ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | ರಕ್ತಸಂಬಂಧದಲ್ಲಿ ಮದುವೆ ಏನಾದರೂ ತೊಂದರೆ ಇದೆಯೇ?

ಡಾ. ವೀಣಾ ಎಸ್‌. ಭಟ್‌
Published 24 ನವೆಂಬರ್ 2023, 23:30 IST
Last Updated 24 ನವೆಂಬರ್ 2023, 23:30 IST
ಅಕ್ಷರ ಗಾತ್ರ

ರಕ್ತ ಸಂಬಂಧಗಳಲ್ಲಿ ಮದುವೆಯಾದರೆ ಆಗುವ ಅನುಕೂಲಗಳು ಮತ್ತು ಅನಾನಕೂಲಗಳ ಬಗ್ಗೆ ತಿಳಿಸಿ. ಮದುವೆಯಾಗಲು ವಯಸ್ಸಿನ ಅಂತರ ಎಷ್ಟಿರಬೇಕು ತಿಳಿಸಿ.

ರಕ್ತ ಸಂಬಂಧದಲ್ಲಿ ಮದುವೆ ಆಗುವುದು ದಕ್ಷಿಣ ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಸಾಮಾನ್ಯ ಸಂಗತಿ. ಅತ್ತೆಮಗ, ಮಾವನಮಗ, ಇಲ್ಲವೇ ಸ್ವತಃ ಮಾವನನ್ನೇ ಮದುವೆಯಾದವರಿದ್ದಾರೆ. ಪರಂಪರಾಗತವಾಗಿಯೂ, ಹಲವು ಸಾಮಾಜಿಕ, ಆರ್ಥಿಕ ಕಾರಣಕ್ಕಾಗಿ ಇಂತಹ ಮದುವೆಗಳು ನಡೆಯುತ್ತಿದ್ದವು. ಇತ್ತೀಚೆಗೆ ಈ ಬಗ್ಗೆ ಅಲ್ಲಲ್ಲಿ ಜಾಗೃತಿ, ಮೂಡುತ್ತಿದೆ. ಕೆಲವರು ಮದುವೆಗೆ ಮೊದಲೇ ತಜ್ಞರನ್ನು ಭೇಟಿ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದಾರೆ. ಕೆಲವರು ಮದುವೆಯಾದ ನಂತರ ಮಕ್ಕಳನ್ನು ಪಡೆಯುವ ಮೊದಲು ಈ ಬಗ್ಗೆ ಯೋಚಿಸುತ್ತಾರೆ. ಆದರೆ ಮದುವೆಗೂ ಮೊದಲು ಈ ಬಗ್ಗೆ ವಿಚಾರಿಸಿ ಆಪ್ತಸಮಾಲೋಚನೆಗೆ ಒಳಗಾಗುವುದು ಸೂಕ್ತ.

ಹೆಚ್ಚಿನ ಸಂದರ್ಭಗಳಲ್ಲಿ ಸತಿಪತಿಯಾಗುವ ಇಬ್ಬರೂ ಆರೋಗ್ಯವಂತರಾಗಿದ್ದಾಗ ತೊಂದರೆಗಳೇನು ಆಗದಿರಬಹುದು. ಆದರೆ ಕೆಲವು ವಂಶವಾಹಿಗಳಲ್ಲಿ ದೋಷವಿದ್ದು ಕೆಲವು ಆನುವಂಶಿಯ ಕಾಯಿಲೆಗಳಿದ್ದರೆ ಕೌಟುಂಬಿಕವಾಗಿ ಈಗಾಗಲೇ ನ್ಯೂನತೆಯುಳ್ಳ ಮಕ್ಕಳು ಜನಿಸಿದ್ದಾಗ ಅಂತವರಲ್ಲಿ ಸಂಬಂಧ ಉಂಟಾಗಿ ಮಕ್ಕಳು ಹುಟ್ಟಿದಾಗ ತೊಂದರೆ ಆಗಬಹುದು.

ಈ ತೊಂದರೆ ಬೇರೆಯವರಲ್ಲಾಗುವುದಿಲ್ಲವೇ? ಎಂದು ನಿಮಗನಿಸಬಹುದು. ಕೆಲವು ವಂಶವಾಹಿಗಳ ಮೂಲಕ ಬರುವ ಥೆಲೇಸೀಮಿಯ, ಹೃದಯದ ರಂಧ್ರಗಳ ಸಮಸ್ಯೆ, ಕೆಲವು ರಕ್ತಹೆಪ್ಪುಗಟ್ಟುವ ಸಮಸ್ಯೆಗಳು, ಆಟೋಸೋಮಲ್ ರಿಸೆಸಿವ್ ವಿಧಾನದಲ್ಲಿ ಆನುವಂಶೀಯವಾಗಿ ಹರಿದು ಬರುವ ಸಮಸ್ಯೆಗಳು ಸಂಭವನೀಯತೆ ಹೆಚ್ಚಾಗಿರುತ್ತದೆ. ಉಳಿದವರಿಗೆ ಹೋಲಿಸಿದರೆ. ಶೇಕಡ 25 ರಿಂದ 75ರಷ್ಟು ರಕ್ತಸಂಬಂಧದಲ್ಲಿ ಮದುವೆಯಾದರವರಲ್ಲಿ ಹೆಚ್ಚಿರುತ್ತದೆ.

ರಕ್ತಸಂಬಂಧಗಳಲ್ಲಿ ಮದುವೆಯಾದಾಗ ಗಂಡು-ಹೆಣ್ಣು ಇಬ್ಬರಲ್ಲೂ ಏನೂ ತೊಂದರೆಗಳೆಲ್ಲದೇ ಇರುವಾಗ ಹೆಚ್ಚಿನ ಸಂದರ್ಭದಲ್ಲಿ ಆರೋಗ್ಯವಂತ ಮಕ್ಕಳೇ ಹುಟ್ಟುತ್ತಾರೆ. ಹಾಗಾಗಿ ಇಂತಹ ಸಂಬಂಧಗಳು ಇಂದಿಗೂ ಮುಂದುವರೆದು ಕೊಂಡುಬಂದಿವೆ. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಆವಿಷ್ಕಾರ, ತಾಂತ್ರಿಕಪರಿಣತಿ ಬಹಳಷ್ಟು ಮುಂದುವರೆದಿರುವ ಕಾರಣ ಅಷ್ಟೇಅಲ್ಲ ಇದರ ಜೊತೆಗೆ ಹಲವಾರು ಪರೀಕ್ಷೆಗಳೂ, ಸ್ಕ್ಯಾನಿಂಗ್‌ ಹಾಗೂ ರಕ್ತಪರೀಕ್ಷೆಗಳಿಂದ ಗರ್ಭಸ್ಥ ಶಿಶುವಿನಲ್ಲಿ ಹಲವು ನ್ಯೂನತೆ ಇರುವುದನ್ನ ಮೊದಲೇ ಕಂಡುಹಿಡಿಯಲು ಸಾಧ್ಯವಿರುತ್ತದೆ. ಜೊತೆಗೆ 20ರಿಂದ22 ವಾರಗಳವರೆಗೆ ನ್ಯೂನತೆಯುಳ್ಳ ಭ್ರೂಣ ಪತ್ತೆಯಾದಲ್ಲಿ ಗರ್ಭಪಾತಕ್ಕೂ ಕಾನೂನು ಇದೆ ಎನ್ನುವ ವಿಷಯ ತಿಳಿದಿರಬೇಕು. ಮದುವೆ ಆಗುವ ಮೊದಲೇ, ಅಥವಾ ಮಕ್ಕಳನ್ನ ಪಡೆಯುವ ಮೊದಲೇ ವೈದ್ಯರೊಂದಿಗೆ ಆಪ್ತಸಮಾಲೋಚನೆ ಬಹಳ ಒಳ್ಳೆಯದು.

ಮದುವೆಯಾಗಲು ಹೆಣ್ಣಿಗೆ 18ವರ್ಷಗಳು ಹಾಗೂ ಗಂಡಿಗೆ 21ವರ್ಷಗಳು ಆಗಿರಬೇಕೆಂದು ಕಾನೂನೇ ಇದೆ. ಈ ಕಾನೂನನ್ನು ವೈದ್ಯಕೀಯವಾಗಿ ಅರಿತುಕೊಂಡೆ ಮಾಡಿರುವುದು. ಹೆಣ್ಣಿನಲ್ಲಿ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಬೆಳವಣಿಗೆ 18ವರ್ಷಕ್ಕೆ ಒಂದು ಹಂತಕ್ಕೆ ಬಂದಿರುತ್ತದೆ ಮತ್ತು ಪುರುಷರಲ್ಲಿ 21 ವರ್ಷಕ್ಕೆ ಈ ಪ್ರಬುದ್ಧತೆ ಬರುತ್ತದೆ. ಮಹಿಳೆಯರಲ್ಲಿ ಸುಮಾರು ಮುಟ್ಟುನಿಲ್ಲುವ ಅವಧಿಯವರೆಗೆ (ಸರಾಸರಿ 50 ವರ್ಷಗಳು) ಲೈಂಗಿಕ ಬಯಕೆ ಸಾಮರ್ಥ್ಯ ಹೆಚ್ಚಿರುತ್ತದೆ ಮತ್ತು ಪುರುಷರಲ್ಲಿ ಧೀರ್ಘಾವಧಿಯವರೆಗೆ (ಸುಮಾರು 60ವರ್ಷಗಳು) ಲೈಂಗಿಕ ಬಯಕೆ ಮತ್ತು ಸಾಮರ್ಥ್ಯ ಇರಬಹುದು. ಆದ್ದರಿಂದ ಆರೋಗ್ಯಕರವಾಗಿ ಉತ್ತಮ ಲೈಂಗಿಕ ಹಾಗೂ ಸಾಂಸಾರಿಕ ಸಹಬಾಳ್ವೆ ನಡೆಸಲು ಗಂಡಿಗಿಂತ ಮದುವೆಯಾಗುವ ಹೆಣ್ಣು 2ರಿಂದ 3ವರ್ಷಗಳಾದರೂ ಅಂತರವಿದ್ದರೆ ಒಳ್ಳೆಯದು ಎನ್ನುವ ಪದ್ದತಿ ಇದೆ. ಆದರೆ ಇತ್ತೀಚಿಗೆ ಸಮವಯಸ್ಸು ಮತ್ತು ವಯಸ್ಸಿಗಿಂತ ದೊಡ್ಡ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಿದ್ದಾರೆ. ಅಷ್ಟಕ್ಕೂ ಅದು ಅವರವರ ವೈಯಕ್ತಿಕ ನಿರ್ಧಾರ. ಮೂರುವರ್ಷ ಅಂತರದಿಂದ ಏಳೆಂಟು ವರ್ಷ ಅಂತರವಿದ್ದರೂ ವಿವಾಹವಾಗಲು ತೊಂದರೆ ಇಲ್ಲ.

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT