ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ರೀನಿಂಗ್ ನಂತರ ಮುಂದೇನು?

Last Updated 1 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಮಗುವಿನಲ್ಲಿನ ಜನನ ದೋಷವನ್ನು ಅದು ಗರ್ಭದಲ್ಲಿದ್ದಾಗಲೇ ಪತ್ತೆ ಹಚ್ಚುವ ಸಲುವಾಗಿ ಪ್ರಸವಪೂರ್ವ ಪರೀಕ್ಷೆಯ ಭಾಗವಾಗಿ ಹಲವು ರೀತಿಯ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಮೊದಲ ತ್ರೈಮಾಸಿಕ ಪರೀಕ್ಷೆಯಲ್ಲಿ ಮೆಟರ್ನಲ್ ಬ್ಲಡ್ ಸ್ಕ್ರೀನಿಂಗ್, ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಲಾಗುತ್ತದೆ. ಎರಡನೇ ತ್ರೈಮಾಸಿಕ ಸ್ಕ್ರೀನಿಂಗ್‍ನಲ್ಲಿ ಮೆಟರ್ನಲ್ ಸೆರಂ ಸ್ಕ್ರೀನ್, ಅನಾಮಲಿ ಅಲ್ಟ್ರಾಸೌಂಡ್ ಪರೀಕ್ಷೆ ನಡೆಯುತ್ತದೆ. ಆನಂತರದ ಹಂತ ರೋಗ ನಿರ್ಣಯದ ಪರೀಕ್ಷೆ, ಅದರ ಕುರಿತ ವಿವರ ಇಲ್ಲಿದೆ...

1. ರೋಗನಿರ್ಣಯ ಪರೀಕ್ಷೆ

ಸ್ಕ್ರೀನಿಂಗ್ ಪರೀಕ್ಷೆಯ ಫಲಿತಾಂಶ ಅಸಹಜ ಅಥವಾ ಗೊಂದಲವಾಗಿ ಕಂಡುಬಂದರೆ ವೈದ್ಯರು ಈ ಪರೀಕ್ಷೆಯನ್ನು ಸೂಚಿಸುತ್ತಾರೆ. ಗರ್ಭಧಾರಣೆಯಲ್ಲಿ ಗಂಭಿರ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೂ ಈ ಪರೀಕ್ಷೆಯ ಸಲಹೆ ನೀಡಲಾಗುತ್ತದೆ. 35 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಮಹಿಳೆಯರಿಗೆ, ಚರ್ಮಕ್ಷಯ (ಲ್ಯೂಪಸ್), ಅಧಿಕ ರಕ್ತದೊತ್ತಡ, ಮಧುಮೇಹ, ಅಪಸ್ಮಾರದಂಥ ದೀರ್ಘಕಾಲಿಕ ಸಮಸ್ಯೆಗಳಿರುವ, ಅಥವಾ ಕೆಲ ಚಿಕಿತ್ಸೆಗೆ ಔಷಧ ಸೇವಿಸುತ್ತಿರುವ ಮಹಿಳೆಯರು ಈ ಪಟ್ಟಿಯಲ್ಲಿ ಸೇರುತ್ತಾರೆ.

ಎ. ಹೈ ರೆಸೊಲ್ಯೂಷನ್ ಅಲ್ಟ್ರಾಸೌಂಡ್: ಈ ಅಲ್ಟ್ರಾಸೌಂಡ್ ಅನ್ನು ಲೆವೆಲ್ 2 ಅಲ್ಟ್ರಾಸೌಂಡ್ ಎಂದು ಕರೆಯಲಾಗುತ್ತದೆ. ಈ ಹಿಂದಿನ ಸ್ಕ್ರೀನಿಂಗ್ ಪರೀಕ್ಷೆಯ ಸಲಹೆಯಂತೆ, ಮಗುವಿನಲ್ಲಿ ಜನನ ದೋಷ ಅಥವಾ ಇನ್ನಿತರ ಸಮಸ್ಯೆಗಳ ಸಾಧ್ಯತೆಯನ್ನು ಸವಿವರವಾಗಿ ಇಲ್ಲಿ ಪರಿಶೀಲಿಸಲಾಗುತ್ತದೆ. ಗರ್ಭಧಾರಣೆಯ 18ರಿಂದ 22ನೇ ವಾರಗಳ ನಡುವೆ ಈ ಪರೀಕ್ಷೆ ನಡೆಯುತ್ತದೆ.

ಬಿ. ಕೋರಿಯೋನಿಕ್ ವಿಲ್ಲಸ್ ಸ್ಯಾಂಪ್ಲಿಂಗ್ (ಸಿವಿಎಸ್) ಭ್ರೂಣದ ನಾಳ ಮಾದರಿ ಪರೀಕ್ಷೆ: ಇದರಲ್ಲಿ, ಕೋರಿಯೋನಿಕ್ ವಿಲ್ಲಸ್ ಎಂದು ಕರೆಯಲಾಗುವ, ಪ್ಲೆಸೆಂಟಾದ (ಹೊಕ್ಕುಳಬಳ್ಳಿ) ಅತಿ ಸಣ್ಣ ಅಂಶವನ್ನು ಸಂಗ್ರಹಿಸಿ, ಅದರ ಮೂಲಕ ಮಗುವಿನಲ್ಲಿನ ಕ್ರೋಮೋಸೋಮಿನ ಅಥವಾ ವಂಶವಾಹಿ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಹಚ್ಚಲಾಗುತ್ತದೆ. ಸಾಮಾನ್ಯವಾಗಿ ಸಿವಿಎಸ್ ಪರೀಕ್ಷೆಯನ್ನು, ಮೊದಲ ತ್ರೈಮಾಸಿಕ ಸ್ಕ್ರೀನಿಂಗ್‍ನಲ್ಲಿ ಅಸಹಜ ಫಲಿತಾಂಶ ದೊರೆತ ಅಥವಾ ಗರ್ಭಧಾರಣೆ ಸಮಯ ಅಪಾಯದ ಸಾಧ್ಯತೆ ಹೊಂದಿರುವ ಮಹಿಳೆಯರಿಗೆ 10ರಿಂದ 12ನೇ ವಾರಗಳ ನಡುವೆ ನಡೆಸಲಾಗುತ್ತದೆ.

ಸಿ. ಅಮ್ನಿಯೊಸೆಂಟೆಸಿಸ್ (ಗರ್ಭದ ಒಳಕವಚದ ತಪಾಸಣೆ): ಗರ್ಭದಲ್ಲಿ ಮಗುವಿನ ಸುತ್ತಲಿನ ಜಾಗದಲ್ಲಿನ ಅಮ್ನಿಯೋಟಿಕ್ ದ್ರವವನ್ನು ಸ್ವಲ್ಪ ಮಟ್ಟದಲ್ಲಿ ಸಂಗ್ರಹಿಸಿ ನಡೆಸುವ ಪರೀಕ್ಷೆಯನ್ನು ಅಮ್ನಿಯೊಸೆಂಟೆಸಿಸ್ ಎಂದು ಕರೆಯಲಾಗುತ್ತದೆ. ಈ ದ್ರವದಿಂದ ಮಗುವಿನ ಪ್ರೊಟೀನಿನ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಇದು ಕೆಲವು ದೋಷಗಳನ್ನು ಸೂಚಿಸಲು ನೆರವಾಗುತ್ತದೆ. ಅಮ್ನಿಯೋಟಿಕ್ ದ್ರವದಲ್ಲಿನ ಕೆಲವು ಕೋಶಗಳ ಮೂಲಕ ವರ್ಣತಂತು ಸಮಸ್ಯೆಯನ್ನು ಪತ್ತೆ ಹಚ್ಚಲಾಗುವುದು. ಕೆಲ ವಂಶವಾಹಿ ಸಮಸ್ಯೆಗಳೂ ಇದರಿಂದ ಬೆಳಕಿಗೆ ಬರುತ್ತವೆ. ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಅಸಹಜ ಫಲಿತಾಂಶ ದೊರೆತಿರುವ ಮಹಿಳೆಯರಿಗೆ, ಗರ್ಭಧಾರಣೆಯ 15ರಿಂದ 18ನೇ ವಾರದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಅಮ್ನಿಯೊಸೆಂಟೆಸಿಸ್ ಪರೀಕ್ಷೆಯಲ್ಲಿ ಒಳಗೊಳ್ಳುವ ಪ್ರೊಟೀನ್‍ಗಳು ಹೀಗಿವೆ...

ಎಎಫ್‍ಪಿ: ಮಗು ಉತ್ಪತ್ತಿ ಮಾಡುವ ಈ ಪ್ರೊಟೀನ್ ಹೆಸರು ಆಲ್ಫಾ ಫೆಟೋಪ್ರೊಟೀನ್. ಅಮ್ನಿಯೋಟಿಕ್ ದ್ರವದಲ್ಲಿ ಎಎಫ್‍ಪಿ ಮಟ್ಟವು ಹೆಚ್ಚಿದ್ದರೆ, ಅಂಗಾಂಶ ತೆರೆದುಕೊಂಡು ಉಂಟಾಗಬಹುದಾದ ನರವ್ಯೂಹದ ದೋಷ ಹಾಗೂ ದೇಹದ ರಚನೆಯಲ್ಲಿನ ಸಮಸ್ಯೆ-ಗ್ಯಾಸ್ಟ್ರೋಶಿಸಿಸ್ ಇದೆ ಎಂದು ಅರ್ಥೈಸಲಾಗುತ್ತದೆ.

ಎಸಿಎಚ್‍ಇ -ಏಕ್: ಅಸೆಟಿಲ್ ಕೋಲಿನೆಸ್ಟೆರೇಸ್ ಅನ್ನು ಹೀಗೆ ಕರೆಯಲಾಗುತ್ತದೆ. ಗರ್ಭದಲ್ಲಿ ಮಗು ಉತ್ಪತ್ತಿ ಮಾಡುವ ಈ ಕಿಣ್ವ, ನರವ್ಯೂಹದ ನಾಳ ತೆರೆದುಕೊಂಡಿದ್ದರೆ, ಗರ್ಭದೊಳಗಿನ ಮಗುವಿನಿಂದ, ಮಗುವಿನ ಸುತ್ತ ಇರುವ ದ್ರವದಲ್ಲಿ ಸೇರಿಕೊಳ್ಳುತ್ತದೆ. ಇದರ ಪತ್ತೆ ಮೂಲಕ ಸಮಸ್ಯೆಯ ಪತ್ತೆಯೂ ಸುಲಭವಾಗುತ್ತದೆ.

ಮಗು ಜನಿಸಿದ ನಂತರ...

ಕೆಲವು ಜನನ ದೋಷಗಳನ್ನು ಮಗು ಹುಟ್ಟುವವರೆಗೂ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಮಗು ಹುಟ್ಟಿದ ತಕ್ಷಣವೇ ಆ ಸಮಸ್ಯೆಗಳು ಗೋಚರಿಸುತ್ತವೆ. ಆದರೆ ಹೃದಯ ಸಮಸ್ಯೆ ಒಳಗೊಂಡಂತೆ ಇನ್ನಿತರ ದೋಷಗಳು ಕಣ್ಣಿಗೆ ತಕ್ಷಣ ಗೋಚರಿಸದೇ ಇರಬಹುದು.

ಮಗುವಿನಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರು ಮೊದಲು, ಜನನ ದೋಷವಿರಬಹುದಾದ ಸಾಧ್ಯತೆಯನ್ನು ಮಗುವಿನ ವೈದ್ಯಕೀಯ ಹಾಗೂ ಕುಟುಂಬದ ಹಿನ್ನೆಲೆ ಮೂಲಕ ಗುರುತಿಸಲು ಪ್ರಯತ್ನಿಸುತ್ತಾರೆ. ಕೆಲವು ದೈಹಿಕ ಪರೀಕ್ಷೆಗಳನ್ನು ನಡೆಸುತ್ತಾರೆ. ನಂತರ ಸಂಬಂಧಿತ ಪರೀಕ್ಷೆಗಳಿಗೆ ಸಲಹೆ ನೀಡುತ್ತಾರೆ. ಸಮಸ್ಯೆ ಇರುವುದು ಖಾತ್ರಿಯಾದಾಗ ವಂಶವಾಹಿ ಸಮಸ್ಯೆ ಸಂಬಂಧಿ ತಜ್ಞರಲ್ಲಿ ಮಗುವಿನ ಚಿಕಿತ್ಸೆಗೆ ಸಲಹೆ ನೀಡಲಾಗುತ್ತದೆ.

ಮುಂದುವರಿಯುತ್ತದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT