ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲನದಲ್ಲಿ ಬಯಲಾಗುವುದು

ಕಾಮಕೂಟದಲ್ಲಿ ತೃಪ್ತಿಪಡಿಸುವುದಕ್ಕಿಂತ ವ್ಯಕ್ತಪಡಿಸುವುದು ಹೆಚ್ಚು ಮಹತ್ವದ್ದು!
Last Updated 8 ಆಗಸ್ಟ್ 2018, 10:53 IST
ಅಕ್ಷರ ಗಾತ್ರ

ಸಂಗಾತಿಗಳು ಕಾಮಕೂಟದಲ್ಲಿ ಅರ್ಥಭರಿತ ಮೌನ ಸಂವಾದದ ಮೂಲಕ ತಮ್ಮ ಭಾವನೆಗಳನ್ನೂ ಸ್ವಭಾವವನ್ನೂ ಹೊರಗೆಡುವುತ್ತಾರೆ . ಆದರೆ ಮುಕ್ತವಾಗಿ ಮಾತಾಡದೆ ಆತ್ಮವಂಚನೆ ಮಾಡಿಕೊಳ್ಳುತ್ತಾರೆ ಎಂದು ಕಂಡುಕೊಂಡೆವು .

ಲೈಂಗಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಂದವರಿಗೆ ನಾನು ಸಾಮಾನ್ಯವಾಗಿ ಒಂದು ಪ್ರಶ್ನೆ ಕೇಳುತ್ತೇನೆ : ‘ ಕಾಮಕೂಟದ ನಡೆಯುವಾಗ ನಿಮ್ಮ ಅಂತರಾಳದಲ್ಲಿ ಏನು ನಡೆಯುತ್ತಿರುತ್ತದೆ ?’ ಇದಕ್ಕೆ ಉತ್ತರ ಅಷ್ಟು ಸುಲಭವಲ್ಲ . ಅದಕ್ಕೆಂದು ವಿವರಿಸುತ್ತಿದ್ದೇನೆ– ಇದು ನಿಮಗೂ ಅನ್ವಯವಾಗಬಹುದು .

ನೀವು ಸಂಗಾತಿ ಜತೆಗೆ ಕಾಮಕೂಟಕ್ಕೆ ಮನಸ್ಸು ಮಾಡಿದ್ದೀರಿ ಎಂದುಕೊಳ್ಳಿ . ಎಲ್ಲಿಂದ ಶುರುಮಾಡುತ್ತೀರಿ ? ಯಾವ ರೀತಿ ಶುರುಮಾಡುತ್ತೀರಿ ? ನಿಮ್ಮ ಕೈಗಳು ಎಲ್ಲಿರುತ್ತವೆ , ಹಾಗೂ ಏನು ಮಾಡುತ್ತ ಇರುತ್ತವೆ ? ಸಂಗಾತಿಯ ಮುಖವನ್ನು ಸ್ಪರ್ಶಿಸುತ್ತೀರಾ ? ಮುಖಸ್ಪರ್ಶದಲ್ಲಿ ಜಾದೂ ಏನೂ ಇಲ್ಲ ; ಆದರೆ ಹೇಗೆ ಸ್ಪರ್ಶಿಸುತ್ತೀರಿ , ಯಾವ ಭಾವವನ್ನು ತೋರ್ಪಡಿಸುತ್ತೀರಿ ಎನ್ನುವುದರಲ್ಲೇ ವೈಶಿಷ್ಟ್ಯ ಇದೆ . ಉದಾಹರಣೆಗೆ , ಯಾವೊತ್ತಾದರೂ ಸಂಗಾತಿಯ ಮುಖವನ್ನು ಸ್ಪರ್ಶಿಸುತ್ತಿರುವಾಗ ಅವರು ಕಣ್ಣುಮುಚ್ಚಿ ಅನುಭವಿಸುತ್ತಿದ್ದು , ನಂತರ ಅದೊಂದು ಅದ್ಭುತ ಅನುಭವ ಎಂದು ಹಂಚಿಕೊಂಡದ್ದು ಇದೆಯೆ ? ಸ್ಪರ್ಶದ ಮಾತು ಇತರ ಅಂಗಗಳಿಗೂ ಅನ್ವಯಿಸುತ್ತದೆ . ಕೈಗಳು , ತುಟಿಗಳು , ಸ್ತನ , ಕಿಬ್ಬೊಟ್ಟೆ , ಬೆನ್ನು , ಜನನಾಂಗ , ಪ್ರಷ್ಠ , ತೊಡೆಗಳು ... ಯಾವುದೇ ಅಂಗವನ್ನು ಸ್ಪರ್ಶಿಸುವುದರಲ್ಲಿ ವಿಶೇಷವಿಲ್ಲ , ಆದರೆ ಅದನ್ನು ಹೇಗೆ ನಡೆಸುತ್ತೀರಿ ಎನ್ನುವುದರಿಂದ ಚಮತ್ಕಾರವನ್ನೇ ಸೃಷ್ಟಿಸಬಹುದು . ಹೇಗೆ ? ಸಂಗಾತಿ ಮೆಚ್ಚುವಂತೆ ಮಾಡುತ್ತೀರಿ ಎಂಬುದು ಸರಿಯೆ , ಆದರೆ ಸ್ಪರ್ಶದ ಮೂಲಕ ‘ಇದು ನಾನು , ನಾನು ಹೀಗೆ’ ಎಂದು ನಿಮ್ಮನ್ನು ನೀವು ಹೇಗೆ ತೋರ್ಪಡಿಸುತ್ತ ಬಯಲಾಗುತ್ತೀರಿ ಎನ್ನುವುದೇ ಅತ್ಯಂತ ಮಹತ್ವದ್ದು . ಕಾಮಶಾಸ್ತ್ರದ ಬಗೆಗೆ ಅನೇಕ ಪುಸ್ತಕಗಳು ಹೊರಬಂದಿದ್ದು , ಬಹುತೇಕ ಎಲ್ಲವೂ ‘ಸಂಗಾತಿಯನ್ನು ಹೇಗೆ ತೃಪ್ತಿಪಡಿಸಬೇಕು’ ಎನ್ನುವುದಕ್ಕೆಂದೇ ಬರೆದಂತಿದ್ದು , ಹೀಗೆ ಮಾಡಿ - ಮಾಡಬೇಡಿ ಎನ್ನುವ ಪಟ್ಟಿಯನ್ನು ಮುಂದಿಡುತ್ತವೆ . ಪ್ರಶ್ನೆ ಏನೆಂದರೆ , ‘ ನಾನು ಹೀಗೆ’ ಎಂಬುದನ್ನು ಮುಚ್ಚಿಟ್ಟು ‘ನಿನಗೆ ಸುಖ ಸಿಕ್ಕರೆ ಸಾಕು , ನನ್ನನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ’ ಎನ್ನುವುದರಲ್ಲಿ ಅರ್ಥವಿದೆಯೆ ? ಸಂಗಾತಿಯನ್ನು ಮೆಚ್ಚಿಸುವುದಕ್ಕಿಂತ ನಿಮ್ಮ ಅಸ್ಮಿತೆಯನ್ನು ( Identity) ಬಯಲಿಗೆ ತರುವುದು ಬಲುಮುಖ್ಯ ಎಂಬುದನ್ನು ಹೇಳಿದ ಡೇವಿಡ್ ಸ್ನಾರ್ಷ್‌ಗೆ ಯಾರೂ ಸಾಟಿಯಿಲ್ಲ . ಯಾಕೆಂದರೆ , ನೀವು ಸಂಗಾತಿಯ ಒಡನಾಟದಲ್ಲಿ ಎಷ್ಟು ತೆರೆದುಕೊಳ್ಳುತ್ತೀರೋ ಅಷ್ಟೊಂದು ಅವರಿಗೆ ಹಾಗೂ ನಿಮಗೆ ನೀವೇ – ಅರ್ಥವಾಗುತ್ತೀರಿ . ಅನ್ಯೋನ್ಯತೆ ಬೆಳೆಸಿಕೊಳ್ಳುವ ರೀತಿಯೇ ಇದು !

ಆದರೆ ಕೂಟದಲ್ಲಿ ಸಂಗಾತಿಗೆ ತನ್ನನ್ನು ತಾನು ಪ್ರಾಮಾಣಿಕವಾಗಿ ತೋರ್ಪಡಿಸುವುದು ಹೆಚ್ಚಿನವರಿಗೆ ದೊಡ್ಡ ಸವಾಲು . ಉದಾಹರಣೆಗೆ , ಮುತ್ತು ಕೊಡುವಂಥ ಸರಳಾತಿಸರಳ ವಿಷಯವನ್ನೇ ತೆಗೆದುಕೊಳ್ಳಿ . ( ಮುತ್ತಿನ ಬಗೆಗೆ ಮುಂಚೆ ಹೇಳಿದ್ದೆ : ಕಂತು ೧೭೧ ನೋಡಿ ). ಬದ್ಧಸಂಗಾತಿಗೆ ಯಾವ ರೀತಿ ಮುತ್ತುಕೊಡುತ್ತೀರಿ ಎನ್ನುವುದು ನಿಮ್ಮ ಬಗೆಗೆ ಸಾಕಷ್ಟು ತಿಳಿಸುತ್ತದೆ– ಹಾಗೆಯೇ ಮುತ್ತು ತಪ್ಪಿಸಿಕೊಳ್ಳುವುದೂ ಕೂಡ . ಉದಾ . ಒಬ್ಬಳು ತನ್ನ ಪ್ರೇಮಿಯೊಡನೆ ಅಧರಗಳ ಬೆಸುಗೆಯನ್ನು ಎಷ್ಟು ಹೊತ್ತಾದರೂ ಅನುಭವಿಸುತ್ತಾಳೆ ; ಆದರೆ ಅವನ ನಾಲಿಗೆ ತನ್ನ ಬಾಯೊಳಗೆ ಹೋಗದಿರಲಿ ಎಂದು ಹಲ್ಲು ಕಚ್ಚಿಕೊಂಡಿರುತ್ತಾಳೆ – ಇದನ್ನು ದಾಟಿ ನಿನಗೆ ಪ್ರವೇಶವಿಲ್ಲ ಎನ್ನುವಂತೆ . ಕೆಲವರು ‘ಹಳೆಯ’ ದಂಪತಿಗಳು ಕೂಟವನ್ನು ಮುಂದುವರಿಸಿದರೂ ಕ್ರಮೇಣ ಮುತ್ತು ನಿಲ್ಲಿಸಿಬಿಡುತ್ತಾರೆ – ನಿನ್ನೊಡನೆ ಮುಖಾಮುಖಿ ಆಗಲಾರೆ ಎನ್ನುವಂತೆ . ಇಲ್ಲೊಬ್ಬನು ಹೆಂಡತಿ ಮುತ್ತು ಕೊಡಲು ಬಂದರೆ ಅದನ್ನು ತಳ್ಳಿಹಾಕುತ್ತ ಆಕೆಯ ಬಟ್ಟೆಯೊಳಗೆ ಸೇರಲು ನೋಡುತ್ತಾನೆ – ನಿನ್ನಿಂದ ಸುಖ ಬೇಕು , ಆದರೆ ಬಾಂಧವ್ಯ ಬೇಡ ಎನ್ನುವಂತೆ . ಇಂಥವರಲ್ಲಿ ಸಂಭೋಗ ನಡೆಯುತ್ತಿದ್ದರೂ ಬಗೆಹರಿಸಲಾಗದೆ ಮೂಲೆಗೆ ತಳ್ಳಿದ ಸಮಸ್ಯೆಗಳು ರಾಶಿಯಾಗಿದ್ದರೆ ಆಶ್ಚರ್ಯವಿಲ್ಲ .

ಕೆಲವರಿಗೆ ದೀರ್ಘ ಚುಂಬನವು ಸಮಸ್ಯೆಯಾಗಿ ಕಾಡುತ್ತದೆ . ತುಟಿಗಳ ಮಿಲನದಲ್ಲಿ ಹೆಚ್ಚುಹೊತ್ತು ತೊಡಗಿರಲು ಇವರಿಗಾಗದು . ಹಾಗಾಗಿ , ಒಂದೋ ಆತುರದಿಂದ ಮುತ್ತು ಮುರಿಯುತ್ತ ‘ಮುಂದಿನದಕ್ಕೆ’ ಧಾವಿಸುತ್ತಾರೆ ; ಅಥವಾ ನಡುವೆಯೇ ಇಷ್ಟು ಸಾಕೆಂದು ವಿಮುಖರಾಗುತ್ತಾರೆ . ಇದು ನಿಮ್ಮ ಅನುಭವಕ್ಕೂ ಬಂದಿರಬಹುದು . ದೀರ್ಘ ಚುಂಬನ ಯಾಕೆ ಸುಲಭವಲ್ಲ ಎಂದರೆ , ನಿಮ್ಮ ಗಮನವನ್ನು ಒಂದೇ ಕಡೆ ಬಹುಕಾಲ ಕೇಂದ್ರೀಕರಿಸಬೇಕಾಗುತ್ತದೆ . ಅದಕ್ಕಾಗಿ ಮೊದಲು ಮನಸ್ಸನ್ನು ತೆರೆದುಕೊಳ್ಳಬೇಕಾಗುತ್ತದೆ . ಸಂಗಾತಿಯನ್ನು ನಿಮ್ಮೊಳಗೆ ಬರಮಾಡಿಕೊಳ್ಳಬೇಕಾಗುತ್ತದೆ . ನಿಮ್ಮ ಮೇರೆಗಳ ಅತಿಕ್ರಮಣವಾಗಲು ಒಪ್ಪಬೇಕಾಗುತ್ತದೆ . ಒಬ್ಬರ ಮೇಲುಗೈಗೆ ಇನ್ನೊಬ್ಬರು ಶರಣಾಗಬೇಕಾಗುತ್ತದೆ . ಪ್ರಜ್ಞಾವಂತರಿಗೆ ಇದೆಲ್ಲ ರೋಚಕವಾದರೂ ಸಾಮಾನ್ಯರಿಗೆ ಸುಲಭವಲ್ಲ . ಯಾಕೆಂದರೆ , ಪರರ ಆಕ್ರಮಣದಿಂದ ( ಅಥವಾ ಪ್ರಭಾವದಿಂದ ) ಕಾಪಾಡಿಕೊಳ್ಳುವುದು ನಮ್ಮ ಜೀವವಾಹಿಗಳಲ್ಲಿ ಲಕ್ಷಾಂತರ ವರ್ಷಗಳಿಂದ ಹಾಸುಹೊಕ್ಕಾಗಿದೆ . ಈ ‘ಎರಗು ಅಥವಾ ತೊಲಗು’ ಎನ್ನುವ ಪ್ರತಿಕ್ರಿಯೆಯು ( flight or fight response) ನಿಶ್ಚಿತವಾದುದನ್ನೇ ಬೇಡುತ್ತದೆ . ಅನಿಶ್ಚಿತತೆಯ ಆಚೆಗಿರುವ ಸುಖವನ್ನು ಹುಡುಕಲು ಅವಕಾಶ ಕೊಡುವುದಿಲ್ಲ ( ಸುಖ , ಸುರಕ್ಷಿತತೆ , ಅನಿಶ್ಚಿತತೆಗಳ ಬಗೆಗೆ ಇನ್ನೊಂದು ಸಲ ಮಾತಾಡೋಣ ). ಸಂಗಾತಿ ಮೈಚಳಿ ಬಿಟ್ಟು ಮುಂದುವರಿದರೆ ಮನಸ್ಸು ಎಚ್ಚರಿಕೆಯಿಂದ ಗಮನಿಸುತ್ತ , ಮುಂಬರುವ ಅನಿಶ್ಚಿತತೆಯನ್ನು ಎದುರಿಸಲು ಅಥವಾ ತಪ್ಪಿಸಿಕೊಳ್ಳಲು ತಂತ್ರ ಹೂಡುತ್ತದೆ . ಇದು ಮುತ್ತಿನಲ್ಲಷ್ಟೇ ಅಲ್ಲ , ಕೂಟದ ಯಾವುದೇ ಸಂದರ್ಭದಲ್ಲೂ ಆಗುವ ಸಂಭವವಿದೆ . ಅನಿಶ್ಚಿತತೆಯನ್ನು ಎದುರು ಹಾಕಿಕೊಳ್ಳಲು ಇಷ್ಟಪಡದವರು ಸರಳವಾದ ಎರಡು ನಿಮಿಷದ ಕಾರ್ಯಕ್ರಮದಲ್ಲೇ ಅಲ್ಪತೃಪ್ತರಾಗುತ್ತಾರೆ . ಈ ದೃಷ್ಟಾಂತ ನೋಡಿ : ಇವಳು ಮದುವೆಯ ಮೊದಲ ರಾತ್ರಿಯಿಂದಲೇ ಪ್ರತಿದಿನ ಸಂಭೋಗ ಬೇಕೆಂದು ಒತ್ತಾಯ ಮಾಡಿದ್ದಾಳೆ . ಆದರೆ ಮುತ್ತು ಎಂದರೆ ಆಗದು . ಯಾವೊತ್ತೂ ಪೂರ್ತಿ ನಗ್ನಳಾಗಿಲ್ಲ . ಸಂಭೋಗದಲ್ಲಿ ವೀರ್ಯಸ್ಖಲನದ ನಂತರ ಗಂಡನನ್ನು ದೂರತಳ್ಳುತ್ತ ಬಚ್ಚಲಿಗೆ ಧಾವಿಸುತ್ತಾಳೆ . ಬಸಿರಾದ ನಂತರ ಕೂಟದಿಂದ ದೂರವಿದ್ದಾಳೆ . ಮಗುವಾದ ನಂತರ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಗಂಡನನ್ನು ಹತ್ತಿರ ಬಿಟ್ಟುಕೊಳ್ಳದೆ ಗಂಡನಿಗೆ ಪ್ರಶ್ನೆಯಾಗಿದ್ದಾಳೆ . ಪ್ರೇಮಕಾಮದ ವಿಷಯದಲ್ಲಿ ಪ್ರಾಮಾಣಿಕವಾಗಿ ತೆರೆದುಕೊಳ್ಳಲು ಆಗದಿದ್ದರೆ ದಾಂಪತ್ಯ ಶಿಥಿಲವಾಗುತ್ತದೆ .

ಸಂಗಾತಿಯೊಡನೆ ತೆರೆದುಕೊಳ್ಳುವುದನ್ನು ಕಲಿಯುವುದು ಹೇಗೆ ? ಸಂಗಾತಿಯೊಡನೆ ತುಟಿಗಳಿಗೆ ತುಟಿಗಳನ್ನು ಸೇರಿಸಿ ನಿಧಾನವಾಗಿ , ಆಳವಾಗಿ ಮುತ್ತುಕೊಡುವುದರಲ್ಲಿ ತೊಡಗಿಕೊಳ್ಳಿ . ಕಣ್ಣುಗಳು ಮುಚ್ಚಿಕೊಂಡಿದ್ದು , ಗಮನವು ಸಂಗಾತಿಯ ಕಡೆಗಿರದೆ ನಿಮ್ಮ ಎದೆಯಾಳದೊಳಗೆ ಇರಲಿ ... ಈಗ , ಬರುವ ಸ್ಪರ್ಶವನ್ನು ಸ್ವೀಕರಿಸುತ್ತ ನಿಮ್ಮ ಅಂತರಂಗವನ್ನು ಅನ್ವೇಷಿಸಿ . ನಿಮ್ಮೊಳಗೆ ಏನೇನು ಅನಿಸಿಕೆಗಳು , ವಿಚಾರಗಳು ಬರುತ್ತಿವೆ ? ಏನೇನು ಭಾವನೆಗಳು ಹುಟ್ಟುತ್ತಿವೆ ? ಏನು ಅನುಭವ ಆಗುತ್ತಿದೆ ? ಒಟ್ಟಾರೆ ಗಮನವನ್ನು ನಿಮ್ಮ ಕಡೆಗೇ ಕೇಂದ್ರೀಕರಿಸಿ . ನಿಮ್ಮಲ್ಲೊಬ್ಬರು ಮುತ್ತಿನಿಂದ ಬೇರ್ಪಟ್ಟಾಗ ಎಷ್ಟು ಸಮಯ ಕಳೆದಿರಿ ಎಂದು ನೋಡಿ . ಐದು ಸೆಕೆಂಡ್ ಒಳಗೆ ಬೇರ್ಪಟ್ಟರೆ ಬೇರ್ಪಡುವ ಮುಂಚೆ ನಿಮ್ಮೊಳಗೆ ಯಾವ ಭಾವವಿತ್ತು ಎಂದು ಯೋಚಿಸಿ . ಈಗ ಮತ್ತೆ ಶುರುಮಾಡಿ , ಮುಂಚಿಗಿಂತ ಹೆಚ್ಚುಹೊತ್ತು ಒಳಗೊಳ್ಳಲು ಪ್ರಯತ್ನಿಸಿ . ಕಸಿವಿಸಿ ಎನಿಸಿದರೂ , ಮನಸ್ಸು ಎಲ್ಲೆಲ್ಲೋ ಅಲೆದರೂ ಬಿಡದೆ ಮುಂದುವರಿಸಿ . ಎರಡು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಹೊತ್ತು ಮುತ್ತಿನಲ್ಲಿ ತೊಡಗಿದ ನಂತರ ನಿಮ್ಮ ಅನುಭವವನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ .

ಉಚಿತ ಸಹಾಯವಾಣಿಗೆ ಸಂಪರ್ಕಿಸಿ : 8494944888.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT