ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ದಾಸ್ಯ ಪ್ರೀತಿಯಾಗಬಲ್ಲದೇ?

Last Updated 22 ನವೆಂಬರ್ 2019, 19:30 IST
ಅಕ್ಷರ ಗಾತ್ರ

ವಯಸ್ಸು 26, ನಾನೊಬ್ಬ ದಲಿತ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಆದರೆ ಮದುವೆಗೆ ಜಾತಿ ಅಡ್ಡ ಬರುತ್ತಿದೆ. ಹಾಗಾಗಿ ಇನ್ನೂ ಅಪ್ಪ-ಅಮ್ಮನಿಗೆ ಹೇಳಿಲ್ಲ. ನನಗಿಷ್ಟವಾದ ಶಿಕ್ಷಣ ಕೊಡಿಸಿದ ಅಪ್ಪ- ಅಮ್ಮನಿಗೆ ಸಾಮಾಜಿಕವಾಗಿ ಅವಮಾನವಾಗಬಹುದು, ನೋವಾಗಬಹುದು ಮತ್ತು ತಂಗಿಯರ ಭವಿಷ್ಯಕ್ಕೆ ತೊಂದರೆಯಾಗಬಹುದು ಎನ್ನುವ ಪಾಪಪ್ರಜ್ಞೆಯಿಂದ ನರಳುತ್ತಿದ್ದೇನೆ. ಅವರನ್ನು ಒಪ್ಪಿಸಿ ಮದುವೆಯಾಗೋಕೆ ಕಾಯಲು ಸಿದ್ಧಳಿದ್ದೇನೆ. ಜಾತಿ ವ್ಯವಸ್ಥೆಯನ್ನು ಮೀರಲು ಬಲವಾದ ಕಾನೂನು ಸಹಾಯ ಮಾಡುತ್ತಿಲ್ಲ. ಬಸವಣ್ಣ, ಬುದ್ಧ, ಕಾರಂತ, ಕುವೆಂಪುರವರ ಬರಹಕ್ಕೆ ಮಣಿದಿದ್ದೇನೆ. ವಾತ್ಸಲ್ಯ, ಆದರ್ಶ, ಮನಃಸಾಕ್ಷಿಗಳ ಸಂಘರ್ಷಕ್ಕೆ ಸಿಲುಕಿ ಸೋತಿದ್ದೇನೆ. ಇದನ್ನು ಹೇಗೆ ಬಗೆಹರಿಸಿಕೊಳ್ಳುವುದು?

ಹೆಸರು, ಊರು ಬೇಡ

ನಿಮ್ಮ ಓದುವ ಆಸಕ್ತಿ, ಬರಹದ ಸ್ಪಷ್ಟತೆಗಾಗಿ ಅಭಿನಂದಿಸುತ್ತೇನೆ. ಇದೇ ಸ್ಪಷ್ಟತೆ ನಿಮ್ಮ ಚಿಂತನೆ, ಜೀವನಶೈಲಿಗಳಿಗೂ ಬಂದರೆ ಹೇಗಿರುತ್ತದೆ? ನಿಮ್ಮ ಆದರ್ಶವಾಗಿರುವ ಸಾಧಕರೆಲ್ಲರೂ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದವರಲ್ಲವೇ? ಅವರನ್ನು ಆದರ್ಶವಾಗಿ ಇಟ್ಟುಕೊಂಡ ಮೇಲೆ ಪಾಲಿಸಿಬೇಕಲ್ಲವೇ?

ವಾಸ್ತವವಾಗಿ ಹಿಂಜರಿಕೆ ನಿಮ್ಮ ಮನಸ್ಸಿನಾಳದಲ್ಲಿದೆ. ಅದನ್ನು ಮೀರಲಾರದೆ ಕಾನೂನು, ಆದರ್ಶಗಳ ಬೆಂಬಲ ಹುಡುಕುತ್ತಾ ಅಸಹಾಯಕತೆಯಿಂದ ಕುಗ್ಗುತ್ತಿದ್ದೀರಿ. ಯಾರನ್ನಾದರೂ (ಮದುವೆಯಾದ ಮೇಲೆ ಪತಿಯನ್ನು ಕೂಡ) ಪ್ರೀತಿಸುವುದು ಎಂದರೆ ಅವರಿಚ್ಛೆಯನ್ನು ಮೀರದಿರುವುದು ಎನ್ನುವ ನಿಮ್ಮ ಅನಿಸಿಕೆ ಯಾವಾಗ ಮತ್ತು ಹೇಗೆ ಬಂದಿರಬಹುದು ಎಂದು ಯೋಚಿಸಿದ್ದಿರಾ? ಮಾನಸಿಕ ಮತ್ತು ಬೌದ್ಧಿಕ ದಾಸ್ಯಕ್ಕೂ, ಪ್ರೀತಿಗೂ ಇರುವ ವ್ಯತ್ಯಾಸವೇನು? ಕುಟುಂಬದವರ ನಿರೀಕ್ಷೆಯಂತೆ ಬದುಕುತ್ತಾ ನಿಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಅನುಭವಿಸುವ ಮಾನಸಿಕ ನೋವನ್ನು ಹತ್ತಿಕ್ಕುವುದು ಹೇಗೆ ಸಾಧ್ಯ? ಅದೆಲ್ಲಕ್ಕಿಂತ ಮುಖ್ಯವಾಗಿ ಕುಟುಂಬದವರಿಗೆ, ಸ್ನೇಹಿತರಿಗೆ, ಸಮಾಜಕ್ಕೆ ಕಂಟಕರಾಗದೆ ಭಿನ್ನವಾಗಿ ಯೋಚಿಸುವುದು, ಬದುಕುವುದು ಎಂದರೆ ಅವರೆಲ್ಲರನ್ನೂ ತಿರಸ್ಕರಿಸುವುದು ಎನ್ನುವ ಮನೋಭಾವದ ಹಿಂದೆಯೇ ಪ್ರೀತಿಯ ಬಗೆಗಿನ ತಪ್ಪು ಕಲ್ಪನೆಗಳಿರಬೇಕಲ್ಲವೇ?

ಮನೆಯವರಿಗೆ ನಿಮ್ಮ ಜೀವನದ ನಿರ್ಧಾರವನ್ನು ತಿಳಿಸಿ ಅದನ್ನು ಜಾರಿಗೊಳಿಸಿ. ನೀವಂದುಕೊಂಡಂತೆ ಬದುಕಲು ಸಾಧ್ಯವಾದಾಗ ಮುದಗೊಳ್ಳುವ ಮನಸ್ಸು ಉಕ್ಕಿಸುವ ಪ್ರೀತಿಯನ್ನು, ಸಂತೋಷವನ್ನು ಎಲ್ಲರ ಜೊತೆ ಹಂಚಿಕೊಳ್ಳಲು ಸಾಧ್ಯವಿದೆ. ಜಾತಿ ವ್ಯವಸ್ಥೆಯನ್ನು ಮೀರುವ ಹಂಬಲವಿರುವ ನಿಮ್ಮಂತಹ ವಿದ್ಯಾವಂತ, ಪ್ರಜ್ಞಾವಂತರೇ ಹಿಂಜರಿದರೆ ಸಾಮಾಜಿಕ ಬದಲಾವಣೆಯನ್ನು ಯಾರಿಂದ ನಿರೀಕ್ಷಿಸಬಹುದು?

ವಯಸ್ಸು 32, ಸರ್ಕಾರಿ ನೌಕರ. ವೇದಿಕೆ ಮೇಲೆ ತುಂಬಾ ಮಾತನಾಡಬೇಕು ಅನ್ನಿಸುತ್ತೆ. ಆದರೆ ಭಯದಿಂದ ತಡವರಿಸಿ ಏನೇನೋ ಮಾತನಾಡುತ್ತೇನೆ. ಇದರಿಂದ ನನಗೆ ತುಂಬಾ ಬೇಜಾರಾಗಿದೆ. ದಯವಿಟ್ಟು ಪರಿಹಾರ ತಿಳಿಸಿ.

ಹೆಸರು ಬೇಡ, ಚಿಕ್ಕಬಳ್ಳಾಪುರ

ನಿಮಗೆ ಬೇಸರವಾಗುತ್ತಿರುವುದು ಏಕೆಂದು ಯೋಚಿಸಿದ್ದೀರಾ? ನೀವಂದುಕೊಂಡಂತೆ ವೇದಿಕೆಯಿಂದ ಸರಿಯಾಗಿ ಮಾತನಾಡಲು ಸಾಧ್ಯವಾಗದೆ ಇರುವುದಕ್ಕಲ್ಲ. ಆದರೆ ಎಲ್ಲರೆದುರು ಆಗುವ ಅವಮಾನದಿಂದ ಕುಗ್ಗುತ್ತಿದ್ದೀರಿ. ಹಳೆಯ ಸೋಲಿನ ಅನುಭವಗಳು ಹುಲಿಯಂತೆ ನಿಮ್ಮನ್ನು ಬೆದರಿಸಿ ವೇದಿಕೆ ಹತ್ತುವಷ್ಟರಲ್ಲಿ ತಲೆಯಲ್ಲಿ ಭಯದ ಹೊರತಾಗಿ ಬೇರೇನೂ ಇರುವುದೇ ಇಲ್ಲ. ವೇದಿಕೆಯಿಂದ ಮಾತನಾಡಲು ಬರದೆ ಇರುವುದು ನಿಮ್ಮ ಸಂಪೂರ್ಣ ವ್ಯಕ್ತಿತ್ವದ ಮೇಲಿನ ಕಪ್ಪುಚುಕ್ಕೆಯಲ್ಲ. ಅದೊಂದು ನಿಧಾನವಾಗಿ ಕರಗತ ಮಾಡಿಕೊಳ್ಳಬೇಕಾದ ಕಲೆ.

ಭಯವಾದಾಗ ಎದೆಬಡಿತ ಹೆಚ್ಚಾಗಿ, ಮೈಬೆವರಿ, ಇಡೀ ದೇಹದ ಮಾಂಸಖಂಡಗಳು ಗಡಸಾಗುತ್ತವೆ. ಆಗ ನೀವು ಮಾತನಾಡಬೇಕೆಂದಿರುವುದು ನೆನಪಾಗುವುದು ಸಾಧ್ಯವಿಲ್ಲ. 12 ಅಕ್ಟೋಬರ್‌ 2019ರ ಇದೇ ಅಂಕಣದಲ್ಲಿ ಪ್ರಶ್ನೆ 3ರಲ್ಲಿ ಸೂಚಿಸಿದ ಪ್ರಯೋಗವನ್ನು ಮಾಡಿ ನಿಧಾನವಾಗಿ ಮೆದುಳಿಗೆ ತರಬೇತಿ ನೀಡಿ.

ನಾನು ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ಏಕಾಗ್ರತೆ, ಆಸಕ್ತಿಯ ಕೊರತೆಯಿಂದ ಓದಿದ್ದು ನೆನಪಿನಲ್ಲಿ ಉಳಿಯುತ್ತಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಕೆಲಸ ಬಿಟ್ಟಿದ್ದೇನೆ. ಈಗ ನೌಕರಿಯ ಅಗತ್ಯವಿದೆ. ವಯಸ್ಸು 32 ಆಗಿದ್ದರೂ ಯಾವುದೇ ತಕ್ಕ ಜವಾಬ್ದಾರಿ ನಿರ್ವಹಿಸಿಲ್ಲ. ಸಧ್ಯದ ಪರಿಸ್ಥಿತಿಯ ಬಗ್ಗೆ ಬೇಸರ ಮತ್ತು ಭವಿಷ್ಯದ ಕುರಿತು ಗೊಂದಲಗಳಿವೆ. ಸಲಹೆ ತಿಳಿಸಿ.

ಹೆಸರು, ಊರು ಬೇಡ

ವೈಯಕ್ತಿಕ ಮತ್ತು ಸಾಂಸಾರಿಕ ಪರಿಸ್ಥಿತಿಗಳು ನಿಮ್ಮ ಮೇಲೆ ಅಗಾಧವಾದ ಒತ್ತಡವನ್ನು ಸೃಷ್ಟಿ ಮಾಡಿವೆ. ಒತ್ತಡದ ಬಗ್ಗೆ ಚಿಂತಿಸಲು ಮತ್ತು ಭವಿಷ್ಯದ ಅನಿಶ್ಚಿತತೆಯನ್ನು ಎದುರಿಸಲಾಗದೆ ತಕ್ಷಣದ ಪರಿಹಾರ ಹುಡುಕಲು ನೀವು ಮೆದುಳಿನ ಶಕ್ತಿಯನ್ನೆಲ್ಲಾ ಉಪಯೋಗಿಸುತ್ತಿರುವಾಗ ಓದಿನ ಬಗ್ಗೆ ಏಕಾಗ್ರತೆ ಅಥವಾ ಓದಿದ್ದನ್ನು ನೆನಪಿಟ್ಟುಕೊಳ್ಳುವುದು ಹೇಗೆ ಸಾಧ್ಯವಾದೀತು?

ನಿಮ್ಮ ಈಗಿನ ಪರಿಸ್ಥಿತಿಗೆ ಹಲವಾರು ವರ್ಷಗಳ ಹಿನ್ನೆಲೆಯಿದೆ. ಅವೆಲ್ಲದಕ್ಕೂ ತಕ್ಷಣ ಪರಿಹಾರಗಳಿಲ್ಲದಿದ್ದರೂ ಹುಡುಕಿ ವಿಫಲರಾಗುತ್ತಿದ್ದೀರಿ. ನಿಮ್ಮ ಮನೆಯವರ ಜೊತೆಗೆ ಎಲ್ಲವನ್ನೂ ಮಾತನಾಡಿ ಹಂತಹಂತವಾಗಿ ಪರಿಹರಿಸುವ ಮಾರ್ಗಗಳನ್ನು ಹುಡುಕಿ. ತಕ್ಷಣ ನಿಮಗೆ ಬೇಕಾಗಿರುವುದು ಮನಸ್ಸಿನ ಆತಂಕಗಳನ್ನು ಹಂಚಿಕೊಳ್ಳುವ ಆತ್ಮೀಯ ವ್ಯಕ್ತಿ. ಪರಿಹಾರಗಳನ್ನು ನಿರೀಕ್ಷಿಸದೆ ಅಂತಹ ವ್ಯಕ್ತಿಯೊಡನೆ ಸುಮ್ಮನೆ ಎಲ್ಲವನ್ನೂ ಹಂಚಿಕೊಳ್ಳಿ. ಭವಿಷ್ಯದ ಅನಿಶ್ಚಿತತೆ ನಿಮ್ಮೊಬ್ಬರ ಸಮಸ್ಯೆಯಲ್ಲ, ಇಡೀ ಮನುಕುಲದ, ಅಷ್ಟೇ ಏಕೆ ಪ್ರಕೃತಿಯ ಎಲ್ಲಾ ಜೀವಿಗಳ ಸಮಸ್ಯೆ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT