ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟದಲ್ಲಿ ಅನ್ನಾಂಗವಿದೆಯೇ?

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹೇಳುತ್ತಿದ್ದರು. ಆದರೀಗ ಊಟ ಬಲ್ಲವರೂ ಮೆಲ್ಲುವವರೂ ಸಿಗುವುದೇ ದುರ್ಲಭವಾಗಿದೆ. ಹೊಟ್ಟೆ ತುಂಬಿಸಲು ಮಾತ್ರ ಊಟ ಅಲ್ಲ. ಹಸಿವು ನೀಗಿಸಲು ಏನನ್ನೋ ಹೊಟ್ಟೆ ತುಂಬಿಸಿಕೊಳ್ಳುವುದೂ ಊಟವಲ್ಲ. ಊಟವೆಂದರೆ ದೇಹಕ್ಕೆ ಬೇಕಿರುವ ಪೌಷ್ಠಿಕಾಂಶಗಳನ್ನು ಒದಗಿಸುವಂತಿರಬೇಕು. ಆಗ ರೋಗಗಳು ಸುಳಿಯುವುದಿಲ್ಲ. ಮಾತ್ರೆಗಳು ತಿನ್ನಬೇಕಿಲ್ಲ. ಊಟದ ಪದ್ಧತಿಯನ್ನು ಮರೆತಿರುವುದರಿಂದಲೇ ಔಷಧಿಯಷ್ಟು ಉಣ್ಣುತ್ತಿದ್ದೇವೆ. ಊಟದಷ್ಟು ಔಷಧಿ ಸೇವಿಸುತ್ತಿದ್ದೇವೆ.

ನಮ್ಮ ಊಟದಲ್ಲಿ ಏನೆಲ್ಲ ಅಳವಡಿಸಿಕೊಂಡರೆ ದೇಹಕ್ಕೆ ಅಗತ್ಯವಿರುವ ವಿಟಾಮಿನ್‌ ಮತ್ತು ಪ್ರೋಟೀನ್‌ಗಳು ದೊರೆಯುತ್ತವೆ, ಅವು ಯಾವ ರೋಗಗಳು ಬರದಂತೆ ತಡೆಯುತ್ತವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ನಿಮ್ಮ ಊಟದ ತಟ್ಟೆಯಲ್ಲಿ ಪ್ರತಿದಿನವೂ ಕೆಲವನ್ನಾದರೂ ಅಳವಡಿಸಿಕೊಂಡರೆ ನೀವು ಊಟ ಬಲ್ಲವರಾಗುತ್ತೀರಿ. ಇನ್ನು ಟಿವಿ ಮುಂದೆ ಕುಳಿತು, ಅವಸರದಲ್ಲಿ ನಿಂತು ಉಣ್ಣದೆ, ಮೆಲ್ಲುತ್ತ ಊಟವನ್ನು ಸವಿಯಬೇಕು. ಆಗ ದೈಹಿಕ ತೊಂದರೆಗಳನ್ನು ದೂರವಿಡಬಹುದು.

‘ಎ’ – ಅನ್ನಾಂಗ
‘ಎ’ ಜೀವಸತ್ವದ ಪೂರ್ವ ರೂಪಕ್ಕೆ ಕೆರೋಟಿನ್‌ ಎಂಬ ಹೆಸರಿದೆ. ಈ ವಸ್ತು ಸಣ್ಣ ಕರುಳಿನಲ್ಲಿ ಪಚನ­ಹೊಂದಿ ‘ಎ’ ಜೀವ­ಸತ್ವವಾಗಿ ಪೂರ್ಣವಾಗಿ ಹೊರಗೆ ಹೋಗುತ್ತದೆ. ಅದರ ಹೀರುವಿಕೆಗೆ ಕೊಬ್ಬು ಮತ್ತು ಪಿತ್ತ ಲವಣಗಳು ಅವಶ್ಯಕ, ಹೀರಿಕೆಯ ರೆಟಿನಾಲ್‌ ಹಾಲ್‌ರಸನಾಳಗಳ ಮೂಲಕ ರಕ್ತ ಪ್ರವಾಹ ಸೇರಿ ದೇಹದ ಉಗ್ರಾಣವಾದ ಲಿವರ್‌ನಲ್ಲಿ ಸಂಗ್ರಹವಾಗುತ್ತದೆ.

ಎ – ಅನ್ನಾಂಗದ ಮೂಲಗಳು: ಕುರಿಯ ಲಿವರ್‌, ಮೊಟ್ಟೆಯ ಹಳದಿಯ ಭಾಗ, ಹಾಲು, ಬೆಣ್ಣೆ ಮತ್ತು ತುಪ್ಪದಲ್ಲಿ ಹೇರಳವಾಗಿ ದೊರೆಯುತ್ತದೆ.
ತರಕಾರಿಗಳಲ್ಲಿ: ಸಿಹಿಕುಂಬಳ, ಕ್ಯಾರೆಟ್‌, ನುಗ್ಗೆಕಾಯಿ, ಬೀಟ್‌ರೋಟ್‌, ಮೂಲಂಗಿ, ಪಾಲಕ್‌, ಪುದಿನಾ, ಕರಿಬೇವು, ಟೊಮ್ಯಾಟೋ  ಸೊಪ್ಪುಗಳಲ್ಲಿ ಹೇರಳವಾಗಿರುತ್ತದೆ.

ಹಣ್ಣುಗಳಲ್ಲಿ: ಮಾವು, ಕಲ್ಲಂಗಡಿ, ಕಿತ್ತಳೆ, ಕರಬೂಜ, ಪಪ್ಪಾಯಿಗಳಲ್ಲಿ ಕೆರೋಟಿನ್‌ ಹೇರಳವಾಗಿದೆ. ಕೆರೋಟಿನ್‌ ಪ್ರಮಾಣ ಹೆಚ್ಚಿದಂತೆ ತರಕಾರಿಗಳ ಹಸಿರುವರ್ಣ ದಟ್ಟವಾಗಿರುತ್ತದೆ.  ಹಣ್ಣುಗಳು ಹಳದಿ/ ಕೆಂಪು ಬಣ್ಣ ಪಡೆಯುತ್ತದೆ.

‘ಎ’ – ಅನ್ನಾಂಗ ಕೊರತೆಯಿಂದ ಬರುವ ಕಾಯಿಲೆಗಳು: ಲಿವರ್‌ ಒಂದು ವರ್ಷಕಾಲ ಬೇಕಾಗುವಷ್ಟು ಎ ಜೀವಸತ್ವವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಪಡೆದಿದೆ. ಅನೇಕರ ಆಹಾರದಲ್ಲಿ ಹಾಲು ಮತ್ತು ಹಸಿರೆಲೆ ತರಕಾರಿ ಪ್ರಮಾಣ ತೀರ ಅತ್ಯಲ್ಪವಾಗಿರುವುದು ‘ಎ’ ಜೀವಸತ್ವದ ಕೊರತೆಗೆ  ಕಾರಣ. ‘ಎ’ ಜೀವಸತ್ವದ ನ್ಯೂನ್ಯತೆಯಿಂದ ಇರುಳು ಕುರುಡು, ಬೇಧಿ, ನೀರ್ಕಳೆತ, ಚರ್ಮ ಒರಟಾಗುವಿಕೆ, ರುಚಿ ಮತ್ತು ವಾಸನೆಯ ಅರಿವು ಬೇಗನೆ ಆಗದಿರುವುದು,  ಮಕ್ಕಳ ಪೋಷಣೆ – ಮೂಳೆ ಹಲ್ಲು ವ್ಯತ್ಯಾಸ ಉಂಟಾಗುತ್ತದೆ.

‘ಹೋದ ಕಣ್ಣು ಬರಸೀತೆ ಹೊನಗೊನೆ’
ಸೂಚನೆ:
ಹೊನಗೊನೆ ಸೊಪ್ಪಿನಲ್ಲಿ ಕೆಂಪು/ ದಟ್ಟ ಹಸಿರು/ ಹಳದಿ/ ಈ ಮೂರೂ ಬಣ್ಣಗಳಿದ್ದು ‘ಎ’ ಜೀವ ಸತ್ವದ ಆಗರವಾಗಿದೆ. ಈ ಸೊಪ್ಪನ್ನು ಜಜ್ಜಿ ರಸ ಹಿಂಡಿಕೊಂಡರೆ ಸ್ವರಸ ಸಿದ್ಧವಾಗುತ್ತದೆ.  ನಿಗದಿತ ಪ್ರಮಾಣದ ಸ್ವರಸ ಸೇವನೆಯಿಂದ ಕಣ್ಣಿನ ನರಗಳು ಶಕ್ತಿಯುತವಾಗಿ ಬೆಳೆಯುತ್ತವೆ. ಕರುಳಿನ ಹುಣ್ಣು, ಬಾಯಿಹುಣ್ಣು ಮತ್ತು ಹೊಟ್ಟೆ ನೋವನ್ನು ಶಮನ ಮಾಡುತ್ತದೆ ಹಾಗೂ ಶ್ವಾಸಕೋಶದ   ಸೋಂಕು ತಡೆಯಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೂದಲಿಗೆ ಎಣ್ಣೆ ಮಾಡಿ ಹಚ್ಚಬಹುದು. ದೇಹದ ಉಷ್ಣಾಂಶ ಸಮತೋಲನದಲ್ಲಿಟ್ಟು ಕಣ್ಣಿನ ಹೊಳಪು ಹೆಚ್ಚಿಸುತ್ತದೆ.

ಉಪಯೋಗಗಳು: 1) ಸ್ವರಸ – ಔಷಧಿಯಾಗಿ ಕೆಲಸ ಮಾಡುತ್ತದೆ.
ಕೇಶತೈಲ – 4 ಭಾಗ ಸ್ವರಸ + 1 ಭಾಗ ಎಳ್ಳೆಣ್ಣೆ/ ಕೊಬ್ಬರಿ ಎಣ್ಣೆ ಬೆರೆಸಿ ಮಂದಾಗ್ನಿಯಲ್ಲಿ ಕಾಯಿಸಿ 1 ಭಾಗಕ್ಕೆ ಬಂದಾಗ ಸೋಸಿ ಸೀಸೆಯಲ್ಲಿ ಇಡಬೇಕು.
2) ಸ್ವರಸ 1 ಭಾಗ + 1 ಭಾಗ ಜೇನುತುಪ್ಪ ಮಿಶ್ರ ಮಾಡಿ ಪಿಂಗಾಣಿ ಜಾಡಿಯಲ್ಲಿ ಹಾಕಿ ಕಪ್ಪು ಬಟ್ಟೆ ಕಟ್ಟಿ ಸೂರ್ಯನ ಬೆಳಕಿನಲ್ಲಿ 3–4  ವಾರಗಳವರೆಗೆ ಇಟ್ಟಾಗ ಸ್ವರಸದಲ್ಲಿರುವ  ನೀರಿನ ಅಂಶವು ಹೋಗಿ ಹೊನಗೊನೆ ಜೇನು ಉಳಿಯುತ್ತದೆ. ನೈಸರ್ಗಿಕವಾಗಿ ಅಡಕವಾಗಿರುವ  ವಿಟಾಮಿನ್‌ಗಳ ಆಗರವೇ ಜೇನು. ಇಡೀ ವರ್ಷ ಈ ರೀತಿ ತಯಾರಿಸಿದ ಜೇನನ್ನು ಚಪಾತಿ, ದೋಸೆ, ಇಡ್ಲಿ, ಉಪ್ಪಿಟ್ಟು ಹಾಗೂ ದೈನಂದಿನ ಊಟದಲ್ಲಿ ಬಳಸಬಹುದು.

ಇದು ನೀರಿನಲ್ಲಿ ಕರಗುವ ಜೀವಸತ್ವ. ಇದರ ಗುಂಪಿನಲ್ಲಿ ಬಿ 1, ಬಿ 2, ಬಿ 3, ಬಿ 5, ಬಿ 6, ಬಿ 8, ಬಿ 9, ಬಿ 12, ಕೋಲಿನ್‌.

ಇನೊಸಿಟಾಲ್‌ ಕಾರ್ಯನಿರ್ವಹಣೆ:  ‘ಬಿ 1’ ಥಯಾಮಿನ್‌ನ ಮೂಲ: ಇಡಿಯ ಧಾನ್ಯ, ಗೋಧಿ, ಅಕ್ಕಿ, ಓಟ್ಸ್ ಉತ್ತಮ ಆಹಾರಗಳಾಗಿವೆ. ‘ಬಿ’ ಅನ್ನಾಂಗವು ಧಾನ್ಯಗಳ ಹೊರಪದರದಲ್ಲಿ ಶೇಖರವಾಗಿರುತ್ತವೆ. ಕಡಲೆ, ತಾವರೆಕಾಂಡ, ದಪ್ಪಮೆಣಸು, ಬೀಟ್‌ರೂಟ್‌ ಎಲೆ, ಅನಾನಸ್‌,  ನೆಲಗಡಲೆ, ಪಿಸ್ತ, ಮಾಂಸ, ಲಿವರ್‌ನಲ್ಲಿದೆ.

‘ಬಿ 1’ – ಅನ್ನಾಂಗ ಕೊರತೆಯಿಂದ ಬರುವ ಕಾಯಿಲೆಗಳು: ಬೆರಿ – ಬೆರಿ ರೋಗ, ನರದೌರ್ಬಲ್ಯ, ಕುಂಠಿತ ಜೀರ್ಣಶಕ್ತಿ, ಹಸಿವಿಲ್ಲದಿರುವಿಕೆ, ಮಲಬದ್ಧತೆ, ತೂಕದಲ್ಲಿ ಇಳಿಕೆ, ಖಿನ್ನತೆ,  ನಿದ್ರಾಹೀನತೆ, ನರಗಳ ಉರಿಯೂತ, ದೇಹ ಊದಿಕೊಳ್ಳುವುದು.

ಪರಿಹಾರ: ಕಾರ್ಬೊಹೈಡ್ರೇಟ್‌ಗಳು ನರಗಳಿಗೆ ಶಕ್ತಿ ನೀಡುವ ಇಂಧನಗಳಾಗಿವೆ. ಥಯಾಮಿನ್‌ ಈ ಕಾರ್ಬೊಹೈಡ್ರೇಟ್‌ಗಳು ಜೀವಕೋಶಗಳನ್ನು ಸೇರುವುದಕ್ಕೆ ಸಹಾಯ ಮಾಡುತ್ತದೆ.

‘ಬಿ 2’ – ರಿಬೋಪ್ಲೆವಿನ್‌: ‘ಬಿ 2’ – ಅನ್ನಾಂಗ ಮೂಲಗಳು: ಇದು  ಸೌಂದರ್ಯದ ವಿಟಾಮಿನ್‌ ತಾವರೆ ದಂಟು, ಮೂಲಂಗಿ, ಹಾಗೂ ಬೀಟ್‌ರೂಟ್‌ ಎಲೆ, ಕ್ಯಾರೆಟ್‌ ಎಲೆ,  ಪಪ್ಪಾಯಿ, ಒಣದ್ರಾಕ್ಷಿ, ಕುರಿಯ ಲಿವರ್‌, ಕೋಳಿಮೊಟ್ಟೆ, ಖೊವಾ, ಸಾಸಿವೆ, ಹಾಲು, ಹುರಳಿ, ಹುದುಗಲ, ಈಸ್ಟ್ ಇತ್ಯಾದಿಗಳಲ್ಲಿ ದೊರೆಯುತ್ತದೆ.

‘ಬಿ 2’ – ಕೊರತೆಯಿಂದ ಬರುವ ಕಾಯಿಲೆಗಳು: ಬಾಯಿಯಲ್ಲಿ ಹುಣ್ಣಾಗುವುದು, ಬಾಯಿಯ ಅಂಚು ಸೀಳುವುದು, ಕೆಂಪು  ತುಟಿಗಳಿರುವುದು, ಮುಖ ಹಾಗೂ ಕೈಗಳ ಚರ್ಮಸುಕ್ಕುಗಟ್ಟುವುದು ಹಾಗೂ ಮೊಡವೆ ಸಮಸ್ಯೆ

ಪರಿಹಾರ: ಮೂಲಂಗಿ ಎಲೆ, ತಾವರೆ ದಂಟು ಸೇವನೆ.

‘ಬಿ 3’ – ನಿಯೋಸಿನ್‌: ಅನ್ನಾಂಗದ ಮೂಲಗಳು: ಸೊಪ್ಪು, ಮಾಂಸಾಹಾರ, ಮೀನು­ಗಳಲ್ಲಿ ನಿಯೋಸಿನ್‌ ಹೇರಳವಾಗಿ ಸಿಗುತ್ತದೆ.
ಕಾಯಿಲೆಗಳು: ಹಸಿವಿಲ್ಲದಿರುವುದು, ತೂಕ ಇಳಿಕೆ, ನಿಶ್ಯಕ್ತಿ, ರಕ್ತಹೆಪ್ಪುಗಟ್ಟುವಿಕೆ ಇತ್ಯಾದಿ.

ಪರಿಹಾರ: ಇದರ ಸೇವನೆಯಿಂದಾಗಿ ರಕ್ತ ಹೆಪ್ಪುಗಟ್ಟುವಿಕೆ, ಬಿ.ಪಿ., ರಕ್ತಸಂಚಾರ ಸರಿಯಾಗುತ್ತದೆ. ಹೃದಯ ಹಿಗ್ಗುವಿಕೆ ತಡೆಯುತ್ತದೆ.

‘ಬಿ 5’ – ಪ್ಯಾಂಟೋಥಿನಿಕ್‌ ಆಸಿಡ್‌: ‘ಬಿ 5’ – ಅನ್ನಾಂಗ ಮೂಲಗಳು: ಈಸ್ಟ್, ಲಿವರ್‌, ಮೊಟ್ಟೆ, ಶೇಂಗಾ, ಅಣಬೆ, ಸೋಯಾ, ಬಟಾಣಿ, ಗೋಧಿ ಮೊಳಕೆ, ಓಟ್ಸ್.

ಕಾಯಿಲೆಗಳು: ಕೀಲು ನೋವು, ಸೋಂಕುರೋಗಗಳು, ಚರ್ಮ ರೋಗ, ಕೂದಲು ಬೆಳ್ಳಗಾಗುವುದು.

ಪರಿಹಾರ: ಪ್ಯಾಂಟೋಥಿನಿಕ್‌ ಆಸಿಡ್‌ ಮಾನಸಿಕ ಒತ್ತಡಕ್ಕೆ ಪರಿಹಾರ, ಕೇಂದ್ರೀಯ ನರಮಂಡಲದ ಆರೋಗ್ಯ ಮತ್ತು ಅದರ ಬೆಳವಣಿಗೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಅಕಾಲಿಕ ಮುಪ್ಪನ್ನು ತಡೆಯುತ್ತದೆ.

‘ಬಿ 6’ – ಪೈರಿಡೋಕ್ಸಿನ್‌: ಬಹೂಪಯೋಗಿ ವಿಟಾಮಿನ್‌

‘ಬಿ 6’ – ಅನ್ನಾಂಗ ಮೂಲಗಳು: ಸೂರ್ಯಕಾಂತಿಬೀಜ, ಈಸ್ಟ್, ಮೊಳಕೆ ಗೋಧಿ, ಸೋಯಾಬೀನ್‌, ಹಸಿ ಆಹಾರ ಪದಾರ್ಥಗಳಲ್ಲಿ ದೊರೆಯುತ್ತದೆ.

‘ಬಿ 6’ – ಅನ್ನಾಂಗದ ಉಪಯೋಗಗಳು: ಕೆಂಪುರಕ್ತಕಣಗಳ ಸಿದ್ಧತೆಯಲ್ಲಿ ಪಾತ್ರವಹಿಸುತ್ತದೆ. ದೇಹದಲ್ಲಿ ಆಹಾರ ವಿಲೀನವಾಗುವುದಕ್ಕೆ ಸಹಕರಿಸುತ್ತದೆ, ಅತಿಯಾದ ಕೊಲೆಸ್ಟ್ರಾಲ್‌ ಹೃದಯರೋಗ ಹಾಗೂ ಸಕ್ಕರೆ ಕಾಯಿಲೆ, ಸೋಡಿಯಂ ಹಾಗೂ ಪೊಟ್ಯಾಸಿಯಂ ಕೊರತೆ, ಮೂರ್ಚೆರೋಗ ತಡೆಯಲು ಇದು ದೇಹದ ಎಲ್ಲಾ ಕಾರ್ಯಗಳಿಗೂ ಅತ್ಯಗತ್ಯ.

‘ಬಿ 8’ – ಬಯೋಟಿನ್‌: ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈಸ್ಟ್, ಲಿವರ್‌, ಅಕ್ಕಿಯ ಹೊರಕವಚ, ತೌಡು, ಬಟಾಣಿ, ಮನುಷ್ಯರ ಕರುಳುಗಳಲ್ಲಿರುವ ಬ್ಯಾಕ್ಟೀರಿಯಾಗಳು ಕೂಡಾ ‘ಬಿ 8’ ವಿಟಾಮಿನ್‌ಗಳನ್ನು ಉತ್ಪತ್ತಿ ಮನಾಡುತ್ತವೆ.

‘ಬಿ 8’ – ಅನ್ನಾಂಗದ ಉಪಯೋಗಗಳು: ರೋಗನಿರೋಧಕ ಶಕ್ತಿಗೆ ಅವಶ್ಯಕ, ಕಾರ್ಬೊಹೈಡ್ರೇಟ್‌, ಪ್ರೋಟೀನ್‌, ಮೇಧಸ್ಸಿನ ಕಾರ್ಯಕ್ಷಮತೆಯಲ್ಲಿ, ಕೂದಲ ಆರೋಗ್ಯ ಮತ್ತು ಚರ್ಮದ  ಬಣ್ಣ ಸುಸ್ಥಿತಿಯಲ್ಲಿರಲು ಸಹಾಯ ಮಾಡುತ್ತದೆ. ಅತಿಯದ  ಆಂಟಿಬಯೋಟಿಕ್‌್ಸ ಬಳಕೆಯಿಂದಾಗಿ ಉಪಕಾರಿ ಬ್ಯಾಕ್ಟೀರಿಯಾಗಳು ನಾಶವಾಗುವುದರಿಂದ ಬಯೋಟಿನ್‌ ಉತ್ಪತ್ತಿ ಕಡಿಮೆಯಾಗುತ್ತದೆ.

‘ಬಿ 8’ – ಅನ್ನಾಂಗ ಕೊರತೆಯಿಂದ ಬರುವ ಕಾಯಿಲೆಗಳು: ಸ್ನಾಯುಗಳ ಶಕ್ತಿಹೀನತೆ, ನೋವು, ಸೂಜಿಚುಚ್ಚಿದಂತೆ ಆಗುವುದು; ತಲೆಹೊಟ್ಟು, ರಕ್ತ ಹೀನತೆ, ಶ್ವಾಸ ಕೋಶದ ಸೋಂಕು, ಇತ್ಯಾದಿ..

‘ಬಿ 9’  – ಅನ್ನಾಂಗ ಮೂಲಗಳು: ಹಸಿರು ಎಲೆ, ತರಕಾರಿ, ಜವುಳಿಕಾಯಿ, ಅಲಸಂದೆ, ಎಳ್ಳು, ಬೇಳೆಕಾಳು, ಮೊಟ್ಟೆ, ಲಿವರ್‌, ಮೀನು, ಕರುಳಿನ ಜೀವಾಣುಗಳು ಕೂಡಾ ಬಿ 9 ಅನ್ನು ಸಿದ್ಧಪಡಿಸುತ್ತದೆ.

‘ಬಿ 9’ – ಅನ್ನಾಂಗ ಕೊರತೆಯಿಂದ ಬರುವ ಕಾಯಿಲೆಗಳು: ರಕ್ತಹೀನತೆ, ಗರ್ಭಪಾತ, ಚರ್ಮದಲ್ಲಿ ಕಂದುಬಣ್ಣದ ಕಲೆಗಳು ಉಂಟಾಗುತ್ತದೆ.
ಪರಿಹಾರ: ನುಗ್ಗೆಸೊಪ್ಪು, ಅಗಸೆಸೊಪ್ಪು, ದಂಟುಸೊಪ್ಪು, ಚಿಲಕೀರೆ, ಅಂಜೂರ, ಒಣದ್ರಾಕ್ಷಿ ಸೇವಿಸುವುದು.

‘ಬಿ 12’ – ಸಯನಕೊಬಾಲಾಮಿನ್‌: ಕೆಂಪುರಕ್ತಕಣಗಳನ್ನು ಹೆಚ್ಚಿಸುತ್ತದೆ.

‘ಬಿ 12’ – ಅನ್ನಾಂಗ ಮೂಲಗಳು: ಇದು ಪ್ರಾಣಿಜನ್ಯ ಆಹಾರಗಳಲ್ಲಿ ಮಾತ್ರ  ದೊರೆಯುತ್ತದೆ.

‘ಬಿ 12’ – ಅನ್ನಾಂಗದ ಉಪಯೋಗಗಳು: ದೇಹದ ಸಮತೋಲನ ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ. ರೋಗನಿರೋಧಕ ಶಕ್ತಿ ನೀಡುತ್ತದೆ.
‘ಬಿ 12’ – ಅನ್ನಾಂಗ ಕೊರತೆಯಿಂದ ಬರುವ ಕಾಯಿಲೆಗಳು: ಫರ್ನಿಸಿಯಸ್‌ ಅನೀಮಿಯಾ ಎನ್ನುವ ರಕ್ತಹಿನತೆ ಉಂಟಾಗುತ್ತದೆ. ಆಲಸ್ಯ, ಕೈಕಾಲು ಮರಗಟ್ಟುವುದು, ಏಕಾಗ್ರತೆಯ ಕೊರತೆ.

‘ಕೋ ಲಿನ್‌’: ಲಿವರ್‌ನ ಆರೋಗ್ಯಕ್ಕಾಗಿ.
‘ಕೋಲಿನ್‌’ ಮೂಲಗಳು: ಇದು ಮೀನು ಹಾಗೂ ಇತರೆ ಸಮುದ್ರ ಜೀವಿಗಳಲ್ಲಿ, ತರಕಾರಿ ಹಾಗೂ ಧಾನ್ಯಗಳಲ್ಲಿ ಲಭ್ಯ.

‘ಕೋಲಿನ್‌’ನ ಉಪಯೋಗಗಳು: ‘ಕೋಲಿನ್‌’ ದೇಹದಲ್ಲಿ ಮೇದಸ್ಸನ ಚಲನೆಯಲ್ಲಿ ಸಹಾಯ ಮಾಡುತ್ತದೆ. ಲಿವರ್‌ನಲ್ಲಿ ಮೇದಸ್ಸು ಸಂಗ್ರಹಗೊಳ್ಳದಂತೆ ತಡೆಯುತ್ತದೆ.

‘ಕೋಲಿನ್‌’ನ ಕೊರತೆಯಿಂದ ಬರುವ ಕಾಯಿಲೆಗಳು: ಲಿವರ್‌ನಲ್ಲಿ ಮೇದಸ್ಸು ಸಂಗ್ರಹವಾದರೆ, ಅಲ್ಲಿಯ ಕೋಶಗಳು ನಾಶವಾಗುವುದು. ಕೆಂಪು ರಕ್ತಕಣಗಳನ್ನು ತಯಾರಿಸಲು ಬೇಕು, ಸೋಂಕುರೋಗಗಳ ದಾಳಿಗೆ ಪ್ರತಿರೋಧ ತಯಾರಿಸುವಲ್ಲಿ ಅಗತ್ಯವಾಗಿರುತ್ತದೆ.

‘ಸಿ’ ಅನ್ನಾಂಗದ ಕೊರತೆಯಿಂದ ಬರುವ ಕಾಯಿಲೆಗಳು: ಒಸಡು ಊತ, ರಕ್ತನಾಳಗಳು ಕ್ಷೀಣಿಸುವುದು, ಥೈರಾಯ್ಡ ಕೊರತೆ, ವಯಸ್ಸಿಗೆ ಮೊದಲೇ ಮುಪ್ಪು, ಕ್ಯಾನ್ಸರ್‌ ರೋಗ ಉಲ್ಬಣಿಸುತ್ತದೆ.

ಸ್ಕರ್ವಿರೋಗದ ಲಕ್ಷಣಗಳು: ಸುಸ್ತು, ಸ್ನಾಯು ನೋವು, ಕೆರಳಿಕೆ, ದೊಡ್ಡಕೀಲುಗಳಲ್ಲಿ ಬಾವು ಮತ್ತು ನೋವು, ಚರ್ಮದಡಿ ರಕ್ತ ತುಂತುರು ಮತ್ತು ಕೆಂಪಾಗಿ ಉಬ್ಬಿದ ವಸಡಿನಿಂದ ರಕ್ತ ಸೋರಿಕೆ ಕಂಡು ಬರುತ್ತದೆ.

–ಸಿ.ವಿ.ಶೋಭಾ
(ಮಾಹಿತಿಗೆ: 94483 15578)
(ಮುಂದಿನ ವಾರ ಖನಿಜ ಮತ್ತು ಲವಣಗಳ ಮಹತ್ವ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT