ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಪೀಡಿತರಿಗೆ ಕೇಶದಾನ: ಕ್ಯಾನ್ಸರ್‌ ರೋಗಿಗಳಿಗೆ ಉಚಿತ ವಿಗ್‌

ಮೈಸೂರು ನಗರದ ಲೇಡಿಸ್‌ ಸರ್ಕಲ್‌ ಇಂಡಿಯಾ ಸಂಸ್ಥೆಯಿಂದ ‘ಕೂದಲು ದಾನ‘ ಅಭಿಯಾನ
Last Updated 5 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕ್ಯಾನ್ಸರ್‌ ಗುಣಪಡಿಸಲು ಅಗತ್ಯವಿರುವ ಚಿಕಿತ್ಸೆಯಲ್ಲಿ ಕಿಮೊಥೆರಪಿಯೂ ಒಂದು. ಇದು ಉತ್ತಮ ಪರಿಣಾಮ ಬೀರುತ್ತದೆಯಾದರೂ ದೇಹದ ಮೇಲೆ ಕೆಲವು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಅದರಲ್ಲಿ ತಲೆ ಕೂದಲು ಉದುರಿ ಬೋಳಾಗುವುದೂ ಒಂದು.

ಕ್ಯಾನ್ಸರ್‌ ಪೀಡಿತರಿಗೆ ಕಿಮೊಥೆರಪಿಯ ನೋವು ಒಂದು ಕಡೆಯಾದರೆ, ಕೂದಲು ಉದುರಿ, ಆತ್ಮವಿಶ್ವಾಸ ಕಳೆದುಕೊಳ್ಳುವ ಭಯವೂ ಇರುತ್ತದೆ. ಅದರಲ್ಲೂ ಮಹಿಳೆಯರು ಈ ಸಮಸ್ಯೆಯಿಂದ ಖಿನ್ನರಾಗುತ್ತಾರೆ.

ಕ್ಯಾನ್ಸರ್‌ ಪೀಡಿತರ ಮಾನಸಿಕ ವೇದನೆಯನ್ನು ಅರಿತ ಮೈಸೂರು ನಗರದ ಲೇಡಿಸ್‌ ಸರ್ಕಲ್‌ ಇಂಡಿಯಾ ಸಂಸ್ಥೆಯು ‘ಕೂದಲು ದಾನ‘ ಅಭಿಯಾನ ನಡೆಸುತ್ತಾ, ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ವಿಗ್‌ ತಯಾರಿಸಿ ಕೊಡಲು ಮುಂದಾಗಿದೆ.

26 ಇಂಚಿನಷ್ಟು ಉದ್ದವಿರುವ ತನ್ನ ಕೂದಲನ್ನುದಾನ ಮಾಡಿದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಚರಿತಾ.
26 ಇಂಚಿನಷ್ಟು ಉದ್ದವಿರುವ ತನ್ನ ಕೂದಲನ್ನು
ದಾನ ಮಾಡಿದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಚರಿತಾ.

2014ರಿಂದ ಈವರೆಗೆ ಸುಮಾರು 1000ಕ್ಕೂ ಹೆಚ್ಚು ಕ್ಯಾನ್ಸರ್‌ಪೀಡಿತರಿಗೆ ವಿಗ್‌ಗಳನ್ನು ಉಚಿತವಾಗಿ ನೀಡಿದೆ. ಮೈಸೂರಿನ ‘ಕಿಮಾಯಾ‘ಸಲೂನ್‌ನಲ್ಲಿ ಸಮರ್ಥಿ ಮಂಜೋ ಹಾಗೂ ಸುಚಿತ್‌ ಸಂಜಯ್‌ ಅವರ ನೆರವಿನೊಂದಿಗೆ ದಾನಿಗಳಿಂದ ಕೂದಲು ಪಡೆಯಲಾಗುತ್ತದೆ.

ಈ ಕೂದಲನ್ನು ದೆಹಲಿಯಲ್ಲಿರುವ ಹೇರ್ ಫಾರ್‌ ಹೋಪ್‌ ಹಾಗೂ ಚೆನ್ನೈನಲ್ಲಿರುವ ಚೆರಿನ್‌ ಫೌಂಡೇಶನ್‌ ಸಂಸ್ಥೆಗೆ ವಿಗ್‌ ತಯಾರಿಸಲು ನೀಡಲಾಗುತ್ತದೆ. ಅಲ್ಲಿಂದ ಬಂದ ವಿಗ್‌ಗಳನ್ನು ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತದೆ.

ರಾಸಾಯನಿಕ ಮಿಶ್ರಿತ ಬಣ್ಣ ಹಚ್ಚದ ಸಹಜವಾಗಿರುವ ಕೂದಲನ್ನು ದಾನಿಗಳಿಂದ ಪ‍ಡೆಯಲಾಗುತ್ತದೆ. 10 ಇಂಚಿಗಿಂತ ಉದ್ದವಾದ ಕೂದಲನ್ನು ಮಾತ್ರ ಸ್ವೀಕರಿಸಲಾಗುತ್ತದೆ. ದಾನಿಗಳಿಂದ ಉಚಿತವಾಗಿ ಕೂದಲು ಪಡೆದ ನಂತರ, ದಾನಿಗಳಿಗೋಸ್ಕರ ಅವರಿಗೆ ಇಷ್ಟವಾದ ಕೇಶವಿನ್ಯಾಸವನ್ನು ಉಚಿತವಾಗಿ ಮಾಡಲಾಗುತ್ತದೆ ಎನ್ನುತ್ತಾರೆ ‘ಕಿಮಾಯಾ‘ ಸಲೂನಿನ ಸಮರ್ಥಿ ಮಂಜೊ.

ಹೆಚ್ಚಾಗಿ ಮಹಿಳೆಯರು, ವಿದ್ಯಾರ್ಥಿನಿಯರು, ಯುವಕರು ಕೇಶದಾನಕ್ಕೆ ಮುಂದಾಗುತ್ತಿದ್ದಾರೆ. ‘ಆರಂಭದಲ್ಲಿ ಹೆಣ್ಣು ಮಕ್ಕಳು ತಲೆಗೂದಲು ಕತ್ತರಿಸಬಾರದು ಎಂಬ ಮೂಢನಂಬಿಕೆಯಿಂದ ಕೆಲವರು ಕೂದಲು ದಾನ ಮಾಡಲು ಹಿಂದೇಟು ಹಾಕುತ್ತಿದ್ದರು. ಈಗೀಗ ಅಂಥವೆಲ್ಲ ಸಡಿಲಗೊಳ್ಳುತ್ತಿವೆ. ಕೂದಲು ದಾನ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗೆ ಎಲ್ಲರ ಪ್ರಯತ್ನದಿಂದ ಕ್ಯಾನ್ಸರ್‌ ರೋಗಿಗಳ ಮುಖದಲ್ಲಿ ನಗು ಅರಳುತ್ತಿದೆ‘ ಎನ್ನುತ್ತಾರೆ ಸಂಸ್ಥೆಯ ಅಧ್ಯಕ್ಷೆ ಸ್ತ್ರೀರೋಗ ತಜ್ಞೆ ಡಾ. ಪ್ರಿಯಾಂಕ ರವಿಕುಮಾರ್.

‘ದೇಗುಲಗಳಿಗೆ ಹೋಗಿ ಮುಡಿ ಕೊಡುತ್ತೇವೆ. ಅದರ ಬದಲಿಗೆ ಇಂಥ ಉತ್ತಮ ಕೆಲಸ ಮಾಡುತ್ತಿರುವ ಸಂಸ್ಥೆಗೆ ಕೇಶ ದಾನ ಮಾಡಿದರೆ ಕ್ಯಾನ್ಸರ್‌ಪೀಡಿತರಿಗೆ ಅನುಕೂಲವಾಗುತ್ತದೆ‘ ಎಂದು ಕೇಶ ದಾನ ಮಾಡಿದ ಚಾಂದನಿ ನಗುಮೊಗದಿಂದಲೇ ಹೇಳುತ್ತಾರೆ.

ಫ್ಯಾಷನ್‌ಗಾಗಿ ಬಿಟ್ಟಿರುವ ತಲೆಕೂದಲನ್ನು ದಾನ ಮಾಡುವ ಮೂಲಕ ರೋಗಿಗಳ ಮುಖದಲ್ಲಿ ಹೂನಗೆಯನ್ನು ಅರಳಿಸಬಹುದು. ಕೇಶ ದಾನ ಮಾಡಲು ಬಯಸುವವರು ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಲೇಡಿಸ್‌ ಸರ್ಕಲ್‌ ಇಂಡಿಯಾ ಸಂಸ್ಥೆಯನ್ನು ಸಂಪರ್ಕಿಸಬಹುದು.ದಾನಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ.

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಲೇಡಿಸ್‌ ಸರ್ಕಲ್‌ ಇಂಡಿಯಾ ಸಂಸ್ಥೆಯನ್ನು ಸಂಪರ್ಕಿಸಬಹುದು. ದಾನಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.

*ಚಿತ್ರಗಳು ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT