ನಿದ್ದೆಯಲ್ಲಿ ಹಲ್ಲು ಕಡಿಯುವುದೇಕೆ?

7

ನಿದ್ದೆಯಲ್ಲಿ ಹಲ್ಲು ಕಡಿಯುವುದೇಕೆ?

Published:
Updated:

1. ನನ್ನ ಮಗಳಿಗೆ 17 ವರ್ಷ. ಅವಳಿಗೆ ನಿದ್ದೆಯಲ್ಲಿ ಹಲ್ಲು ಕಡಿಯುವ ಅಭ್ಯಾಸವಿದೆ. ಇದಕ್ಕೆ ದಯವಿಟ್ಟು ಪರಿಹಾರ ತಿಳಿಸಿ.

ಪರಿಮಳ, ಬೆಂಗಳೂರು 

ಅನೇಕ ಕಾರಣಗಳಿಂದ ಹಲ್ಲು ಕಡಿಯುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಮಗಳದ್ದು ಹಲ್ಲಿನ ಸಮಸ್ಯೆಯೂ ಆಗಿರಬಹುದು ಅಥವಾ ಮಾನಸಿಕ ಸಮಸ್ಯೆಯೂ ಆಗಿರಬಹುದು. ಹಾಗಾಗಿ ಮೊದಲು ಅವರು ಉತ್ತಮ ದಂತವೈದ್ಯರನ್ನು ಕಂಡು ಹಲ್ಲಿನ ಸಮಸ್ಯೆ ಹೌದೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. 

ಎಲ್ಲವೂ ಸರಿಯಾಗೇ ಇದ್ದು, ಅವರ ಹಲ್ಲಿನ ಆರೋಗ್ಯ ಸರಿಯಿದೆ ಎಂದರೆ, ನೀವು ಅವರ ಆತಂಕ ಹಾಗೂ ಒತ್ತಡದ ಪ್ರಮಾಣವನ್ನು ಗಮನಿಸಬೇಕಾಗುತ್ತದೆ. ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಬೇಕಾಗುತ್ತದೆ. ಅವರೊಂದಿಗೆ ಕುಳಿತು ಮಾತನಾಡಿ. ಅವರು ಕಾಲೇಜಿನಲ್ಲಿ ಹೇಗಿರುತ್ತಾರೆ ಎಂಬುದನ್ನು ಕೇಳಿ. ಯಾವುದಾದರೂ ವಿಷಯ ಅವರನ್ನು ಕಾಡುತ್ತಿದೆಯಾ ತಿಳಿದುಕೊಳ್ಳಿ. ಅವರ ಬಳಿ ಮಾತನಾಡುವುದರಿಂದ ಅವರು ನಿಮ್ಮ ಬಳಿ ಅವರ ಒತ್ತಡ ಹಾಗೂ ಆತಂಕವನ್ನು ಹಂಚಿಕೊಳ್ಳಬಹುದು. ಇದರಿಂದ ಅವರ ಮನಸ್ಸು ಸರಿ ಹೊಂದಬಹುದು. ಅವರಿಗೆ ಯೋಗ, ಧ್ಯಾನ ಮಾಡಲು ತಿಳಿಸಿ. ಇದರಿಂದ ಆತಂಕ ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಆಗಲೂ ಸಮಸ್ಯೆ ಸರಿಹೋಗದಿದ್ದರೆ ಉತ್ತಮ ಡಾಕ್ಟರ್ ಬಳಿ ತೋರಿಸಿ.

2. ನಾನು ಅಂರ್ತಜಾತಿ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ನಮ್ಮ ಮನೆಯವರು ನನ್ನ ಮದುವೆಯನ್ನು ವಿರೋಧಿಸಿದ್ದರು. ತಂದೆ ನನ್ನ ಬಳಿ ಮಾತನಾಡುವುದನ್ನು ನಿಲ್ಲಿಸಿದ್ದರು. ಮದುವೆಯಾಗಿ ಒಂದು ವರ್ಷ ಆದ ಮೇಲೆ ಅಪ್ಪ ನನ್ನೊಂದಿಗೆ ಮಾತನಾಡಲು ಆರಂಭಿಸಿದರು. ನನಗೂ ನಾನು ಮಾಡಿದ್ದು ತಪ್ಪು ಎನ್ನಿಸಿ ಗಂಡನನ್ನು ಬಿಟ್ಟು ತಂದೆಯ ಮನೆಗೆ ಹೋದೆ. ಮನೆಯವರು ‘ಏನೋ ವಯಸ್ಸಿನಲ್ಲಿ ಆದ ತಪ್ಪು, ಅದನ್ನು ಮರೆತು ಬೇರೆ ಮದುವೆ ಆಗು’ ಎಂದಿದ್ದರು. ಅದಕ್ಕೆ ನಾನೂ ಒಪ್ಪಿದ್ದೆ. ಆದರೆ ನನ್ನ ಗಂಡನನ್ನು ಬಿಟ್ಟಿರಲಾಗದೆ ಮತ್ತೆ ಗಂಡನ ಮನೆಗೆ ಬಂದೆ. ಆದರೆ ಈಗ ಮಾನಸಿಕವಾಗಿ ನೊಂದಿದ್ದೇನೆ. ‘ನಾನು ತಂದೆ–ತಾಯಿಗೆ ಮೋಸ ಮಾಡಿದ್ದೇನೆ, ನಾನು ಬದುಕಬಾರದು’ ಎಂಬೆಲ್ಲ ಯೋಚನೆಗಳು ಬರುತ್ತವೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗಂಡ, ನಾನೇ ಬದುಕು ಎಂದುಕೊಂಡ ತಂದೆ–ತಾಯಿ – ಇವರಿಬ್ಬರನ್ನೂ ನನಗೆ ದೂರ ಮಾಡಿಕೊಳ್ಳಲು ಆಗುತ್ತಿಲ್ಲ. ಏನು ಮಾಡಲಿ?

ಹೆಸರು, ಊರು ಬೇಡ

ಇಂದಿಗೂ ಅಂರ್ತಜಾತಿ ವಿವಾಹಕ್ಕೆ ತಂದೆ–ತಾಯಿಯರು ಒಪ್ಪಿಗೆ ನೀಡುವುದಿಲ್ಲ. ಅದಕ್ಕೆ ಕಾರಣಗಳು ಹಲವಿರಬಹುದು. ಅಂರ್ತಜಾತಿ ವಿವಾಹವನ್ನು ಎದುರಿಸುವುದು ಎಷ್ಟು ಕಷ್ಟ ಎಂಬುದನ್ನು ಬಹುಶಃ ಅವರ ಜೀವನಾನುಭದಿಂದ ತಿಳಿದುಕೊಂಡಿರಬಹುದು. ಅದರಲ್ಲೂ ಜೀವನಶೈಲಿ, ಆಹಾರ, ಬೆಳೆದ ರೀತಿ–ನೀತಿ ಹಾಗೂ ಸಂಸ್ಕೃತಿಯ ಬದಲಾವಣೆಯಂತಹ ಕೆಲವು ಕಾರಣಗಳಿಂದಲೂ ಅವರು ವಿರೋಧ ವ್ಯಕ್ತಪಡಿಸಿರಬಹುದು. ಆದರೆ ಪ್ರೇಮಿಗಳು ಮದುವೆಯ ಹಂತಕ್ಕೆ ಬಂದ ಮೇಲೆ ಈ ಯಾವುದನ್ನೂ ಲೆಕ್ಕಿಸುವುದಿಲ್ಲ. ನಾನು ಹೇಳಲು ಇಚ್ಛಿಸುವುದೇನೆಂದರೆ, ಭಿನ್ನ ಹಿನ್ನೆಲೆಯಿರುವ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ನೀವಿಬ್ಬರೂ ದೃಢವಾಗಿರಬೇಕು. ಸಂದರ್ಭವನ್ನು ಅರಿತು ಪೋಷಕರು ಹಾಗೂ ಸಮಾಜದಿಂದ ಏನೇ ಬಂದರೂ ಎದುರಿಸಲು ಸಿದ್ಧರಿರಬೇಕು. ಮೊದಲು ನೀವಿಬ್ಬರೂ ಗಟ್ಟಿಯಾಗಿರಿ. ಒಬ್ಬರಿಗೊಬ್ಬರು ಬೆಂಬಲವಾಗಿ ಇದ್ದರೆ ಯಾರೂ ನಿಮಗೆ ತೊಂದರೆ ಮಾಡಲು ಸಾಧ್ಯವಿಲ್ಲ. ನೀವೇ ಹೇಳಿದ್ದೀರಿ, ನಿಮ್ಮ ಗಂಡ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ ಹಾಗೂ ಕಾಳಜಿ ತೋರುತ್ತಾರೆ ಎಂದು. ಹಾಗಿದ್ದ ಮೇಲೂ ನೀವ್ಯಾಕೆ ಇಷ್ಟೊಂದು ಯೋಚಿಸುತ್ತಿದ್ದೀರಿ. ನಿಮ್ಮ ಸಂಬಂಧದಲ್ಲಿನ ಆಪ್ಯಾಯತೆ ಹಾಗೂ ನಿಮ್ಮ ಸಂತೋಷವನ್ನು ನೋಡಿದ ತಂದೆ–ತಾಯಿಗಳು ಅವರಾಗಿಯೇ ನಿಮ್ಮ ಬಳಿ ಬರುತ್ತಾರೆ. ನಂತರ ಎಲ್ಲವೂ ಒಳ್ಳೆಯದಾಗುತ್ತದೆ. ಸಕಾರಾತ್ಮಕವಾಗಿರಿ. ಹಿಂದೆ ಘಟಿಸಿದ ಯಾವುದನ್ನೂ ನೀವು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ. ತಂದೆ–ತಾಯಿಗೆ ವಿರುದ್ಧವಾಗಿ ಮಾಡಿದ ಕೆಲಸವನ್ನು ಒಪ್ಪಿಕೊಳ್ಳಿ. ಆದರೆ ಆತ್ಮವಿಶ್ವಾಸದಿಂದಿರಿ. ನೀವು ಜೀವನದಲ್ಲಿ ತುಂಬಾ ಸಂತಸದಿಂದ ಇದ್ದೀರಿ ಎಂಬುದನ್ನು ಅವರಿಗೆ ತೋರಿಸಿ. ಭವಿಷ್ಯದಲ್ಲಿ ಉತ್ತಮ ದಾಂಪತ್ಯಜೀವನವನ್ನು ನಡೆಸಿ. ಪೋಷಕರು ನಿಮ್ಮ ಸಂತೋಷ ಹಾಗೂ ಸುರಕ್ಷತೆಯನ್ನೇ ಬಯಸುತ್ತಾರೆ. 

3. ನಾನು 23 ವರ್ಷದ ಎಂಜಿನಿಯರಿಂಗ್ ಪದವೀಧರ. ಕಳೆದ ಎರಡು ವರ್ಷಗಳಿಂದ ಕೆಲಸ ಹುಡುಕುತ್ತಿದ್ದೇನೆ. ಕೆಲಸ ಸಿಕ್ಕಿಲ್ಲ. ಆ ಒಂದು ಕಾರಣಕ್ಕಾಗಿ ಎಲ್ಲರೂ ನನ್ನನ್ನು ಕೆಲಸಕ್ಕೆ ಬಾರದವನು ಎಂಬಂತೆ ನೋಡುತ್ತಾರೆ. ಮನೆಯಲ್ಲಿಯಾಗಲಿ ಅಥವಾ ಹೊರಗಡೆಯಾಗಲಿ ಯಾರೂ ನನಗೆ ಗೌರವ ನೀಡುತ್ತಿಲ್ಲ. ಹೊರಗಡೆ ಬಿಡಿ, ಮನೆಯಲ್ಲಿ ಅಪ್ಪ, ಅಮ್ಮ ಹಾಗೂ ಅಣ್ಣ ಎಲ್ಲರೂ ನನ್ನ ಮನಸ್ಸಿಗೆ ನೋವು ಮಾಡುತ್ತಾರೆ. ನನಗೆ ಏನು ಮಾಡಬೇಕು ತಿಳಿಯುತ್ತಿಲ್ಲ.  ತಂದೆ ತುಂಬಾ ನೋವಾಗುವ ಹಾಗೆ ಮಾತನಾಡುತ್ತಾರೆ. ಊಟ ಮಾಡುವ ಸಮಯದಲ್ಲೂ ನನ್ನನ್ನು ಹಂಗಿಸುತ್ತಾರೆ. ನನಗೆ ಎಲ್ಲದರಲ್ಲೂ ಆಸಕ್ತಿ ಹೋಗಿದೆ. ಮನೆಯಲ್ಲಿ ಏನೇ ಸಮಸ್ಯೆ ಬಂದರೂ ನನ್ನನ್ನೇ ಜರಿಯುತ್ತಾರೆ. ಕೆಲವು ದಿನಗಳ ಹಿಂದೆ ನನ್ನ ತಂದೆ ನನಗೆ ಬ್ಯಾಂಕ್‌ನಲ್ಲಿ ಎಲ್ಲರ ಎದುರು ಹೀಯಾಳಿಸಿದ್ದರು. ಆ ದಿನ ನನಗೆ ಸಾಯಬೇಕು ಎನ್ನಿಸಿತ್ತು. ಕಳೆದ ಆರು ತಿಂಗಳಿಂದ ನನ್ನ ಆರೋಗ್ಯವೂ ಹದಗೆಟ್ಟಿದೆ. (ನನಗೆ ಪಿಸಿಓಡಿ ಹಾಗೂ ಅನಿಮಿಯಾ ಇದೆ). ಯಾವಾಗಲೂ ನಾನು ಮನೆಯಲ್ಲೇ ಇರುತ್ತೇನೆ. ಯಾರೊಂದಿಗೂ ಮಾತನಾಡುವುದಿಲ್ಲ. ಖಿನ್ನತೆಗೆ ಒಳಗಾಗಿದ್ದೇನೆ ಎಂದು ಅನ್ನಿಸುತ್ತಿದೆ. ಜೀವನದ ಮೇಲೆ ನಿರಾಸಕ್ತಿ ಮೂಡಿದೆ.

ಹೆಸರು, ಊರು ಬೇಡ

ಕೆಲಸವಿಲ್ಲದೇ ಮನೆಯಲ್ಲಿ ಕೂರುವುದು ಹಾಗೂ ಸುತ್ತಲಿನ ಜನರಿಂದ ಮಾತು ಕೇಳುವುದು ಎಷ್ಟು ಕಷ್ಟ ಹಾಗೂ ನೀವು ಯಾವ ರೀತಿಯ ನೋವನ್ನು ಅನುಭವಿಸುತ್ತಿದ್ದೀರಿ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ, ನೀವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ, ಸುಮ್ಮನೆ ಮನೆಯಲ್ಲೇ ಕುಳಿತು ಎರಡು ವರ್ಷ ವ್ಯರ್ಥ ಮಾಡುವುದಕ್ಕಿಂತ ಸ್ನಾತಕೋತ್ತರ ಪದವಿ ಮಾಡಬೇಕಾಗಿತ್ತು. ನಿಮಗೆ ಸ್ನಾತಕೋತ್ತರ ಕೋರ್ಸಿನ ಪ್ರವೇಶದಲ್ಲಿ ಯಾವುದಾದರೂ ತೊಂದರೆ ಉಂಟಾಗಿದ್ದಿದ್ದರೆ ದೂರಶಿಕ್ಷಣದ ಮೂಲಕ ಮಾಡಬಹುದು. ಸ್ನಾತಕೋತ್ತರ ಪದವಿಯ ಮೇಲೆ ನಿಮಗೆ ಆಸಕ್ತಿ ಇಲ್ಲದಿದ್ದರೆ ನಿಮ್ಮ ರೆಸ್ಯೂಮ್‌ನಲ್ಲಿ ಒಂದಷ್ಟು ಅಪ್‌ಡೇಟ್‌ಗಾಗಿ ಯಾವುದಾದರೂ ಸೀಮಿತ ಅವಧಿಯ ಕೋರ್ಸ್‌ಗಳನ್ನು ಮಾಡಬಹುದಿತ್ತು. ಮನೆಯಲ್ಲೇ ಕುಳಿತು ಖಿನ್ನತೆಗೆ ಒಳಗಾಗುವುದಕ್ಕಿಂತಲೂ ಮಾಡಲು ಅನೇಕ ಕೆಲಸಗಳಿವೆ, ಅವನ್ನು ಮಾಡಬಹುದಿತ್ತು. ಮನೆಯವರ ಮೇಲೆ ಆರೋಪ ಮಾಡುವುದು ಸುಲಭ. ಆದರೆ ನೀವೇಕೆ ನಿಮ್ಮಲ್ಲಿ ಸಾಮರ್ಥ್ಯವಿದೆ ಎಂದು ಅವರಿಗೆ ತೋರಿಸಲು ಪ್ರಯತ್ನಿಸಿಲ್ಲ? ಒಬ್ಬ ಯುವಕನಾಗಿ ನೀವು ಸದಾ ಚಟುವಟಿಕೆ ಹಾಗೂ ಉತ್ಸಾಹದಿಂದ ಇರಬೇಕು. ಸ್ನೇಹಿತರನ್ನು ಸಂಪಾದಿಸಿ, ಅವರೊಂದಿಗೆ ಸಂಪರ್ಕದಲ್ಲಿರಿ. ಅವರು ನಿಮಗೆ ಕೆಲಸ ಹುಡುಕಲು ಸಹಾಯ ಮಾಡುತ್ತಾರೆ. ಆರಂಭದಲ್ಲಿಯೇ ಹೆಚ್ಚಿನ ಸಂಬಳ ನೀಡುವ ಕೆಲಸ ಸಿಗಬೇಕು ಎಂದುಕೊಳ್ಳಬೇಡಿ. ನಿಮಗೆ ಕಲಿಯಲು ಸ್ವಲ್ಪ ಸಮಯ ಬೇಕು. ಅನುಭವ ಜಾಸ್ತಿಯಾದಂತೆ ನೀವು ಹೆಚ್ಚಿಗೆ ಡಿಮ್ಯಾಂಡ್ ಮಾಡಬಹುದು. ಮನೆಯಲ್ಲೇ ಕುಳಿತು, ಯಾವಾಗಲೂ ದುಃಖ ಪಡುವುದಕ್ಕಿಂತ ಮನೆಯಿಂದ ಹೊರಹೋಗಿ, ಜಗತ್ತನ್ನು ನೋಡಿ, ಯಾವುದಾದರೂ ಒಳ್ಳೆಯ ಕೋರ್ಸ್‌ಗೆ ಸೇರಿಕೊಳ್ಳಿ. ನಿಮ್ಮ ಹೆಸರನ್ನು ಜಾಬ್ ಕನ್ಸ್‌ಲ್‌ಟೆನ್ಸಿಗಳಲ್ಲಿ ಸೇರಿಸಿ. ನಿಮ್ಮ ಪೋಷಕರಿಗೆ ಮನೆಕೆಲಸಗಳಲ್ಲಿ ಸಹಾಯ ಮಾಡಿ. ನಿಮ್ಮ ಆತ್ಮವಿಶ್ವಾಸವನ್ನು ತೋರಿಸಿ. ಕೆಲಸ ಇಲ್ಲ ಎಂದರೂ ತೊಂದರೆಯಿ‌ಲ್ಲ. ಆದರೆ, ನೀವು ಆತ್ಮವಿಶ್ವಾಸದಿಂದಿರಿ ಮತ್ತು ಕೆಲಸಕ್ಕಾಗಿ ಪ್ರಯ್ನತಿಸುತ್ತಿರಿ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !