ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೋಪೇಸಿಯಾ : ಕೂದಲು ತೆಳ್ಳಗಾಗಿಸುವ ಸಮಸ್ಯೆ

ವಾರದ ವೈದ್ಯ
Last Updated 21 ಮಾರ್ಚ್ 2014, 19:30 IST
ಅಕ್ಷರ ಗಾತ್ರ

*ಕೂದಲುದುರುವುದು ಯಾಕೆ?
ರಕ್ತಹೀನತೆಯಿಂದ ಹಾಗೂ ಹಾರ್ಮೋನ್ ಬದಲಾವಣೆಗಳಿಂದ ಕೂದಲು ಉದುರುವುದು ಸಾಮಾನ್ಯ.

*ಕೂದಲುದುರುವ ಸಮಸ್ಯೆ ಅರಿವಿಗೆ ಬರುವುದು ಯಾವಾಗ?
ಸಾಮಾನ್ಯವಾಗಿ ಶೇ. ೨೦ ರಿಂದ ೩೦ ರಷ್ಟು ಗಣನೀಯ ಪ್ರಮಾಣದಲ್ಲಿ ಕೂದಲು ಕಳೆದುಕೊಂಡ ಮೇಲಷ್ಟೇ ಜನರಿಗೆ ಕೂದಲು ಉದುರುತ್ತಿರುವುದು ಅರಿವಿಗೆ ಬರುತ್ತದೆ.

*ಕೂದಲುದುರುವಿಕೆಯ ಆರಂಭಿಕ ಹಂತ ಯಾವುದು?
ಕೂದಲುದುರುವಿಕೆಯ ಬಹುತೇಕ ಕಾರಣಗಳಲ್ಲಿ (ಅಲೊಪೇಸಿಯಾ), ಕೂದಲು ತೆಳ್ಳಗಾಗುವಿಕೆಯು ಕೂಡ ಒಂದು. 

*ಕೂದಲು ಶಿಥಿಲಗೊಳ್ಳಲು, ತೆಳ್ಳಗಾಗಲು ಕಾರಣಗಳೇನು?
ಹೆಚ್ಚಿನ ಒತ್ತಡ, ಅನುವಂಶೀಯತೆ, ಹಾರ್ಮೋನ್‌ ಬದಲಾವಣೆ, ವೈದ್ಯಕೀಯ ಚಿಕಿತ್ಸೆಗಳ ಅಡ್ಡ ಪರಿಣಾಮಗಳು, ಪೌಷ್ಠಿಕಾಂಶಗಳಲ್ಲಿನ ಕೊರತೆ ಹಾಗೂ ಹವಾಮಾನ ವೈಪರೀತ್ಯ ಮತ್ತು ನೀರಿನ ಬದಲಾವಣೆ ಮೊದಲಾದ ಕಾರಣಗಳಿಂದಾಗಿಯೂ ಕೂದಲು ಉದುರಲು ಆರಂಭಿಸುತ್ತದೆ.

*ಇದು ಬೋಳುತನದ ಮೊದಲ ಲಕ್ಷಣವೇ?
ಆನುವಂಶಿಕ ಬೊಕ್ಕತಲೆಯು ಮಹಿಳೆ ಮತ್ತು ಪುರುಷರಲ್ಲಿ ಕೂದಲು ಉದುರುವಿಕೆಯ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಮಹಿಳೆಯರು ಮತ್ತು ಪುರುಷರಲ್ಲಿ ಕಾಣಿಸಿಕೊಳ್ಳುವ ಬೊಕ್ಕ ತಲೆಯ ಸಮಸ್ಯೆಯನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತದೆ. ತಲೆಯ ಮಧ್ಯ ಭಾಗದಲ್ಲಿ ಕಾಣಿಸಿಕೊಳ್ಳುವ ಬೊಕ್ಕತಲೆ ಸಮಸ್ಯೆಯು ಅನುವಂಶೀಯ ಕಾರಣಗಳಿಂದ, ವಯಸ್ಸಾದಂತೆ ಹಾಗೂ ಹಾರ್ಮೋನ್‌ ಬದಲಾವಣೆಗಳಿಂದಾಗಿ ಕಾಣಿಸಿಕೊಳ್ಳುತ್ತದೆ.

*ಚದುರುವ ಬೊಕ್ಕತಲೆ (ಡಿಪಿಎ) ಎಂದರೇನು?
ತಲೆಯ ಮುಂಭಾಗದಲ್ಲಿ ಕೂದಲು ಉದುರಲು ಆರಂಭಿಸುತ್ತದೆ. ಈ ವಿಧವಾದ ಸಮಸ್ಯೆಯಲ್ಲಿ ತಲೆಯ ಎಲ್ಲಾ ಭಾಗಗಳಲ್ಲಿಯೂ ಕ್ರಮೇಣ ಕೂದಲು ತೆಳ್ಳಗಾಗಲು ಆರಂಭಿಸುತ್ತದೆ. ಮಹಿಳೆಯರಲ್ಲಿ ಈ ರೀತಿಯ ಸಮಸ್ಯೆ ಹೆಚ್ಚು. ಅಲ್ಲದೆ, ಸಾಮಾನ್ಯವಾಗಿ ತಲೆಯ ಹಿಂಭಾಗದಲ್ಲಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ.

*ಪ್ರತಿದಿನ ತಲೆ ಬಾಚುವಾಗ ಕೂದಲುದುರುವುದು ಸಮಸ್ಯೆಯೇ?
ದಿನಕ್ಕೆ ೫೦ ರಿಂದ ೧೦೦ ಕೂದಲು ಉದುರುತ್ತಿದ್ದಲ್ಲಿ ಯಾವುದೇ ಗಂಭೀರ ಸಮಸ್ಯೆ ಏನಲ್ಲ. ಏಕೆಂದರೆ ಶೇ.೫೦ ರಿಂದ ೯೦ ರಷ್ಟು ಕೂದಲು ಮತ್ತೆ ಹುಟ್ಟಿಕೊಳ್ಳುತ್ತದೆ. ಒಂದು ವೇಳೆ ಕೂದಲು ಉದುರುವುದು ಹೆಚ್ಚಾದಲ್ಲಿ ಖಂಡಿತವಾಗಿಯೂ ಗಂಭೀರವಾದ ಸಮಸ್ಯೆ ಇದೆ ಎಂದರ್ಥ.

*ಕೂದಲುದುರುವುದಕ್ಕೂ ಮುಪ್ಪಾವಸ್ಥೆಗೂ ಸಂಬಂಧವಿದೆಯೇ?
ಖಂಡಿತವಾಗಿಯೂ. ವಯಸ್ಸಾದಂತೆ, ರೋಗ ರುಜಿನಗಳಿಂದಾಗಿ, ವೈದ್ಯಕೀಯ ಚಿಕಿತ್ಸೆಗಳ ಅಡ್ಡ ಪರಿಣಾಮಗಳಿಂದಾಗಿ ಹಾಗೂ ದೈಹಿಕ ಮತ್ತು ಮಾನಿಸಿಕ ಒತ್ತಡದಿಂದಲೂ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಆದಷ್ಟು ಬೇಗ ಸೂಕ್ತ ರೀತಿಯ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡರೆ ಮಾತ್ರ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುವುದು ಸಾಧ್ಯ.

*ಕೂದಲುದುರಲು ಮಧುಮೇಹವೂ ಕಾರಣವಾಗುತ್ತದೆಯೇ?
ಮಧುಮೇಹ ಹಾಗೂ ಥೈರಾಯ್ಡ್ ಸಮಸ್ಯೆಗಳಿಂದಲೂ ಬೊಕ್ಕತಲೆಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನುರಿತ ವೈದ್ಯರಿಗಷ್ಟೇ ಕೂದಲು ಉದುರುತ್ತಿರುವ ಹಿಂದಿನ ನಿಜವಾದ ಕಾರಣವನ್ನು ಪತ್ತೆಮಾಡಲು ಸಾಧ್ಯವಾಗುತ್ತದೆ.

*ಇದಕ್ಕೆ ಪರಿಹಾರವೇನು?
ಕೂದಲುದುರುವಿಕೆಯ ಸಮಸ್ಯೆಯನ್ನು ತಡೆಯಲು ಹಲವು ಔಷಧಗಳನ್ನು ಸೇವಿಸಲು ಹಾಗೂ ಬಳಕೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ.

*ಬೊಕ್ಕತಲೆಗೆ ಶಾಶ್ವತ ಪರಿಹಾರವಿದೆಯೇ?
ಕೂದಲಿನ ಕಸಿ ಮಾಡುವಿಕೆ, ಸ್ಟೆಮ್ ಸೆಲ್ ಥೆರಪಿ ಹಾಗೂ ಲೇಸರ್ ಚಿಕಿತ್ಸೆಗಳ ಬಗ್ಗೆ ಯೋಚಿಸಬಹುದು. ಆದರೆ ಇದಕ್ಕೆ ಮುನ್ನ ಪರಿಣಿತರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಒಳಿತು.

*ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಿಂದ ಪರಿಹಾರ ಸಾಧ್ಯವೇ?
ಈಗಂತೂ ಮಾರುಕಟ್ಟೆಯಲ್ಲಿ ಕೂದಲು ಉದುರುವಿಕೆಯ ಸಮಸ್ಯೆಯ ನಿವಾರಣೆಗೆ ಎಂದು ಸಾರುವ ನಾನಾ ರೀತಿಯ ಸರಕುಗಳು ಗ್ರಾಹಕರ ಮುಂದೆ  ಇವೆ. ಬಹುತೇಕ ಉತ್ಪನ್ನಗಳು ನಂಬಲು ಅರ್ಹವಾಗಿರುವುದಿಲ್ಲ.  ಯಾವುದೇ ಪರಿಣಾಮಕಾರಿ ಫಲಿತಾಂಶವನ್ನು ನೀಡುವುದಿಲ್ಲ. ಆದರೆ  ವೈದ್ಯರ ಬಳಿ ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದು ಹೆಚ್ಚಿನ ಪ್ರಯೋಜನಕಾರಿ ಹಾಗೂ ಫಲಕಾರಿ ಎನಿಸಿಕೊಳ್ಳುತ್ತದೆ.
(ಮಾಹಿತಿಗೆ: ೦೮೦- ೨೩೫೬೮೨೯೦)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT