ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ರಾಷ್ಟ್ರೀಯ ವೈದ್ಯರ ದಿನ: ವೈದ್ಯ–ರೋಗಿ ಬಾಂಧವ್ಯ ಹೆಚ್ಚಲಿ

Last Updated 30 ಜೂನ್ 2021, 21:43 IST
ಅಕ್ಷರ ಗಾತ್ರ

ವೈದ್ಯೋ ನಾರಾಯಣೋ ಹರಿಃ ಎನ್ನುವ ಕಾಲವೊಂದಿತ್ತು. ವೈದ್ಯನನ್ನು ಸಾಕ್ಷಾತ್ ಭಗವಂತನ ಸ್ವರೂಪ ಎಂದು ಪರಿಗಣಿಸುತ್ತಿದ್ದ ಆ ದಿನಗಳು ಇನ್ನು ಕೇವಲ ನೆನಪಾಗಿ ಉಳಿಯುತ್ತವೆಯೇನೋ? ಕೆಲವು ದಶಕಗಳ ಹಿಂದೆ ಮೆರಿಟ್‍ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೆಲ್ಲರೂ ವೈದ್ಯಕೀಯ ಶಿಕ್ಷಣದತ್ತ ಒಲವು ತೋರುತ್ತಿದ್ದರು. ಅದಕ್ಕೆ ಕಾರಣ ಆ ವೃತ್ತಿಯಲ್ಲಿ ಇದ್ದ ಮಾನವೀಯ ಸ್ಪರ್ಶ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ವಿಶೇಷ ಅವಕಾಶ. ರೋಗಿಯ ನೋವು ನಿವಾರಿಸಿದಾಗ ಸಿಗುತ್ತಿದ್ದ ಒಂದಿಷ್ಟು ಸಾರ್ಥಕ ಭಾವ ಮತ್ತು ಆ ವೃತ್ತಿಗೆ ಇದ್ದ ಉನ್ನತ ಗೌರವವೂ ಬಹಳಷ್ಟು ಜನರನ್ನು ಆಕರ್ಷಿಸಿದ್ದುಂಟು.

ಹಾಗೆಂದು ವೈದ್ಯರಾಗುವುದು ಸುಲಭವಲ್ಲ. ಅಧ್ಯಯನವೊಂದು ಹೇಳುವಂತೆ ವಿಶ್ವದ ಅತ್ಯಂತ ಕಠಿಣವಾದ ವ್ಯಾಸಂಗವಿದು. ಹತ್ತು ವರ್ಷಗಳ ಕಠಿಣ ಪರಿಶ್ರಮದ ನಂತರವೇ ಒಂದು ವಿಶೇಷ ವಿಷಯತಜ್ಞನಾಗುವುದು ಸಾಧ್ಯ. ವೃತ್ತಿಗಿಳಿದ ಮೇಲೆಯೂ ಆತನ ಬವಣೆಗಳು ಮುಗಿಯುವುದಿಲ್ಲ. ವೃತ್ತಿಯ ಒತ್ತಡದಿಂದಾಗಿ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಲೇ ಸಾಗಬೇಕು. ಆದರೆ ಈ ಎಲ್ಲ ಕಷ್ಟಗಳ ನಡುವೆಯೂ ಆತನಿಗೆ ಅಲ್ಲಿ ಸಂತೃಪ್ತಿ, ಸುರಕ್ಷತೆ ಇತ್ತು. ಗುಣಮುಖರಾದವರು ತೋರುತ್ತಿದ್ದ ಗೌರವ ಮತ್ತು ಕೃತಜ್ಞತೆ ಅವನನ್ನು ಇನ್ನಷ್ಟು ಸೇವೆ ಮಾಡಲು ಪ್ರೋತ್ಸಾಹಿಸುತ್ತಿತ್ತು.

ಆದರೆ ಪರಿಸ್ಥಿತಿ ಬದಲಾಗಿದೆ. ವೈದ್ಯರನ್ನು ದೇವರೆಂದು ಆರಾಧಿಸುವ ದಿನಗಳು ಕಳೆದು ಹೋಗಿವೆ. ಆತನನ್ನು ಮಾನವೀಯತೆಯಿಲ್ಲದ ವ್ಯಾಪಾರಿ ಮನೊಭಾವದವನು ಎಂದು ಬಿತ್ತರಿಸಲಾಗುತ್ತಿದೆ. ಆತನ ನಿಯಂತ್ರಣದಲ್ಲಿಲ್ಲದ ಕಾರಣದಿಂದ ರೋಗಿಯ ಸಾವು ಸಂಭವಿಸಿದರೂ ಅದಕ್ಕೂ ಅವನ ನಿರ್ಲಕ್ಷ್ಯತನವೇ ಹೊಣೆ ಎಂದು ಅರ್ಥೈಸಲಾಗುತ್ತಿದೆ. ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಯ ಪ್ರಾಣಕ್ಕೆ ಹಾನಿಯಾದರೆ ಹಿಂದು ಮುಂದು ಯೋಚಿಸದೇ ಆತನ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಆಸ್ಪತ್ರೆಗಳ ಪರಿಕರಗಳನ್ನು ಧ್ವಂಸ ಮಾಡಲಾಗುತ್ತಿದೆ. ಇದರ ಪರಿಣಾಮವೇನು ಗೊತ್ತೆ? ಇಂದಿನ ವಿದ್ಯಾರ್ಥಿಗಳು ವೈದ್ಯವೃತ್ತಿಗೆ ಇಳಿಯಲು ಹಿಂದು ಮುಂದು ನೋಡುತ್ತಿದ್ದಾರೆ. ಒಂದು ವೇಳೆ ಪದವಿಯನ್ನು ಇಲ್ಲಿ ಪಡೆದರೂ ಹೊರ ದೇಶಗಳಲ್ಲಿ ವೃತ್ತಿಯನ್ನು ಮುಂದುವರೆಸುವುದರ ಬಗ್ಗೆ ಅನೇಕರು ವಿಚಾರ ಮಾಡುತ್ತಿದ್ದಾರೆ.

ಈ ಬದಲಾವಣೆಗೆ ಕಾರಣವೇನು ಎಂದು ಯೋಚಿಸುವುದಾದರೆ, ಎಲ್ಲೋ ಒಬ್ಬಿಬ್ಬರು ವೈದ್ಯರು ಹಣದ ಆಮಿಷಕ್ಕೊಳಗಾಗಿ ದುರಾಚಾರಗಳನ್ನೆಸಗಿರಬಹುದು. ಎಲ್ಲೋ ಒಂದರೆಡು ಸಂದರ್ಭಗಳಲ್ಲಿ ವೈದ್ಯರ ನಿರ್ಲಕ್ಷ್ಯತನದಿಂದ ರೋಗಿಗೆ ಹಾನಿಯಾಗಿರಬಹುದು. ಆದರೆ ಇದಕ್ಕಾಗಿ ಎಲ್ಲ ವೈದ್ಯರನ್ನೂ ಸಾಮಾನ್ಯೀಕರಿಸುವುದು ಎಷ್ಟರ ಮಟ್ಟಿಗೆ ಸರಿ? ಇಂದಿಗೂ ಹತ್ತು ರೂಪಾಯಿಯಷ್ಟೇ ಸಲಹಾ ಶುಲ್ಕವನ್ನು ತೆಗೆದುಕೊಂಡು ರೋಗಿಗಳ ಸೇವೆಯನ್ನು ಮಾಡುತ್ತಿರುವ ವೈದ್ಯರು ನಮ್ಮೊಂದಿಗಿದ್ದಾರೆ. ತನು-ಮನವನ್ನು ಅರ್ಪಿಸಿ ನಿಃಸ್ವಾರ್ಥವಾಗಿ ರೋಗಿಗಳ ಶುಶ್ರೂಷೆ ಮಾಡುತ್ತಿರುವ ವೈದ್ಯರು ನಮ್ಮೊಂದಿಗಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರು ನಿರೀಕ್ಷಿಸುವುದು ಒಂದಿಷ್ಟು ಗೌರವ ಮತ್ತು ಕೃತಜ್ಞತೆಯನ್ನು.

ಇತ್ತೀಚೆಗೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ಸಾಂಕ್ರಾಮಿಕವನ್ನೇ ತೆಗೆದುಕೊಳ್ಳಿ. ವೈರಾಣುವಿನ ವರ್ತನೆಯೇ ಸರಿಯಾಗಿ ಗೊತ್ತಿರದ ಸಮಯದಲ್ಲಿಯೂ ಯಾವ ವೈದ್ಯನೂ ಚಿಕಿತ್ಸೆ ನೀಡುವುದಿಲ್ಲ ಎಂದು ಮನೆಯಲ್ಲಿ ಕೂರಲಿಲ್ಲ. ಬದಲಾಗಿ ಕುಟುಂಬದವರೇ ರೋಗಿಯ ಹತ್ತಿರ ಸುಳಿಯಲು ಹಿಂಜರಿದಾಗ ಈತ ಚಿಕಿತ್ಸೆಗೆ ಮುಂದಾದ. ಉಸಿರುಗಟ್ಟಿಸುವ ಪಿಪಿಇ ಉಡುಗೆಯಿಂದ ಪೂರ್ತಿ ದೇಹವನ್ನು ಮುಚ್ಚಿಕೊಂಡು ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿದ. ಈ ಪ್ರಕ್ರಿಯೆಯಲ್ಲಿ ಸಾವಿರಕ್ಕೂ ಹೆಚ್ಚು ವೈದ್ಯರು ಸೋಂಕು ತಗುಲಿ ಮೃತರಾದರು. ಕೋವಿಡ್ ಯೋಧರು ಎಂದು ಸರ್ಕಾರ, ಸಮಾಜ ಗೌರವಿಸಿದರೂ ಸಾಕಷ್ಟು ಕಡೆ ವೈದ್ಯರನ್ನು ಹಿಂಸಿಸಲಾಯಿತು. ಇದರಿಂದಾಗಿ ತುರ್ತು ಚಿಕಿತ್ಸಾ ಘಟಕಗಳಲ್ಲಿ ಕೆಲಸ ನಿರ್ವಹಿಸಲು ಎಷ್ಟೋ ವೈದ್ಯರು ಹೆದರಿದ್ದುಂಟು, ಪೋಲೀಸ್ ರಕ್ಷಣೆಗಾಗಿ ಮೊರೆ ಹೋದದ್ದುಂಟು.

ಕಾಯಿಲೆಗಳ ವರ್ತನೆ ಮತ್ತು ಚಿಕಿತ್ಸೆಗೆ ರೋಗಿಯ ದೇಹದ ಸ್ಪಂದನೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ. ಅಲ್ಲದೆ ವೈದ್ಯರ ನಿಯಂತ್ರಣದಲ್ಲಿಲ್ಲದ ಎಷ್ಟೋ ಅಂಶಗಳೂ ಚಿಕಿತ್ಸೆಯ ವೇಳೆಯಲ್ಲಿ ತೊಡರನ್ನು ತರುತ್ತವೆ ಎಂಬುದನ್ನು ಪ್ರತಿಯೊಬ್ಬರೂ ಅರಿತಿರಬೇಕು. ರೋಗಿಗೆ ಔಷಧೋಪಚಾರದ ಜೊತೆಯಲ್ಲಿಯೇ ಮಾನವೀಯ ಸ್ಪಂದನೆಯೂ ಮುಖ್ಯ ಎಂಬುದನ್ನು ವೈದ್ಯನೂ ಮನಗಾಣಬೇಕು. ಕಾಯಿಲೆಯನ್ನು ಗುಣಪಡಿಸುವುದರ ಜೊತೆಯಲ್ಲಿ ಜನರ ಆರೋಗ್ಯವರ್ಧನೆಗೂ ಆತ ಸಲಹೆ ನೀಡಬೇಕು.

ಡಾ. ಬಿ. ಸಿ. ರಾಯ್‍ರವರ ಜನ್ಮದಿನದ ನೆನಪಿಗಾಗಿ ಆಚರಿಸುತ್ತಿರುವ ವೈದ್ಯರ ದಿನದಂದು ರೋಗಿ-ವೈದ್ಯರ ನಡುವಿನ ಬಾಂಧವ್ಯ ವೃದ್ಧಿಸಲಿ ಎಂದು ಆಶಿಸೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT