ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | RCB vs CSK: ಬೆಂಗಳೂರಿಗೆ ‘ಯಲ್ಲೋ ಅಲರ್ಟ್’

Published 18 ಮೇ 2024, 2:31 IST
Last Updated 18 ಮೇ 2024, 2:31 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇ ಆಫ್‌ ಕನಸು ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ‘ಹಳದಿ ಬಣ್ಣ’ದ ಸವಾಲು ಎದುರಾಗಿದೆ. ಒಂದೆಡೆ ಹವಾಮಾನ ಇಲಾಖೆಯು ನಗರದಲ್ಲಿ ಮಳೆ ಸುರಿಯುವ ಕುರಿತು ‘ಯಲ್ಲೋ ಅಲರ್ಟ್‌’ ನೀಡಿದೆ. ಇನ್ನೊಂದೆಡೆ ಋತುರಾಜ್ ಗಾಯಕವಾಡ ನಾಯಕತ್ವದ ‘ಯಲ್ಲೋ ಆರ್ಮಿ’ ಚೆನ್ನೈ ಸೂಪರ್ ಕಿಂಗ್ಸ್ ತೊಡೆ ತಟ್ಟುತ್ತಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಬೆಂಗಳೂರು ಮತ್ತು ಚೆನ್ನೈ ತಂಡಗಳು ಮುಖಾಮುಖಿಯಾಗಲಿವೆ. ಪ್ಲೇ ಆಫ್‌ ಪ್ರವೇಶಿಸಲು ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್‌ ಪ್ರವೇಶಿಸಿವೆ. ಉಳಿದಿರುವ ನಾಲ್ಕನೇ ಸ್ಥಾನ ಪಡೆಯಲು ಫಫ್ ಬಳಗ ಮತ್ತು ಋತುರಾಜ್ ಗಾಯಕವಾಡ್ ಪಡೆ ಸೆಣಸಲಿವೆ.

ಆದರೆ 13 ಪಂದ್ಯಗಳಿಂದ 14 ಅಂಕ ಹಾಗೂ ಉತ್ತಮ ರನ್‌ರೇಟ್ (+0.528) ಕೂಡ ಹೊಂದಿರುವ ಚೆನ್ನೈ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಜಯಿಸಿದರೆ ಅಥವಾ ಮಳೆ ಬಂದು ಪಂದ್ಯ ರದ್ದಾದರೂ ಚೆನ್ಣೈ ತಂಡವು ನಿರಾಯಾಸವಾಗಿ ನಾಲ್ಕರ ಘಟ್ಟ ಪ್ರವೇಶಿಸಲಿದೆ.

ಆದರೆ ಆರ್‌ಸಿಬಿಯ ಲೆಕ್ಕಾಚಾರ ಸರಳವಾಗಿಲ್ಲ. ತಂಡಕ್ಕೆ ಬರೀ ಗೆಲುವಷ್ಟೇ ಸಾಕಾಗುವುದಿಲ್ಲ. 13 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ಬೆಂಗಳೂರು ತಂಡವು ಎದುರಾಳಿಗೆ ಗುರಿಯೊಡ್ಡಿದರೆ 18 ರನ್‌ಗಳಿಗಿಂತ ಹೆಚ್ಚು ಅಂತರ ಅಥವಾ ಗುರಿ ಬೆನ್ನಟ್ಟಿದರೆ 18.1 ಓವರ್‌ಗಳಲ್ಲಿ ಗೆಲುವು ಸಾಧಿಸಬೇಕು. ಆಗ ‘ಹಾಲಿ ಚಾಂಪಿಯನ್’ ಚೆನ್ನೈ ಟೂರ್ನಿಯಿಂದ ಹೊರಬಿದ್ದು, ಆರ್‌ಸಿಬಿ ನಾಲ್ಕನೇ ಸ್ಥಾನಕ್ಕೇರುವುದು. ಅಲ್ಲದೇ ಈ ಟೂರ್ನಿಯ ಮೊಟ್ಟಮೊದಲ ಪಂದ್ಯದಲ್ಲಿ (ಮಾರ್ಚ್ 22) ಚೆನ್ನೈ ಎದುರು ಅನುಭವಿಸಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಂತೆಯೂ ಆಗಲಿದೆ. ಆದರೆ, ಒಂದೊಮ್ಮೆ ಆರ್‌ಸಿಬಿಯು ಈ ಮೇಲಿನ ಅಂತರವನ್ನು ಸಾಧಿಸದೇ ಪಂದ್ಯ ಗೆದ್ದರೂ ಪ್ರಯೋಜನವಾಗದು.

ಆದರೆ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ; ಉಭಯ ತಂಡಗಳು ಮುಖಾಮುಖಿಯಾಗಿರುವ 32 ಪಂದ್ಯಗಳಲ್ಲಿ ಚೆನ್ನೈ 21 ಬಾರಿ ಜಯಿಸಿದೆ. ಕೇವಲ 10 ಸಲ ಮಾತ್ರ ಬೆಂಗಳೂರು ಗೆದ್ದಿದೆ. ಹೋದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿಯೂ ಚೆನ್ನೈ ಜಯಿಸಿತ್ತು.

ಈ ಸಲ ಡುಪ್ಲೆಸಿ ಬಳಗವು ಈ ನಿರ್ಣಾಯಕ ಘಟ್ಟಕ್ಕೆ ಬಂದಿರುವುದೇ ವಿಶೇಷ. ಏಕೆಂದರೆ; ಟೂರ್ನಿಯ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತಿತ್ತು. ಆದರೆ ನಂತರ ಪುಟಿದೆದ್ದು ಕಳೆದ ಐದು ಪಂದ್ಯಗಳಲ್ಲಿ ಸತತ ಜಯ ಸಾಧಿಸಿದೆ. ಆದ್ದರಿಂದಲೇ ಈ ಪಂದ್ಯದಲ್ಲಿಯೂ ಜಯಿಸುವ ಭರ್ತಿ ಆತ್ಮವಿಶ್ವಾಸದಲ್ಲಿದೆ. ತಂಡದ ಪ್ರಮುಖ ಬ್ಯಾಟರ್ ವಿಲ್ ಜ್ಯಾಕ್ಸ್‌ ಇಂಗ್ಲೆಂಡ್‌ಗೆ ಮರಳಿದ್ದಾರೆ. ಆದ್ದರಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೆ ಕಣಕ್ಕಿಳಿಯಬಹುದು. ಅವರು ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಬಲ ಹೆಚ್ಚಲಿದೆ.

‘ಆರೆಂಜ್ ಕ್ಯಾಪ್‌’ ಧರಿಸಿರುವ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಕ್ಯಾಮರಾನ್ ಗ್ರೀನ್, ದಿನೇಶ್ ಕಾರ್ತಿಕ್ ಹಾಗೂ ಇಂಪ್ಯಾಕ್ಟ್‌ ಪ್ಲೇಯರ್ ಮಹಿಪಾಲ್ ಲೊಮ್ರೊರ್ ಕಳೆದ ಪಂದ್ಯಗಳಲ್ಲಿ ಜಯದ ಕಾಣಿಕೆ ನೀಡಿರುವ ಬ್ಯಾಟರ್‌ಗಳು. ವೇಗಿ ಮೊಹಮ್ಮದ್ ಸಿರಾಜ್ ಪವರ್‌ಪ್ಲೇನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿರುವುದು ತಂಡದ ಬಲ ಹೆಚ್ಚಿಸಿದೆ. ಯಶ್ ದಯಾಳ್, ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಮತ್ತು ಕರ್ಣ ಶರ್ಮಾ ಅವರ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.

ಚೆನ್ನೈ ತಂಡವು ಪ್ರಮುಖ ಬೌಲರ್‌ಗಳ ಕೊರತೆಯಲ್ಲಿಯೂ ರಾಜಸ್ಥಾನ ರಾಯಲ್ಸ್ ಎದುರು ಜಯ ಸಾಧಿಸಿತ್ತು. ತುಷಾರ್ ದೇಶಪಾಂಡೆ, ಸಿಮ್ರನ್‌ಜೀತ್ ಸಿಂಗ್ ಹಾಗೂ ರವೀಂದ್ರ ಜಡೇಜ ಅವರು ಎದುರಾಳಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಚತುರರು. ಋತುರಾಜ್, ಡೇರಿಲ್ ಮಿಚೆಲ್ ಹಾಗೂ ಶಿವಂ ದುಬೆ ಅವರು ಅಬ್ಬರಿಸುವುದನ್ನು ಮುಂದುವರಿಸಿದರೆ ಬೆಂಗಳೂರು ತಂಡಕ್ಕೆ ಕಷ್ಟವಾಗಬಹುದು.

ಬೆಂಗಳೂರು ಮೂಲದ ರಚಿನ್ ರವೀಂದ್ರ ಲಯಕ್ಕೆ ಮರಳಿದರೆ ತಂಡಕ್ಕೆ ಉತ್ತಮ ಆರಂಭ ಸಿಗಬಹುದು.

ಧೋನಿಗೆ ಬೆಂಗಳೂರಲ್ಲಿ ಕೊನೆಯ ಪಂದ್ಯ?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್‌ಕೀಪರ್–ಬ್ಯಾಟರ್ ಮಹೇಂದ್ರಸಿಂಗ್ ಧೋನಿ ಅವರು ಬೆಂಗಳೂರಿನಲ್ಲಿ ಆಡಲಿರುವ ಕೊನೆಯ ಪಂದ್ಯ ಇದಾಗಲಿದೆ ಎಂದು ಹೇಳಲಾಗಿದೆ.

42 ವರ್ಷದ ಧೋನಿ ಅವರು ಚೆನ್ನೈ ತಂಡಕ್ಕೆ ಐದು ಸಲ ಪ್ರಶಸ್ತಿ ಗೆದ್ದುಕೊಟ್ಟ ನಾಯಕ. 2008ರಿಂದಲೂ ಅವರು ಈ ತಂಡದ ನಾಯಕತ್ವ ವಹಿಸಿದ್ದರು. ಈ ವರ್ಷ ಋತುರಾಜ್ ಗಾಯಕವಾಡ ಅವರಿಗೆ ನಾಯಕತ್ವದ ಹೊಣೆಯನ್ನು ಬಿಟ್ಟುಕೊಟ್ಟಿದ್ದಾರೆ. ಧೋನಿಯ ಮಾರ್ಗದರ್ಶನದಲ್ಲಿ ಋತುರಾಜ್ ಕೂಡ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತ ತಂಡವು 2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗಲೂ ನಾಯಕರಾಗಿದ್ದ ಧೋನಿಯವರಿಗೆ ದೇಶದ ತುಂಬ ಅಭಿಮಾನಿ ಬಳಗವಿದೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಇದೀಗ ಐಪಿಎಲ್‌ ಗೂ ವಿದಾಯ ಹೇಳುವ ಸಿದ್ಧತೆಯಲ್ಲಿದ್ದಾರೆ. ಆದ್ದರಿಂದಲೇ ಅವರ ಆಟ ನೋಡಲು ಅಭಿಮಾನಿಗಳು ಚೆನ್ನೈ ಪಂದ್ಯ ನಡೆದ ಮೈದಾನಗಳಲ್ಲಿ ಕಿಕ್ಕಿರಿದು ಸೇರುತ್ತಿದ್ದಾರೆ. ಈ ಟೂರ್ನಿಯಲ್ಲಿ ಅವರು 10 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅದೂ ಕೊನೆಯ ಹಂತದಲ್ಲಿ ಕೆಲವೇ ಎಸೆತಗಳನ್ನು ಎದುರಿಸಿ ಸಿಕ್ಸರ್‌ಗಳನ್ನು ಸಿಡಿಸಿ ರಂಜಿಸಿದ್ದಾರೆ. 226ರ ಸ್ಟ್ರೈಕ್‌ರೇಟ್‌ನಲ್ಲಿ 136 ರನ್‌ ಗಳಿಸಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ನೆಟ್‌ ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT