ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊತ್ತಂಬರಿ ಸೊಪ್ಪು ಸೇವನೆ ಸುರಕ್ಷಿತವೇ?

Last Updated 14 ಮಾರ್ಚ್ 2020, 5:54 IST
ಅಕ್ಷರ ಗಾತ್ರ

ಇತ್ತೀಚೆಗೆ ನಾಲ್ಕು ವರ್ಷದ ಬಾಲಕನನ್ನು ಅವನ ಪೋಷಕರು ನನ್ನ ಬಳಿ ಕರೆತಂದಿದ್ದರು. 'ಮಧ್ಯಾಹ್ನದಿಂದ ಹೊಟ್ಟೆನೋವು ಎನ್ನುತ್ತಿದ್ದಾನೆ' ಎಂದು ಅವರು ಹೇಳಿದಾಗ 'ಭೇದಿಯಾಗುತ್ತಿದೆಯಾ?' ಎಂದು ಕೇಳಿದೆ. 'ಎರಡು ಬಾರಿ ಮಂದವಾಗಿ ಮಲವಿಸರ್ಜನೆ ಮಾಡಿದ' ಎಂದರು. 'ರಕ್ತ, ಗೊಣ್ಣೆಯೇನಾದರೂ ಕಾಣಿಸಿತಾ?' ಎಂಬ ನನ್ನ ಇನ್ನೊಂದು ಪ್ರಶ್ನೆಗೆ 'ರಕ್ತವೇನೂ ಕಾಣಿಸಲಿಲ್ಲ. ಜಿಗಿ ಜಿಗಿಯಾಗಿ ಲೋಳೆಯಂತೆ ಕಾಣಿಸಿತು' ಎಂದರು. ಅವರ ಈ ಉತ್ತರದಿಂದ ದೊಡ್ಡ ಕರುಳಿನಲ್ಲಿ ಸೋಂಕುಂಟಾಗಿರುವುದು ನನಗೆ ಖಾತ್ರಿಯಾಗಿ 'ನಿನ್ನೆ ಮೊನ್ನೆ ಮನೆಯಿಂದ ಹೊರಗಡೆ ಏನನ್ನಾದರೂ ತಿನ್ನಿಸಿದ್ದಿರಾ?' ಎಂದು ಕೇಳಿದೆ.

ಕೊಂಚ ಯೋಚಿಸಿದಂತೆ ಮಾಡಿ 'ಇತ್ತೀಚೆಗೆ ನಾವು ಎಲ್ಲಿಗೂ ಕರೆದುಕೊಂಡು ಹೋಗಿಲ್ಲ' ಎಂದರು. 'ಮನೆಯಲ್ಲಿ ಹಸಿ ತರಕಾರಿ, ಕೊತ್ತಂಬರಿ ಸೊಪ್ಪು ಇಂಥದ್ದೇನಾದರೂ ತಿನ್ನಿಸಿದ್ದೀರಾ?' ಎಂದು ಕೇಳುತ್ತಿದ್ದಂತೆ ಅವನ ತಾಯಿಯ ಕಣ್ಣುಗಳು ಅರಳಿ 'ಹೌದು ಡಾಕ್ಟರ್. ನಿನ್ನೆ ನಾನು ಬಿಡಿಸುತ್ತಾ ಕುಳಿತಿದ್ದಾಗ ಹಸಿ ಕೊತ್ತಂಬರಿ ಸೊಪ್ಪಿನ ಕಡ್ಡಿಯೊಂದನ್ನು ಜಗಿದು ತಿಂದ' ಎಂದರು. ಜೊತೆಯಲ್ಲೇ 'ಅದಕ್ಕೂ ಅವನ ಹೊಟ್ಟೆನೋವಿಗೂ ಏನು ಸಂಬಂಧ?' ಎಂದು ಕೇಳಿದರು. ನಾನು ಸೊಪ್ಪು, ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಹಸಿಯಾಗಿ ತಿನ್ನುವುದರಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಕುರಿತು ಅವರಿಗೆ ವಿವರಿಸಿ, ಆ ಮಗುವಿನ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಸೂಚಿಸಿ ಕಳಿಸಿಕೊಟ್ಟೆ.

ಕೊತ್ತಂಬರಿ ಸೊಪ್ಪಿನ ಮಹತ್ವವೇನು?
ಕೊತ್ತಂಬರಿ ಸೊಪ್ಪು ನಮ್ಮೆಲ್ಲರ ಅಡುಗೆಯ ಅವಿಭಾಜ್ಯ ಅಂಗ. ಅದಿಲ್ಲದಿದ್ದರೆ ಯಾವ ಅಡುಗೆಯೂ ರುಚಿಸದು. ಅದಷ್ಟೇ ಅಲ್ಲದೆ ಸಲಾಡ್, ಭೇಲ್ ಪುರಿ ಮುಂತಾದ ತಿನಿಸುಗಳಿಗೆ ಕತ್ತರಿಸಿದ ಹಸಿ ಕೊತ್ತಂಬರಿ ಸೊಪ್ಪನ್ನು ಉದುರಿಸುವ ಪರಿಪಾಠವಿದೆ. ಕೊತ್ತಂಬರಿ ಸೊಪ್ಪು ರುಚಿ ನೀಡುವುದಷ್ಟೇ ಅಲ್ಲದೆ ಹಲವಾರು ಪೋಷಕಾಂಶಗಳ ಆಗರ. ಎ, ಇ, ಕೆ, ಫೋಲಿಕ್ ಆಮ್ಲದಂಥ ಜೀವಸತ್ವಗಳು, ಕಬ್ಬಿಣಾಂಶ ಮತ್ತು ನಾರಿನ ಅಂಶಗಳು ಕೊತ್ತಂಬರಿ ಸೊಪ್ಪಿನಲ್ಲಿ‌ ಯಥೇಚ್ಛವಾಗಿವೆ. ಈ ಎಲ್ಲಾ ಕಾರಣಗಳಿಂದ ಕೊತ್ತಂಬರಿ ಸೊಪ್ಪು ಆರೋಗ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರಕ್ತಹೀನತೆ, ಇರುಳುಗುರುಡು, ಮಲಬದ್ಧತೆ ಮುಂತಾದ ಸಮಸ್ಯೆಗಳಿರುವವರಲ್ಲಿ ಕೊತ್ತಂಬರಿ ಸೊಪ್ಪನ್ನು ಒಳಗೊಂಡು ಎಲ್ಲಾ ದಟ್ಟ ಹಸಿರಿನ ಸೊಪ್ಪುಗಳು ಪ್ರಯೋಜನಕಾರಿ.

ಸೊಪ್ಪು, ತರಕಾರಿಗಳನ್ನು ಹಸಿಯಾಗಿ ಅಥವಾ ಸ್ವಲ್ಪವೇ ಬೇಯಿಸಿ ಸೇವಿಸಬೇಕು. ಇದರಿಂದ ಪೋಷಕಾಂಶಗಳ ನಷ್ಟವಾಗುವುದಿಲ್ಲ. ಆದರೆ ಇವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಹಸಿಯಾಗಿ ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಕೊತ್ತಂಬರಿ ಸೊಪ್ಪಿನಿಂದಾಗುವ ಸಮಸ್ಯೆಗಳೇನು?
ಕೊತ್ತಂಬರಿ ಸೊಪ್ಪನ್ನು ಹಸಿಯಾಗಿ ಸೇವಿಸಿದಾಗ ಇ ಕೊಲಿ, ಸಾಲ್ಮೊನೆಲ್ಲಾ, ಶಿಗೆಲ್ಲಾ ಮುಂತಾದ ಬ್ಯಾಕ್ಟೀರಿಯಾಗಳು ಮತ್ತು ದುಂಡು ಹುಳು, ಕೊಕ್ಕೆ ಹುಳು, ಲಾಡಿ ಹುಳು, ಅಮೀಬಾ (ಏಕಕೋಶ ಜೀವಿ) ಮುಂತಾದ ಪರಾವಲಂಬಿಗಳ ಮೊಟ್ಟೆಗಳು ಸುಲಭವಾಗಿ ಶರೀರದೊಳಕ್ಕೆ ಪ್ರವೇಶ ಪಡೆಯುತ್ತವೆ. ಇದರಿಂದ ಆಮಶಂಕೆ, ರಕ್ತ ಭೇದಿ, ಅತಿಸಾರ, ಟೈಫಾಯ್ಡ್‌, ಅಜೀರ್ಣ, ಅಪೌಷ್ಟಿಕತೆ, ರಕ್ತಹೀನತೆ‌ ಮುಂತಾದ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ. ಅಷ್ಟೇ ಅಲ್ಲದೆ 'ನ್ಯೂರೋಸಿಸ್ಟಿಸರ್ಕೋಸಿಸ್' ಎಂಬ ನರಮಂಡಲಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯೂ ಉಂಟಾಗಬಹುದು.

ಏನಿದು ನ್ಯೂರೋಸಿಸ್ಟಿಸರ್ಕೋಸಿಸ್?
ಸಾಮಾನ್ಯವಾಗಿ ಅರೆಬೆಂದ ಹಂದಿ ಮಾಂಸದ ಮುಖಾಂತರ ಜಠರವನ್ನು ಪ್ರವೇಶಿಸುವ 'ಟೀನಿಯಾ ಸೋಲಿಯಂ' ಎಂಬ ಲಾಡಿ ಹುಳುವಿನ ಪ್ರಬೇಧದ ಲಾರ್ವಗಳು ನರಮಂಡಲದತ್ತ ಪ್ರಯಾಣಿಸಿ, ಅಲ್ಲಿ ಪುಟ್ಟ ಪುಟ್ಟ ಗಡ್ಡೆಗಳಾಗಿ ಮಾರ್ಪಾಡಾಗುತ್ತವೆ. ಇವು ಆ ವ್ಯಕ್ತಿಯಲ್ಲಿ ತೀವ್ರ ಸ್ವರೂಪದ ತಲೆನೋವು, ವಾಂತಿ, ಅಪಸ್ಮಾರ, ನೀರ್ದಲೆ, ಪಾರ್ಶ್ವವಾಯು, ಅಂಧತ್ವ ಮುಂತಾದ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲವು.

ಕೆಲವು ವರ್ಷಗಳ ಹಿಂದೆ ಅಪ್ಪಟ ಸಸ್ಯಾಹಾರಿ ವ್ಯಕ್ತಿಯೊಬ್ಬನಲ್ಲಿ ನ್ಯೂರೋಸಿಸ್ಟಿಸರ್ಕೋಸಿಸ್ ಲಕ್ಷಣಗಳು ಕಾಣಿಸಿಕೊಂಡು, ಸೂಕ್ತ ಪರೀಕ್ಷೆಗಳ ಮೂಲಕ ದೃಢಪಟ್ಟಿತ್ತು. ಅರೆಬೆಂದ ಹಂದಿ ಮಾಂಸದಿಂದ ಬರುವ ಈ ಸಮಸ್ಯೆ ಆತನಲ್ಲಿ ಕಾಣಿಸಿಕೊಳ್ಳಲು ಕಾರಣವೇನಿರಬಹುದು ಎಂದು ತಜ್ಞರು ತಲೆಕೆಡಿಸಿಕೊಂಡರು.ಆಳವಾಗಿ ಕೆದಕಿದಾಗ, ಸರಿಯಾಗಿ ಸ್ವಚ್ಛಗೊಳಿಸದ ಹಸಿ ಕೊತ್ತಂಬರಿ ಸೊಪ್ಪಿನ ಮುಖಾಂತರ ಲಾಡಿ ಹುಳುವಿನ ಮೊಟ್ಟೆಗಳು ದೇಹದೊಳಕ್ಕೆ ಪ್ರವೇಶ ಪಡೆದು ನ್ಯೂರೋಸಿಸ್ಟಿಸರ್ಕೋಸಿಸ್ ಉಂಟುಮಾಡಿದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತ್ತು.

ಮುಂಜಾಗ್ರತಾ ಕ್ರಮಗಳು
ಕೊತ್ತಂಬರಿ ಸೊಪ್ಪನ್ನು ಹಸಿಯಾಗಿ ಸೇವಿಸುವ ಮುನ್ನ ಉಪ್ಪಿನ ನೀರಿನಲ್ಲಿ ಚೆನ್ನಾಗಿ ಸ್ವಚ್ಛಗೊಳಿಸಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಕೊತ್ತಂಬರಿ ಸೊಪ್ಪಷ್ಟೇ ಅಲ್ಲದೆ ಎಲ್ಲಾ ಸೊಪ್ಪು, ತರಕಾರಿಗಳನ್ನು ಹಸಿಯಾಗಿ ಸೇವಿಸುವ ಮುನ್ನ ಚೆನ್ನಾಗಿ ಸ್ವಚ್ಛಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT