ಹೃದಯಾಘಾತಕ್ಕೆ ಅತಿ ಮುಖ್ಯ ಕಾರಣ ‘ಕರೋನರಿ ಅಥೆರೋಸ್ಲ್ಕೀರೋಸಿಸ್’. ಇದನ್ನು ಗುರುತಿಸಲು ವೈದ್ಯರು ಮೊದಲು ಕೆಲವು ಆರೋಗ್ಯಸಂಬಂಧಿಯಾದ ಪ್ರಶ್ನೆಗಳನ್ನು ಕೇಳುತ್ತಾರೆ. ನಂತರ ವ್ಯಕ್ತಿಯ ತೂಕ, ಎತ್ತರ, ನಾಡಿ ಪರೀಕ್ಷೆ, ರಕ್ತದೊತ್ತಡದ ಮಾಪನ ಮತ್ತು ದೈಹಿಕ ಲಕ್ಷಣಗಳ ಭೌತಿಕ ಪರೀಕ್ಷೆಯನ್ನು ಮಾಡುತ್ತಾರೆ. ಆಯಾ ವ್ಯಕ್ತಿಯ ಹೃದಯಾಘಾತದ ಸಾಧ್ಯತೆಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆರಂಭಿಕ ಹಂತದ ಪರೀಕ್ಷೆಗಳನ್ನು ಸೂಚಿಸುತ್ತಾರೆ. ಇವುಗಳಲ್ಲಿ ಮುಖ್ಯವಾದುವು ಇಸಿಜಿ, ಎದೆಯ ಕ್ಷ-ಕಿರಣ, ಇಕೋಕಾರ್ಡಿಯೋಗ್ರಾಫಿ, ಮತ್ತು ರಕ್ತಪರೀಕ್ಷೆಗಳು.

ಹೃದಯದ ವಿದ್ಯುತ್ ಸಂಕೇತಗಳನ್ನು ನಕ್ಷೆಯ ರೂಪದಲ್ಲಿ ಮೂಡಿಸುವ ‘ಇಸಿಜಿ’ ಪರೀಕ್ಷೆಯಿಂದ ಹೃದಯದ ಲಯ, ಹೃದಯದ ಸ್ನಾಯುಗಳ ಗಾತ್ರ, ಈಗ ಆಗುತ್ತಿರಬಹುದಾದ ಮತ್ತು ಈ ಹಿಂದೆ ಆಗಿರಬಹುದಾದ ಹೃದಯಘಾತದ ಚಿಹ್ನೆಗಳನ್ನು ಪತ್ತೆಹಚ್ಚಬಹುದು. ಎದೆಯ ಕ್ಷ-ಕಿರಣದ ಪರೀಕ್ಷೆಯಿಂದ ಹೃದಯದ ಗಾತ್ರ ಮತ್ತು ಶ್ವಾಸಕೋಶಗಳ ಆರೋಗ್ಯ ತಿಳಿಯುತ್ತದೆ. ಇಕೋಕಾರ್ಡಿಯೋಗ್ರಫಿ ಹೃದಯದ ಬಗ್ಗೆ ಅತಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಹೆಚ್ಚು ಮಾಹಿತಿ ನೀಡಬಲ್ಲ ಪರೀಕ್ಷೆ. ಹೃದಯದ ಕಾರ್ಯಕ್ಷಮತೆ, ಕವಾಟಗಳ ಚಲನೆ, ಹೃದಯಾಘಾತದಲ್ಲಿ ಉಂಟಾಗುವ ಸ್ನಾಯುಗಳ ದೌರ್ಬಲ್ಯ, ಹಾಗೂ ಜನ್ಮಜಾತ ಹೃದ್ರೋಗಗಳನ್ನು ಇಕೋಕಾರ್ಡಿಯೋಗ್ರಫಿ ಗುರುತಿಸುತ್ತದೆ. ಈ ಅಂಶಗಳ ಬಗ್ಗೆ ಹೆಚ್ಚಿನ ಮತ್ತು ನಿಖರ ಮಾಹಿತಿಯನ್ನು ಹೃದಯದ ಎಂಆರ್ಐ ನೀಡಬಲ್ಲದು. ರಕ್ತದಲ್ಲಿನ ಅಧಿಕ ಸಕ್ಕರೆಯ ಅಂಶ ಮತ್ತು ಕೊಬ್ಬಿನ ಅಂಶಗಳು ಹೃದಯಘಾತ ಉಂಟಾಗಬಹುದಾದ ಸಾಧ್ಯತೆಗಳನ್ನು ಸೂಚಿಸುತ್ತವೆ. ಹೃದಯಘಾತವಾದ 10-14 ದಿನಗಳವರೆಗೆ ರಕ್ತದಲ್ಲಿ ‘ಟ್ರೋಪೋನಿನ್’ ಎಂಬ ರಾಸಾಯನಿಕ ಕಂಡುಬರುತ್ತದೆ.

ಕರೋನರಿ ಅಥೆರೋಸ್ಲ್ಕೀರೋಸಿಸ್ ಕಾರಣದಿಂದ ಹೃದಯದ ರಕ್ತನಾಳಗಳ ಒಳಭಾಗದಲ್ಲಿ ಕೊಬ್ಬಿನಂಶದ ಜೊತೆಗೆ ಕ್ಯಾಲ್ಸಿಯಂ ಕೂಡ ಇರುತ್ತದೆ. ಸಿಟಿ ಸ್ಕ್ಯಾನ್ ಮೂಲಕ ಕೊರೊನರಿ ಕ್ಯಾಲ್ಸಿಯಂ ಸ್ಕೋರ್ ಅನ್ನು ಕಂಡುಹಿಡಿಯಬಹುದು. ಸ್ಕೋರ್ ಸೊನ್ನೆ ಇದ್ದರೆ ರಕ್ತನಾಳದಲ್ಲಿ ಕೊಬ್ಬಿನಂಶ ಶೇಖರವಾಗಿರುವ ಸಾಧ್ಯತೆ ಅತಿ ಕಡಿಮೆ. ಹೃದಯದ ರಕ್ತನಾಳಗಳ ಆಂತರಿಕ ವ್ಯಾಸ ಎಷ್ಟು ಕಿರಿದಾಗಿದೆ ಎನ್ನುವ ಪ್ರಮಾಣಕ್ಕೆ ಅನುಗುಣವಾಗಿ ವೈದ್ಯರು ಮುಂದಿನ ಚಿಕಿತ್ಸಾವಿಧಾನವನ್ನು ನಿರ್ಧರಿಸುತ್ತಾರೆ. ಆಂತರಿಕ ವ್ಯಾಸದ ಕಿರಿದಾಗುವಿಕೆ ಶೇ 70ಕ್ಕಿಂತ ಕಡಿಮೆ ಇರುವವರೆಗೂ ಕರೋನರಿ ರಕ್ತನಾಳಗಳಲ್ಲಿ ಹರಿವಿನ ಕೊರತೆ ಬಹುತೇಕ ಇರುವುದಿಲ್ಲ. ಇದು ಶೇ 70ನ್ನು ಮೀರಿದರೆ, ವಿಶ್ರಾಂತಸ್ಥಿತಿಯಲ್ಲಿ ಸಮಸ್ಯೆ ಇಲ್ಲದಿದ್ದರೂ, ಒತ್ತಡದ ಪರಿಸ್ಥಿತಿಯಲ್ಲಿ ಕರೋನರಿ ರಕ್ತದ ಹರಿವಿನ ಕೊರತೆ ಉಂಟಾಗುತ್ತದೆ. ಟ್ರೆಡ್ಮಿಲ್ ಯಂತ್ರದ ಮೇಲೆ ವ್ಯಕ್ತಿಯನ್ನು ನಡೆಸಿ, ಸ್ಥಿರವಾಗಿರುವ ಬೈಸಿಕಲ್ ತುಳಿಸಿ, ಅಥವಾ ಹೃದಯದ ಬಡಿತವನ್ನು ಹೆಚ್ಚಿಸುವ ಔಷಧಗಳನ್ನು ನೀಡಿ ಒತ್ತಡದ ಪರಿಸ್ಥಿತಿಯನ್ನು ಕೃತಕವಾಗಿ ಸೃಷ್ಟಿಸಬಹುದು. ತಜ್ಞರ ಸುಪರ್ದಿಯಲ್ಲಿ ನಡೆಯುವ ಇಂಥ ಪರೀಕ್ಷೆಗಳ ವೇಳೆ ಜೊತೆಜೊತೆಗೆ ಇಸಿಜಿ, ಇಕೋಕಾರ್ಡಿಯೋಗ್ರಾಫಿ, ಎಂಆರ್ಐ, ನ್ಯೂಕ್ಲಿಯರ್ ಸ್ಕ್ಯಾನ್ ಮೊದಲಾದುವುಗಳನ್ನು ಬಳಸಿ, ಒತ್ತಡದ ಸಮಯದಲ್ಲಿ ಹೃದಯಕ್ಕೆ ರಕ್ತದ ಕೊರತೆ ಆಗುತ್ತಿದೆಯೇ ಎನ್ನುವುದನ್ನು ಬಹುತೇಕ ಖಚಿತವಾಗಿ ತಿಳಿಯಬಹುದು.

ಕರೋನರಿ ರಕ್ತನಾಳಗಳ ಆಂತರಿಕ ವ್ಯಾಸದ ಕಿರಿದಾಗುವಿಕೆ ಶೇ. 85-90ನ್ನು ದಾಟಿದರೆ ವಿಶ್ರಾಂತಿಯ ಸ್ಥಿತಿಯಲ್ಲಿಯೂ ರಕ್ತದ ಹರಿವಿನ ಕೊರತೆಯಾಗಿ, ಹೃದಯಾಘಾತ ಉಂಟಾಗಬಹುದು. ಪರೀಕ್ಷೆಗಳ ಮೂಲಕ ಹೃದಯಕ್ಕೆ ರಕ್ತದ ಹರಿವಿನ ಕೊರತೆ ಇರುವುದು ಖಾತ್ರಿಯಾದಲ್ಲಿ, ಮೂರು ಕರೊನರಿ ರಕ್ತನಾಳಗಳ ಪೈಕಿ ಯಾವುದರಲ್ಲಿ, ಯಾವ ಮಟ್ಟದಲ್ಲಿ, ರಕ್ತನಾಳಗಳ ಯಾವ ನಿಖರವಾದ ಸ್ಥಳದಲ್ಲಿ, ಶೇಕಡಾವಾರು ಎಷ್ಟು ಸಮಸ್ಯೆ ಇದೆ ಎಂಬುದನ್ನು ತಿಳಿಯಲು, ವಿಶೇಷವಾದ ಕ್ಷ-ಕಿರಣ ಸಜ್ಜಿತ ಥಿಯೇಟರ್ನಲ್ಲಿ ‘ಆ್ಯಂಜಿಯೋಗ್ರಾಮ್’ ಪರೀಕ್ಷೆಯನ್ನು ಮಾಡಲಾಗುತ್ತದೆ. ಮಣಿಕಟ್ಟು ಅಥವಾ ತೊಡೆಯ ಅಪಧಮನಿಯ ಒಳಗೆ ವಿಶೇಷವಾಗಿ ನಿರ್ಮಿಸಲಾದ ಸೂಕ್ಷ್ಮ ನಳಿಕೆಗಳನ್ನು ಹಾಯಿಸಿ, ಅವನ್ನು ಧಮನಿಯ ಹಾದಿಯಲ್ಲಿ ಮುನ್ನಡೆಸುತ್ತಾ ಹೃದಯದತ್ತ ಸಾಗಿ, ಕರೋನರಿ ರಕ್ತನಾಳದ ಮೂಲದಲ್ಲಿ ಇರಿಸಿ, ವಿಶಿಷ್ಟ ಅಪಾರದರ್ಶಕ ರಾಸಾಯನಿಕವನ್ನು ಕರೋನರಿ ರಕ್ತನಾಳಕ್ಕೆ ಹರಿಸಲಾಗುತ್ತದೆ. ರಕ್ತ ಹರಿಯುವಿಕೆಯ ಕ್ಷಕಿರಣದ ಚಲನಚಿತ್ರವನ್ನು ವಿವಿಧ ಕೋನಗಳಲ್ಲಿ ಸೆರೆ ಹಿಡಿದು ವಿಶ್ಲೇಷಿಸಲಾಗುತ್ತದೆ. ರಕ್ತದೊತ್ತಡ, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ, ಹೃದಯದ ಕೋಣೆಗಳಲ್ಲಿನ ಒತ್ತಡಗಳನ್ನು ದಾಖಲಿಸಲಾಗುತ್ತದೆ. ಆ್ಯಂಜಿಯೋಗ್ರಾಮ್ ವೇಳೆ ಅಥೆರೋಸ್ಲ್ಕೀರೋಸಿಸ್ಗೆ ಸಂಬಂಧಿಸಿದ ಕತ್ತಿನ ಮತ್ತು ಮೂತ್ರಪಿಂಡಗಳ ರಕ್ತನಾಳಗಳ ಪರೀಕ್ಷೆಯನ್ನೂ ಮಾಡಬಹುದು. ಪರೀಕ್ಷೆಯ ನಂತರ ನಾಲ್ಕರಿಂದ ಆರು ತಾಸು ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ತಂಗಬೇಕು. ಆಂಜಿಯೋಗ್ರಾಮ್ ಬಹುತೇಕ ಸುರಕ್ಷಿತ ಪರೀಕ್ಷೆಯಾದರೂ, ಅಪರೂಪವಾಗಿ ರಕ್ತಸ್ರಾವ, ನೋವು, ಅಲರ್ಜಿ, ಮೂತ್ರಪಿಂಡದ ತಾತ್ಕಾಲಿಕ ದೋಷಗಳು ಕಂಡು ಬರಬಹುದು.

‘ಸಿಟಿ ಕರೋನರಿ ಆ್ಯಂಜಿಯೋಗ್ರಾಮ್’ನಲ್ಲಿ ಕೂಡ ಮಾಹಿತಿ ಲಭಿಸುತ್ತದಾದರೂ ನಿಖರತೆಯ ಪ್ರಮಾಣ ಕಡಿಮೆ. ಆದರೆ ಇದಕ್ಕಾಗಿ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯವಿಲ್ಲ; ಪರೀಕ್ಷೆಯ ನಂತರ ತಂಗಬೇಕಿಲ್ಲ. ಕರೋನರಿ ಅಥೆರೋಸ್ಲ್ಕೀರೋಸಿಸ್ ಸಾಧ್ಯತೆ ಕಡಿಮೆ ಇರುವವರಿಗೆ ಸಿಟಿ ಕೊರೋನರಿ ಆ್ಯಂಜಿಯೋಗ್ರಾಮ್ ಉಪಯುಕ್ತವಾದರೂ, ಇದರ ಮೂಲಕ ಮುಂದಿನ ಚಿಕಿತ್ಸೆ ಸಾಧ್ಯವಿಲ್ಲ; ಅದಕ್ಕಾಗಿ ಸಾಂಪ್ರದಾಯಿಕ ಆ್ಯಂಜಿಯೋಗ್ರಾಮನ್ನು ಪುನಃ ಮಾಡಬೇಕಾಗುತ್ತದೆ.

(ಮುಂದಿನ ಭಾಗ: ‘ಹೃದಯಾಘಾತಕ್ಕೆ ವಿವಿಧ ಚಿಕಿತ್ಸೆಗಳು’)
.ಯುವಜನರಿಗೂ ಹೃದ್ರೋಗ: ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.