ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ಕಾಪಾಡಿ

ವಾರದ ವೈದ್ಯ
Last Updated 19 ಜುಲೈ 2013, 19:59 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಜನರನ್ನು ಕಾಡುವ ನೇತ್ರ ದೋಷಗಳು  ಯಾವುವು?
ಮುಖ್ಯವಾಗಿ ಎರಡು ಬಗೆ. ಅವೆಂದರೆ ಸಮೀಪದೃಷ್ಟಿ ಮತ್ತು ದೂರದೃಷ್ಟಿ. ಹತ್ತಿರದಲ್ಲಿ ಇರುವುದು ಕಂಡು, ದೂರದ್ದು ಕಾಣದೇ ಇರುವುದು ಸಮೀಪದೃಷ್ಟಿ. ದೂರದಲ್ಲಿ ಇರುವುದು ಕಾಣುತ್ತದಾದರೂ, ಹತ್ತಿರದ್ದು ಕಾಣದೇ ಇದ್ದರೆ ಅದು ದೂರದೃಷ್ಟಿ. ಈ ಎರಡೂ ದೃಷ್ಟಿದೋಷಗಳನ್ನು ಲೆನ್ಸ್‌ಯುಕ್ತ ಕನ್ನಡಕಗಳನ್ನು ಧರಿಸುವುದರಿಂದ ಮಾತ್ರ ಸರಿಪಡಿಸಲು ಸಾಧ್ಯ.

ದೃಷ್ಟಿ ದೋಷಕ್ಕೆ ಕಾರಣಗಳೇನು?
ಮಂದ ಬೆಳಕಿನಲ್ಲಿ ಹೆಚ್ಚು ಸಮಯ ಓದುವುದು, ಕಂಪ್ಯೂಟರ್ ಮುಂದೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವುದು, ವಿಟಮಿನ್‌ಯುಕ್ತ ಆಹಾರ ಪದಾರ್ಥ- ಹಾಲು- ತರಕಾರಿಗಳ ಕೊರತೆ, ವಂಶಪಾರಂಪರ್ಯ ಕಾರಣ.

ದೃಷ್ಟಿದೋಷ ಇರುವ ಕೆಲವರಿಗೆ ಕನ್ನಡಕ ಧರಿಸಿದರೆ ಮುಖದ ಅಂದ ಹಾಳಾಗುತ್ತದೆಂಬ ತಪ್ಪು ಕಲ್ಪನೆ ಇರುತ್ತದೆ. ಅವರು ಕನ್ನಡಕ ಧರಿಸದೆ ಹಾಗೇ ಇರಲು ಬಯಸುತ್ತಾರೆ. ಆದರೆ ಅವರ ದೃಷ್ಟಿದೋಷದ ಪವರ್ ಹೆಚ್ಚಾದಾಗ ಅದರಿಂದ ವಿಪರೀತ ತಲೆನೋವು ಬರತೊಡಗುತ್ತದೆ, ದೈಹಿಕ- ಮಾನಸಿಕ ಹಿಂಸೆಯೂ ಹೆಚ್ಚಾಗುತ್ತದೆ.

ಮಕ್ಕಳು ಶಾಲೆಗೆ ಹೋಗುವುದಕ್ಕಿಂತ ಮುಂಚೆ ಸವಿಸ್ತಾರವಾಗಿ ಕಣ್ಣಿನ ಪರೀಕ್ಷೆ ಮಾಡಿಸಬೇಕು ಯಾಕೆ?
ಮಕ್ಕಳು ಶಿಕ್ಷಣದಲ್ಲಿ ಯಶಸ್ವಿಯಾಗಿ ಮುಂದುವರಿಯಲು ಪಾಲಕರು ಅವರ ಕಣ್ಣಿನ ಪರೀಕ್ಷೆಯನ್ನು ಮಾಡಿಸಬೇಕು. ಇದರಿಂದ ದೃಷ್ಟಿಮಾಂದ್ಯ, ಸಮೀಪದೃಷ್ಟಿ ಅಥವಾ ದೂರದೃಷ್ಟಿಯ ಸಮಸ್ಯೆಗಳನ್ನು ತಿಳಿಯಬಹುದು.

ಮಕ್ಕಳಿಗೆ ಕಣ್ಣಿನ ಪರೀಕ್ಷೆ ಮಾಡಿಸದಿದ್ದರೆ ಏನಾಗುತ್ತದೆ?
ಮಕ್ಕಳಿಗೆ ಕಣ್ಣಿನ ತೊಂದರೆ ಇದ್ದರೆ ಅವರಿಗೆ ಕಲಿಯಲು ಅಡ್ಡಿಯಾಗುತ್ತದೆ. ಇದರಿಂದ ಪಾಠದ ಮೇಲೆ ಗಮನ ಕೇಂದ್ರೀಕರಿಸುವುದು ಸಾಧ್ಯವಾಗದೇ ಸಾಧನೆ ಮಾಡಲು ಆಗದು. ಕಣ್ಣಿನ ಸಮಸ್ಯೆಗಳನ್ನು ಕಂಡುಹಿಡಿಯಲಾರದ ಕಾರಣಕ್ಕೆ ಸುಮಾರು ಶೇ 60ರಷ್ಟು ಮಕ್ಕಳು `ಕಲಿಕಾ ನ್ಯೂನತೆ' ಹೊಂದಿದವರು ಎಂದು ಗುರುತಿಸಿಕೊಂಡಿದ್ದಾರೆ. ಹೀಗಾಗಿ ಪಾಲಕರು ಶಾಲೆಗೆ ಸೇರಿಸುವುದಕ್ಕೆ ಮೊದಲು ಮಕ್ಕಳ ಕಣ್ಣಿನ ಪರೀಕ್ಷೆ ಮಾಡಿಸಲೇಬೇಕು.

ಮಗುವಿನ ದೃಷ್ಟಿ ಸಮಸ್ಯೆಯ ಲಕ್ಷಣಗಳೇನು?
ಮಕ್ಕಳ ನೋಟ, ವರ್ತನೆ, ಟೀಕೆಗಳಿಗೆ ಬೀರುವ ವಕ್ರದೃಷ್ಟಿ, ಕಣ್ಣು ಕೆಂಪಾಗುವುದು, ನೀರು ಬರುವುದು, ಕಣ್ಣಿನ ರೆಪ್ಪೆಗಳು ಬಾತುಕೊಂಡಂತೆ ಇರುವುದು ದೃಷ್ಟಿ ಸಮಸ್ಯೆಯ ಲಕ್ಷಣಗಳು. ಕಣ್ಣನ್ನು ಹೆಚ್ಚಾಗಿ ತಿಕ್ಕುವುದು, ದೂರದ ವಸ್ತುಗಳು ಸರಿಯಾಗಿ ಕಾಣಿಸದೇ ಇರುವುದು, ಕಣ್ಣನ್ನು ಮುಂದಕ್ಕೆ ಬಾಗಿಸಿ ನೋಡುವುದು ಬೇನೆಗೆ ಸಂಬಂಧಿಸಿದ ಲಕ್ಷಣಗಳು. ಕಣ್ಣನ್ನು ತುರಿಸುವುದು, ಕೆಲಸದ ನಂತರ ತಲೆ ತಿರುಗುವುದು, ಮಂದವಾದ ದೃಷ್ಟಿಯನ್ನು ಪಾಲಕರು ಗಮನಿಸಿ ವೈದ್ಯರನ್ನು ಕಾಣಬೇಕು.

ಮಕ್ಕಳ ವರ್ತನಾ ಲಕ್ಷಣಗಳಿಂದ ಅವರ ದೃಷ್ಟಿದೋಷ ತಿಳಿಯುವುದು ಹೇಗೆ?
ಶೇ 39ರಷ್ಟು ಪಾಲಕರು ಮಕ್ಕಳ ವರ್ತನಾ ಲಕ್ಷಣಗಳನ್ನು ಗಮನಿಸುವುದಿಲ್ಲ. ಇದರಿಂದ ಮಕ್ಕಳ ಕಣ್ಣಿನ ದೋಷ ಅವರ ಅರಿವಿಗೆ ಬರುವುದಿಲ್ಲ. ಗುರುತಿಸಲಾಗದ ಸಮಸ್ಯೆಗಳಿಂದ ಮಕ್ಕಳಿಗೆ ಕಲಿಕೆಯ ಬೋರ್ಡ್, ಪುಸ್ತಕದಲ್ಲಿನ ಬರವಣಿಗೆಯನ್ನು ಸುಲಭವಾಗಿ ಓದಲಾಗುವುದಿಲ್ಲ. ಆದ್ದರಿಂದ ಅವರಿಗೆ ಬೇಸರವಾಗಿ ಪಾಠಗಳ ಕಡೆಗೆ ಗಮನ ಕೊಡದೇ ಶಾಲೆಯಿಂದ ಹೊರಗಿರಲು ಬಯಸುತ್ತಾರೆ. ವೈದ್ಯಕೀಯವಾಗಿ ಕಣ್ಣಿನ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ಮಾಡದಿದ್ದರೆ ಭವಿಷ್ಯದಲ್ಲಿ ದೃಷ್ಟಿ ನಾಶವಾಗಬಹುದಾದ ಅಪಾಯ ಇರುತ್ತದೆ.

ಮಕ್ಕಳು ಎಷ್ಟು ಬಾರಿ ವಿಸ್ತಾರವಾದ ಕಣ್ಣಿನ ಪರೀಕ್ಷೆಗೆ ಒಳಪಡಬೇಕು?
ಮಗು ಆರು ತಿಂಗಳಾದಾಗ ಮೊದಲ ಪರೀಕ್ಷೆ ಆಗಬೇಕು. ನಂತರ ಮೂರನೇ ವರ್ಷದಲ್ಲಿ ಪರೀಕ್ಷೆ ಮಾಡಿಸಬೇಕು. ಬಳಿಕ ಶಾಲೆಗೆ ಬರುವ ಮುನ್ನ ಹಾಗೂ ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಮಾಡಿಸುತ್ತಿರಬೇಕು.

ಎಷ್ಟು ಮಕ್ಕಳ ದೃಷ್ಟಿದೋಷ ಪತ್ತೆಯಾಗಿಲ್ಲ?
ನಾಲ್ವರು ಮಕ್ಕಳಲ್ಲಿ ಒಂದು ಮಗುವಿಗೆ ದೃಷ್ಟಿ ಸಮಸ್ಯೆ ಇದೆ. ಆದರೆ, ಪಾಲಕರು ಮತ್ತು ಶಿಕ್ಷಕರು ಅದನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ.

ಕಣ್ಣು ಊದಿದ್ದಾಗ ಏನು ಮಾಡಬೇಕು?
ಸೋಂಕಿನಿಂದ ಕಣ್ಣುಗಳು ಊದಿಕೊಳ್ಳುತ್ತವೆ. ಇದೇ ಮಾದರಿಯ ಕಾಯಿಲೆ ಮದ್ರಾಸ್ ಐ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ. ಈ ರೋಗಕ್ಕೆ ಒಳಗಾದವರನ್ನು ಹತ್ತಿರದಿಂದ ಕೆಲವು ನಿಮಿಷ ನೋಡಿದರೂ ಸಾಕು ನಮಗೂ ಕಣ್ಣುಗಳ ಊತ ಕಂಡು ಬರುತ್ತದೆ. ಕಣ್ಣಿನ ಒಳಭಾಗದಲ್ಲಿ ವಿಪರೀತ ನೋವು, ಚುಚ್ಚುವ ಅನುಭವ ಆಗುತ್ತದೆ. ಕಾಲಕಾಲಕ್ಕೆ `ಐ ಡ್ರಾಪ್' ಹಾಕುವುದರಿಂದ ಸರಿಹೋಗುತ್ತದೆ. ಮಾವಿನಹಣ್ಣಿನ ಕಾಲದಲ್ಲೂ ಇದೇ ಬಗೆಯ ಕಣ್ಣಿನ ಊತ ಬರುವುದುಂಟು.

ಕಣ್ಣಿನ ಸಂರಕ್ಷಣೆ ಹೇಗೆ?
ಕಣ್ಣಲ್ಲಿ ದೂಳು- ಕಸದ ಅಂಶ ಬೀಳುವುದು ಸಹಜ. ಆಗ ಕಣ್ಣನ್ನು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಹಾಗೆ ಮಾಡದೆ ಕಣ್ಣುಗಳನ್ನು ಉಜ್ಜಿದರೆ ಉರಿಯತೊಡಗುತ್ತವೆ. ಕಣ್ಣಿನ ಒಳಭಾಗ ಕೆಂಪಾಗುತ್ತದೆ. ಇದು ಒಳ್ಳೆಯದಲ್ಲ. ಸ್ನಾನ ಮಾಡುವಾಗ, ಮುಖ ತೊಳೆಯುವಾಗ ಕಣ್ಣುಗಳನ್ನು ಚೆನ್ನಾಗಿ ತೊಳೆದು ಒರೆಸಿಕೊಳ್ಳಬೇಕು. ಇಲ್ಲವಾದರೆ ಸಣ್ಣಪುಟ್ಟ ದೂಳು ಒಳಸೇರಿ ಗಟ್ಟಿಯಾಗಿ ಕ್ರಮೇಣ ಗೀಜಾಗಿ ಆಗಾಗ ಹೊರಬರುತ್ತದೆ. ಇದು ನೋಡುವವರಿಗೂ ಅಸಹ್ಯ ಮೂಡಿಸುತ್ತದೆ. ಕಣ್ಣಲ್ಲಿ ಗೀಜು ಬರುತ್ತಿದ್ದರೆ ಬಿಳಿ ಬಟ್ಟೆ ಅಥವಾ ಹತ್ತಿಯಿಂದ ಅದನ್ನು ತೆಗೆಯಬೇಕು. ಕಣ್ಣನ್ನು ತಣ್ಣೀರಿನಿಂದ ತೊಳೆಯಬೇಕು. ಡ್ರಾಪ್ ಅಥವಾ ಔಷಧಿಯ ಅಗತ್ಯ ಇಲ್ಲ.

ಕಣ್ಣು ತೊಳೆಯುವ ಕ್ರಮ ಹೇಗೆ?
ಒಂದು ಅಗಲವಾದ ಟಬ್‌ನಲ್ಲಿ ನೀರು ತುಂಬಿಸಿ. ನಿಮ್ಮ ಎರಡೂ ಕಣ್ಣುಗಳನ್ನು ಅದರಲ್ಲಿ ಒಂದೆರಡು ನಿಮಿಷ ಮುಳುಗಿಸಿ. ಕಣ್ಣುಗಳು ನೀರಲ್ಲಿ ಇರುವಾಗ ರೆಪ್ಪೆ ಮಿಟುಕಿಸುತ್ತಾ ಇರಿ. ಒಳಭಾಗದಲ್ಲಿರುವ, ಅಕ್ಕಪಕ್ಕದಲ್ಲಿರುವ ದೂಳು ಹೊರಬಂದು ಕಣ್ಣುಗಳು ಶುಭ್ರವಾಗುತ್ತವೆ. ಈ ಕ್ರಮವನ್ನು ಪ್ರತಿದಿನ ಅನುಸರಿಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT