ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಟಿ ಆಕ್ಸಿಡೆಂಟ್ ಏನಿದರ ಮಹತ್ವ?

Last Updated 11 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಆ್ಯಂಟಿ ಆಕ್ಸಿಡೆಂಟ್ ಬಗ್ಗೆ ಸಾಕಷ್ಟು ಮಂದಿ ಕೇಳಿರಬಹುದು. ಆದರೆ ಅದರ ಉಪಯೋಗವೇನು, ದೇಹದ ಆರೋಗ್ಯಕ್ಕೆ ಅದರ ಕೊಡುಗೆ ಏನು ಎಂಬುದು ಬಹುತೇಕರಿಗೆ ತಿಳಿಯದು.

ನಮ್ಮ ದೇಹ ವಾಹನ ಇದ್ದಂತೆ. ಆಹಾರ ಎಂಬ ಇಂಧನವನ್ನು ಹಾಕಿದಾಗ ವಾಹನದಂತೆ ದೇಹವೂ ಕೆಲಸ ಮಾಡಲು ಸಶಕ್ತವಾಗುತ್ತದೆ. ವಾಹನ ಮುಂದೆ ಚಲಿಸಿದಾಗ ಅದು ಬಿಡುಗಡೆ ಮಾಡುವ ಹೊಗೆಯಂತೆ ದೇಹದಿಂದ ವಿಷಾಣು ಹೊರಬರುತ್ತದೆ. ಆದರೆ ಕೆಲವೊಮ್ಮೆ ಅದು  ಹೊರಹೋಗದೆ ಅಲ್ಲೇ ಉಳಿದು ದೇಹವನ್ನು ರೋಗಗ್ರಸ್ತ ಮಾಡುತ್ತದೆ. (ಸ್ವಚ್ಛವಾಗಿ ಇರದ ಹೊಗೆ ಕೊಳವೆಯಲ್ಲಿ ಕೊಳೆ ಕಟ್ಟುವಂತೆ) ಈ ವಿಷ ಪದಾರ್ಥ ಹೆಚ್ಚಾಗುತ್ತಾ ಹೋದಂತೆ ನಮ್ಮನ್ನು ಅನಾರೋಗ್ಯ ಕಾಡತೊಡಗುತ್ತದೆ. ಕ್ಯಾನ್ಸರ್, ಹೃದ್ರೋಗದಂತಹ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಹೀಗೆ ವಿಷಾಣುಗಳು ಹೆಚ್ಚಾಗದಂತೆ ಜೀವರಕ್ಷಕವಾಗಿ ದೇಹವನ್ನು ಕಾಯುವುದೇ ಆಂಟಿ ಆಕ್ಸಿಡೆಂಟ್.

ವಿಷಾಣುಗಳನ್ನು ನಾವು ಫ್ರೀ-ರಾಡಿಕಲ್ಸ್ ಎಂದೂ ಕರೆಯುತ್ತೇವೆ. ಇವು ನಿರ್ದಿಷ್ಟ ಜಾಗದಲ್ಲಿ ಬೆಳೆಯದಂತೆ, ಹೆಚ್ಚಾಗದಂತೆ ಆ್ಯಂಟಿ ಆಕ್ಸಿಡೆಂಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿಷಾಣುಗಳು ಹೆಚ್ಚಾದರೆ ವ್ಯಕ್ತಿ ಬೇಗನೇ ರೋಗಪೀಡಿತನಾಗುತ್ತಾನೆ. ಮುಪ್ಪು ಸಹ ಬೇಗನೇ ಆವರಿಸುತ್ತದೆ. ದೇಹದ ಅಂಗಾಂಗಗಳ ಕಾರ್ಯಕ್ಷಮತೆ ಕ್ಷೀಣಿಸುತ್ತಾ ಹೋಗುತ್ತದೆ. ಇದು ಒಂದೆರಡು ದಿನ ಅಥವಾ ತಿಂಗಳುಗಳಲ್ಲಿ ಆಗದೆ ಹಲವಾರು ವರ್ಷಗಳೇ ಹಿಡಿಯುತ್ತವೆ. ಕೆಲವೊಮ್ಮೆ ದೇಹದಲ್ಲಿ ವಿಷಾಣುಗಳ ಪ್ರಮಾಣ ಅತಿರೇಕಕ್ಕೆ ಹೋಗಬಹುದು. ಆಗ ಆ ನಿರ್ದಿಷ್ಟ ಜಾಗದ ಡಿಎನ್‌ಎ (ಡಿ- ಆಕ್ಸಿರೈಬೋ ನ್ಯೂಕ್ಲಿಕ್ ಆಮ್ಲ) ಜೀವಕೋಶದ ಸಾಮಾನ್ಯ ಆರೋಗ್ಯವನ್ನು ಅಸ್ತವ್ಯಸ್ತಗೊಳಿಸಿ ಬಿಡುತ್ತದೆ. ಆಗ ಜೀವಕೋಶವು ಕ್ಯಾನ್ಸರ್ ರೋಗಕ್ಕೆ ತುತ್ತಾಗಬಹುದು. ನಮ್ಮ ಸಾಮಾನ್ಯ ಜೀವಕೋಶಕ್ಕೆ ಆರೋಗ್ಯವನ್ನು ಸಮತೋಲನದಿಂದ ಕಾಯ್ದುಕೊಳ್ಳುವ ಸಾಮರ್ಥ್ಯ ಇರುತ್ತದೆ. ಆದರೆ ಒಮ್ಮೆ ವಿಷಾಣುಗಳು ಅನಿರೀಕ್ಷಿತವಾಗಿ, ಅನಿಯಂತ್ರಿತವಾಗಿ ಹೆಚ್ಚಾದರೆ ದೇಹ ರೋಗಪೀಡಿತ ಆಗತೊಡಗುತ್ತದೆ.

ದೇಹದಲ್ಲಿ ವಿಷಾಣುಗಳು ಹೆಚ್ಚಾಗಲು ಹಲವಾರು ಕಾರಣಗಳಿವೆ. ಇವು ಹೆಚ್ಚಾದಂತೆಲ್ಲ ರೋಗಗಳು ತಾವಾಗೇ ಬಂದು ಸೇರಿಕೊಳ್ಳಲು ಪ್ರಾರಂಭಿಸುತ್ತವೆ. ಆದರೆ ಆ್ಯಂಟಿ-ಆಕ್ಸಿಡೆಂಟ್‌ಗಳು ವಿಷಾಣುಗಳ ವಿರೋಧಿಯಾಗಿ ಕಾರ್ಯ ನಿರ್ವಹಿಸಿ ದೇಹವನ್ನು ಕಾಯುತ್ತವೆ. ಹೀಗಾಗಿ ನಮ್ಮ ದೇಹದಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳ ಪ್ರಮಾಣವನ್ನು ವೃದ್ಧಿಸಿಕೊಳ್ಳುವುದು ಅವಶ್ಯಕ.

ಇದನ್ನೆಲ್ಲ ಬಳಸಿ
ಆ್ಯಂಟಿ-ಆಕ್ಸಿಡೆಂಟ್ ಅಂಶ ಇರುವ ಆಹಾರ:
ಬೆಳ್ಳುಳ್ಳಿ: ರಕ್ತದ ಒತ್ತಡ ಹೆಚ್ಚಾಗದಂತೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಜಮಾವಣೆ ಆಗದಂತೆ ತಡೆಯುತ್ತದೆ.

ಈರುಳ್ಳಿ: ಗಂಧಕಾಂಶ ಇರುವ ಇದು ಉತ್ತಮ ಕ್ಯಾನ್ಸರ್ ವಿರೋಧಿ ಆಹಾರ.

ಹಸಿರು ಮೆಣಸಿನಕಾಯಿ : ಇದರಲ್ಲಿರುವ ಅಂಶ ಕರುಳಿನ ಕ್ಯಾನ್ಸರ್ ತಡೆಗಟ್ಟುತ್ತದೆ. ಅಲ್ಲದೆ ವಿಟಮಿನ್ `ಇ' ಆರೋಗ್ಯವರ್ಧಕ ಅಂಶದಿಂದ ಸಮೃದ್ಧವಾಗಿದೆ.

ಕ್ಯಾರೆಟ್: ಇದರಲ್ಲಿ ಕೆರೋಟಿನಾಯ್‌ಡ, ಬೀಟಾ-ಕೆರೋಟಿನ್‌ಗಳು ಉತ್ತಮ ಆರೋಗ್ಯ, ಚರ್ಮದ ಕಾಂತಿಗೆ ಸಹಕಾರಿ.

ಟೊಮ್ಯಾಟೊ: ಇದರಲ್ಲಿರುವ ಲೈಕೋಪಿನ್ ಅಂಶ ಬಾಯಿಯ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ. ಕಲ್ಲಂಗಡಿಯಲ್ಲೂ ಇದರ ಅಂಶ ಹೆಚ್ಚಿರುತ್ತದೆ.

ಸಿಟ್ರಿಕ್ ಆಮ್ಲ ಹೆಚ್ಚಿರುವ ಕಿತ್ತಳೆ, ನಿಂಬೆ, ನೆಲ್ಲಿ ಮುಂತಾದವುಗಳಲ್ಲಿನ ಲಿಮೊನಿವ್ ಅಂಶ ಉತ್ತಮ ಜೀವಸತ್ವವಾಗಿದೆ.

ದ್ರಾಕ್ಷಿ: ಇದರಲ್ಲಿನ ಅಂಶ ಕೆಟ್ಟ ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುತ್ತದೆ.

ಎಲೆ ಕೋಸು, ಹೂ ಕೋಸು: ಇದು ಕೂಡ ಉತ್ತಮ ಆ್ಯಂಟಿ-ಆಕ್ಸಿಡೆಂಟ್ ಹೊಂದಿದೆ.

ಸಾಸಿವೆ, ಮೂಲಂಗಿ, ಗೆಡ್ಡೆ-ಗೆಣಸು, ಸೋಯಾ, ಅವರೆ, ಕಡಲೆ, ಮೀನಿನ ಎಣ್ಣೆ.

ವಿಟಮಿನ್- ಇ: ಒಳ್ಳೆಯ ಆರೋಗ್ಯಕ್ಕೆ ಸಹಕಾರಿ. ಸೂರ್ಯಕಾಂತಿ ಎಣ್ಣೆ, ಬೆಣ್ಣೆ, ಮೊಟ್ಟೆಯ ಹಳದಿ ಭಾಗದಲ್ಲಿ ಇರುತ್ತದೆ.

ವಿಷಾಣು ಹೆಚ್ಚಾಗಲು ಕಾರಣ
ಪರಿಸರ ಮಾಲಿನ್ಯ, ಕಲುಷಿತ ನೀರು-, ಆಹಾರ-, ಗಾಳಿ ಸೇವನೆ.

ವಾಹನದ ಹೊಗೆ, ಸಿಗರೇಟ್ ಸೇವನೆ

ಆಹಾರವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿದಾಗ ಅದರಲ್ಲಿರುವ ಮೈಕ್ರೊ ನ್ಯೂಟ್ರಿಯಂಟ್ಸ್ (ಸಣ್ಣ ಸತ್ವಯುತ ಅಂಶ) ನಾಶವಾಗಿ ಆ್ಯಂಟಿ ಆಕ್ಸಿಡೆಂಟ್‌ ದೇಹವನ್ನು ಸೇರುವುದಿಲ್ಲ.

ಕಡಿಮೆ ನಾರಿನಂಶದ ಆಹಾರ ಸೇವನೆ.

ಕಡಿಮೆ ಸತ್ವಯುತ ಆಹಾರ ಸೇವನೆ, ಪೌಷ್ಟಿಕಾಂಶದ ಕೊರತೆ.

ಧೂಮಪಾನ, ಮದ್ಯಪಾನ, ಹೆಚ್ಚು ಕೊಬ್ಬಿನಾಂಶದ ಆಹಾರ ಸೇವನೆ.

ಹೆಚ್ಚು ಮಸಾಲೆ- ಸೇವನೆ, ಹೆಚ್ಚು ಕೊಲೆಸ್ಟ್ರಾಲ್‌ ಸಂಗ್ರಹ.

ಆ್ಯಂಟಿ-ಆಕ್ಸಿಡೆಂಟ್ ಅಂಶ ಕಡಿಮೆ ಇರುವ ಆಹಾರ ಸೇವನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT