ಸೋಮವಾರ, ಜನವರಿ 18, 2021
23 °C

ಏನಾದ್ರೂ ಕೇಳ್ಬೋದು: ವಿವಾಹಿತರಲ್ಲಿಯೂ ಲೈಂಗಿಕತೆಯ ಕುರಿತು ಅಜ್ಞಾನ

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

Prajavani

32ರ ಯುವಕ, ಮಡದಿಗೆ 22. ಮದುವೆಯಾಗಿ 7 ತಿಂಗಳುಗಳಾಗಿವೆ. ಉದ್ರೇಕಗೊಂಡ ಶಿಶ್ನವು ಯೋನಿಪ್ರವೇಶದ ಸಮಯಕ್ಕೆ ಮೆತ್ತಗಾಗುತ್ತಿದೆ. ಲೈಂಗಿಕ ಆಸಕ್ತಿಯಿದ್ದರೂ ಸಂಭೋಗ ತೃಪ್ತಿಕರವಾಗುತ್ತಿಲ್ಲ. ಸಂಭೋಗದ ನಂತರ ವೀರ್ಯವು ಯೋನಿಯಿಂದ ಹೊರಹೋಗುತ್ತದೆ. ಮಗುವಿನ ನಿರೀಕ್ಷೆಯಲ್ಲಿದ್ದೇನೆ. ದಯವಿಟ್ಟು ಉತ್ತರಿಸಿ.
-ಹೆಸರು, ಊರು ತಿಳಿಸಿಲ್ಲ.

ಇತ್ತೀಚೆಗೆ ಮದುವೆಯಾಗಿ ಇನ್ನೂ ಲೈಂಗಿಕಕ್ರಿಯೆಯ ಹದವನ್ನೇ ತಿಳಿದುಕೊಳ್ಳದಿರುವಾಗ ಮಕ್ಕಳನ್ನು ಪಡೆಯುವ ಆತುರವೇಕೆ? ಸದ್ಯಕ್ಕೆ ಸಾಕಷ್ಟು ಲೈಂಗಿಕಸುಖವನ್ನು ಹಂಚಿಕೊಂಡು ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಬಹುದಲ್ಲವೇ? ಸಂಭೋಗದ ನಂತರ ಸ್ಖಲನವಾದ ವೀರ್ಯದ ಹೆಚ್ಚಿನ ಭಾಗ ಹೊರಹೋಗುವುದು ಸಾಮಾನ್ಯ. ಇದರಿಂದ ಮಕ್ಕಳಾಗಲು ತೊಂದರೆಯಿಲ್ಲ. ಶಿಶ್ನ ಬಹುಬೇಗನೆ ಮೆತ್ತಗಾಗುವುದಕ್ಕೆ ಪ್ರಮುಖ ಕಾರಣ ಲೈಂಗಿಕತೆಯ ಬಗ್ಗೆ ನಿಮಗಿರುವ ತಿಳಿವಳಿಕೆಯ ಕೊರತೆ ಮತ್ತು ಆದಷ್ಟು ಬೇಗ ಮಕ್ಕಳಾಗಬೇಕೆಂಬ ಒತ್ತಡ, ಆತಂಕ. ಒಂದು ವರ್ಷ ಮಕ್ಕಳ ನಿರೀಕ್ಷೆಯನ್ನು ಮುಂದೂಡಿ ಪತ್ನಿಯೊಡನೆ ಸುಖಿಸುವ ಕುರಿತು ಮಾತ್ರ ಯೋಚನೆಮಾಡಿ. ತಜ್ಞ ಲೈಂಗಿಕ ಚಿಕಿತ್ಸಕರ ಸೇವೆ ಲಭ್ಯವಿದ್ದರೆ ಪಡೆಯಿರಿ.

**

ಇತ್ತೀಚೆಗೆ ಮುದುವೆಯಾಗಿದ್ದೇನೆ. ಸಂಭೋಗ ಮಾಡುವ ಆಸಕ್ತಿಯಿದ್ದರೂ ಸಾಧ್ಯವಾಗುತ್ತಿಲ್ಲ. ಪತ್ನಿ ಸಣ್ಣಗಿದ್ದಾಳೆ. ನಿಮಿರುವಿಕೆ ಹೆಚ್ಚಾಗಬೇಕೆ ತಿಳಿಸಿ.
-ಊರು, ಹೆಸರು ತಿಳಿಸಿಲ್ಲ.

ಶಿಶ್ನದ ನಿಮಿರುವಿಕೆ ಈಗ ಹೇಗಿದೆ ಎಂದು ತಿಳಿದುಕೊಳ್ಳದೇ ಅದು ಹೆಚ್ಚಾಗಬೇಕೇ ಬೇಡವೇ ಎಂದು ಹೇಗೆ ಹೇಳುವುದು? ಸಂಭೋಗ ಮಾಡಲು ಸಾಧ್ಯವಾಗುವಷ್ಟು ನಿಮಿರುವಿಕೆ ಇದ್ದರೆ ಸಾಕು. ಪತ್ನಿ ಸಣ್ಣಗಿರುವುದಕ್ಕೂ ಲೈಂಗಿಕ ಸುಖವನ್ನು ಇಬ್ಬರೂ ಹಂಚಿಕೊಳ್ಳುವುದಕ್ಕೂ ಸಂಬಂಧವಿಲ್ಲ. ಪತ್ರವನ್ನು ನೋಡಿದರೆ ನಿಮಗಿಬ್ಬರಿಗೂ ಸ್ತ್ರೀ– ಪುರುಷರ ದೇಹರಚನೆ ಮತ್ತು ಲೈಂಗಿಕತೆಯ ಕುರಿತು ಹೆಚ್ಚಿನ ತಿಳಿವಳಿಕೆ ಇರುವಂತೆ ಕಾಣಿಸುವುದಿಲ್ಲ. ಕುಟುಂಬ ವೈದ್ಯರೊಡನೆ ಹಿಂಜರಿಕೆಯಿಲ್ಲದೆ ಮಾತನಾಡಿ ಮಾರ್ಗದರ್ಶನ ಪಡೆದುಕೊಳ್ಳಿ.

**

29ರ ಯುವಕ. ಲೈಂಗಿಕತೆಯಲ್ಲಿ ಆಸಕ್ತಿಯಿದೆ. ಒಂದು ವೃಷಣ ಸಣ್ಣದಾಗಿದೆ, ಮತ್ತೊಂದು ಉಬ್ಬಿಕೊಂಡಿದೆ. ಇದರಿಂದ ಲೈಂಗಿಕ ಸಂಪರ್ಕಕ್ಕೆ ತೊಂದರೆಯಾಗಬಹುದೇ?
-ಹೆಸರು, ಊರು ತಿಳಿಸಿಲ್ಲ.

ಒಂದು ವೃಷಣ ಸಣ್ಣಗಿರುವುದು ಮತ್ತು ಇನ್ನೊಂದು ಹೆಚ್ಚು ಜೋತುಕೊಂಡಿರುವುದು ಎಲ್ಲ ಪುರುಷರಲ್ಲೂ ಸಾಮಾನ್ಯ ಅಂಶ. ಇದರಿಂದ ಲೈಂಗಿಕಕ್ರಿಯೆಗೆ ಯಾವುದೇ ತೊಂದರೆಯಿರುವುದಿಲ್ಲ. ವೃಷಣಗಳಲ್ಲಿ ನೋವು ಕಾಣಿಸಿಕೊಂಡರೆ, ನಿಮಿರುವಿಕೆ ಮತ್ತು ಸ್ಖಲನ ಸಹಜವಾಗಿ ಆಗುತ್ತಿಲ್ಲವೆಂದಾದರೆ ವೈದ್ಯರನ್ನು ಸಂಪರ್ಕಿಸಿ.

**

23ರ ಯುವಕ. ನಾನು 6 ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿಗೆ ಮದುವೆಯಾಗಿ 2 ವರ್ಷಗಳಾದವು. ಇಬ್ಬರೂ ದೇಹಸಂಪರ್ಕ ಮಾಡಿರಲಿಲ್ಲ. ಅವಳು ಈಗ ಗರ್ಭಿಣಿ. ತಿಳಿಹೇಳಿ ಒತ್ತಾಯ ಮಾಡಿದರೂ ಅವಳು ನನ್ನ ಸಂಪರ್ಕವನ್ನು ಬಿಡುತ್ತಿಲ್ಲ. ನಾನೇನು ಮಾಡಬೇಕು?
-ಹೆಸರಿಲ್ಲ, ಧಾರವಾಡ.

ಹುಡುಗಿ ನಿಮ್ಮನ್ನು ಬಿಡುತ್ತಿಲ್ಲವೆಂದು ಹೇಳುತ್ತಿದ್ದೀರಿ. ನೀವೇಕೆ ಅವಳನ್ನು ಬಿಡುತ್ತಿಲ್ಲ? ನಿಮಗೆ ಇನ್ನೂ ಅವಳ ಬಗ್ಗೆ ಏನಾದರೂ ಆಕರ್ಷಣೆಗಳಿರಬೇಕಲ್ಲವೇ? ಅಂತಹ ಆಕರ್ಷಣೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಿರದಿದ್ದರೂ ಅವುಗಳಿಗೆ ಇನ್ನೂ ಏಕೆ ಅಂಟಿಕೊಂಡಿದ್ದೀರಿ? ಹುಡುಗಿಯನ್ನು ಮರೆತು ನಿಮ್ಮ ಜೀವನದ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಿ. ನಿಮ್ಮ ಜೀವನದ ನಿರ್ಧಾರದ ಪರಿಣಾಮಗಳಿಗೆ ನೀವೇ ಜವಾಬ್ದಾರರೂ ಕೂಡ ಎಂದು ನೆನಪಿನಲ್ಲಿಡಿ.

**

ಕೆಲವು ವರ್ಷಗಳಿಂದ ಹಸ್ತಮೈಥುನ ಮಾಡುತ್ತೇನೆ. ಸ್ಖಲನವಾಗುವ ಸಮಯದಲ್ಲಿ ಹಾಸಿಗೆಗೆ ಒತ್ತಿ ವೀರ್ಯ ಹೊರಹೋಗದಂತೆ ತಡೆಯುತ್ತೇನೆ. ಇದು ಸರಿಯೇ?
-ಹೆಸರು, ಊರು ತಿಳಿಸಿಲ್ಲ.

ಹೊರಹೋಗುವುದನ್ನು ತಡೆದು ವೀರ್ಯಾಣುಗಳನ್ನು ಬಹಳ ಕಾಲ ರಕ್ಷಿಸಿ ಇಟ್ಟುಕೊಳ್ಳಬಹುದು ಎನ್ನುವುದು ನಿಮ್ಮ ತಿಳಿವಳಿಕೆಯೇ? ದೇಹದ ಎಲ್ಲಾ ಜೀವಕೋಶಗಳಂತೆ ವೀರ್ಯಾಣುಗಳೂ ಕೂಡ ಸೀಮಿತ ಅವಧಿಗೆ ಮಾತ್ರ ಜೀವಂತವಾಗಿರುತ್ತವೆ. ನಿಮ್ಮ ದೇಹದಲ್ಲಿ ಪುರುಷ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತಿರುವವರೆಗೂ ಹಳೆಯದು ಹೊರಹೋಗಿ ಹೊಸದು ಸೃಷ್ಟಿಯಾಗುತ್ತಲೇ ಇರುತ್ತದೆ. ನಿರ್ಜೀವವಾದ ವೀರ್ಯಾಣುಗಳನ್ನು ದೇಹದಲ್ಲೇಕೆ ಕಸದಂತೆ ಇಟ್ಟುಕೊಳ್ಳುತ್ತೀರಿ? ಸ್ಖಲನದ ಆನಂದವನ್ನು ಹೊಂದಿ ಅವುಗಳನ್ನು ಹೊರಹಾಕಿ.

**
28ರ ಯುವಕ. ವಾರಕ್ಕೆ 2-3 ಸಾರಿ ಹಸ್ತಮೈಥುನ ಮಾಡುತ್ತೇನೆ. ಲಿಂಗದ ಅಳತೆ ಚಿಕ್ಕದಾಗಿದೆ. ಶೀಘ್ರಸ್ಖಲನವಾಗುತ್ತದೆ. ಹೆಂಡತಿಗೆ ಸುಖ ಕೊಡಲು ಆಗುವುದಿಲ್ಲವೆಂದು ಮದುವೆಯನ್ನು ಮುಂದೆ ಹಾಕುತ್ತಿದ್ದೇನೆ. ಲಿಂಗದ ಆಕಾರ ಹೆಚ್ಚು ಮಾಡುವುದು ಹೇಗೆ?
-ಅಮಿತ್‌ಕುಮಾರ್‌, ಊರಿನ ಹೆಸರಿಲ್ಲ.  

ಪತ್ರವನ್ನು ನೋಡಿದರೆ ನೀವು ಬಹಳ ಆತಂಕದಲ್ಲಿದ್ದೀರಿ ಎನ್ನಿಸುತ್ತದೆ. ನಿಮ್ಮ ಆತಂಕ ತಪ್ಪು ತಿಳಿವಳಿಕೆಗಳಿಂದ ಬಂದಿದೆ. ಕೈಬೆರಳಿನ ಉದ್ದವನ್ನು ಹೆಚ್ಚು ಮಾಡಿಕೊಡಿ ಎಂದು ನಾನು ಕೇಳಿದರೆ ಏನೆಂದು ಉತ್ತರಿಸುತ್ತೀರಿ? ದೇಹದ ಆಕಾರ, ಬಣ್ಣಗಳೆಲ್ಲವೂ ಅನುವಂಶಿಕ. ಶಿಶ್ನದ ಆಕಾರಕ್ಕೂ ಲೈಂಗಿಕ ಸುಖಕ್ಕೂ ಸಂಬಂಧವೇ ಇಲ್ಲ. ನಕಲಿ ಔಷಧಿಗಳನ್ನು ಮಾರುವವರು ನಿಮ್ಮನ್ನು ದಾರಿ ತಪ್ಪಿಸುತ್ತಾರೆ. ಶೀಘ್ರಸ್ಖಲನ ಕೂಡ ನಿಮ್ಮ ತಪ್ಪುತಿಳಿವಳಿಕೆ, ಆತಂಕದ ಪರಿಣಾಮ. ಉತ್ಸಾಹದಿಂದ ಮದುವೆಯಾಗಿ. ಹೆಂಡತಿಯೊಡನೆ ಸಲಿಗೆ ಹೆಚ್ಚುತ್ತಾ ಹೋದಂತೆ ಎಲ್ಲವೂ ತನ್ನಿಂದ ತಾನೇ ಪರಿಹಾರವಾಗುತ್ತದೆ. ಮುಂದೆ ಅಗತ್ಯವೆನ್ನಿಸದರೆ ಪತ್ನಿ ಸಮೇತ ಲೈಂಗಿಕ ಚಿಕಿತ್ಸಕರನ್ನು ಭೇಟಿಯಾಗಿ.

ಏನಾದ್ರೂ ಕೇಳ್ಬೋದು
ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ. bhoomika@prajavani.co.in

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು