ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥ್ಯಾಲಿಡೋಮೈಡ್ ಎರಡನೇ ಇನ್ನಿಂಗ್ಸ್

Last Updated 11 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಅ ರವತ್ತರ ದಶಕದಲ್ಲಿ ತುಂಬಾ ಜನಪ್ರಿಯವಾಗಿ ನಂತರ ಕುಖ್ಯಾತಿಗೆ ಒಳಗಾದ ಥ್ಯಾಲಿಡೋಮೈಡ್ ಔಷಧ ಈಗ ಮತ್ತೆ ಬೇರೆ ರೀತಿಯಲ್ಲಿ ಉಪಯೋಗಕ್ಕೆ ಬರುತ್ತಿದೆ.

ಥ್ಯಾಲಿಡೋಮೈಡ್ ಮತ್ತುಬರಿಸಿ ಸಮ್ಮೋಹನಗೊಳಿಸುವ ಔಷಧ. ಇದನ್ನು ಸೇವಿಸುವವರಿಗೆ ಜಗತ್ತಿನ ಯಾವ ಅಪಾಯಗಳನ್ನೂ ಎದುರಿಸಬಲ್ಲೆನೆಂಬ ಭ್ರಮೆ ಉಂಟಾಗುತ್ತಿತ್ತು. ಪಾಶ್ಚಾತ್ಯ ಮಹಿಳೆಯರಲ್ಲಿ ಬಸಿರಾಗುವುದೆಂದರೇ ಭಯದ ವಿಷಯವಾಗಿದ್ದಾಗ ಅಲ್ಲಿನ ಔಷಧ ಕಂಪನಿಗಳು, ಈ ಔಷಧ ಆತಂಕಕ್ಕೊಂದು ರಾಮಬಾಣ ಎಂದು ಪ್ರಚಾರ ಮಾಡತೊಡಗಿದವು. ಥ್ಯಾಲಿಡೋಮೈಡ್ ಸೇವಿಸಿ ಬಸಿರಿನ ಬಾಧೆಗಳನ್ನು ಆ ಕ್ಷಣಕ್ಕೆ ಮರೆಯಲು ಅಲ್ಲಿನ ಮಹಿಳೆಯರು ಪ್ರಯತ್ನಿಸಿದರು. ಈ ಔಷಧ ಸೇವನೆಯ ಪರಿಣಾಮವಾಗಿ ಅಂಗವಿಕಲ ಮಕ್ಕಳು ಹುಟ್ಟಿದವು. ಅದರಲ್ಲೂ ಫೋಕೋಮಿಲಿಯ (ಮುರುಟಿದ ಕೈಕಾಲುಗಳು) ಮಕ್ಕಳೇ ಹೆಚ್ಚು. ಅಪಾರ ಸಂಖ್ಯೆಯಲ್ಲಿ ಇಂಥ ಮಕ್ಕಳು ಹುಟ್ಟುವುದನ್ನು ಕಂಡಾಗ ಜನತೆ ಎಚ್ಚೆತ್ತುಕೊಂಡಿತು.  ಆಗ ಆ ಔಷಧ ಜಗತ್ತಿನಾದ್ಯಂತ ಸಂಪೂರ್ಣವಾಗಿ ನಿಷೇಧಕ್ಕೆ ಒಳಗಾಗಿತ್ತು. 

 ತೀವ್ರ ಕುಖ್ಯಾತಿಗೆ ಒಳಗಾದ ಈ ಔಷಧದ ಬಗ್ಗೆ ನಿಧಾನವಾಗಿ ವಿಜ್ಞಾನಿಗಳಿಗೆ, ವೈದ್ಯರಿಗೆ ಆಸಕ್ತಿ ಕಡಿಮೆಯಾಯಿತು. ಆದರೆ 1990ರ ದಶಕದ ಉತ್ತರಾರ್ಧದಲ್ಲಿ ಇದರ ಕೆಲವು ಅಪರೂಪದ ಗುಣಗಳಿಂದ ಈ ಔಷಧ ಬೇರೆ ಬೇರೆ ಗುಣಪಡಿಸಲಾಗದ ಕಾಯಿಲೆಗಳಲ್ಲಿ ಉಪಯೋಗವಾಗಬಹುದೇ? ಎಂಬ ಹಲವು ವಿಜ್ಞಾನಿಗಳ ಸಂಶಯ ನಿಧಾನವಾಗಿ ನಿಜವಾಗತೊಡಗಿತು.

ಇದು ಹಲವು ಕಾಯಿಲೆಗಳಲ್ಲಿ ಕಂಡುಬರುವ ಉರಿಯೂತವನ್ನು  (INFLAMMATION) ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಫ್ಯಾಕ್ಟರ್ ಅಲ್ಫಾ ಎಂಬ ಪ್ರೋಟೀನ್ ಉತ್ಪಾದನೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಈ ಕ್ರಿಯೆಯ ಮೂಲಕ ಮುಖ್ಯವಾಗಿ ಉರಿಯೂತ ಉಂಟುಮಾಡುವ ಕಾಯಿಲೆಗಳಾದ ರುಮಟ್ಯಾಡ್ ಆಥ್ರೈಟಿಸ್, ಕ್ರಾನ್ಸ್ ಕಾಯಿಲೆ ಹಾಗೂ ಲೆಪ್ರೊಮಾಟಸ್ ಕುಷ್ಟರೋಗದಲ್ಲಿ ಪರಿಣಾಮಕಾರಿ ಔಷಧವಾಗಿ ಉಪಯೋಗ ಕಂಡುಕೊಂಡಿದೆ.

ಇದು ದೇಹದಲ್ಲಿ ವಿವಿಧ ಕಾರಣಗಳಿಂದ ಉತ್ಪತ್ತಿಯಾಗುವ ಹೊಸ ರೀತಿಯ ರಕ್ತನಾಳಗಳನ್ನು ನಿಯಂತ್ರಿಸುತ್ತದೆ.(ವಿವಿಧ ರೀತಿಯ ಕ್ಯಾನ್ಸರ್ ಗೆಡ್ಡೆಗಳು ಬೆಳೆಯಲು ಮತ್ತು ದೇಹದ ವಿವಿಧ ಭಾಗಗಳಲ್ಲಿ ಹರಡಲು ಈ ರೀತಿಯ ಹೊಸ ರಕ್ತನಾಳಗಳು ಉತ್ಪಾದನೆಯಾಗುತ್ತವೆ) ಹಲವು ರೀತಿಯ ಕ್ಯಾನ್ಸರ್,  ಏಡ್ಸ್ ಹಾಗೂ ವಯಸ್ಸಾದವರಲ್ಲಿ ದೃಷ್ಟಿವಿಹೀನಗೊಳಿಸುವ ಕಣ್ಣಿನ ಕಾಯಿಲೆ ‘ಮ್ಯಾಕ್ಯುಲಾರ್ ಡಿಜನರೇಷನ್’ ಚಿಕಿತ್ಸೆಯಲ್ಲಿ ಈ ಔಷಧ  ಬಳಸಲಾಗುತ್ತದೆ.

ಇದರ ಮತ್ತೊಂದು ಮುಖ್ಯ ಗುಣವೆಂದರೆ ಮಯಲೋಮ ಜೀವಕೋಶಗಳು ಉತ್ಪತ್ತಿಯಾಗುವುದನ್ನು ಹಾಗೂ ಅವು ಅಸ್ಥಿಮಜ್ಜೆಗೆ ಹೋಗಿ ಅಂಟಿಕೊಳ್ಳುವುದನ್ನು ತಡೆಯುತ್ತದೆ. ಹಾಗಾಗಿ ರಕ್ತದ ಜೀವಕೋಶಗಳಲ್ಲಿ ಕಂಡುಬರುವ ತೀವ್ರ ರೀತಿಯ ಕ್ಯಾನ್ಸರ್‌ಕಾಯಿಲೆ-ಮಲ್ಟಿಪಲ್ ಮಯಲೋಮ ಚಿಕಿತ್ಸೆಯಲ್ಲಿ ಇದು ಬಹಳವಾಗಿ ಉಪಯೋಗವಾಗುತ್ತಿದೆ.

ದೇಹದಲ್ಲಿರುವ ಕ್ಯಾಬೆಕ್ಟಿನ್ ಎಂಬ ವಸ್ತುವಿನ ಪ್ರಮಾಣವನ್ನು ಇದು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಕ್ಯಾಬೆಕ್ವಿನ್ ಎಂದರೆ ದೇಹದಲ್ಲಿ ಸಾಮಾನ್ಯವಾಗಿರುವ ಒಂದು ರಾಸಾಯನಿಕ. ಇದನ್ನು ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್ (ಟಿಎನ್‌ಎಫ್)ಎಂದೂ ಕರೆಯುತ್ತಾರೆ. ಇದು ಬಿಳಿರಕ್ತ ಕಣಗಳಿಂದ ಸ್ರವಿಸಲ್ಪಡುತ್ತವೆ. ಹೊರಗಿನಿಂದ ದೇಹದೊಳಗೆ ಆಕ್ರಮಣ ಮಾಡುವ ಕ್ರಿಮಿಗಳ ಜೊತೆ ಇದು ಹೋರಾಡುತ್ತದೆ. ಸೋಂಕಿನ ಪ್ರಮಾಣಕ್ಕೆ ಅನುಗುಣವಾಗಿ ವಿವಿಧ ಕಾಯಿಲೆಗಳಾದ ಕ್ಷಯ, ತೀವ್ರ ಸೋಂಕು ಅಥವಾ ಸೆಪ್ಸಿಸ್, ಕ್ಯಾನ್ಸರ್ ಮತ್ತು ಏಡ್ಸ್‌ಗಳಲ್ಲಿ ಕ್ಯಾಬೆಕ್ಟಿನ್ ಕಡಿಮೆ ಮಾಡುವ ತನ್ನ ಗುಣದಿಂದ, ಥ್ಯಾಲಿಡೋಮೈಡ್ ಈ ಮೇಲಿನ ಕಾಯಿಲೆಗಳಲ್ಲಿ ಉಪಯೋಗವಾಗುತ್ತದೆ.

ಮೇಲಿನ ಮುಖ್ಯ ಗುಣಗಳನ್ನು ಹೊಂದಿದ ಈ ಔಷಧ ಈ ಕೆಳಗಿನ ಕಾಯಿಲೆಗಳಲ್ಲಿ ಉಪಯೋಗವಾಗುತ್ತಿದೆ.

ಚರ್ಮದ ಕಾಯಿಲೆಗಳು: ಸಾರ್ಕಾಯಿಡೋಸಿಸ್, ಲಾಪಸ್‌ಕಾಯಿಲೆ, ಬೇಸೆಟ್ ಸಿಂಡ್ರೋಮ್, ಲೆಪ್ರೋಮಾಟಿಸ್ ಕುಷ್ಟರೋಗ.

ಸಂಧಿವಾತ ಕಾಯಿಲೆಗಳು:
ರುಮಟ್ಯಾಡ್ ಆಥ್ರೈಟಿಸ್, ಆಂಕಲೋಸಿಂಗ್‌ಸ್ಪಾಂಡಿಲೈಟಿಸ್, ಸ್ವಿಲ್‌ಕಾಯಿಲೆ, ಸೋಜರ್ನ್ ಸಿಂಡ್ರೋಮ್.

ಕ್ರಾನ್ ಕಾಯಿಲೆ:
ಇತರ ಔಷಧಗಳ ಜೊತೆ ಸೇರಿ, ಹೊಟ್ಟೆ ಮತ್ತು ಕರುಳಿನ ಭಾಗದ ಈ ಕಾಯಿಲೆಯಲ್ಲೂ ಗಮನಾರ್ಹವಾಗಿ ಉಪಯೋಗವಾಗುತ್ತದೆ.

ಏಡ್ಸ್ ಮತ್ತು ಎಚ್‌ಐವಿ:
ದೇಹದ ಪ್ರತಿರೋಧ ಶಕ್ತಿಯನ್ನು ಕುಂಠಿತಗೊಳಿಸುವ ಕಾಯಿಲೆಯಾದ ಏಡ್ಸ್‌ನಲ್ಲಿ ಕಂಡುಬರುವ ಬಾಯಿ ಮತ್ತು ಗಂಟಲಿನ ಭಾಗದ ಅಲ್ಸರ್ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ. ಈ ಕಾಯಿಲೆಯಲ್ಲಿ ಕಂಡುಬರುವ ಒಂದು ರೀತಿಯ ಕ್ಯಾನ್ಸರ್-ಕ್ಯಾಪೋಸಿಯ ಸಾರ್ಕೋಮಾ ಹಾಗೂ ಕಾಯಿಲೆಯ ತೀವ್ರ ರೀತಿ ಹಾಗೂ ಅಂತಿಮ ಹಂತದಲ್ಲಿ ಉಂಟಾಗುವ ತೂಕ ಕಡಿಮೆಯಾಗುವುದು ಮತ್ತು ನಿಶ್ಶಕ್ತಿ ಈ ಗುಣಲಕ್ಷಣದಲ್ಲೂ ಇದು ಉಪಯೋಗವಾಗುತ್ತದೆ.

ವಿವಿಧ ಕ್ಯಾನ್ಸರ್‌ಗಳು:
* ಮೂತ್ರಪಿಂಡ ಕ್ಯಾನ್ಸರ್
*
ಮೆದುಳಿನ ಕ್ಯಾನ್ಸರ್ ಗೆಡ್ಡೆಗಳು
* ಮಲನೋಮಾ
* ಮಯಲೋ ಫೈಬ್ರೋಸಿಸ್
* ರಕ್ತದ ಕ್ಯಾನ್ಸರ್ (ಪ್ಲಾಸ್ಮಾಸೆಲ್ ಲ್ಯೂಕೀಮಿಯಾ)
* ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್
* ಶ್ವಾಸಕೋಶದ ಕ್ಯಾನ್ಸರ್
* ಸ್ತನ ಕ್ಯಾನ್ಸರ್
ಮುಖ್ಯವಾದ ಮುನ್ನೆಚ್ಚರಿಕಾ ಕ್ರಮ ಎಂದರೆ ಗರ್ಭ ಧರಿಸುವ ವಯಸ್ಸಿನ ಮಹಿಳೆಯರು ಇದನ್ನು ಉಪಯೋಗಿಸಬಾರದು. ಹಾಗೊಮ್ಮೆ ಉಪಯೋಗಿಸುವ ಸಂದರ್ಭ ಉಂಟಾದರೂ ತಾತ್ಕಾಲಿಕವಾಗಿ ಗರ್ಭ ಧರಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪುರುಷರು ಸಹಿತ ಕಾಂಡಮ್ ಧರಿಸಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT