ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ | ಸಂತೃಪ್ತಿಯೇ ಜೀವನ

Last Updated 26 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಹೀಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ: ಒಬ್ಬ ರೋಗಿಯ ಶುಶ್ರೂಷೆ ಮಾಡುತ್ತಿರುವ ಇಬ್ಬರು ದಾದಿಯರು. ಅವರಲ್ಲೊಬ್ಬಳು ಅನಾರೋಗ್ಯದಿಂದ ಚಿಂತಿತಳಾಗಿ, ಆತಂಕದಿಂದ ಕೂಡಿದ್ದಾಳೆ. ಮತ್ತೊಬ್ಬಳು ಶಾಂತ, ಸಮಚಿತ್ತದಿಂದಿದ್ದಾಳೆ. ಅವರಿಬ್ಬರಲ್ಲಿ ಯಾರು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಬಲ್ಲರು? ಶಾಂತವಾಗಿದ್ದು, ಮನೋಸ್ತಿಮಿತವುಳ್ಳ ದಾದಿಯೇ ಉತ್ತಮ ಸೇವೆ ಸಲ್ಲಿಸುವಳೆಂದು ಬಹುತೇಕ ಎಲ್ಲರೂ ಒಪ್ಪುತ್ತೀರಿ. ನಮ್ಮ ಮನಃಸ್ಥಿತಿಯು ನಮ್ಮ ಕರ್ತವ್ಯ ನಿರ್ವಹಣೆಯನ್ನು ಪ್ರಭಾವಿತಗೊಳಿಸುತ್ತದೆ.

ಕಾರ್ಯಗಳ ಆದ್ಯತೆ ಪಟ್ಟಿಯಲ್ಲಿ ಕರ್ತವ್ಯವು ಜವಾಬ್ದಾರಿಗಿಂತ ಮುಂದಿದೆ. ಕರ್ತವ್ಯವೆಂದರೆ ಸ್ವಂತದೆಡೆಗಿನ ಬಾಧ್ಯತೆ. ಸ್ಪಷ್ಟ ಕರ್ತವ್ಯಪ್ರಜ್ಞೆಯಿದ್ದರೆ ಆದ್ಯತೆಗಳನ್ನು ಉತ್ತಮವಾಗಿ ನಿರ್ವಹಿಸಬಹುದು. ಆದ್ದರಿಂದ ನೀವು ಶಿಕ್ಷಕಿ, ಗೃಹಿಣಿ, ವೈದ್ಯ ಅಥವಾ ಸೈನಿಕನಾಗಿರಬಹುದು; ಎಲ್ಲರಿಗೂ ಕರ್ತವ್ಯ ಮತ್ತು ಜವಾಬ್ದಾರಿಗಳು ಇದ್ದೇ ಇರುತ್ತವೆ. ಮನದೊಳಗೆ ಸಂಘರ್ಷವಿದ್ದಾಗ, ಕರ್ತವ್ಯ ಮತ್ತು ಜವಾಬ್ದಾರಿಗಳ ನಡುವೆ ಗೊಂದಲವುಂಟಾಗುತ್ತದೆ.

ಐದು ಸಾವಿರ ವರ್ಷಗಳ ಹಿಂದೆ ಮಹಾಭಾರತದ ರಣರಂಗದಲ್ಲಿ. ಅರ್ಜುನನಿಗೆ ಕರ್ತವ್ಯದ ವಿಷಯದಲ್ಲಿ ದ್ವಂದ್ವ ಉಂಟಾಗಿತ್ತು. ಆತನ ಮನಸ್ಸು ಅಸ್ಥಿರಗೊಂಡು, ಆತನ ಕೈಗಳು ಬಿಲ್ಲನ್ನು ಎತ್ತಲಾರದಾದುವು. ಶ್ರೀಕೃಷ್ಣನಿಂದ ಅರ್ಜುನನಿಗೆ ಕರ್ತವ್ಯದ ಬಗ್ಗೆ ಜ್ಞಾನೋದಯ ಉಂಟಾಯಿತು. ತನ್ನೊಳಗೆಯೆ ಸ್ಥಿರಗೊಂಡ ನಿಶ್ಚಲ ಮನಸ್ಸಿನ ರಹಸ್ಯವನ್ನು ಅರ್ಜುನನಿಗೆ ಅನಾವರಣಗೊಳಿಸುವ ಮೂಲಕ ಕೃಷ್ಣನು ಅದನ್ನು ಸಾಧಿಸಿದನು. ಕೃಷ್ಣ ಹೇಳಿದ: ‘ಅರ್ಜುನ, ಇಚ್ಛೆಗಳನ್ನು ಮೀರಿ ನಡೆ, ನಿನ್ನೊಳಗೆ ಸಂತೃಪ್ತಿಯನ್ನು ಕಾಣು. ಇದು ನಿನ್ನನ್ನು ಸ್ಥಿತಪ್ರಜ್ಞನನ್ನಾಗಿ ಮಾಡುವುದು.’ ಅಂತಹ ವ್ಯಕ್ತಿಯು ತನ್ನ ಕರ್ತವ್ಯದ ಬಗ್ಗೆ ಸ್ಪಷ್ಟಕಲ್ಪನೆಯನ್ನು ಹೊಂದಿರುತ್ತಾನೆ; ಅದನ್ನು ಆಂತರಿಕ ಸಂಘರ್ಷಣೆಯಿಲ್ಲದೆ ನಿರ್ವಹಿಸುತ್ತಾನೆ. ಇಚ್ಛೆಗಳು ಸಂಘರ್ಷಣೆಗಳನ್ನು ಸೃಷ್ಟಿಸುತ್ತವೆ.

ಅತಿಯಾಸೆ ಬರದಂತೆ ಮನಸ್ಸನ್ನು ನಿಗ್ರಹಿಸಲು ವಿಶ್ವಾದ್ಯಂತದ ಬಹುಶಃ ಎಲ್ಲ ಸಂಸ್ಕೃತಿಗಳು ಆತ್ಮನಿರಾಕರಣೆಯನ್ನು ಸೂಚಿಸುತ್ತವೆ. ಧಾರ್ಮಿಕ ಆಚರಣೆಗಳ ಭಾಗವಾಗಿರುವ ಉಪವಾಸಗಳು, ವ್ರತಗಳು ನೈತಿಕತೆಯನ್ನು ಬಲಗೊಳಿಸುತ್ತವೆ. ಈ ವಿಧಾನಗಳು ಕೊಂಚ ನೆರವಾದರೂ, ಸ್ಥಿತಪ್ರಜ್ಞರಾಗಲು ಶಾಶ್ವತ ಪರಿಹಾರವೆಂದರೆ, ಇಚ್ಛೆಗಳನ್ನು ಮೀರಿ, ಸಂತೃಪ್ತಿಯನ್ನು ಬೆಳೆಸಿಕೊಳ್ಳುವುದು. ಸಂತೃಪ್ತಿಯು ವ್ಯಕ್ತಿತ್ವಕ್ಕೆ ಸ್ಪಷ್ಟತೆಯನ್ನೂ ನೀಡುತ್ತದೆ

ಸಂತೃಪ್ತಿ ಎಂದರೆ ಕಡಿಮೆ ಸಲಕರಣೆಗಳಲ್ಲಿ ಜೀವನವನ್ನು ಸಾಗಿಸುವುದು ಎಂಬರ್ಥ ಬಂದಿದೆ. ಆದರೆ ನಿಜಾರ್ಥದಲ್ಲಿ ಸಂತೃಪ್ತಿಯೆಂದರೆ, ಸರಿಯಾದುದರಲ್ಲಿ, ಉದಾತ್ತವಾದುದರಲ್ಲಿ ನಾವು ನೆಲೆಗೊಳ್ಳುವುದು. ಸಂತೃಪ್ತಿಯು ಇಚ್ಛೆಯ, ಎಂದರೆ ಬಯಕೆಗಳ ಬಿರುಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ. ನಿಮ್ಮದೇ ಜೀವನವನ್ನು ನೋಡಿಕೊಳ್ಳಿರಿ, ನೀವು ಯಾವಾಗ ಸಂತೃಪ್ತಿಯಿಂದ ಇದ್ದಿರೊ, ಅವು ನಿಮ್ಮ ಅತ್ಯಂತ ಸಂತೋಷದ ಕ್ಷಣಗಳಾಗಿರುತ್ತವೆ. ಸಂತೃಪ್ತಿಯಿಂದ ಸಮಾಧಾನ, ಕರುಣೆ, ಧೈರ್ಯ ಮತ್ತು ಸ್ಪಷ್ಟತೆಗಳು ಬರುತ್ತವೆ.

ಸಂತೃಪ್ತ ವ್ಯಕ್ತಿ, ಬೇಡಿಕೆಗಳಿಂದ ಮುಕ್ತನಾಗಿರುತ್ತಾನೆ. ಯಾರಿಗೂ ಆಗ್ರಹ ಮಾಡುವುದಿಲ್ಲ. ಅವನೆಲ್ಲೇ ಇರಲಿ, ಸಂತೋಷವಾಗಿರುತ್ತಾನೆ. ಸಂತೋಷವು ನಮಗೆ ಯಶಸ್ಸನ್ನು ತರುತ್ತದೆಯೇ ಹೊರತು ಯಶಸ್ಸು ಸಂತೋಷವನ್ನು ತರಲಾರದು. ತಮ್ಮ ಉಪಸ್ಥಿತಿ, ವಿನಮ್ರತೆ ಮತ್ತು ತಿಳಿವಳಿಕೆಯಿಂದ ತೃಪ್ತ ಜನರು ತಾವೆಲ್ಲೇ ಹೋದರೂ ಅಲ್ಲೆಲ್ಲ ಸಂತೋಷವನ್ನು ಹರಡುತ್ತಾರೆ.

ಸ್ಥಿತಪ್ರಜ್ಞರ ಗುಣಲಕ್ಷಣವೆಂದರೆ, ಸಂತೃಪ್ತಿ. ನೀರಿನ ಲೋಟವೊಂದನ್ನು ಕಲಕಿದಾಗ, ಆ ಚಲನೆಯು ಅಲೆಗಳನ್ನು ಉಂಟುಮಾಡುತ್ತದೆ. ಆದರೆ ಸಾಗರದ ನೀರನ್ನು ಕಲಕಲು ಪ್ರಯತ್ನಿಸಿ. ನೀವು ಅದೆಷ್ಟೇ ಶ್ರಮವಹಿಸಿದರೂ, ಸಾಗರದ ತನ್ನದೇ ಲಯದಲ್ಲಿರುತ್ತದೆ. ಹಾಗೆಯೇ ಸ್ಥಿತಪ್ರಜ್ಞೆಯ ಸ್ಥಿತಿಯಲ್ಲಿರುವ ವ್ಯಕ್ತಿಯೂ ಸ್ಪಷ್ಟತೆಯುಳ್ಳವನಾಗಿ, ಕರ್ತವ್ಯಪಥದಿಂದ ಕಿಂಚಿತ್ತೂ ಕದಲುವುದಿಲ್ಲ. ಸಂತೃಪ್ತ ಹೃದಯಗಳಿಂದ ಹಾಗೂ ಸ್ಥಿರ ಮನಸ್ಸುಗಳಿಂದಲೇ ಧನಾತ್ಮಕ ಬದಲಾವಣೆ ಬರಲು ಸಾಧ್ಯ.

ಸಂತೃಪ್ತಿಯೊಡನೆ ಆಂತರಿಕ ಪರಿಶುದ್ಧತೆಯೂ ಸೇರಿದರೆ ವ್ಯಕ್ತಿಯು ಬಯಕೆಗಳನ್ನು ಮೀರಬಲ್ಲವನಾಗುತ್ತಾನೆ. ಹಾಗೆ ನಾವು ಬಯಕೆಗಳನ್ನು ಮೀರಿದಾಗ, ಮನಸ್ಸು ಕರ್ತವ್ಯದಲ್ಲಿ ಸ್ಥಿರಗೊಳ್ಳುತ್ತದೆ. ನಾವು ಇದ್ದಲ್ಲೇ ಇರುವಂತೆ, ನಮಗೆ ಬೇಕಾದುದನ್ನೆಲ್ಲ ನಮ್ಮೊಳಗೆ ಕಾಣುತ್ತೇವೆ. ಆಂತರ್ಯದ ಜ್ಯೋತಿ ತೇಜೋಮಯವಾಗಿ ಬೆಳಗುತ್ತ, ನಮಗೆ ಮುಂದಿನ ಪಥವನ್ನು ತೋರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT