ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Brain Tumor Day : ಬ್ರೈನ್‌ ಟ್ಯೂಮರ್‌ ಬಗ್ಗೆ ಇರಲಿ ಜಾಗೃತಿ

Published 8 ಜೂನ್ 2023, 3:40 IST
Last Updated 8 ಜೂನ್ 2023, 3:40 IST
ಅಕ್ಷರ ಗಾತ್ರ

ಇಂದು ವಿಶ್ವ ಬ್ರೈನ್‌ ಟ್ಯೂಮರ್‌ ದಿನ. ಮಕ್ಕಳಿಂದ ಹಿಡಿದು, ಇಳಿವಯಸ್ಸಿನವರೆಗೆ ಯಾವುದೇ ವಯಸ್ಸಿನವರಿಗೂ ಬರಬಹುದಾದ ಟ್ಯೂಮರ್‌ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ತೋರಿದರೂ ಪ್ರಾಣಕ್ಕೆ ಕುತ್ತಾಗಬಹುದು. ಹೀಗಾಗಿ ಮೆದುಳಿನ ಗಡ್ಡೆಯ ಬಗ್ಗೆ ಹಾಗೂ ಅದಕ್ಕೆ ಇರುವ ಚಿಕಿತ್ಸೆಗಳ ಕುರಿತು ಒಂದಷ್ಟು ಮಾಹಿತಿ ತಿಳಿದಿರುವುದು ಸೂಕ್ತ. ಭಾರತದಲ್ಲಿ ಒಂದು ಲಕ್ಷ ಜನರಲ್ಲಿ 5 ರಿಂದ10 ಜನರಿಗೆ ಬ್ರೈನ್‌ ಟ್ಯೂಮರ್‌ ಕಾಣಿಸಿಕೊಳ್ಳುತ್ತಿದೆ ಎಂದು ಅಂದಾಜಿಸಲಾಗಿದೆ.

ಮೆದುಳಿನ ಟ್ಯೂಮರ್ ಅನ್ನು ಎರಡು ಬಗೆಗಳಲ್ಲಿ ವಿಂಗಡಿಸಲಾಗಿದೆ. ಮ್ಯಾಲಿಗ್ನನ್ಟ್ ಟ್ಯೂಮರ್ ಮತ್ತು ಬೆನಿಗ್ನ್ ಟ್ಯೂಮರ್. ಮ್ಯಾಲಿಗ್ನನ್ಟ್ ಟ್ಯೂಮರ್ ಕ್ಯಾನ್ಸರ್ ಕಾರಕವಾಗಿದ್ದು ಜೀವಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚು. ಬೆನಿಗ್ನ್ ಟ್ಯೂಮರ್ ಕೂಡ ಜೀವಕ್ಕೆ ಮಾರಕವಾದರೂ, ಇದನ್ನು ಗುಣಪಡಿಸಬಹುದು. ಯಾವೆಲ್ಲಾ ಲಕ್ಷಣಗಳಿಂದ ಮೆದುಳಿನಲ್ಲಿ ಗಡ್ಡೆ ಇದೆ ಎಂದು ತಿಳಿಯಬಹುದು ಹಾಗೂ ಇದಕ್ಕಿರುವ ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ.

ಬ್ರೈನ್‌ ಟ್ಯೂಮರ್‌ನ ಲಕ್ಷಣಗಳೇನು?

ಮೆದುಳಿನ ಗಡ್ಡೆ ಬೆಳೆಯುತ್ತಾ ಹೋದಂತೆ ಒಂದಷ್ಟು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದುವರೆಗೂ ತಲೆ ನೋವು ಇಲ್ಲದವರಲ್ಲಿ ತಲೆ ನೋವು ನಿಧಾನವಾಗಿ ಆರಂಭಗೊಂಡು ನಂತರ ವಿಪರೀತ ತಲೆ ನೋವಿಗೆ ತಿರುಗುವುದು, ಕಣ್ಣು ಮಂಜಾಗುವುದು, ವಾಕರಿಕೆ ಹಾಗೂ ವಾಂತಿ ಕಾಣಿಸಿಕೊಳ್ಳುವುದು, ಕೈ ಕಾಲಿನ ಭಾಗದಲ್ಲಿ ಸಂವೇದನೆ ಕಳೆದುಕೊಳ್ಳುವುದು, ಮಾತನಾಡಲು ಕಷ್ಟವಾಗುವುದು, ದಿನದ ಕೆಲಸ ಕಾರ್ಯಗಳಲ್ಲಿ ವಿಪರೀತ ಗೊಂದಲ, ಕಿವಿ ಕೇಳಿಸದಂತಾಗುವುದು ಸೇರಿದಂತೆ ಇತರೆ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಇನ್ನೂ ಕೆಲವರು ಈ ಲಕ್ಷಣಗಳನ್ನು ಮೈಗ್ರೇನ್‌ ಎಂದು ನಿರ್ಲಕ್ಷ್ಯ ಮಾಡಬಹುದು, ಮತ್ತೆ ಕೆಲವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳದೇ ಕೊನೆ ಹಂತದವರೆಗೂ ತಲುಪುವ ಅಪಾಯವಿರಲಿದೆ. ಹೀಗಾಗಿ, ತಲೆ ನೋವನ್ನು ಎಂದಿಗೂ ನಿರ್ಲಕ್ಷಿಸದೇ ಪರೀಕ್ಷಿಸಿಕೊಳ್ಳುವುದು ಉತ್ತಮ.

ಬ್ರೈನ್‌ನಲ್ಲಿ ಟ್ಯೂಮರ್ ಬೆಳೆಯಲು ಕಾರಣವೇನು?: ಮೆದುಳಿನಲ್ಲಿನ ಕೋಶಗಳು ಅಸಹಜ ಬೆಳವಣಿಗೆ ಹೊಂದಿ, ಅದು ಗಡ್ಡೆಯಾಗಿ ಬೆಳೆದುಕೊಳ್ಳುತ್ತದೆ. ಗಡ್ಡೆ ಬೆಳೆಯಲು ಇದೇ ಕಾರಣವೆಂದು ಸೂಕ್ತವಾಗಿ ಹೇಳಲು ಆಗದು, ಆದರೆ, ಹೆಚ್ಚು ರೇಡಿಯೇಷನ್‌ ಹೊಂದಿರುವ ಮೊಬೈಲ್‌ನನ್ನು ಹೆಚ್ಚು ಸಮಯ ಬಳಕೆ ಮಾಡುತ್ತಿದ್ದರೆ, ಇದರಿಂದ ಮೆದುಳಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ, ಇದು ಗಡ್ಡೆಯ ರೂಪದಲ್ಲಿ ಮೆದುಳಿನ ಒಳಭಾಗದಲ್ಲಿ ಬೆಳೆಯಬಹುದು. ಇನ್ನು,ವಯ್ಸಾದವರಲ್ಲಿ ಸೆಕೆಂಡರಿ ಬ್ರೈನ್‌ ಟ್ಯೂಮರ್‌ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸೆಕೆಂಡರಿ ಬ್ರೈನ್‌ ಟ್ಯೂಮರ್‌ ಎಂದರೆ, ಈಗಾಗಲೇ ದೇಹದ ಇತರ ಭಾಗದಲ್ಲಿ ಕ್ಯಾನ್ಸರ್‌ ಕಾಣಿಸಿಕೊಂಡು ನಂತರ ಅದು ಮೆದುಳಿಗೆ ಟ್ಯೂಮರ್‌ ಆಗಿ ಹರಡಬಹುದು. ಇದರ ಪ್ರಮಾಣವೂ ಕಡಿಮೆಯೆ, ಆದರೂ ಕೆಲ ವಯಸ್ಸಾದವರಲ್ಲಿ ಸೆಕೆಂಡರಿ ಟ್ಯೂಮರ್‌ ಕಾಣಿಸಿಕೊಂಡಿರುವ ಉದಾಹರಣೆಗಳಿವೆ.

ಟ್ಯೂಮರ್‌ ಕರಗಿಸಲು ಈ ಚಿಕಿತ್ಸೆಗಳು ಲಭ್ಯ: ಮೆದುಳಿನಲ್ಲಿ ಗಡ್ಡೆ ಬೆಳೆದಿದೆಯೇ ಎಂಬುದನ್ನು ಸಿಟಿ ಸ್ಕ್ಯಾನ್‌ ಅಥವಾ ಎಂಆರ್‌ಐ ಮೂಲಕ ನಿಖರವಾಗಿ ತಿಳಿಯಬಹುದು. ಟ್ಯೂಮರ್‌ ಕರಗಿಸಲು ಸಾಕಷ್ಟು ಅತ್ಯಾಧುನಿಕ ಚಿಕಿತ್ಸೆ ಬಂದಿದೆ, ಅದರಲ್ಲಿ, ಕೀಹೋಲ್ ಶಸ್ತ್ರಚಿಕಿತ್ಸೆ, ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ರೇಡಿಯೇಷನ್‌ ಥೆರಪಿ, ಕಿಮೋಥೆರಪಿ, ಓಪನ್‌ ಸರ್ಜರಿ ಮೂಲಕ ಗಡ್ಡೆಯನ್ನು ತೆಗೆದುಹಾಕಬಹುದು.

ಟ್ಯೂಮರ್‌ ಬಾರದಂತೆಯೂ ಥೆರಪಿ ಲಭ್ಯ: ಸಾಮಾನ್ಯವಾಗಿ ಮೆದುಳಿನ ಗಡ್ಡೆ ತೆರವುಗೊಳಿಸಿದ ಬಳಿಕ ಮತ್ತೊಮ್ಮೆ ಬರುವ ಸಾಧ್ಯತೆ ಇದೆ. ಪ್ರತಿಬಾರಿಯೂ ಸರ್ಜರಿ ಮೂಲಕವೇ ತೆರವು ಮಾಡಬೇಕಾದದ್ದು, ಸವಾಲಿನ ಕೆಲಸ. ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಂದಿದ್ದು, ಇಂಟ್ರಾ ಆಪರೇಟಿವ್‌ ರೇಡಿಯೇಷನ್‌ ಥೆರಪಿ (IORT) ಮೂಲಕ ವಿಕಿರಣದ ಚಿಕಿತ್ಸೆಯಿಂದ ಶಾಶ್ವತವಾಗಿ ಗಡ್ಡೆಯನ್ನು ಹೋಗಲಾಡಿಸಬಹುದು. ಇದು ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಲಭ್ಯ.

–ಡಾ. ರಾಜಕುಮಾರ್ ದೇಶಪಾಂಡೆ, ನಿರ್ದೇಶಕರು, ನರಶಸ್ತ್ರಚಿಕಿತ್ಸಾ ವಿಭಾಗ, ಫೋರ್ಟಿಸ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT