ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಏನಾದ್ರೂ ಕೇಳ್ಬೋದು’| ಮನೆಯಲ್ಲಿಯೇ ಮನೋದೈಹಿಕ ಆರೋಗ್ಯ

psychophysical problems
Last Updated 31 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಏಪ್ರಿಲ್ 7, ವಿಶ್ವ ಆರೋಗ್ಯ ದಿನ. ಇದು 75ನೇ ವರ್ಷಾಚರಣೆಯ ಸಂಭ್ರಮವೂ ಹೌದು (ಅಮೃತ ಮಹೋತ್ಸವ). ‘ಎಲ್ಲರಿಗೂ ಆರೋಗ್ಯ’ – ಈ ಅಮೃತ ಮಹೋತ್ಸವ ವರ್ಷದ ಘೋಷವಾಕ್ಯ.

Caption
Caption

ಆರೋಗ್ಯ ಎಂದ ಕೂಡಲೇ ನಮಗೆ ನೆನಪಾಗುವುದು ದೈಹಿಕ ಕಾಯಿಲೆಗಳ ವಿಷಯ ಮಾತ್ರ ಅಲ್ಲವೇ? ಹಾಗೆಯೇ, ಮಾನಸಿಕ ಕಾಯಿಲೆಗಳನ್ನು ಬೇರೆಯಾಗಿ ಗುರುತಿಸಲಾಗುತ್ತದೆ ಮತ್ತು ಅದರ ಚಿಕಿತ್ಸೆಗಾಗಿ ಬೇರೆಯ ತಜ್ಞ ವೈದ್ಯರಿರುತ್ತಾರೆ.

ಹೀಗೆ ಆರೋಗ್ಯವನ್ನು ದೈಹಿಕ ಮತ್ತು ಮಾನಸಿಕ ಎಂದು ವಿಭಜಿಸಿ ಬೇರೆಬೇರೆಯಾಗಿ ಚಿಕಿತ್ಸೆ ನೀಡುವುದು ಎಷ್ಟು ಮಟ್ಟಿಗೆ ಸೂಕ್ತ ಎನ್ನುವದರ ಕುರಿತು ಸಾಕಷ್ಟು ಸಂಶೋಧನೆ ಚರ್ಚೆಗಳೆಲ್ಲವೂ ಕಳೆದ 15-20 ವರ್ಷಗಳಿಂದ ನಡೆಯುತ್ತಿದೆ. ಇದರ ಕುರಿತಾಗಿ ಸ್ಪಷ್ಟವಾದ ಅಂತಿಮ ನಿರ್ಧಾರಕ್ಕೆ ಬರಲು ಇನ್ನೂ ಸಾಧ್ಯವಾಗುತ್ತಿಲ್ಲ. ಆದರೂ ಮನಸ್ಸು ದೇಹಗಳನ್ನು ವಿಭಜಿಸಿ ನೋಡುವುದು ಸೂಕ್ತವಾಗಲಾರದು ಎನ್ನುವ ಅರಿವಂತೂ ಮೂಡುತ್ತಿದೆ.

ಇದಕ್ಕೊಂದು ಉದಾಹರಣೆ ಇಲ್ಲಿದೆ. ರಮೇಶ್‌ ಸುಮಾರು 40 ವರ್ಷದ ಗೃಹಸ್ಥ. ಕೃಷಿ ಆಧಾರಿತ ಎರಡು ಮಕ್ಕಳ ಸುಖೀ ಸಂಸಾರ. ಆರು ತಿಂಗಳಿನಿಂದ ಇದ್ದಕ್ಕಿದ್ದಂತೆ ಅವನಿಗೆ ಮೈನಡುಕ ಶುರುವಾಗುತ್ತಿತ್ತು. ಯಾವಾಗ, ಹೇಗೆ, ಏಕೆ ಎನ್ನುವ ಯಾವ ಪ್ರಶ್ನೆಗೂ ಸ್ಪಷ್ಟ ಉತ್ತರವಿರಲಿಲ್ಲ. ರಕ್ತ ಪರೀಕ್ಷೆಯಿಂದ ಹಿಡಿದು ಎಂಆರ್‌ಐವರೆಗೆ ಹತ್ತಾರು ಪರೀಕ್ಷೆಗಳನ್ನು ಮಾಡಿಸಿ, ಸಾಕಷ್ಟು ಔಷಧಿಗ ಳನ್ನು ಬಳಸಿ ಲಕ್ಷದ ಹತ್ತಿರ ಹಣ ವ್ಯಯಿಸಿದ ಮೇಲೂ ಅವನಿಗೆ ಪರಿಹಾರಗಳು ಸಿಗಲಿಲ್ಲ. ನನ್ನ ಬಳಿ ಬಂದಾಗ ಸಂಪೂರ್ಣ ಹತಾಶನಾಗಿ ಜೀವಿಸುವ ಉತ್ಸಾಹವನ್ನೇ ಕಳೆದುಕೊಂಡಿದ್ದ. ನನ್ನೊಡನೆ ಮಾತು ಶುರು ಮಾಡುವಾಗ ಅವನ ದೇಹ ನಡುಗಲಾರಂಬಿಸಿತ್ತು. ಆತನಿಗೆ ದೈಹಿಕ ಸೂಚನೆಗಳ ಮೂಲಕ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ದೇಹ ಮನಸ್ಸುಗಳೆರೆಡನ್ನೂ ಒಟ್ಟಾಗಿ ನಿಭಾಯಿಸುವ ಅರಿವನ್ನು ಕೊಡಲು ಪ್ರಯತ್ನಿಸುತ್ತಾ ಹೋದೆ. ಒಂದೇ ತಿಂಗಳಿನಲ್ಲಿ ಆತ ಸಹಜ ಸ್ಥಿತಿಗೆ ಬಂದಿದ್ದ. ಇಂಥ ಹಲವು ಘಟನೆಗಳನ್ನು ಉದಾಹರಿಸಬಹುದು. ಹಾಗಿದ್ದರೂ ಇವುಗಳ ಆಧಾರದ ಮೇಲೆ ಎಲ್ಲಾ ದೈಹಿಕ ಕಾಯಿಲೆಗಳಿಗೆ ಮನೋಚಿಕಿತ್ಸೆಯಲ್ಲಿ ಪರಿಹಾರವಿದೆ ಎಂದು ತಿಳಿಯುವಂತಿಲ್ಲ. ಆದರೆ ದೇಹ ಮನಸ್ಸುಗಳನ್ನು ವಿಭಜಿಸಿ ಚಿಕಿತ್ಸೆ ನೀಡುವುದು ಅಷ್ಟೊಂದು ಪರಿಣಾಮಕಾರಿಯಾಗಲಾರದು ಎನ್ನುವುದಂತೂ ನಿಜ.

ಜನಸಾಮಾನ್ಯರು ದೇಹ ಮನಸ್ಸುಗಳನ್ನು ಒಟ್ಟಾಗಿ ತಿಳಿದುಕೊಳ್ಳಲು ಮನೆಗಳಲ್ಲೇ ಪ್ರಯತ್ನಿಸಬಹುದು. ಅಗತ್ಯವಿದ್ದಾಗ ವೈದ್ಯರನ್ನು ಸಂಪರ್ಕಿಸಲು ಮತ್ತು ಸಲಹೆ ಪಡೆಯಲು ಹಿಂಜರಿಯ ಬೇಕಿಲ್ಲ. ಆದರೆ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಅಥವಾ ನಿರಂತರವಾಗಿ ಔಷಧಿಗಳ ಅವಲಂಬನೆಯ ಅಗತ್ಯವಿದೆ ಎಂದಾಗ ಎಚ್ಚರಗೊಳ್ಳಬೇಕು. ಎಲ್ಲಾ ಕಾಯಿಲೆಗಳ ಮೂಲ ಮನಸ್ಸೇ ಆಗಿರಬೇಕೆಂದೇನಿಲ್ಲ. ಆದರೆ ಮಾನಸಿಕ ಏರುಪೇರುಗಳು ಕೆಲವೊಂದು ದೈಹಿಕ ಕಾಯಿಲೆಗಳಿಗೆ ಕಾರಣವಾಗಬಹುದು ಅಥವಾ ಇರುವ ಕಾಯಿಲೆಗಳನ್ನು ಹೆಚ್ಚು ಮಾಡಬಹುದು. ನಮ್ಮ ನಮ್ಮ ದೇಹ ಮನಸ್ಸುಗಳೊಡನೆ ನಾವೇ ಸಂಪರ್ಕ ಬೆಳೆಸಿಕೊಂಡು ನಮ್ಮ ಆರೋಗ್ಯವನ್ನು ಹೆಚ್ಚು ಸಕ್ಷಮವಾಗಿ ನಿಭಾಯಿಸಬಹುದು. ಜೊತೆ ಜೊತೆಗೆ ಕೌಟುಂಬಿಕ ಸಂಬಂಧಗಳು ಮತ್ತು ಸಾಮಾಜಿಕ ಜೀವನವನ್ನು ಸುಧಾರಿಸಿಕೊಳ್ಳಬಹುದು. ದೇಹ ಮನಸ್ಸುಗಳನ್ನು ಒಟ್ಟಾಗಿ ತಿಳಿದುಕೊಳ್ಳಲು ಮನೆಗಳಲ್ಲೇ ಹೀಗೆ ಪ್ರಯತ್ನಿಸಬಹುದು;

1. ದಿನಕ್ಕೆ ಹದಿನೈದು ನಿಮಿಷ ಸಮಯವನ್ನಾದರೂ ನಮಗಾಗಿಯೇ ಮೀಸಲಿಡಬೇಕು. ಆಗ ಏನೂ ಮಾಡದೆ ಏಕಾಂತದಲ್ಲಿ ಬೆನ್ನುಹುರಿಯನ್ನು ನೇರವಾಗಿಟ್ಟು ಸುಮ್ಮನೆ ಕುಳಿತು ಉಸಿರಾಟವನ್ನು ಗಮನಿಸಿ. ದೇಹದ ಎಲ್ಲಾ ಅಂಗಾಗಗಳನ್ನು ಗಮನಿಸುತ್ತಾ ಅಲ್ಲಿಂದ ಬರುತ್ತಿರುವ ಸೂಚನೆಗಳನ್ನು ಗ್ರಹಿಸಿ. ಹಾಗೆಯೇ ನಿಮ್ಮೊಳಗೆ ಮೂಡುತ್ತಿರುವ ಯೋಚನೆಗಳು ಮತ್ತು ಭಾವನೆಗಳನ್ನು ಗುರುತಿಸಿ. ಯಾವುದೇ ರೀತಿಯ ವಿಮರ್ಶೆ, ಸರಿತಪ್ಪುಗಳ ನಿರ್ಣಯ, ಬದಲಾವಣೆಯ ಪ್ರಯತ್ನಗಳನ್ನು ಮಾಡಬೇಕಿಲ್ಲ. ಸುಮ್ಮನೆ ಗಮನಿಸುವುದನ್ನು ಅಭ್ಯಾಸ ಮಾಡಿದರೆ ನಮ್ಮ ದೈಹಿಕ ಮಾನಸಿಕ ಸ್ಥಿತಿಯ ಕುರಿತಾಗಿ ಸಾಕಷ್ಟು ಮಾಹಿತಿಗಳು ಸಿಗುತ್ತವೆ.

2. ದಿನದ ಅರ್ಧ ಗಂಟೆಯಾದರೂ ಕುಟುಂಬದವರೆಲ್ಲಾ ಒಟ್ಟಾಗಿ ಕಳೆಯಲೇಬೇಕು. ಎಲ್ಲರೂ ಆ ದಿನ ಅವರು ಅನುಭವಿಸಿದ ಸಂತೋಷ, ನೋವು ಅವಮಾನ, ಬೇಸರ, ಸಿಟ್ಟು ಮುಂತಾದವುಗಳ ಕುರಿತು ಮಾತನಾಡಬೇಕು. ಘಟನೆಯ ವಿವರಗಳಿಗಿಂತ ಭಾವನೆಗಳ ಕಡೆ ಹೆಚ್ಚು ಗಮನ ಹರಿಸಿ. ಯಾರು ಯಾರಿಗೂ ಸಹಾಯ ಮಾಡುವ ಅಗತ್ಯವಿಲ್ಲ. ಸುಮ್ಮನೆ ಇನ್ನೊಬ್ಬರ ಮನಸ್ಥಿತಿಯನ್ನು ಕೇಳುವ, ತಿಳಿಯುವ ಕುತೂಹಲವಿದ್ದರೆ ಸಾಕು. ಪರಿಹಾರಗಳು ತಾವಾಗಿಯೇ ರೂಪುಗೊಳ್ಳುತ್ತವೆ. ವಯಸ್ಕರು ಮಕ್ಕಳಿಗೆ ಉಪದೇಶ ಬುದ್ಧಿವಾದ ನೀತಿಪಾಠಗಳನ್ನು ಕಡ್ಡಾಯವಾಗಿ ಹೇಳಬಾರದು! ಮಕ್ಕಳ ಮನಸ್ಥಿತಿಯನ್ನು ಅರಿಯುವ ಪ್ರಯತ್ನವೇ ಸಂಬಂಧಗಳನ್ನು ಅದ್ಭುತವಾಗಿ ಸುಧಾರಿಸುತ್ತದೆ. ಈ ಅರ್ಧ ಗಂಟೆಯ ಸಮಯದಲ್ಲಿ ಮೊಬೈಲ್‌, ಟಿ.ವಿ ಮುಂತಾದವುಗಳನ್ನು ನಿಲ್ಲಿಸುವುದೂ ಕಡ್ಡಾಯವಾಗಲೇಬೇಕು. ಪೋಷಕರು ಇದಕ್ಕೆ ಮಾದರಿಯಾಗಬೇಕು.

3. ದೈಹಿಕ ಆರೋಗ್ಯ ನಿರೀಕ್ಷೆಯಂತೆ ಸುಧಾರಿಸುತ್ತಿಲ್ಲ ಅಥವಾ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದಾದರೆ ಮನೋಚಿಕಿತ್ಸಕರ ಸಹಾಯ ಪಡೆಯಲು ಹಿಂಜರಿಯಬಾರದು. ಮಾನಸಿಕ ಸಮಸ್ಯೆಗಳು ದೌರ್ಬಲ್ಯವಲ್ಲ. ಅಥವಾ ಅದು ಅವಮಾನದ ವಿಚಾರವೂ ಆಗಬೇಕಿಲ್ಲ. ಏನೂ ಆಗಿಲ್ಲವೆಂದು ಇತರರನ್ನು ಅದಕ್ಕಿಂತ ಹೆಚ್ಚಾಗಿ ನಮ್ಮನ್ನು ನಾವೇ ನಂಬಿಸಿಕೊಂಡು ಮುಖವಾಡಗಳ ಮರೆಯಲ್ಲಿ ಬದುಕುವ ಪ್ರಯತ್ನದಿಂದ ಅಪಾಯಗಳು ಹೆಚ್ಚಾಗಬಹುದು. ಕಾನೂನಿನ ಸಮಸ್ಯೆಗಳಿಗೆ ವಕೀಲರಿಂದ, ದೈಹಿಕ ಸಮಸ್ಯೆಗಳಿಗೆ ವೈದ್ಯರಿಂದ ಅಥವಾ ಕರ ನಿರ್ವಹಣೆಯ ಬಗೆಗೆ ಲೆಕ್ಕಪರಿಶೋಧಕರಿಂದ ಸಹಾಯ ಪಡೆಯಬಹುದಾದರೆ ಮಾನಸಿಕ ವಿಷಯಗಳಲ್ಲಿ ಮನಃಶಾಸ್ತ್ರಜ್ಞ ರಿಂದ ಅಥವಾ ಮನೋಚಿಕಿತ್ಸಕರಿಂದ ಸಹಾಯ ಪಡೆಯುವುದರಲ್ಲಿ ಅವಮಾನವೇನಿರಲು ಸಾಧ್ಯ? ನಾವೆಲ್ಲ ದೇಹ ಬುದ್ಧಿ ಮನಸ್ಸುಗಳೆಲ್ಲವನ್ನೂ ವಿಭಜಿಸಿಕೊಳ್ಳದೆ ಜನಿಸಿದ್ದೇವೆ.

ಹಾಗಿದ್ದ ಮೇಲೆ ಸಮಗ್ರವಾಗಿಯೇ ಬದುಕನ್ನು ನಡೆಸಬೇಕೆಂಬುದೂ ಪ್ರಕೃತಿಯ ಆಶಯವಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT