ಶುಕ್ರವಾರ, ಫೆಬ್ರವರಿ 26, 2021
25 °C

ನಿಮ್ಮ ಮಕ್ಕಳಿಗೂ ಕನ್ನಡಕ ಬಂತಾ?

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

‘ಅಮ್ಮ, ನಂಗೆ ಬೋರ್ಡ್‌ನಲ್ಲಿ ಬರೆದದ್ದು ಏನೂ ಕಾಣಿಸೋದೇ ಇಲ್ಲ. ಯಾರಿಗೆ ಕಾಣಲ್ವೋ ಅವರೆಲ್ಲ ಚಾಪೆ ಮೇಲೆ ಕೂತ್ಕೋಬೇಕು. ಇವತ್ತಿಂದ ನಾನೂ ಚಾಪೆಯಲ್ಲೇ ಕೂರ್ತೀನಿ’

ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿ ಅನನ್ಯಾ ಹೇಳಿದಾಗ ಮಗಳಿಗೆ ದೃಷ್ಟಿದೋಷ ಬಂದಿರುವುದು ವಿದ್ಯಾಗೆ ಸ್ಪಷ್ಟವಾಯಿತು. ಅನನ್ಯಾಗೆ ಆರನೇ ವಯಸ್ಸಿನಲ್ಲೇ ಸಮೀಪದೃಷ್ಟಿ ದೋಷದ ಕಾರಣಕ್ಕೆ ಕನ್ನಡಕ ಬಂತು.

ಮೂರನೇ ತರಗತಿಯ ಪ್ರಮಥ ಮತ್ತು ಅಜಿಂಕ್ಯನ ಹೆತ್ತವರಿಗೆ ತರಗತಿಯ ಶಿಕ್ಷಕಿ ಒಂದು ನೋಟಿಸ್‌ ಕಳುಹಿಸಿದ್ದರು. ‘ನಿಮ್ಮ ಮಗುವಿಗೊಮ್ಮೆ ನೇತ್ರ ತಪಾಸಣೆ ಮಾಡಿಸಿ. ಎರಡನೇ ಬೆಂಚಿನಿಂದ ಎದ್ದು ಬಂದು ಬೋರ್ಡ್‌ನಲ್ಲಿ ಬರೆದುದನ್ನು ಓದಿಕೊಂಡು ಹೋಗಿ ಬರೆಯುತ್ತಾರೆ. ಇದು ಆತಂಕಕಾರಿ’ ಎಂಬುದು ಅದರಲ್ಲಿದ್ದ ಒಕ್ಕಣೆ.

‘ಎರಡು ವರ್ಷದ ನನ್ನ ಮಗಳು ಯಾವ್ಯಾವುದೋ ವಿಡಿಯೊ ಗೇಮ್‌ಗಳನ್ನು ಡೌನ್‌ಲೋಡ್‌ ಮಾಡ್ಕೋತಾಳೆ. ಅವಳಿಗೆ ಅದು ಹೇಗೆ ತಿಳಿಯುತ್ತದೋ ಗೊತ್ತಿಲ್ಲ’ ಎಂದು ಹುಸಿಗೋಪ ತೋರುತ್ತಾರೆ, ಅವನೀಶನ ತಾಯಿ ಮೃದುಲಾ. ಪ್ರಮಥ ಮತ್ತು ಅಜಿಂಕ್ಯ ಈಗ ಕನ್ನಡಕಧಾರಿಗಳು!

‘ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ ದೃಷ್ಟಿದೋಷ ಕಾಣಿಸಿಕೊಳ್ಳುತ್ತಿದೆ’ ಎಂದು ಮಕ್ಕಳ ನೇತ್ರ ತಜ್ಞರೂ ಆತಂಕ ವ್ಯಕ್ತಪಡಿಸುತ್ತಾರೆ. 

***

ಮಕ್ಕಳಲ್ಲಿ ಕಂಡುಬರುವ ದೃಷ್ಟಿದೋಷಗಳಿಗೆ ಬೇರೆ ಬೇರೆ ಕಾರಣಗಳಿರುತ್ತವೆ. ಮೊಬೈಲ್‌ನಲ್ಲಿ ವಿಡಿಯೊ ಗೇಮ್‌ಗಳನ್ನು ಆಡುವುದು, ಮುದ ನೀಡುವ ವಿವಿಧ ಕ್ಯಾಮೆರಾಗಳೊಂದಿಗೆ ಫೋಟೊ ತೆಗೆಯುವ ಆಟ ಆಡುವುದು, ಪೊಟ್ಟಣದಲ್ಲಿನ ಆಹಾರಗಳ ಸೇವನೆ, ಜೀವನಶೈಲಿ, ಸ್ವಚ್ಛತೆಯ ಅಲಕ್ಷ್ಯ ಮತ್ತು ವಂಶಪಾರಂಪರ್ಯ ಸಮಸ್ಯೆಗಳು.

ವಿಡಿಯೊ ಗೇಮಿಂಗ್‌ ಕ್ಷೇತ್ರದ ದಿಗ್ಗಜ ಚೀನಾ, ವಿಡಿಯೊ ಗೇಮ್‌ಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ. ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ವಿಡಿಯೊ ಗೇಮ್‌ಗಳ ಬಳಕೆಯೇ ಪ್ರಮುಖ ಕಾರಣ ಎಂದು ಚೀನಾ ಸರ್ಕಾರ ಮನಗಂಡಿದೆ. ಹಾಗಾಗಿ ಹೊಸ ವಿಡಿಯೊ ಗೇಮ್‌ಗಳಿಗೆ ಪರವಾನಗಿ ನೀಡುವುದು ಮತ್ತು ಈಗಾಗಲೇ ಜನಬಳಕೆಯಲ್ಲಿರುವ ಗೇಮ್‌ಗಳನ್ನು ಹಿಂತೆಗೆದುಕೊಳ್ಳುವ ನಿಟ್ಟಿನಲ್ಲಿಯೂ ಕ್ರಮ ಕೈಗೊಂಡಿದೆ. 

ಚೀನಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಹಿವಾಟು ನಡೆಸುವ ಕ್ಷೇತ್ರ ವಿಡಿಯೊ ಗೇಮಿಂಗ್‌. ಆದರೆ ಸರ್ಕಾರದ ತಿಜೋರಿ ತುಂಬಿಸಿಕೊಳ್ಳುವುದಕ್ಕಿಂತ ಮಕ್ಕಳ ಸುರಕ್ಷೆ ಮತ್ತು ಹಿತದೃಷ್ಟಿ ಮುಖ್ಯ ಎಂದು ಸ್ವತಃ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ಈ ಕ್ಷೇತ್ರದ ಮುಂಚೂಣಿ ಕಂಪನಿ ಟೆನ್ಸೆಂಟ್‌ ಕೆಲತಿಂಗಳಿಂದೀಚೆ ಭಾರಿ ನಷ್ಟ ಅನುಭವಿಸಿದೆ. ಆದರೆ ಸರ್ಕಾರ ತನ್ನ ವಾದಕ್ಕೆ ಕಟಿಬದ್ಧವಾಗಿದೆ ಎಂದು ಜಿನ್‌ಪಿಂಗ್‌ ಹೇಳಿದ್ದಾರೆ.

ಆ್ಯಂಡ್ರಾಯ್ಡ್‌ ಫೋನ್‌ಗಳು ಈಗ ಜನಸಾಮಾನ್ಯರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿವೆ. ಆ್ಯಂಡ್ರಾಯ್ಡ್‌ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ವಿಡಿಯೊ ಗೇಮ್‌ಗಳು ಮಕ್ಕಳಿಗೆ ಕರತಲಾಮಲಕ! ಫೋನ್‌ ಖರೀದಿಸಿಕೊಂಡು ಬಂದ ತಕ್ಷಣ ಮಕ್ಕಳೇ ಕಸಿದುಕೊಂಡು ಎಲ್ಲಾ ಸೆಟ್ಟಿಂಗ್ಸ್‌ ಮಾಡಿಬಿಡುತ್ತಾರೆ. ಹೆತ್ತವರು, ಆ ಕ್ಷಣಕ್ಕೆ ತಮ್ಮ ಮಕ್ಕಳ ಜಾಣ್ಮೆಗೆ ದಂಗಾಗುತ್ತಾರೆ. ಆದರೆ ಅದೇ ಮಕ್ಕಳು ಆ ಮೊಬೈಲ್‌ನ ವಾರಸುದಾರರಂತೆ ತಮಗೆ ಬೇಕಾದ ಗೇಮಿಂಗ್‌ ಆ್ಯಪ್‌ ಮತ್ತು ವಿಡಿಯೊ ಗೇಮ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಿರುತ್ತಾರೆ. ಹೆತ್ತವರಿಗೆ ಇದರ ಸುಳಿವೇ ಸಿಗುವುದಿಲ್ಲ.

‘ಯೂ ಟ್ಯೂಬ್‌ ಮತ್ತು ಪ್ಲೇಸ್ಟೋರ್‌ನಲ್ಲಿ ಸುಲಭವಾಗಿ ವಿಡಿಯೊ ಗೇಮ್‌ಗಳು ಸಿಗುತ್ತವೆ. ನನ್ನ ಮಗಳು ಶಾಲೆಯಿಂದ ಬಂದ ತಕ್ಷಣ ಮತ್ತು ರಜಾ ದಿನಗಳಲ್ಲಿ ವಿಡಿಯೊ ಗೇಮ್‌ ಆಡುತ್ತಿದ್ದಳು. ಮಕ್ಕಳ ಮಿದುಳು ಮತ್ತು ಕಣ್ಣಿಗೆ ಅದರಿಂದ ದುಷ್ಪರಿಣಾಮ ಆಗುತ್ತದೆ. ಅದಕ್ಕಾಗಿ ನಾನೊಂದು ಉಪಾಯ ಮಾಡಿದ್ದೇನೆ. ವಿಡಿಯೊ ಗೇಮ್‌ಗಳು ಚಾಲೂ ಇರುವ ಮೊಬೈಲ್‌ಗಳ ಐಪಿ ಅಡ್ರೆಸ್‌ ಪತ್ತೆ ಹಚ್ಚಿ ಮಕ್ಕಳನ್ನು ಅಪಹರಿಸುತ್ತಾರಂತೆ. ನೀನು ಆಟವಾಡಿದರೆ ಮಕ್ಕಳ ಕಳ್ಳರಿಗೆ ನಮ್ಮ ಮನೆಯ ವಿಳಾಸ ಸಿಗುತ್ತದೆ’ ಎಂದು ಮಗಳಿಗೆ ಎಚ್ಚರಿಸಿದ್ದೇನೆ. ಈಗ ಆಟವಾಡುವುದನ್ನು ಬಿಟ್ಟಿದ್ಧಾಳೆ’ ಎನ್ನುತ್ತಾರೆ, ರಾಜರಾಜೇಶ್ವರಿ ನಗರದ ನಿವಾಸಿ ಹರಿಣಿ.

ಜಯನಗರ ಏಳನೇ ಬ್ಲಾಕ್‌ನ ಬೈಶಾಕಿ ತಮ್ಮ ಮಗಳು, ಮೂರನೇ ತರಗತಿ ವಿದ್ಯಾರ್ಥಿನಿ ವಿದುಷಿಗೆ ವಂಶ ಪಾರಂಪರ್ಯವಾಗಿ ದೃಷ್ಟಿದೋಷ ಬಂದಿರುವ ಕಾರಣ ವಿಡಿಯೊ ಗೇಮ್‌ಗಳ ಬಳಕೆಯನ್ನು ನಿಯಂತ್ರಿಸಿದ್ದಾರಂತೆ.

‘ವಿದುಷಿಗೆ ಓದುವುದೆಂದರೆ ತುಂಬಾ ಇಷ್ಟ. ಆದರೆ ಮೂರೂವರೆ ವರ್ಷಗಳ ಹಿಂದೆಯೇ ಅವಳಿಗೆ ಕನ್ನಡಕ ಬಂತು. ಹಾಗಾಗಿ ಮೊಬೈಲ್‌ನಲ್ಲಿ ಓದುವುದು, ಆಡುವುದನ್ನು ನಿಯಂತ್ರಿಸುತ್ತೇನೆ. ಅವಳಿಗೆ ಮನರಂಜನೆ ನೀಡ ಬಹುದಾದ ಕೆಲವು ವಿಡಿಯೊ ಗೇಮ್‌ಗಳನ್ನು ನಾನೇ ಡೌನ್‌ಲೋಡ್‌ ಮಾಡಿಕೊಟ್ಟು ಆಡಬೇಕಾದ ಅವಧಿಯನ್ನೂ ನಿಗದಿ‍ಪಡಿಸುತ್ತೇನೆ’ ಎನ್ನುತ್ತಾರೆ ಅವರು. 

ನಿಯಂತ್ರಣ ನಮ್ಮಲ್ಲೇ ಇರಲಿ

ಚೀನಾದ ಮಾದರಿಯನ್ನು ನಮ್ಮ ಸರ್ಕಾರವೂ ಅನುಸರಿಸಬೇಕು. ವಿಡಿಯೊ ಗೇಮಿಂಗ್‌ ಕ್ಷೇತ್ರದ ಮೇಲೆ ನಿಯಂತ್ರಣ ಹೇರಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ನಿಯಂತ್ರಣ ನಮ್ಮ ಕೈಲಿರಬೇಕೇ ವಿನಾ ಯಾರೋ ಹೇರಬಾರದು ಎಂಬುದು ಇನ್ನೊಂದು ವಾದ.

ನಮ್ಮ ಮಕ್ಕಳು ಮೊಬೈಲ್‌ ಬಳಸಬೇಕೇ ಬೇಡವೇ, ಎಷ್ಟು ಹೊತ್ತು ಬಳಸಬಹುದು, ಮೊಬೈಲ್‌ನಲ್ಲಿ ಅವರು ಆಟವಾಡುತ್ತಿರುವುದಾದರೂ ಏನು, ಇವತ್ತು ಡೌನ್‌ಲೋಡ್‌ ಮಾಡಿದ ವಿಡಿಯೊ ಗೇಮ್‌ ಯಾವುದು, ಅದು ಶುಲ್ಕ ಸಹಿತವೇ ರಹಿತವೇ, ಶುಲ್ಕ ಸಹಿತವಾದರೆ ನಮ್ಮ ಅನುಮತಿ ಪಡೆದಿದ್ದಾರೆಯೇ... ನಮ್ಮ ಮಕ್ಕಳ ಸುರಕ್ಷೆ, ಹಿತದೃಷ್ಟಿ, ಇವೆರಡಕ್ಕಿಂತಲೂ ಮುಖ್ಯವಾಗಿ ಶಿಸ್ತು ಕಾಪಾಡಬೇಕಾದ ಜವಾಬ್ದಾರಿ ನಮ್ಮದೇ ಅಲ್ಲವೇ? ನೀವೇನಂತೀರಾ?

ಮಕ್ಕಳಿಗೆ ಮೊಬೈಲ್‌ ನಿಷೇಧಿಸುವುದೇ ಸೂಕ್ತ

ಡಾ.ಅರುಣ್‌ ಸಂಪ್ರತಿ

ಮಕ್ಕಳ ನೇತ್ರ ತಜ್ಞನಾಗಿ ಪ್ರತಿದಿನ ಹಲವಾರು ಬಗೆಯ ಸಮಸ್ಯೆಗಳನ್ನು ಗಮನಿಸುತ್ತೇನೆ. ಮೊಬೈಲ್‌ನ ಅತಿಯಾದ ಬಳಕೆ ನಿಷೇಧಿಸುವುದಕ್ಕಿಂತ ಮಕ್ಕಳಿಗೆ ಮೊಬೈಲ್‌ ಬಳಕೆಯನ್ನೇ ನಿಷೇಧಿಸಬೇಕು. 

ಪೊಟ್ಟಣದಲ್ಲಿನ ಆಹಾರ, ಸಂಸ್ಕರಿಸಿ ಸಂಗ್ರಹಿಸಿಟ್ಟ ಆಹಾರ ಸೇವನೆ, ಗಾಳಿ ಮತ್ತು ನೀರಿನ ಮಾಲಿನ್ಯ ಕೂಡಾ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಉಂಟುಮಾಡುತ್ತಿದೆ. ಕಣ್ಣು ಉರಿ, ಕೆರೆತ, ಕೆಂಪಾಗುವುದು, ಕೆರಳುವುದು ಹೆಚ್ಚುತ್ತಿದೆ. ಮಕ್ಕಳು ಕಣ್ಣು ತಿಕ್ಕಿಕೊಳ್ಳುತ್ತಾ, ಉಜ್ಜಿಕೊಳ್ಳುತ್ತಾ ಇದ್ದರೆ, ಕಣ್ಣು ಕೆಂಪಾಗಿದ್ದರೆ ನೇತ್ರ ತಜ್ಞರಲ್ಲಿ ಕರೆದೊಯ್ಯಲೇಬೇಕು.

ವಂಶಪಾರಂಪರ್ಯವಾಗಿ ಬರುವ ಮಯೋಪಿಯಾ (ಸಮೀಪದೃಷ್ಟಿ ದೋಷ) ಸಮಸ್ಯೆ ಕಾಡುವುದು ಸಹಜ. ಆದರೆ ಮೊಬೈಲ್‌ ಮತ್ತು ಕಂಪ್ಯೂಟರ್‌ನ ಅತಿಯಾದ ಬಳಕೆಯಿಂದಾಗಿ ಬರುವ ದೃಷ್ಟಿದೋಷಕ್ಕೆ ಹೆತ್ತವರೇ ಕಡಿವಾಣ ಹಾಕಬೇಕು. ಮಕ್ಕಳಿಗೆ ಮೊಬೈಲ್‌ ಬಳಕೆಯ ಅನಿವಾರ್ಯತೆಯಾದರೂ ಏನು? ಹಾಗಾಗಿ ಅವರಿಗೆ ನಿಷೇಧಿಸುವುದೇ ಸೂಕ್ತ.

–ಡಾ.ಅರುಣ್‌ ಸಂಪ್ರತಿ

ಸಂಪ್ರತಿ ಐ ಹಾಸ್ಪಿಟಲ್‌ ಆ್ಯಂಡ್‌ ಸ್ಕ್ವಿಂಟ್‌ ಸೆಂಟರ್‌, ಶೇಷಾದ್ರಿಪುರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು