲಿನ ತೊಡಕುಗಳನ್ನು ಸೂಚಿಸುತ್ತದೆ. ಇದರಲ್ಲಿ ಮುಖ್ಯವಾಗಿ ಆರು ಪ್ರಕಾರಗಳಿವೆ: ಶೀಘ್ರ ಸ್ಖಲನ, ವಿಳಂಬ ಸ್ಖಲನ, ಸ್ಖಲನವಾಗದೇ ಇರುವುದು, ಹಿಂಚಲನ ಸ್ಖಲನ, ಗ್ರಹಿಸಿದ ಪ್ರಮಾಣದ ವೀರ್ಯ ಹೊರಚೆಲ್ಲದೆ ಇರುವುದು, ದುರ್ಬಲ ಸ್ಖಲನ.

ಶೀಘ್ರ ಸ್ಖಲನ: ಲೈಂಗಿಕಕ್ರಿಯೆಯ ಸಮಯದಲ್ಲಿ ಅತಿ ಬೇಗನೆ ವೀರ್ಯಸ್ಖಲನವಾಗುವುದನ್ನು ‘ಅಕಾಲ ಸ್ಖಲನ’ ಅಥವಾ ‘ಶೀಘ್ರ ಸ್ಖಲನ’ ಎನ್ನಲಾಗುತ್ತದೆ. ಪ್ರತಿ ಮೂರು ಪುರುಷರಲ್ಲಿ, ಒಬ್ಬರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ ಎನ್ನುವ ಅಂದಾಜಿದೆ. ಅವರಲ್ಲಿ ಶೇ 10ರಷ್ಟು ಜನ ಮಾತ್ರ ವೈದ್ಯಕೀಯ ಪರಿಹಾರಕ್ಕೆ ಮುಂದಾಗುತ್ತಾರೆ. ಇದಕ್ಕೆ ದೈಹಿಕ ಮತ್ತು ಮಾನಸಿಕ ಸ್ಥಿತಿ, ಸಂಗಾತಿಯ ನಡುವಿನ ಬಾಂಧವ್ಯ ಮುಖ್ಯ ಕಾರಣ. ಇದರಲ್ಲಿ ಎರಡು ವಿಧ ಪ್ರಾಥಮಿಕ ಶೀಘ್ರ ಸ್ಖಲನ (ಪ್ರೈಮರಿ ಪ್ರಿಮೆಚ್ಯೂರ್ ಎಜಾಕ್ಯುಲೇಷನ್– ಮೊದಲ ಲೈಂಗಿಕ ಅನುಭವದಲ್ಲಿಯೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ). ಆನುಷಂಗಿಕ ಶೀಘ್ರ ಸ್ಖಲನ (ಸೆಕೆಂಡರಿ ಪ್ರಿಮೆಚ್ಯೂರ್ ಎಜಾಕ್ಯುಲೇಷನ್– ಕೆಲಕಾಲ ಸಾಮಾನ್ಯ ಲೈಂಗಿಕ ಜೀವನ ನಡೆಸಿದ ನಂತರ ಕಾಣಿಸಿಕೊಳ್ಳುತ್ತದೆ).

ವಿಳಂಬಿತ ಸ್ಖಲನ: ಸ್ಖಲನವಾಗಲು ಹೆಚ್ಚು ಸಮಯ ಹಿಡಿಯುತ್ತದೆ. ಸಾಕಷ್ಟು ಉದ್ರೇಕ ಮತ್ತು ಪ್ರಚೋದನೆಯ ನಂತರವೂ ಮಿಲನಕ್ರಿಯೆ ಉತ್ತುಂಗಕ್ಕೇರಿದಾಗ ಸ್ಖಲನವಾಗುವುದಿಲ್ಲ. ಶೇ1– 4ರಷ್ಟು ಪುರುಷರು ಈ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ, ಲೈಂಗಿಕ ಸಂಪರ್ಕ ಸಾಧಿಸುವ ವೇಳೆ ಸ್ಖಲನ ಸಾಧ್ಯವಾಗುವುದೇ ಇಲ್ಲ. ಇದರಿಂದ ವ್ಯಕ್ತಿ ಹಾಗೂ ಸಂಗಾತಿ ನಿರಾಶರಾಗುತ್ತಾರೆ. ಆದರೆ ಹಸ್ತಮೈಥುನದ ಸಂದರ್ಭದಲ್ಲಿ ಈ ಸಮಸ್ಯೆ ಇರುವುದಿಲ್ಲ. ಇದನ್ನು ಪ್ರಾಥಮಿಕ ವಿಳಂಬಿತ ಸ್ಖಲನ ಮತ್ತು ಆನುಷಂಗಿಕ ವಿಳಂಬ ಸ್ಖಲನ ಎಂದು ವರ್ಗೀಕರಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಇದು ಸಂಭವಿಸಿದರೆ ಅದನ್ನು ಸಾಮಾನ್ಯ ಎಂತಲೂ, ಕೆಲವು ಸಂಗಾತಿಗಳ ಜೊತೆ ಮಾತ್ರ ಸಂಭವಿಸಿದರೆ ಸಾಂದರ್ಭಿಕ ಎಂತಲೂ ಕರೆಯಲಾಗುವುದು.

ಕಾರಣಗಳು

ಕೆಲವು ದೈಹಿಕ ಮತ್ತು ಮಾನಸಿಕ ಕಾರಣಗಳಿಂದ ಸ್ಖಲನ ಸಮಸ್ಯೆಗಳು ಎದುರಾಗಬಹುದು. ಕೆಲವೊಮ್ಮೆ ಎರಡೂ ಸಮಸ್ಯೆಗಳೂ ಕಾರಣವಾಗಬಹುದು. ವೀರ್ಯ ಸ್ಖಲನದ ಆತಂಕ, ಖಿನ್ನತೆ, ನರವ್ಯಾಧಿ ಮತ್ತು ಔಷಧಿಗಳೂ ಕಾರಣವಾಗಬಹುದು.

ಜನನ ದೋಷಗಳು

ಕೆಲವು ಔಷಧಿಗಳ ಅಡ್ಡ ಪರಿಣಾಮ (ವಿಶೇಷವಾಗಿ ಖಿನ್ನತೆ, ಆತಂಕಕ್ಕೆ ನೀಡಲಾಗುವ ಶಮನಕಾರಿಗಳು, ರಕ್ತದೊತ್ತಡ ಔಷಧಿಗಳು)

ನರ ಹಾನಿ

* ಹೈಪೋಗೊನಾಡಿಸಮ್(ಕಡಿಮೆ ಟೆಸ್ಟೋಸ್ಟೆರಾನ್‌ ನಂತಹ ಹಾರ್ಮೋನು ನ್ಯೂನ್ಯತೆಗಳು)

* ಪೆಲ್ವಿಕ್ ಗಾಯ

* ಮಿತಿಮೀರಿದ ಮದ್ಯಪಾನ

* ಮಾನಸಿಕ

ಸಮಸ್ಯೆಗಳು

* ಖಿನ್ನತೆ, ಆತಂಕ, ಒತ್ತಡ

* ಅನುಬಂಧದ ಸಮಸ್ಯೆಗಳು (ಸಂಗಾತಿ ನಡುವೆ ಆಸಕ್ತಿ, ಒಲವು ಇಲ್ಲದೇ ಇರುವುದು)

* ಸಂಪರ್ಕದ ಆತಂಕ ಸಂಭೋಗವನ್ನು ನಿಷೇಧಿಸುವಂತೆ ಪರಿಗಣಿಸುವ ಸಾಂಸ್ಕೃತಿಕ ಅಥವಾ ಧಾರ್ಮಿಕ ನಂಬಿಕೆಗಳು

ಉತ್ತೇಜನದ ವಿಧಾನ ಅಥವಾ ತೀವ್ರತೆ ಬದಲಾದಾಗಲೂ ಸಹ ಕೆಲವರಿಗೆ ಸ್ಖಲನ ಸಮಸ್ಯೆ ಉಂಟಾಗಬಹುದು. ಉದಾಹರಣೆಗೆ, ಒಂದು ನಿರ್ದಿಷ್ಟ ರೀತಿಯಲ್ಲಿ ಹಸ್ತಮೈಥುನಕ್ಕೆ ಹೊಂದಿಕೊಂಡ ವ್ಯಕ್ತಿ ಸಂಭೋಗದಿಂದ ಅದೇ ರೀತಿಯ ಪ್ರಚೋದನೆಯನ್ನು ಪಡೆಯದೇ ಹೋಗಬಹುದು.

ಚಿಕಿತ್ಸೆ

ಯಾವುದೇ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವ ಮೊದಲು ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚಿ ಮೂಲಕಾರಣವನ್ನು ಕಂಡುಹಿಡಿಯುವುದು ಮುಖ್ಯ. ಲೈಂಗಿಕ ಸಮಸ್ಯೆಗಳಲ್ಲಿ ಸಹ ಕಾರಣಗಳನ್ನು ಮೊದಲು ಪತ್ತೆ ಹಚ್ಚಬೇಕಾಗುತ್ತದೆ.

ಸಮಸ್ಯೆ ಮನಸ್ಸಿನಲ್ಲಿದ್ದಾಗ ಉದ್ರೇಕದ ಔಷಧಗಳಿಂದ ಪರಿಹಾರ ದೊರಕದು. ಆಪ್ತಸಲಹೆ, ಔಷಧಿಗಳನ್ನು ಬದಲಾಯಿಸುವುದು, ಹಸ್ತಮೈಥುನದ ಹವ್ಯಾಸವನ್ನು ಬದಲಿಸುವುದು, ಮದ್ಯಪಾನದಿಂದ ದೂರವಿರುವುದು ಹೀಗೆ ಸಂಬಂಧಿಸಿದ ಪರಿಹಾರಗಳತ್ತ ಗಮನ ಹರಿಸಬೇಕಾಗುತ್ತದೆ. ತಜ್ಞವೈದ್ಯರು ಸೂಚಿಸುವ ಮಾತ್ರೆ, ಔಷಧಗಳ ಸಹಾಯವನ್ನೂ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT