ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯ ರಕ್ಷಣೆ ಹೇಗೆ?

Last Updated 4 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮಾನಸಿಕ ತಳಮಳಗಳು ಉಂಟಾದಾಗ ಮೆದುಳು ಅದನ್ನು ತನ್ನದೇ ರೀತಿಯಲ್ಲಿ ಅರ್ಥೈಸಿಕೊಂಡು ದೇಹಕ್ಕೆ ಸೂಚನೆಗಳನ್ನು ಕಳುಹಿಸುತ್ತದೆ. ಹೀಗೆ ಅರ್ಥೈಸಿಕೊಳ್ಳುವ ಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಮೆದುಳಿನಿಂದ ಬಂದ ಸೂಚನೆಗಳ ಆಧಾರದ ಮೇಲೆ ದೇಹದಲ್ಲಿ ವಿಧವಿಧದ ರಾಸಾಯನಿಕಗಳ ಸೃಜನೆಯಾಗಿ ದೇಹ ಸೂಕ್ತ ಪ್ರತಿಕ್ರಿಯಿಸುತ್ತದೆ. ಇದನ್ನೇ ಕಾಯಿಲೆಯ ಲಕ್ಷಣಗಳೆಂದು ಹೇಳಲಾಗುತ್ತದೆ. ಇಂತಹ ಪ್ರತಿಕ್ರಿಯೆಗಳ ಹಿಂದಿರುವ ಮನಸ್ಸಿನ ಪ್ರಚೋದನೆಗಳನ್ನು ಅರ್ಥಮಾಡಿಕೊಳ್ಳದೆ ಔಷಧಗಳ ಹೆಸರಿನಲ್ಲಿ ದೇಹಕ್ಕೆ ಹೆಚ್ಚುಹೆಚ್ಚು ರಾಸಾಯನಿಕಗಳನ್ನು ತುಂಬಿದರೆ ನಮ್ಮ ದೇಹ ಮತ್ತು ಮೆದುಳಿನ ನಡುವಿನ ಸಮತೋಲನ ವ್ಯವಸ್ಥೆ ಏರುಪೇರಾಗುತ್ತದೆ.

ಉದಾಹರಣೆಗೆ ಭಯ ಅಥವಾ ಆತಂಕಕ್ಕೆ ಒಳಗಾದ ಮೆದುಳು ಅದನ್ನು ಶತ್ರುವಿನ ಆಕ್ರಮಣದ ರೀತಿಯಲ್ಲಿ ಪರಿಗಣಿಸಿ ಅಪಾಯಕ್ಕೆ ಸಿದ್ಧವಾಗಲು ದೇಹಕ್ಕೆ ಸೂಚನೆ ನೀಡುತ್ತದೆ. ಇಂತಹ ಸಮಯದಲ್ಲಿ ನಿದ್ದೆ ಮಾಡುವುದು ಇನ್ನೂ ಹೆಚ್ಚಿನ ಅಪಾಯವನ್ನು ಆಹ್ವಾನಿಸಿದಂತೆ. ಅದಕ್ಕಾಗಿ ಅಡ್ರೆನಲಿನ್, ಕಾರ್ಟಿಸೋಲ್ ಮುಂತಾದ ಹಾರ್ಮೋನ್‍ಗಳ ಮೂಲಕ ದೇಹವನ್ನು ಎಚ್ಚರದಲ್ಲಿಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಸಹಜವಾಗಿ ನಿದ್ದೆ ಬರುವುದಿಲ್ಲ. ಆದರೆ ಕೇವಲ ನಿದ್ದೆಗಾಗಿ ಮಾತ್ರೆಗಳನ್ನು ಸೇವಿಸಿದಾಗ ಮೆದುಳಿನ ಸೂಚನೆಗೆ ವಿರುದ್ಧವಾಗಿ ಅದು ಕೆಲಸ ಮಾಡುತ್ತದೆ. ರಾಸಾಯನಿಕಗಳ ಪ್ರಭಾವದಿಂದ ತಕ್ಷಣ ನಿದ್ದೆ ಬರಬಹುದಾದರೂ ನಿದ್ದೆಮಾತ್ರೆಗಳು ದೇಹದ ಸಮತೋಲನವನ್ನು ಅಸ್ಥಿರಗೊಳಿಸುತ್ತವೆ.

ನಮಗೆಲ್ಲಾ ಬಾಲ್ಯದಿಂದ ಮೆದುಳಿನ ಸೂಚನೆಗಳನ್ನು ಕಡೆಗಣಿಸಿ ದೈಹಿಕ ಆರೋಗ್ಯಕ್ಕೆ ಮಾತ್ರ ಗಮನ ಹರಿಸುವಂತೆ ತರಬೇತಿ ನೀಡುವುದು ಸಾಮಾನ್ಯ. ಇದಕ್ಕೆ ಹಲವಾರು ಕಾರಣಗಳಿರಬಹುದು. ದೈಹಿಕ ಅನಾರೋಗ್ಯ ತಕ್ಷಣ ಅನುಭವಕ್ಕೆ ಬರುತ್ತದೆ. ತಕ್ಷಣ ಅದನ್ನು ಸರಿಪಡಿಸದಿದ್ದರೆ ಜೀವಕ್ಕೆ ಅಪಾಯವಾಗಬಹುದು ಎನ್ನುವ ನಂಬಿಕೆಯನ್ನು ಬಿತ್ತಲಾಗಿದೆ. ಇದು ಹೆಚ್ಚಿನ ಸಂದರ್ಭಗಳಲ್ಲಿ ಸತ್ಯವಲ್ಲ. ನಮ್ಮ ದೇಹವನ್ನು ಪ್ರಕೃತಿ ಸ್ಥಾಪಿಸಿರುವ ಅದ್ಭುತ ರಕ್ಷಣೆ ಮತ್ತು ಸಮತೋಲನದ ವ್ಯವಸ್ಥೆ ಕಾಪಾಡುತ್ತದೆ. ಆದರೆ ಅದು ಕಾರ್ಯಪ್ರವೃತ್ತವಾಗುವುದಕ್ಕೆ ಕೆಲವೊಮ್ಮೆ ಸಮಯದ ಅಗತ್ಯವಿರುತ್ತದೆ. ಅಲ್ಲಿಯವರೆಗೆ ಕಾಯುವ ತಾಳ್ಮೆಯನ್ನು ನಾವು ಇಟ್ಟುಕೊಂಡಿರುವುದಿಲ್ಲ. ವಿಜ್ಞಾನ ಬೆಳೆದಂತೆ ದೈಹಿಕ ಕಾಯಿಲೆಗಳನ್ನು ಹೆಚ್ಚು ನಿಖರವಾಗಿ ಗುರುತಿಸುವುದು ಸಾಧ್ಯವಾಗುತ್ತಿದೆ. ಕಾಯಿಲೆಯ ಬೇರುಗಳನ್ನು ಕೀಳಲಾಗದಿದ್ದರೂ ಅದರ ಲಕ್ಷಣಗಳನ್ನು ಹಿಮ್ಮೆಟ್ಟಿಸುವ ರಾಸಾಯನಿಕಗಳು ಔಷಧಗಳ ಹೆಸರಿನಲ್ಲಿ ನಮ್ಮ ಮನೆಮನಗಳನ್ನು ಆವರಿಸಿಕೊಂಡಿವೆ.

ಮಾನಸಿಕ ಪ್ರಭಾವದ ಕಡೆಗಣನೆ

ಈ ಎಲ್ಲಾ ಗೊಂದಲಗಳ ನಡುವೆ ನಮ್ಮ ದೇಹ ತೋರಿಸುವ ಅನಾರೋಗ್ಯದ ಲಕ್ಷಣಗಳ ಹಿಂದಿರುವ ಮನಸ್ಸಿನ ಪ್ರಭಾವವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಜೊತೆಗೆ ಮಾನಸಿಕ ತಳಮಳಗಳನ್ನೂ ದೈಹಿಕ ಕಾಯಿಲೆಗಳಂತೆಯೇ ವರ್ಗೀಕರಿಸಿ ಅಪಾಯಕಾರಿಯಾದ ರಾಸಾಯನಿಕಗಳ ಮೂಲಕ ಅವುಗಳನ್ನು ಹಿಡಿತದಲ್ಲಿಡಬಹುದೆಂಬ ಭ್ರಮೆಯನ್ನು ಬಿತ್ತಲಾಗುತ್ತಿದೆ.

ಇಷ್ಟೆಲ್ಲಾ ಆದ ಮೇಲೂ ನಾವು ತೆಗೆದುಕೊಳ್ಳುವ ಔಷಧಗಳ ಹೆಸರಿನ ರಾಸಾಯನಿಕಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದು ಚರ್ಚಾಸ್ಪದವಾಗಿಯೇ ಉಳಿದಿದೆ. ಈ ರಾಸಾಯನಿಗಳು ನಮ್ಮ ಮನಸ್ಸನ್ನು ಮೀರಿ ದೇಹವನ್ನು ಗುಣಪಡಿಸಿರಬಹುದೇ ಅಥವಾ ಔಷಧಗಳೆಂದು ನಂಬಿ ಅದನ್ನು ಸೇವಿಸಿದ್ದಕ್ಕಾಗಿ (ಪ್ಲಾಸಿಬೋ ಎಫೆಕ್ಟ್) ಅವು ಕಾಯಿಲೆಗಳನ್ನು ಹಿಮ್ಮೆಟ್ಟಿಸಿರಬಹುದೇ ಎಂದು ಖಚಿತವಾಗಿ ಹೇಳುವುದು ಕಷ್ಟ. ಸಾವಿರಾರು ಪ್ರಯೋಗಗಳಲ್ಲಿ ಔಷಧವೆಂದು ನಂಬಿಸಿ ಕೇವಲ ಸಾಮಾನ್ಯ ಪದಾರ್ಥಗಳನ್ನು ರೋಗಿಗಳಿಗೆ ನೀಡಿದಾಗ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಯೂ ಗುಣವಾಗಬಲ್ಲದು ಎಂದು ಸಿದ್ಧವಾಗಿದೆ.

ಇಲ್ಲಿ ನೀವೊಂದು ವಿರೋಧಾಭಾಸವನ್ನು ಗಮನಿಸಿದ್ದೀರಾ? ನಮ್ಮ ವೈದ್ಯರು ರಕ್ತದ ಏರೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳಿಗೆ ಅವರ ಔಷಧಗಳು ಕೆಲಸ ಮಾಡದಿದ್ದಾಗ ‘ನೀವು ಬಹಳ ಟೆನ್ಷನ್ ಮಾಡಿಕೊಂಡಿದ್ದೀರಾ, ಅದನ್ನು ಕಡಿಮೆ ಮಾಡ್ಕೊಳ್ಳಿ’ ಎಂದು ಹೇಳುತ್ತಾರಲ್ಲವೇ? ಅಂದರೆ ಅವರ ಔಷಧಗಳಿಗಿಂತ ರೋಗಿಯ ಮಾನಸಿಕ ಒತ್ತಡ, ಆತಂಕ ಹೆಚ್ಚು ಪ್ರಭಾವಕಾರಿ ಎಂದು ಹೇಳುತ್ತಿದ್ದಾರೆಯೇ?

ಎಲ್ಲ ಕಾಯಿಲೆಗಳೂ ಮನೋಮೂಲವಲ್ಲ!

ಇದೆಲ್ಲದರ ಅರ್ಥ ಎಲ್ಲಾ ಕಾಯಿಲೆಗಳೂ ಮನೋಮೂಲವಾದದ್ದು ಎಂದಲ್ಲ ಅಥವಾ ಎಲ್ಲಾ ಔಷಧಗಳು ನಿಷ್ಪ್ರಯೋಜಕ ಎಂದೂ ಅಲ್ಲ. ಆಧುನಿಕ ವೈದ್ಯವಿಜ್ಞಾನ ಮನುಕುಲಕ್ಕೆ ಅದ್ಭುತ ಕಾಣಿಕೆಗಳನ್ನು ನೀಡಿದೆ. ಆದರೆ ಇದೇ ಸಂದರ್ಭದಲ್ಲಿ ದೀರ್ಘಕಾಲ ಕಾಡುವ ಎಲ್ಲಾ ಕಾಯಿಲೆಗಳ ಹಿಂದೆ ವ್ಯಕ್ತಿಯ ಮಾನಸಿಕ ಸ್ಥಿತಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಗಳಿವೆ ಎಂಬುದನ್ನೂ ಕಡೆಗಣಿಸಲಾಗದು.

ಕಳೆದ ಒಂದೆರೆಡು ದಶಕಗಳಿಂದ ನಡೆದ ಸಾವಿರಾರು ಸಂಶೋಧನೆಗಳಲ್ಲಿ ಮಾನಸಿಕ ಏರುಪೇರುಗಳು ದೈಹಿಕ ಕಾಯಿಲೆಗಳಿಗೆ ಕಾರಣವಾಗುತ್ತಿವೆ ಅಥವಾ ಅವುಗಳನ್ನು ಹೆಚ್ಚಿಸುತ್ತವೆ ಎಂದು ವೈಜ್ಞಾನಿಕವಾಗಿ ತೋರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎನ್ನುವ ಆಯ್ಕೆ ನಿಮ್ಮದು.

ಮಾನಸಿಕ ಸಮಸ್ಯೆ ಗುರುತಿಸಿ ಹೊರಹಾಕಿ

ಮಾನಸಿಕ ತಳಮಳಗಳಿಂದಾಗಿ ಹಸಿವು ನಿದ್ದೆಗಳನ್ನು ಕಳೆದುಕೊಳ್ಳುವ ಹಂತಕ್ಕೆ ಬಂದಾಗ, ಸ್ನೇಹಸಂಬಂಧಗಳು ಹಾಳಾಗುತ್ತಿದ್ದಾಗ, ನಿತ್ಯಜೀವನದ ಸವಾಲುಗಳನ್ನು ಎದುರಿಸಬಲ್ಲ ನಮ್ಮ ಯೋಗ್ಯತೆಯ ಬಗೆಗೆ ಅನುಮಾನಗಳು ಮೂಡತೊಡಗಿದಾಗ, ಸುತ್ತಲಿನ ಪ್ರಪಂಚದ ಜೊತೆಗಿನ ಕೊಂಡಿ ಕಳಚುತ್ತಿದೆ ಎನ್ನಿಸಿದಾಗ, ನಶೆಯ ವಸ್ತುಗಳಾದ ಗುಟ್ಕಾ, ಧೂಮಪಾನಗಳಿಗೆ ಅಂಟಿಕೊಳ್ಳುವ ಸ್ಥಿತಿ ಬಂದಾಗ, ಅತಿಯಾಗಿ ತಿನ್ನುವುದು, ಮೊಬೈಲ್, ಟಿವಿ ಬಳಕೆ ಮುಂತಾದ ಸೆಳೆತಗಳಿಗೆ ಮನಸ್ಸು ತುಡಿಯುತ್ತಿದೆ ಅನ್ನಿಸಿದರೆ ತಕ್ಷಣ ಎಚ್ಚರಗೊಳ್ಳಿರಿ.

ಒಬ್ಬ ಆತ್ಮೀಯ ಸ್ನೇಹಿತ ಅಥವಾ ಬಾಳಸಂಗಾತಿಯ ಜೊತೆ ಒಂದು ಸರಳ ಒಪ್ಪಂದ ಮಾಡಿಕೊಳ್ಳಿ. ಪ್ರತಿದಿನ ಅವತ್ತಿನ ನಿಮ್ಮ ತಳಮಳಗಳನ್ನು 30 ನಿಮಿಷ ಅವರ ಜೊತೆ ಹಂಚಿಕೊಳ್ಳಿ. ನಿಮ್ಮಿಂದ ಯಾವುದೇ ಸಹಾಯ ಸಲಹೆಗಳನ್ನು ನಿರೀಕ್ಷೆ ಮಾಡುತ್ತಿಲ್ಲ ಮತ್ತು ಅವುಗಳನ್ನು ಕೊಡಲೇಬೇಡಿ ಎಂಬ ನಿಯಮವನ್ನು ಹಾಕಿ. ನೀವೊಬ್ಬರೇ ಸುಮ್ಮನೆ ಮಾತನಾಡಿ. ಸಾಧ್ಯವಿದ್ದರೆ ಅದನ್ನು ದಾಖಲಿಸಿಕೊಂಡು ನಂತರ ಮತ್ತೊಮ್ಮೆ ಕೇಳಿ. ಎದುರಿಗಿರುವವರಿಗೆ ಕೇಳುವುದು ಮಾತ್ರ ಕೆಲಸ. ಅವರಿಗೂ ಅಗತ್ಯವಿದೆ ಎನ್ನಿಸಿದರೆ ಅವರ ತಳಮಳಗಳ ಬಗೆಗೆ ಮಾತ್ರ ಮಾತನಾಡಲಿ. ಆಗ ನೀವು ಸುಮ್ಮನೆ ಕೇಳಿ. ಮಾತನಾಡುತ್ತಿದ್ದಂತೆ ಹೊರಬರುವ ನಿಮ್ಮ ಕೋಪ ದುಃಖಗಳೆಲ್ಲವನ್ನೂ ಹಸಿಹಸಿಯಾಗಿ ಹೊರಹಾಕಿ. ಹೀಗೆ ಹಲವಾರು ದಿನ ಮಾಡಿದರೆ ನಿಮ್ಮ ಅಂತರಂಗದ ಹೋರಾಟಗಳ ಬಗೆಗೆ ಹೊಸ ಅರಿವು ಮತ್ತು ಪರಿಹಾರಗಳು ನಿಮ್ಮೊಳಗೇ ಮೊಳಕೆಯೊಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT