ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ–ಕುಶಲ: ಅತಿಯಾದ ಆಲೋಚನೆಗಳು ಬೇಡ

Published 8 ಆಗಸ್ಟ್ 2023, 1:10 IST
Last Updated 8 ಆಗಸ್ಟ್ 2023, 1:10 IST
ಅಕ್ಷರ ಗಾತ್ರ

ಮುಖ್ಯವಾಗಿ ಎರಡು ಬಗೆಯ ಆಲೋಚನೆಗಳು ಒಂದಕ್ಕೊಂದು ತಳುಕು ಹಾಕಿಕೊಂಡು ನಮ್ಮ ನೆಮ್ಮದಿಯನ್ನು ಕೆಡಿಸುತ್ತವೆ. ಮೊದಲನೆಯದು: ‘ನಾಳೆ ಏನಾಗುವುದೋ, ಹೇಗೋ, ಏನೋ; ಹೀಗಾಗಿಬಿಟ್ಟರೆ, ಹಾಗಾಗಿಬಿಟ್ಟರೆ?’ ಎಂದು ಬರೀ ಕೆಟ್ಟದ್ದನ್ನೇ ಕಲ್ಪನೆ ಮಾಡಿಕೊಳ್ಳುತ್ತಾ, ಕಲ್ಪನೆಯಲ್ಲೇ ನರಳುತ್ತಾ ಇರುವುದು. ಎರಡನೆಯದು: ‘ನನ್ನಲ್ಲೇನೋ ದೋಷವಿದೆ; ನಾನು ಏನೋ ಒಂದು ರೀತಿಯಲ್ಲಿ ‘ಸರಿ’ಯಾಗಿಲ್ಲ; ಎಲ್ಲದರಲ್ಲೂ ಸೋಲು, ಹತಾಶೆ ನನಗೆ ಕಟ್ಟಿಟ್ಟ ಬುತ್ತಿ’ – ಹೀಗೆ ಇನ್ನೂ ಏನೇನೋ ಸ್ವ-ನಂಬುಗೆಯ ಬಗೆಗಿನ ಆಲೋಚನೆಗಳು. ಇವುಗಳ ಮೇಲೆ ನಮಗೆ ನಿಯಂತ್ರಣವೇ ಇರುವುದಿಲ್ಲ; ಒಂದು ಆಲೋಚನೆ ಇನ್ನೊಂದರ ಹಿಂದೆ ಸ್ವಯಂಚಾಲಿತವಾಗಿ ಬರುತ್ತಲೇ ಇರುವುದರಿಂದ ಇಂತಹ ಆಲೋಚನೆಗಳನ್ನು ‘automatic negative thoughts’ ಎನ್ನುತ್ತಾರೆ. ಇದೇ ಅತಿಯಾದ ಆಲೋಚನೆ ಅಥವಾ ‘over thinking’.

ಹೀಗೆ ಅತಿಯಾದ ಅಲೋಚನೆಯಿಂದ ಬಳಲುವವರು ಮೂಲತಃ ಬಹಳ ಸೂಕ್ಷ್ಮಮನಸ್ಸಿನವರು; ಸಂವೇದನಾಶೀಲರೂ ಹೌದು ಎನ್ನುವುದನ್ನು ಮರೆಯಬಾರದು. ತಮ್ಮ ಸುತ್ತಲಿನ ಪ್ರಪಂಚವನ್ನು, ಜೀವನವನ್ನು, ತಮ್ಮ ಜೊತೆಗಿರುವವರ ನಡವಳಿಕೆಯನ್ನು, ತಮ್ಮಲ್ಲೇ ಆಗುತ್ತಿರುವ ಭಾವನಾತ್ಮಕ ಏರಿಳಿತಗಳನ್ನು ಬಲು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಇರುವ ಇಂತಹವರು ಆತಂಕಕ್ಕೆ, ಅತಿಯಾದ ಭಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಈ ರೀತಿಯಾದ ಸೂಕ್ಷ್ಮಪ್ರವೃತ್ತಿಯವರು ಬದುಕಿನ ಅನಿಶ್ಚಿತತೆಯಿಂದ, ಸಂಬಂಧಗಳ ಟೊಳ್ಳುತನದಿಂದ ಬಾಧಿತರೂ ಹೌದು. ಹಾಗಾಗಿ ಸದಾ ತಮ್ಮ ಹಿಡಿತ ತಪ್ಪಿ ಹೋಗುತ್ತಿರುವ ತಮ್ಮ ಬದುಕನ್ನು ಹೇಗಾದರೂ ಅಂಕೆಯಲ್ಲಿಟ್ಟುಕೊಳ್ಳುವ ಪ್ರಯತ್ನವಾಗಿ ‘ಆಲೋಚನೆಗಳನ್ನು’ ಬಳಸಿಕೊಳ್ಳುವ ಪ್ರಯತ್ನ ಇವರದು.

ಸ್ವಲ್ಪ ಮಟ್ಟಿಗಿನ ಆತಂಕ, ಆಲೋಚನೆ ಒಳ್ಳೆಯದೇ. ಇಲ್ಲದಿದ್ದರೆ ಅನಿರೀಕ್ಷಿತವಾಗಿ ಬದುಕಿನಲ್ಲಿ ಬರುವ ಎಷ್ಟೆಷ್ಟೋ ಕಷ್ಟ ನಷ್ಟಗಳನ್ನು ಯಾವ ಮಾನಸಿಕ ತಯಾರಿಯೂ ಇಲ್ಲದೆ, ಯಾವ ಮುನ್ಸೂಚನೆಯೂ ಇರದೇ ಎದುರಿಸುವುದು ಹೇಗೆ? ಆಲೋಚನೆ ಮತ್ತು ಅದು ತರುವ ಆತಂಕಗಳು, ಅವುಗಳ ನಿವಾರಣೆಗಾಗಿ ಮತ್ತು ಅನಿರೀಕ್ಷಿತಗಳನ್ನು ಎದುರಿಸಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದಿರುವ ಯಾವ ಮಾನವಸಮಾಜವೂ ಬಹುಕಾಲ ಬಾಳುವುದಿಲ್ಲ. ಹಾಗಾಗಿ ಆಲೋಚನೆಗಳಿಗೆ, ಆತಂಕಕ್ಕೆ survival value (‘ರಕ್ಷಣಗುಣ’)  ಇದೆ; ಅದು ನೆಮ್ಮದಿಗೆ ಮಾರಕ ಹೌದು; ಆದರೆ ಸುರಕ್ಷೆಗೆ ಪೂರಕವೂ ಹೌದು! ಮಾನವಕುಲ ಸ್ವಲ್ಪ ಮಟ್ಟಿಗಿನ ಆತಂಕಕ್ಕೆ ಮತ್ತು ನೆಮ್ಮದಿಯನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುವುದಕ್ಕೆ ಒಗ್ಗಿಕೊಂಡೇ ವಿಕಸನವಾಗಿರುವುದು!

ಉದಾಹರಣೆಗೆ, ನಾಳೆ ನಮಗೆ ಆರ್ಥಿಕ ಸಂಕಷ್ಟಗಳು ಬರಬಹುದೆಂಬ ಆಲೋಚನೆ ಇಂದು ನಮಗೆ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಲು ಪ್ರೇರಕವಾಗುತ್ತದೆ. ಆದರೆ ಎಲ್ಲ ಬಗೆಯ ಆಲೋಚನೆಗಳೂ ಹೀಗೇ ನಮಗೆ ಸಹಾಯಕವಾದುದಲ್ಲ. ಕೆಲವೊಂದು ವಾಸ್ತವದ ಜೊತೆಗೆ ಯಾವ ನಂಟನ್ನೂ ಹೊಂದಿರದ ಯಾವುದೋ ಹಳೆಯ ಒಂದೋ ಎರಡೋ ಕಹಿನೆನಪನ್ನು ಆಧರಿಸಿದ ಋಣಾತ್ಮಕ ಆಲೋಚನೆಗಳಾಗಿರುತ್ತವೆ. ಉದಾಹರಣೆಗೆ, ಯಾವುದೋ ವಿಮಾನ ಅಪಘಾತದ ಸುದ್ದಿ ಓದಿ ವಿಮಾನದಲ್ಲಿ ಪ್ರಯಾಣಿಸುವಾಗ ಅಂಥದ್ದೇ ಅಪಘಾತವಾಗಿಬಿಟ್ಟರೆ ಎಂಬ ಅತಿಯಾದ ಆಲೋಚನೆಗಳಿಂದ ಬಾಧಿತರಾಗಿ ಹೊಸ ಹೊಸ ಜಾಗಗಳನ್ನು ನೋಡುವ ಅವಕಾಶದಿಂದ ವಂಚಿತರಾಗುವುದು, ಯಾರೋ ಎಂದೋ ಆಡಿದ ಟೀಕೆಯ ಮಾತುಗಳನ್ನು ಮನಸ್ಸಿನಲ್ಲಿ ಬೃಹದಾಕಾರಕಾಗಿ ಕಲ್ಪಿಸಿಕೊಂಡು ‘ನಾನು ಯಾವುದಕ್ಕೂ ಪ್ರಯೋಜನವಿಲ್ಲ’ ಎನ್ನುವ ತೀರ್ಮಾನಕ್ಕೆ ಬಂದುಬಿಡುವುದು. ಹೀಗೆ ಅತಿಯಾದ ಆಲೋಚನೆಗಳು ನಮ್ಮ ಜೀವನದ ಸಹಜ ಲಯಕ್ಕೆ ಅಡಚಣೆಗಳಾಗುವುದೂ ಉಂಟು.

ಮೊದಲು ಹೇಳಿದ ಎರಡು ಬಗೆಯ ಆಲೋಚನೆಗಳು ಒಂದಕ್ಕೊಂದು ತಳುಕು ಹಾಕಿಕೊಳ್ಳುವುದು ಹೇಗೆಂದರೆ: ‘ನನ್ನಲ್ಲೇನೋ ದೋಷವಿದೆ’ ಎಂದುಕೊಂಡಾಗ ‘ನನಗೇನೋ ಕೆಟ್ಟದ್ದು ಕಾದಿದೆ’ ಎಂದೆನಿಸುವುದು ಸಹಜ. ಹಾಗಿಲ್ಲದೇ ‘ನಾನು ನಿರ್ಮಲ, ಸಹಜ, ಸುಂದರ, ಪ್ರೀತಿಗೆ ಅರ್ಹ’ ಎಂದುಕೊಂಡಾಗ ‘ಎಲ್ಲ ಕಷ್ಟಗಳೂ ನನ್ನನ್ನು ಇನ್ನಷ್ಟು ಸುಂದರಗೊಳಿಸಲು, ಬೆಳೆಸಲು, ಸ್ವಚ್ಛಗೊಳಿಸಲು ಉಂಟಾಗುವಂಥದ್ದು’ ಎನಿಸಿ ಎಲ್ಲವನ್ನೂ ಸಮಚಿತ್ತದಿಂದ ನಿರ್ವಹಿಸಲು ಪ್ರೇರೇಪಿಸುತ್ತದೆ. ಹೀಗೆ ಆಲೋಚನೆಗಳು ಒಂದಕ್ಕೊಂದು ಸೇರಿಕೊಂಡು ಒಂದು ವಿಷದ ಸುಳಿಯನ್ನೇ ಸೃಷ್ಟಿಸುತ್ತವೆ.

ಈ ಬಗೆಯ ಆಲೋಚನೆಗಳ ಸುಳಿಯಿಂದ ತಪ್ಪಿಸಿಕೊಳ್ಳಲು ಸಹಾಯಕವಾಗಬಹುದಾದ ಕೆಲವು ಸಲಹೆಗಳು:

1. ಯಾವುದೇ ಘಟನೆಯನ್ನು ನಾವು ಕೇವಲ ‘ಆಲೋಚನೆಗಳಿಂದ’ ನಿಯಂತ್ರಿಸಲಾರೆವು. ನಾವೆಷ್ಟೇ ಆಲೋಚಿಸಿದರೂ ಬದುಕು ಸಂಪೂರ್ಣ ನಮ್ಮ ಹಿಡಿತದಲ್ಲಿಲ್ಲ. ಈ ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಬದುಕಿನ ಅನಿಶ್ಚಿತತೆಯೊಡನೆ ಶಾಂತಿಸಂಧಾನ ಮಾಡಿಕೊಳ್ಳುವುದು ನಿರಾಳವಾಗಿರುವುದಕ್ಕೆ ಸಹಾಯಕ.

2. ಜೀವನದಲ್ಲಿ ಕಷ್ಟಗಳು ಬಂದಾಗ ಅದನ್ನೆದುರಿಸುವ ಶಕ್ತಿಯೂ ಜೊತೆಗೇ ಬರುತ್ತದೆ ಎನ್ನುವುದು ಒಂದು ನಂಬಿಕೆ. ಜೀವನದಲ್ಲಿನ ಕೆಲವು ಕಷ್ಟಗಳನ್ನು ಎದುರಿಸಿದ ನೆನಪೂ ಈ ನಂಬಿಕೆಯನ್ನು ಪುಷ್ಟೀಕರಿಸುತ್ತದೆ. ‘ಕಷ್ಟ ಬಂದಾಗ ಅದನ್ನು ಎದುರಿಸೋಣ; ಅಲ್ಲಿಯವರೆಗೆ ಜೀವನವನ್ನು ಆಸ್ವಾದಿಸಿ ಶಾಂತವಾಗಿದ್ದುಕೊಂಡು ಕಷ್ಟಗಳನ್ನೆದುರಿಸಲು ಬೇಕಾದ ಸ್ಥೈರ್ಯ ಸಂಪಾದಿಸೋಣ’ ಎನ್ನುವ ನಿಲುವು ಕ್ಷೇಮ. ವಾಸ್ತವದಲ್ಲಿ ಕಷ್ಟಗಳೆದುರಾದಾಗ ಅದನ್ನು ನಿರ್ವಹಿಸಲು ಬೇಕಾದ ಅನೇಕ ಸಂಪನ್ಮೂಲಗಳು ಒದಗಿ ಬರುತ್ತವೆ. ಆದರೆ ಬರೀ ‘ಆಲೋಚನೆ’ಯಲ್ಲೇ ಕಷ್ಟಪಡುತ್ತಿರುವಾಗ ಅಂತಹ ಸಂಪನ್ಮೂಲಗಳನ್ನು, ನೆರವಿನ ಹಸ್ತಗಳನ್ನು ನಾವು ಗಣನೆಗೆ ತೆಗೆದುಕೊಳ್ಳದೇ ಎಲ್ಲವನ್ನೂ ಅತಿರೇಕವಾಗೇ ಚಿತ್ರಿಸಿಕೊಳ್ಳುತ್ತಿರುತ್ತೇವೆ.

3. ಅನೇಕ ರೀತಿಯ ಕೆಟ್ಟ ಆಲೋಚನೆಗಳು ಉಂಟಾಗುವಾಗ ಒಮ್ಮೊಮ್ಮೆ ‘ಅವು ನಿಜವೇನೋ’ ಎನ್ನುವ ಭ್ರಮೆಯೂ ಉಂಟಾಗುತ್ತದೆ. ಇದು ಆಲೋಚನೆಗಳು ತರುವ ಆತಂಕದ ಫಲ. ಆತಂಕ ನಾವು ವಾಸ್ತವವನ್ನು ಗ್ರಹಿಸುವ ರೀತಿಯಲ್ಲಿ ಮಾರ್ಪಾಡುಗಳನ್ನು ಮಾಡುತ್ತದೆ. ಒಮ್ಮೊಮ್ಮೆ ಆಲೋಚನೆಯಲ್ಲಿ ಚಿತ್ರಿಸಿಕೊಂಡಿದ್ದು ನಿಜದಲ್ಲಿ ಖಂಡಿತ ನಡೆಯುತ್ತದೆ, ಹಾಗಾಗಿ ಆಲೋಚನೆಯನ್ನು ನಿಯಂತ್ರಿಸಬೇಕು ಎನಿಸುತ್ತದೆ. ಇದು ಒಂದು ಬಗೆಯ ಭಯಮಿಶ್ರಿತ ಭ್ರಮೆಯಷ್ಟೇ! ಉದಾಹರಣೆಗೆ, ‘ನಾನು ನನ್ನ ನಿಯಂತ್ರಣವನ್ನು ಕಳೆದುಕೊಂಡು ಸಹೋದ್ಯೋಗಿಗಳೊಂದಿಗೆ/ ಮನೆಯವರೊಂದಿಗೆ ಅನುಚಿತವಾಗಿ ವರ್ತಿಸಿಬಿಟ್ಟರೆ?’ ಎಂಬ ಭಯ ನಿಜವಾಗಲೂ ಅಂತಹ ಘಟನೆ ಇನ್ನೇನು ನಡೆಯುವುದರಲ್ಲಿದೆ ಎಂಬ ಆತಂಕ ಹುಟ್ಟಿಸುತ್ತದೆ. ಆದರೆ ನಿಜದಲ್ಲಿ ಹಾಗೇನೂ ನಡೆಯುವುದಿಲ್ಲ. ಇಂತಹ ಪದೇಪದೇ ಎಲ್ಲಿಂದಲೋ ಬಂದು ಕಾಡಿಸುವ ಆಲೋಚನೆಗಳನ್ನು ‘'unwanted intrusive thoughts’ ಎನ್ನುತ್ತಾರೆ. ಇವುಗಳು ಉಂಟಾದಾಗ ವಾಸ್ತವಕ್ಕೂ ಆಲೋಚನೆಗೂ ನಡುವಿನ ಗೆರೆಯೇ ಅಳಿಸಿಹೋದಂತಹ ಭ್ರಮೆಯುಂಟಾಗುತ್ತದೆ. ಇದಕ್ಕೆ ಕಾರಣ ಮನಸ್ಸಿನ ಮೇಲೆ, ಆಲೋಚನೆಗಳ ಮೇಲೆ, ಭಾವನೆಗಳ ಮೇಲೆ ನಿಯಂತ್ರಣವಿಲ್ಲದೆ ಇರುವುದಲ್ಲ; ಬದಲಾಗಿ ಮನಸ್ಸಿನ ಮೇಲೆ, ಆಲೋಚನೆಗಳ ಮೇಲೆ, ಭಾವನೆಗಳ ಮೇಲೆ ಅತಿಯಾದ ನಿಯಂತ್ರಣವಿರುವುದು!

4. ಹೌದು, ಆಲೋಚನೆಗಳನ್ನು ನಾವು ನಿಯಂತ್ರಿಸಲಾರೆವು. ಹಾಗೆ ನಿಯಂತ್ರಿಸಲಾರೆವು ಎನ್ನುವುದು ಆತಂಕಕ್ಕೆ ಕಾರಣವಾಗಬೇಕಿಲ್ಲ. ಅತಿ ಆಲೋಚನೆಗಳು ವಾಸ್ತವದ ಪ್ರತಿಬಿಂಬವಾಗಿರುವುದಿಲ್ಲ. ಅವು ನಮ್ಮ ಅಭದ್ರತೆಯ ಭಾವದ ಪ್ರತಿಬಿಂಬಗಳಷ್ಟೇ. ಆಲೋಚನೆಗಳು ತಮ್ಮಷ್ಟಕ್ಕೆ ಹೇಗೆ ಬರುತ್ತವೆಯೋ ಹಾಗೆ ತಮ್ಮಷ್ಟಕ್ಕೆ ಹೊರಟು ಹೋಗುತ್ತವೆ ಕೂಡ. ಆದರೆ ಮುಖ್ಯವಾಗಿ ನಾವು ಅಂತಹ ಆಲೋಚನೆಗಳಿಗೆ ಯಾವುದೇ ಪ್ರಾಮುಖ್ಯವನ್ನು ಕೊಡಬಾರದು ಅಷ್ಟೇ.

5. ಅತಿಯಾದ ಆಲೋಚನೆಗಳ ಬಾಧೆ ಹೆಚ್ಚಾದಾಗ ದೀರ್ಘವಾಗಿ ಉಸಿರಾಡುವ ಅಭ್ಯಾಸ ಮಾಡಿಕೊಳ್ಳುವುದು ಸಹಾಯಕ. ಹಾಗೆಯೇ ಅಂತಹ ಆಲೋಚನೆಗಳು ಬಂದಾಗ ಆ ಆಲೋಚನೆಗಳನ್ನು ಪುರಸ್ಕರಿಸುವ, ತಿರಸ್ಕರಿಸುವ, ಯಾವ ಪ್ರಯತ್ನವನ್ನೂ ಮಾಡದೇ ಸುಮ್ಮನೇ ಸ್ವೀಕರಿಸಿ ಅವು ಕೇವಲ ‘ಬಂದು ಹೋಗುವ ನಿರಪಾಯಕಾರಿ ಆಲೋಚನೆಗಳಷ್ಟೇ’ ಎಂದುಕೊಂಡು ಸ್ವಲ್ಪ ಅವುಗಳನ್ನು ಸಹಿಸುವ ತಾಳ್ಮೆಯುಂಟಾದರೆ ಕೆಲವು ನಿಮಿಷಗಳಲ್ಲೇ ಅವು ಮಾಯವಾಗುವುವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT