ಮಕ್ಕಳಲ್ಲಿ ಮೂತ್ರಕ ಸೋಂಕು

7

ಮಕ್ಕಳಲ್ಲಿ ಮೂತ್ರಕ ಸೋಂಕು

Published:
Updated:

ಚಿಣ್ಣರಲ್ಲೂ ಅಷ್ಟೆ, ಹೆಣ್ಣು ಮಕ್ಕಳಲ್ಲೇ ಮೂತ್ರಕ ಸೋಂಕುಗಳನ್ನು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ದೊಡ್ಡವರಲ್ಲಿ ಸಹ ಇದೇ ತಾರತಮ್ಯವನ್ನು ಗಮನಿಸುತ್ತೇವಲ್ಲಾ.. ಹೀಗೇಕೆ? ಹೆಣ್ಣುಮಕ್ಕಳಲ್ಲಿ ಮೂತ್ರನಾಳದ ಉದ್ದ ಕಡಿಮೆ. ಅದು ನೇರವಾಗಿ ಯೋನಿ ಮುಖದಲ್ಲಿ ತೆರೆದುಕೊಳ್ಳುತ್ತದೆ. ಹಾಗಾಗಿ,, ಮಕ್ಕಳ ಮೂತ್ರಕ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ, ಸೂಕ್ತ ಸಮಯದಲ್ಲಿ ನಾವು ನೀಡದೆ ಹೋದರೆ, ಮುಂದೆ ಅವರ ಮೂತ್ರಪಿಂಡಗಳು ಹಾಳಾಗುವ ಸಾಧ್ಯತೆ ಇದೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಇಲ್ಲೊಂದು ತೊಡಕಿದೆ.ಮಕ್ಕಳು ತಮ್ಮ ಮೂತ್ರಕ ತೊಂದರೆಗಳನ್ನು ಬೇಗನೇ ಹೇಳಿಕೊಳ್ಳುವುದೂ ಇಲ್ಲ. ಅದರಿಂದ ಪೋಷಕರು ಮಕ್ಕಳನ್ನು ಗಮನಿಸುತ್ತಲೇ ಇರಬೇಕು.ಅವರು, ಪದೇ ಪದೇ ಮೂತ್ರವಿಸರ್ಜನೆಗೆ ಓಡುತ್ತಿರುವಾಗ ಅಥವಾ ಆ ಸಮಯದಲ್ಲಿ ನೋವಿನಿಂದ ಮುಖ ಕಿವಿಚುತ್ತಿದ್ದಾಗ, ಮನೆಯ ಹಿರಿಯರು ಅದಕ್ಕೆ ಕಾರಣ ಹುಡುಕಲು ಪ್ರಯತ್ನ ಮಾಡಬೇಕು. ಆಗ ಜ್ವರವೂ ಇರಬಹುದಾದ್ದರಿಂದ, ಬರೀ ಮೆಟಾಸಿನ್, ಕ್ರೋಸಿನ್ ಮಾತ್ರೆಗಳನ್ನು ಕೊಡುವುದಕ್ಕಿಂತ ಅದಕ್ಕೆ ಕಾರಣವನ್ನು ಕಂಡುಹಿಡಿಯುವುದು ಒಳ್ಳೆಯದು. ಮೂತ್ರಕ ಸೋಂಕುಗಳಿದ್ದಾಗ ಮಗುವಿಗೆ ವಾಂತಿ, ಹೊಟ್ಟೆನೋವುಗಳೂ ಸಾಮಾನ್ಯವಾಗಿ ಇರುತ್ತವೆ. ಅವರಿಗೆ ಆಹಾರವೂ ಸೇರುವುದಿಲ್ಲ. ಈ ಪರಿಸ್ಥಿತಿಯಲ್ಲಿ ತಡಮಾಡದೆ ಮಕ್ಕಳನ್ನು ತಜ್ಞರ ಬಳಿಗೆ ಕರೆದೊಯ್ಯಲೇಬೇಕು.

ಅಲ್ಲಿ, ಮಗುವಿನ ಮೂತ್ರಪರೀಕ್ಷೆ ಮಾಡುತ್ತಾರೆ. ಅದರಲ್ಲಿ, ಕೀವಿನ ಜೀವಕೋಶಗಳೂ ಕ್ರಿಮಿಗಳೂ ಕಂಡರೆ, ಮೂತ್ರದ ಸೋಂಕು ಖಚಿತವಾಗುತ್ತದೆ. ಆ ಕ್ರಿಮಿಗಳನ್ನು ಪ್ರಯೋಗಶಾಲೆಯಲ್ಲಿ ವೃದ್ಧಿಸಿ, ಅವು ಯಾವಯಾವ ಜೀವಿರೋಧಕಗಳಿಗೆ ಮಣಿಯುತ್ತವೆ ಎಂತಲೂ ಮುಂದಿನ ದಿನಗಳಲ್ಲಿ ತಿಳಿಸುತ್ತಾರೆ. ಅವೇ ಜೀವಿರೋಧಕಗಳನ್ನು (ಆಂಟಿಬಯಾಟಿಕ್ಸ್) 7-–10 ದಿನಗಳವರೆಗೂ ನೀಡುತ್ತಾರೆ. ಅಗತ್ಯವಿದ್ದಾಗ ಕ್ಷ-ಕಿರಣಗಳಲ್ಲಿ ಕಾಣುವಂಥ ದ್ರವಗಳನ್ನು ಮೂತ್ರಕೋಶಕ್ಕೆ ಸಾಗಿಸಿ, ಎಕ್ಸ್-ರೇ ತೆಗೆದು ನೋಡುತ್ತಾರೆ. ಇತ್ತೀಚೆಗಂತೂ ಅತ್ಯಾಧುನಿಕ ವಿಶೇಷ ತಪಾಸಣೆಗಳೂ ಬಂದಿವೆ. ಸ್ಕಾನಿಂಗ್ ಮಾಡಲೇ ಬೇಕಾಗುತ್ತದೆ.

ಇವೆಲ್ಲಾ ಪರೀಕ್ಷೆಗಳಿಂದ ಸೋಂಕು ಎಷ್ಟು ಮೇಲಕ್ಕೇರಿದೆ, ಮೂತ್ರಪಿಂಡಗಳಿಗೇನಾದರೂ (ಕಿಡ್ನಿ) ಹಾನಿಯಾಗಿದೆಯೇ, ಮೂತ್ರವೇನಾದರೂ ಮೂತ್ರಕೋಶದಿಂದ ಹಿಮ್ಮುಖವಾಗಿ ಹರಿದು, ಯೂರಿಟರ್ ಗಳನ್ನು (ಮೂತ್ರಪಿಂಡಕ್ಕೆ ಹೋಗುವ ನಾಳ) ಪ್ರವೇಶಿಸುತ್ತಿದೆಯೇ, ಮೂತ್ರಪಿಂಡಗಳಲ್ಲಿ ಕಲ್ಲು ಉತ್ಪತ್ತಿಯಾಗಿದೆಯೇ.. ಎಂದೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕುತ್ತದೆ. ಕೆಲವೊಮ್ಮೆ ಈ ತೊಂದರೆಗಳು, ವಂಶಪಾರಂಪರ್ಯವಾಗಿಯೂ ಬರುವ ಕಾರಣ, ಮನೆಯಲ್ಲಿ ಯಾರಿಗಾದರೂ ಮೂತ್ರಕ ಸಮಸ್ಯೆಗಳು ಇದ್ದವೇ ಎಂದು ಕೇಳುವುದು ಒಳ್ಳೆಯದು.

ಮೂತ್ರಕ ವ್ಯವಸ್ಥೆಯಲ್ಲಿ ಅಡಚಣೆ ಉಂಟಾದಾಗ, ಮೂತ್ರಪಿಂಡಗಳಲ್ಲಿ ಮೂತ್ರ ಸಂಚಯವಾಗಿ, ಆ ಅಂಗಗಳು ಗಾತ್ರದಲ್ಲಿ ಹಿಗ್ಗುತ್ತವೆ. ದೊಡ್ಡವರಂತೆ ಮಕ್ಕಳಲ್ಲೂ ಸಹ ಮೂತ್ರಪಿಂಡಗಳಲ್ಲಿ ಕಲ್ಲು ಉತ್ಪತ್ತಿಯಾಗುವುದುಂಟು. ಅಂಥ ಸಂದರ್ಭಗಳಲ್ಲಿಯೂ ಸೋಂಕು ಒಳನುಗ್ಗುತ್ತದೆ. ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೊಂದೇ ದಾರಿಯಾಗಿದ್ದ ಕಾಲವಿತ್ತು. ಆದರೆ, ಈಗ ಆ ಕಲ್ಲುಗಳನ್ನು ಲೇಸರ್ ಕಿರಣಗಳ ಸಹಾಯದಿಂದ ಪುಡಿ ಪುಡಿ ಮಾಡುತ್ತಾರೆ. ಆ ಕಲ್ಲಿನ ಚೂರುಗಳು ಮೂತ್ರದಲ್ಲಿ ಹೊರಬೀಳುತ್ತವೆ. ಉದರದರ್ಶಕವನ್ನು ಬಳಸಿಯೂ ಚಿಕಿತ್ಸೆ ಜಾರಿಯಿದೆ. ಹೊರಬೀಳುವ ಕಲ್ಲುಗಳನ್ನು ನಂತರ ತಪಾಸಣೆಗೆ ರವಾನಿಸುತ್ತಾರೆ. ಅವುಗಳ ರಚನೆಯನ್ನು ತಿಳಿದುಕೊಂಡು, ಮಗುವಿನ ಆಹಾರ ಹೇಗಿರಬೇಕೆಂದೂ ಸೂಚನೆ ನೀಡುತ್ತಾರೆ.

ಗಂಡುಮಕ್ಕಳಲ್ಲಿ ಶಿಶ್ನದ ಮುಂದೊಗಲು ಕೆಲವೊಮ್ಮೆ ಗಟ್ಟಿಯಾಗಿ ಅಂಟಿಕೊಂಡು, ಮೂತ್ರ ಸಲೀಸಾಗಿ ಹೋಗಲು ಅಡ್ಡಿಯಾಗುತ್ತದೆ. ಅದರಿಂದಲೂ ಮೂತ್ರಕ ಸೋಂಕುಗಳು ಮಗುವಿಗೆ ತೊಂದರೆ ಕೊಡುತ್ತವೆ. ಇಲ್ಲಿ ಚಿಕಿತ್ಸೆ ಸುಲಭ. ‘ಸುನ್ನತಿ’ ಎನ್ನುವ ಚಿಕ್ಕ ಆಪರೇಷನ್ ಮಾಡಿ ಮುಂದೂಗಲನ್ನು ತೆಗೆದಾಗ ಮೂತ್ರ ಸುಲಭವಾಗಿ ಹರಿದು ಸೋಂಕು ವಾಸಿಯಾಗುತ್ತದೆ.

ಮಕ್ಕಳು, ಮೂತ್ರವಿಸರ್ಜನೆಯನ್ನು ಮುಂದೂಡುವ ಅಭ್ಯಾಸವನ್ನು ಇಟ್ಟುಕೊಂಡಿದ್ದರೆ ಅದರಿಂದಲೂ ಸೋಂಕು ಒಳಸೇರುವ ಸಾಧ್ಯತೆ ಇರುತ್ತದೆ. ನೀರನ್ನು ಧಾರಾಳವಾಗಿ ಕುಡಿಯಲು ನಾವು ಮಕ್ಕಳಿಗೆ ಕಲಿಸಬೇಕು. ಮೂತ್ರಕ ಸೋಂಕುಗಳಿದ್ದಾಗ ಮೂತ್ರ ಉರಿಯುತ್ತದೆ. ಮೂತ್ರವಿಸರ್ಜನೆಯ ನಿಯಂತ್ರಣವೂ ತಪ್ಪಿಹೋಗಬಹುದು.

ಮಲಬದ್ಧತೆ ಇದ್ದರೂ ಅಷ್ಟೆ. ಆ ಮಗುವಿಗೆ ಮೂತ್ರಕ ಸೋಂಕು ಸೇರುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಮಗು ಸಾಕಷ್ಟು ಸೊಪ್ಪು, ತರಕಾರಿ ಹಣ್ಣುಗಳನ್ನು ತಿನ್ನುವಂತೆ ನೋಡಿಕೊಳ್ಳಬೇಕು. ಮಗುವಿನ ಶುಚಿತ್ವಕ್ಕೆ ವಿಪರೀತ ಕಾಳಜಿ ತೋರಿ ಅದರ ಜನನಾಂಗಗಳಿಗೆ ಸೋಪು, ಶಾಂಪು ಇತ್ಯಾದಿಗಳನ್ನು ಹೆಚ್ಚಾಗಿ ಹಾಕುತ್ತಾರೆ. ಇದು ತಪ್ಪು. ಮೂತ್ರಕ ಸೋಂಕುಗಳಿಗೆ ಇದರಿಂದ ಮಣೆ ಹಾಕಿದಂತಾಗುತ್ತದೆ. ಟಬ್ ಬಾತ್ ಕೊಡುವಾಗ ಅಲ್ಲಿನ ನೀರಿನಲ್ಲಿ ಸುವಾಸನೆ ನೀಡುವ, ನೊರೆ ಕೊಡುವ ವಸ್ತುಗಳನ್ನು ಸೇರಿಸಿದಾಗ ಈ ತೊಂದರೆಯನ್ನು ಆಹ್ವಾನಿಸಿದಂತೆ.

ಮಕ್ಕಳಿಗೆ ಟೀ,ಕಾಫಿ,ಕೋಲಾಗಳ ಅಭ್ಯಾಸ ಇಲ್ಲದಿರಲಿ.ಇವು ಸೂಕ್ಷ್ಮವಾಗಿರುವ ಮೂತ್ರಕವ್ಯವಸ್ಥೆಗೆ ಆರೋಗ್ಯಕರವಲ್ಲ.ಬದಲಾಗಿ.ಮೊಸರು,ಮಜ್ಜಿಗೆಗಳು,ನಿಂಬೆ.ಕಿತ್ತಳೆ ರಸಗಳೇ ಧಾರಾಳವಾಗಿರಲಿ.ಅವರಿಗೆ ಮೂತ್ರಮಾಡಬೇಕೆಂಬ ಅನಿಸಿಕೆ ಬಂದೊಡನೆ ವಿಸರ್ಜನೆಗೆ ಹೋಗುವಂತೆ ನೋಡಿಕೊಳ್ಳಿ.ಶಾಲಾಮಕ್ಕಳ ಜೊತೆಯಲ್ಲಿ ಸದಾ ನೀರಿನ ಶೀಸೆ ಇರಲಿ.

ಈ ಪುಟಾಣಿಗಳಲ್ಲಿ ತಮ್ಮ ಜನನೇಂದ್ರಿಯವನ್ನು ಪದೇ ಪದೇ ಮುಟ್ಟಿ ನೋಡಿಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಮೃದು ಮಾತುಗಳಿಂದಲೇ ದೂರ ಮಾಡಿರಿ. ಚಿಕ್ಕ ಹುಡುಗಿಯರಂತೂ ಆಟವಾಡುತ್ತಾ ತಮ್ಮ ಯೋನಿಯೊಳಗೆ ಬಳಪದ ಚೂರನ್ನೋ ಕಡಲೆ ಬೀಜವನ್ನೋ ಇನ್ನಿತರ ಯಾವುದಾದರೂ ಬೀಜವನ್ನೋ ತುರುಕಿಕೊಳ್ಳುವುದನ್ನೂ ಸಾಮಾನ್ಯವಾಗಿ ಗಮನಿಸುತ್ತೇವೆ. ಇದು ಅಲ್ಲಿ ಸೋಂಕನ್ನು ತಂದಿಟ್ಟು, ಅದು ಮೂತ್ರಕೋಶದೊಳಗೂ ಮೂತ್ರನಾಳಕ್ಕೂ ಪ್ರವೇಶಿಸುತ್ತದೆ.

ಹೆಣ್ಣು ಮಕ್ಕಳ ಮೇಲೆ ಜರುಗುವ ಅತ್ಯಾಚಾರಗಳೂ ಸುಲಭವಾಗಿ ಮೂತ್ರಕ ಸೋಂಕುಗಳನ್ನು ತಂದಿಡುತ್ತವೆ. ನಮ್ಮಲ್ಲಿ ವ್ಯಾಪಕವಾಗಿರುವ ಮೂಢನಂಬಿಕೆಗಳೂ ಇದಕ್ಕೆ ಕಾರಣವಾಗುತ್ತಿವೆ. ಯಾವತ್ತೂ ಮಕ್ಕಳಲ್ಲಿ ಮೂತ್ರಕ ಸೋಂಕನ್ನು ಹಗುರವಾಗಿ ತೆಗೆದುಕೊಳ್ಳುವುದು ಬೇಡ.

ಸುಧಾ, ಸಂಪುಟ 54 ಸಂಚಿಕೆ 32 
 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !