ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರೂ ನಮ್ಮಂತೆ ಅಲ್ಲವೇ...

Last Updated 29 ಜೂನ್ 2012, 19:30 IST
ಅಕ್ಷರ ಗಾತ್ರ

ಆಗಿನ್ನೂ `ಡಾಕ್ಟರ್ಸ್ ವೈಫ್~ನ ಪಟ್ಟ ಪಡೆದು ಕೆಲವೇ ದಿನಗಳಾಗಿದ್ದವು. ಹೊಸ ಉತ್ಸಾಹದಿಂದ ಜೀವನವನ್ನು ಎದುರಿಸಲು ಸಿದ್ಢಳಾಗುತ್ತಿದ್ದೆ. ಒಂದು ಸಂಜೆ ಪತಿಯೊಡನೆ ಹೊರಗೆ ಹೊರಡಲು ಖುಷಿಯಿಂದ ತಯಾರಾಗುತ್ತಿದ್ದೆ.
 
ಅಷ್ಟರಲ್ಲೇ ಯಾವುದೋ ಗೆಳೆಯರ ಕುಟುಂಬ ತುರ್ತು ಸಂದರ್ಭ ಇಲ್ಲದಿದ್ದರೂ, ಆರೋಗ್ಯದ ಬಗ್ಗೆ ಬರೀ ಸಲಹೆ ಕೇಳಲು ಹಾಜರಾಗಲಿರುವುದಾಗಿ ಫೋನ್ ಬಂತು. ಅಲ್ಲಿಗೆ ನಮ್ಮ ಪ್ರೋಗ್ರಾಂ ಕ್ಯಾನ್ಸಲ್. ನನಗಾಗ ಆದ ಬೇಸರ, ಕೋಪ ಹೇಳತೀರದು. ಒಳಗೊಳಗೇ ಆ ಅತಿಥಿಗಳನ್ನು ಬಯ್ದುಕೊಂಡದ್ದಂತೂ ಖರೆ.

ಮೊದಮೊದಲು ಸಂಜೆ ಬೇಗನೇ ಮನೆಗೆ ಬರುತ್ತಿದ್ದ ಪತಿರಾಯ ಕ್ರಮೇಣ ಒಂದು... ಎರಡು... ಮೂರು... ತಾಸು ತಡವಾಗಿ ಬರಲು ಶುರುಮಾಡಿದರು.   ನನಗಂತೂ ಆಗ ಬಹಳ ಮಾನಸಿಕ ವೇದನೆ ಆಗುತ್ತಿತ್ತು. ಶನಿವಾರ- ಭಾನುವಾರಕ್ಕಾಗಿ ಕಾದರೂ, ಕೊನೆಗೆ ಬರಬರುತ್ತಾ ಆ ದಿನಗಳ ಬಿಡುವಿಗೂ ಕತ್ತರಿ ಬೀಳತೊಡಗಿತು. ದಿನಂಪ್ರತಿ ಇದೇ ದಿನಚರಿಯಿಂದ ಬೇಸತ್ತಿದ್ದ ನನಗೆ ಕಡೆಕಡೆಗೆ ಇದೇ ಅಭ್ಯಾಸವಾಗಿ ಹೋಯಿತು.

ಬೆಂಗಳೂರಿನ ಪ್ರಸಿದ್ಧ ಹೃದ್ರೋಗ ಆಸ್ಪತ್ರೆಯಲ್ಲಿ ಪ್ರೊಫೆಸರ್ ಆಗಿರುವ ನನ್ನ ಪತಿಯ ಕೆಲಸ, ನಿಷ್ಠೆ, ಜವಾಬ್ದಾರಿಯ ಅಗಾಧತೆಯನ್ನು ಹೇಳಲು ತುಸು ಕಷ್ಟವೇ ಸರಿ. ಡಾಕ್ಟರ್‌ನ ಹೆಂಡತಿಯಾಗಿ ನಾನು ಅನೇಕ ಸಂಕಟಗಳ ಜೊತೆಗೆ ಮೋಜಿನ ಪ್ರಸಂಗಗಳನ್ನೂ ಎದುರಿಸಿದ್ದೆೀನೆ. ಕೆಲವರು ಒಮ್ಮಮ್ಮೆ, `ಏನು ಡಾಕ್ಟ್ರೇ, ನಿಮಗೂ ನೆಗಡಿಯೇ ಎಂದು ಕೇಳುತ್ತಾರೆ. `ಯಾಕೆ? ಅವರೂ ನಿಮ್ಮಂತೆ ಮನುಷ್ಯರಲ್ಲವೇ!~ ಎಂದು ಮಾತು ತೂರಿಬಿಡುತ್ತೇನೆ.    

ಮದುವೆ ಮನೆಗೆ ಹೋಗಬೇಕೆಂದರಂತೂ ನನಗೆ ಭಾರೀ ಮುಜುಗರ. ಏಕೆಂದು ಕೇಳಿ. ಇವರು ಕೆಲಸ ಮುಗಿಸಿ ನಮ್ಮನ್ನು ಕರೆದುಕೊಂಡು ಬರುವಷ್ಟರಲ್ಲಿ ಎಲ್ಲರೂ ಉಂಡು, ತಾಂಬೂಲ ಹಿಡಿದು ಹೊರಗೆ ಹೋಗುವಾಗ ನಾವೇ ಕೊನೆಯ ಅತಿಥಿಗಳಾಗಿ ಅಲ್ಲಿಗೆ ಪಾದಾರ್ಪಣೆ ಮಾಡಿರುತ್ತೇವೆ.

ಕೆಲವು ನೆಂಟರಂತೂ ಮದುವೆ ಮನೆಗೆ ಬಂದಿದ್ದೇವೆ ಎಂಬುದನ್ನೂ ಮರೆತು, ಛತ್ರವನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ನನ್ನ ಪತಿಯನ್ನು ಸುತ್ತುವರಿದು, ತಮ್ಮ  ದೈಹಿಕ ಸಮಸ್ಯೆಗಳ ಅಹವಾಲುಗಳನ್ನು ಒಂದೊಂದಾಗಿ ಬಿಚ್ಚಿಡಲು ಆರಂಭಿಸುತ್ತಾರೆ.

ಅಂತೂ ಎಲ್ಲಿ ಕಾಲಿಟ್ಟರೂ ಈ ಜನ ಡಾಕ್ಟರುಗಳನ್ನು ಮಾತ್ರ ಕ್ಷಣವೂ ನಿರಾಳವಾಗಿರಲು ಬಿಡುವುದಿಲ್ಲವಲ್ಲಾ ಎನಿಸುತ್ತದೆ.

ನಮ್ಮ ಬಹುತೇಕ ಬಂಧುಗಳು ಸ್ಥಿತಿವಂತರಾಗಿದ್ದರೂ `ಏನು ಡಾಕ್ಟ್ರೇ, ನಿಮ್ಮನೇಲಿ ಎಲ್ಲರೂ ಚೆಂದವಾ?~ ಎಂಬ ಮಾತಿನ ಮುತ್ತುದುರಿಸಿ, ಸಲಹೆ, ಚಿಕಿತ್ಸೆ ಪಡೆದುಕೊಂಡ ನಂತರ `ಡಾಕ್ಟ್ರು ನಮ್ಮವರೇ ತಾನೇ~ ಎಂದುಕೊಂಡು ಫೀಸು ಕೊಡುವ ಗೋಜಿಗೂ ಹೋಗದೆ, ಬಿಡುಬೀಸಾಗಿ ಹೊರಟುಬಿಡುತ್ತಾರೆ. ನಾನು ನನ್ನ ಪತಿಯೊಡನೆ ಈ ಬಗ್ಗೆ ತಕರಾರು ತೆಗೆದರೆ, `ದೇವರು ನಮಗೆ ಕೊಟ್ಟಿರುವಷ್ಟು ಸಾಕು ಬಿಡು~ ಎಂದು ತಣ್ಣನೆ ಉತ್ತರಿಸಿ ಸುಮ್ಮನಾಗಿಸುತ್ತಾರೆ.

ಇಲ್ಲಿ ಫೀಸು ಕೊಡದವರು ಅಲ್ಲಿ ತಮ್ಮ ಮನೆ ಮೇಲೆ ಮನೆ ಕಟ್ಟಿಸಿಕೊಳ್ಳುವಷ್ಟು ಸಿರಿವಂತರಾಗಿರುತ್ತಾರೆ, ನೀವು ಮಾತ್ರ ಅವರುಗಳಿಂದ ಪೈಸೆಯನ್ನೂ ಮುಟ್ಟದೆ ಬರೀ ಅವರ ಮನೆಗಳ ಗೃಹ ಪ್ರವೇಶಗಳಿಗೆ ಹೋಗುವುದೇ ಆಯಿತು ಎಂದು ಆಗೆಲ್ಲಾ ಅಣಕಿಸುತ್ತೇನೆ.

ನಾವು ಟೂರ್‌ಗೆ ಹೋದಾಗ ಅಲ್ಲೂ ಆಸ್ಪತ್ರೆಯಿಂದ, ರೋಗಿಗಳಿಂದ ಕರೆಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಕಿರಿಕಿರಿಯೆನಿಸಿದರೂ, ಇವೆಲ್ಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಎಷ್ಟೇ ಆದರೂ ಒಬ್ಬ ವೈದ್ಯ ಸಮಾಜದ ಸ್ವತ್ತಲ್ಲವೇ?

ಪತಿಯ ವೈದ್ಯ ವೃತ್ತಿಯಿಂದ ಕುಟುಂಬಕ್ಕೆ ಆಗಾಗ ಆಗುವ ಇಂತಹ ಕಿರಿಕಿರಿಗಳು ಎಷ್ಟೇ ಇದ್ದರೂ, ಇವರ ಕೈಗುಣವನ್ನು ಹೊಗಳುತ್ತಾ, `ಇವರೇ ನಮ್ಮ ಪಾಲಿನ ದೇವರು~ ಎಂದು ಜನ ಕಣ್ತುಂಬಿ ಹೇಳುವಾಗ ಪತಿಯ ಮೇಲಿನ ನನ್ನ ಪ್ರೀತಿ-ಗೌರವ ಮತ್ತಷ್ಟು ಹೆಚ್ಚಾಗುವುದಂತೂ ನಿಜ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT