ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಆರ್‌ಸಿಬಿ ಮತ್ತು ಕನ್ನಡದ ಸ್ಥಾನಮಾನ

ಕರ್ನಾಟಕದ ಕ್ರಿಕೆಟ್‌ಪ್ರೇಮಿಗಳ ಅಭಿಮಾನಕ್ಕೆ ಸಾಟಿ ಉಂಟೇ?
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

‘ಇದು, ಆರ್‌ಸಿಬಿಯ ಹೊಸ ಅಧ್ಯಾಯ’. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ‘ಅನ್‌ಬಾಕ್ಸ್‌’ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಕನ್ನಡದಲ್ಲಿ ಹೇಳಿದ ಮಾತುಗಳಿವು. ಅಲ್ಲಿದ್ದ 25 ಸಾವಿರಕ್ಕೂ ಹೆಚ್ಚು ಮಂದಿ ಸಂಭ್ರಮಿಸಿದರು. ಸತತ 16 ವರ್ಷಗಳಿಂದ ಒಂದೂ ಪ್ರಶಸ್ತಿ ಗೆಲ್ಲದಿದ್ದರೂ ಆರ್‌ಸಿಬಿ (ಪುರುಷರ) ತಂಡಕ್ಕೆ ಬೆಚ್ಚನೆಯ ಪ್ರೀತಿ ತೋರುವ ಅಭಿಮಾನಿಗಳಿಗೆ ಸ್ವರ್ಗ ಮೂರೇ ಗೇಣು. 

ಸಾಮಾಜಿಕ ಜಾಲತಾಣಗಳಲ್ಲಿಯೂ ಲಕ್ಷೋಪಲಕ್ಷ ವೀಕ್ಷಣೆಗಳು, ಲೈಕ್‌ಗಳ ಪ್ರವಾಹ ಹರಿಯಿತು. ಇಷ್ಟು ವರ್ಷಗಳಿಂದ ತಂಡದ ಹೆಸರಿನಲ್ಲಿದ್ದ ಬ್ಯಾಂಗಲೋರ್ (ಇಂಗ್ಲಿಷ್ ಬಳಕೆ) ಪದವನ್ನು ಬೆಂಗಳೂರು ಎಂದೂ ಆರ್‌ಸಿಬಿಯು ಇದೇ ಸಂದರ್ಭದಲ್ಲಿ ಬದಲಿಸಿತು. ಅಭಿಮಾನಿಗಳ ಬಳಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶ ಅದರ ಹಿಂದೆ ಇದೆ. ಅಭಿಮಾನಿ ವಲಯ (ಫ್ಯಾನ್‌ ಬೇಸ್) ಹೆಚ್ಚಿದಷ್ಟೂ ಫ್ರ್ಯಾಂಚೈಸಿಯ ಬ್ರ್ಯಾಂಡ್‌ ಮೌಲ್ಯ ಬೆಳೆಯುತ್ತದೆ. ಅದರೊಂದಿಗೆ ಆದಾಯವೂ ಏರುಮುಖ ಆಗುತ್ತದೆ. ಐಪಿಎಲ್ ಟೂರ್ನಿಯೇ ‘ಮುಕ್ತ ಮಾರುಕಟ್ಟೆ’ ಆಗಿರುವಾಗ ಇಂತಹ ಕಾರ್ಯಕ್ರಮಗಳು ಸಹಜ.

ಆದರೆ ನಾಡಿನ ಭಾಷೆ ಮತ್ತು ಭಾವನಾತ್ಮಕ ಅಂಶಗಳನ್ನು ಬಂಡವಾಳ ಮಾಡಿಕೊಳ್ಳುವ ಫ್ರ್ಯಾಂಚೈಸಿಯು ರಾಜ್ಯದ ಅರ್ಹ ಆಟಗಾರರಿಗೆ ಸೂಕ್ತ ರೀತಿಯಲ್ಲಿ ಅವಕಾಶ ನೀಡುವುದಿಲ್ಲ ಏಕೆ ಎಂಬ ಪ್ರಶ್ನೆ ಸದಾ ಕಾಡುತ್ತದೆ. ಈ ಬಾರಿಯ ಆವೃತ್ತಿಯಲ್ಲಿ ಆರ್‌ಸಿಬಿಯು ಇದುವರೆಗೆ ಐದು ಪಂದ್ಯಗಳನ್ನು ಆಡಿದೆ. ಅದರಲ್ಲಿ ನಾಲ್ಕರಲ್ಲಿ ಸೋತಿದೆ. ಇದರಿಂದಾಗಿ ತಂಡದ ಕಟ್ಟಾ ಅಭಿಮಾನಿಗಳೂ ಕರ್ನಾಟಕದ ಮಾಜಿ ಕ್ರಿಕೆಟಿಗರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆ ಕೇಳುತ್ತಿದ್ದಾರೆ.

‘ಎಷ್ಟು ಸೋತರೂ ಅಭಿಮಾನಿಗಳ ಪ್ರೀತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದರೊಂದಿಗೆ ಬ್ರ್ಯಾಂಡ್‌ ಮೌಲ್ಯವೂ ಏರುತ್ತಿದೆ’ ಎಂಬ ಮನೋಭಾವ ಆಡಳಿತ ಮಂಡಳಿಯವರದ್ದಾಗಿರಬಹುದೇನೋ? ಇನ್ನೊಂದೆಡೆ, ಒಂದು ತಂಡದಲ್ಲಿ ಇಷ್ಟೇ ಸಂಖ್ಯೆಯ ವಿದೇಶಿ ಆಟಗಾರರು ಇರಬೇಕೆಂಬ ನಿಯಮ ಇದೆ. ಆದರೆ ಫ್ರ್ಯಾಂಚೈಸಿ ಪ್ರತಿನಿಧಿಸುವ ನಗರ ಅಥವಾ ರಾಜ್ಯದ ಸ್ಥಳೀಯ ಆಟಗಾರರನ್ನು ತೆಗೆದುಕೊಳ್ಳಲೇಬೇಕೆಂಬ ನಿಯಮವಿಲ್ಲದಿರುವುದೂ ಕಾರಣವೇ? ಆದರೂ ರಾಜ್ಯದ ಆಟಗಾರರು ತಂಡದಲ್ಲಿರಬೇಕೆಂಬ ಕೂಗು ಹೆಚ್ಚುತ್ತಿರುವುದು ಏಕೆ?

ಇವತ್ತು ಐಪಿಎಲ್‌ನಲ್ಲಿರುವ ಹತ್ತು ತಂಡಗಳ ಪೈಕಿ ಬ್ರ್ಯಾಂಡ್‌ ಮೌಲ್ಯದ ಪಟ್ಟಿಯಲ್ಲಿ ಆರ್‌ಸಿಬಿಗೆ ನಾಲ್ಕನೇ ಸ್ಥಾನವಿದೆ. ಎರಡು ವರ್ಷಗಳ ಹಿಂದಷ್ಟೇ ಆರನೇ ಸ್ಥಾನದಲ್ಲಿತ್ತು. ₹ 582 ಕೋಟಿ ಮೌಲ್ಯದ ತಂಡ ಇದಾಗಿದೆ. ತಲಾ ಐದು ಬಾರಿ ಪ್ರಶಸ್ತಿ ಜಯಿಸಿರುವ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಎರಡು ಸಲದ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮೊದಲ ಮೂರು ಸ್ಥಾನಗಳಲ್ಲಿವೆ. 

ಸೋಲು, ಗೆಲುವುಗಳನ್ನು ಬದಿಗಿಟ್ಟು ನೋಡಿದರೆ, ತಂಡದ  ಮೌಲ್ಯ ಹೆಚ್ಚಾಗಲು ಕರ್ನಾಟಕದ ಆಟಗಾರರು ಹಾಕಿದ ಅಡಿಪಾಯವೇ ಕಾರಣ. 2008ರಲ್ಲಿ ಐಪಿಎಲ್ ಆರಂಭವಾದಾಗ ಆರ್‌ಸಿಬಿಗೆ ರಾಹುಲ್ ದ್ರಾವಿಡ್ ನಾಯಕತ್ವ ವಹಿಸಿದ್ದರು. ಆ ತಂಡದಲ್ಲಿ ಅನಿಲ್ ಕುಂಬ್ಳೆ, ಸುನಿಲ್ ಜೋಶಿ, ವಿನಯಕುಮಾರ್, ಬಾಲಚಂದ್ರ ಅಖಿಲ್, ಜೆ. ಅರುಣ್ ಕುಮಾರ್, ದೇವರಾಜ್ ಪಾಟೀಲ ಹಾಗೂ ಭರತ್ ಚಿಪ್ಲಿ ಅವರಿದ್ದರು. 2009ರಲ್ಲಿ ಕೆಲವು ಪಂದ್ಯಗಳಿಗೆ ಕೆವಿನ್ ಪೀಟರ್ಸನ್ ನಾಯಕರಾಗಿದ್ದರು. ನಂತರ ಅದೇ ಆವೃತ್ತಿಯಲ್ಲಿ ಕುಂಬ್ಳೆ ನಾಯಕತ್ವ ವಹಿಸಿಕೊಂಡರು. ದ್ರಾವಿಡ್, ವಿನಯಕುಮಾರ್, ರಾಬಿನ್ ಉತ್ತಪ್ಪ ಹಾಗೂ ಮನೀಷ್ ಪಾಂಡೆ ತಂಡದಲ್ಲಿದ್ದ ಪ್ರಮುಖರು. ಆ ವರ್ಷ ಮನೀಷ್, ಐಪಿಎಲ್‌ನಲ್ಲಿ ಶತಕ ಹೊಡೆದ ಪ್ರಥಮ ಭಾರತೀಯ ಆಟಗಾರ ಎನಿಸಿಕೊಂಡರು. ತಂಡವು ಫೈನಲ್ ಕೂಡ ಪ್ರವೇಶಿಸಿತ್ತು. ಇದಾದ ನಂತರ ಆರ್‌ಸಿಬಿ 2011ರಲ್ಲಿ (ಡೇನಿಯಲ್‌ ವೆಟೋರಿ ನಾಯಕತ್ವ) ಫೈನಲ್ ತಲುಪಿತ್ತು. 2016ರಲ್ಲಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿತ್ತು. ಆಗ ಕೊಹ್ಲಿ ನಾಯಕರಾಗಿದ್ದರು.

ಕನ್ನಡನಾಡಿನ ಹೊಸ ತಲೆಮಾರಿನ ಆಟಗಾರರಾದ ಕೆ.ಎಲ್. ರಾಹುಲ್, ಕರುಣ್ ನಾಯರ್, ಅಪ್ಪಣ್ಣ,
ಎಸ್. ಅರವಿಂದ್, ಅಭಿಮನ್ಯು ಮಿಥುನ್, ಸ್ಟುವರ್ಟ್ ಬಿನ್ನಿ ಅವರೆಲ್ಲರೂ ಆರ್‌ಸಿಬಿಯಲ್ಲಿ ಕೆಲವು ವರ್ಷ ಆಡಿದ್ದರು. 2014ರ ತಂಡದಲ್ಲಿ ಕರ್ನಾಟಕದ ಒಬ್ಬರೂ ಇರಲಿಲ್ಲ. 2016, 2017ರಲ್ಲಿ ರಾಹುಲ್, ಬಿನ್ನಿ ಮತ್ತು ಅರವಿಂದ್ ಆಡಿದ್ದರು.  ಆದರೆ 2018ರಿಂದ  ಈಚೆಗೆ ಕರ್ನಾಟಕದ ಆಟಗಾರರು ಅಂತಿಮ ಹನ್ನೊಂದರಲ್ಲಿ ಆಡಿದ್ದು ಕಡಿಮೆ. ಪವನ್ ದೇಶಪಾಂಡೆ, ಅನಿರುದ್ಧ ಜೋಶಿ, ಅನೀಶ್ವರ್ ಗೌತಮ್ ಹಾಗೂ ಲವನೀತ್ ಸಿಸೋಡಿಯಾ ಬೆಂಚ್ ಕಾದು ಹೋದರು. 2019ರಲ್ಲಿ ಬಂದ ದೇವದತ್ತ ಪಡಿಕ್ಕಲ್ ಎರಡು ವರ್ಷ ಮಿಂಚಿದರು. ನಂತರ ಅವರು ಬೇರೆ ತಂಡಕ್ಕೆ ಹೋದರು. ಅವರನ್ನು ಉಳಿಸಿಕೊಳ್ಳಲಿಲ್ಲ.
ಹೋದ ವರ್ಷ ವೇಗಿ ವೈಶಾಖ ವಿಜಯಕುಮಾರ್ ಸ್ಥಾನ ಪಡೆದರು. ಕೆಲವು ಪಂದ್ಯಗಳಲ್ಲಿ ಮಿಂಚಿದರು. ಈ ಬಾರಿಯ ಟೂರ್ನಿಯ ಒಂದು ಪಂದ್ಯದಲ್ಲಿ ಇಂಪ್ಯಾಕ್ಟ್‌ ಪ್ಲೇಯರ್ ಆಗಿ ಉತ್ತಮ ಬೌಲಿಂಗ್ ಮಾಡಿದ್ದ ವೈಶಾಖ ಅವರಿಗೆ ನಂತರದ ಎರಡೂ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ. ಅವರೊಂದಿಗೆ ಸ್ಥಾನ ಪಡೆದ ಮನೋಜ್ ಬಾಂಢಗೆ ಇನ್ನೂ ಬೆಂಚ್‌ನಲ್ಲಿಯೇ ಇದ್ದಾರೆ. 

ಆರ್‌ಸಿಬಿಯ ಈ ಬಗೆಯ ಧೋರಣೆಯು ಕರ್ನಾಟಕದ ಆಟಗಾರರಿಗಷ್ಟೇ ಸೀಮಿತ ಅಲ್ಲ. ಬೇರೆ ಆಟಗಾರರೊಂದಿಗೂ ಅದರ ಧೋರಣೆ ಹೀಗೇ ಇದೆ. ಐಪಿಎಲ್‌ನ ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಯಜುವೇಂದ್ರ ಚಾಹಲ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಇದಕ್ಕೊಂದು ಪ್ರಮುಖ ನಿದರ್ಶನ. ಇತ್ತೀಚಿನ ಎರಡು–ಮೂರು ವರ್ಷಗಳಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಆಟಗಾರರನ್ನು ಸೆಳೆಯುವಲ್ಲಿಯೂ ಎಡವುತ್ತಿರುವುದು ಎದ್ದು ಕಾಣುತ್ತಿದೆ. ಆರಂಭದಿಂದಲೂ ತಂಡವು ಸ್ವದೇಶ ಮತ್ತು ವಿದೇಶದ ಖ್ಯಾತನಾಮ ಆಟಗಾರರನ್ನು ತಂಡದಲ್ಲಿ ಆಡಿಸಿದೆ. ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್‌ ಅವರಂತಹ ಆಟಗಾರರು ತಂಡದ ಮೌಲ್ಯ ಹೆಚ್ಚಿಸಿದ್ದಾರೆ. ಕರ್ನಾಟಕದ ಅಭಿಮಾನಿಗಳು ಅವರನ್ನೂ ಮನದುಂಬಿ ಪ್ರೀತಿಸಿದ್ದಾರೆ. ಆದರೆ ಇದೀಗ ಅವರಷ್ಟೇ ಉತ್ತಮ ಆಟಗಾರರು ಲಭ್ಯರಿದ್ದರೂ ಬಲಿಷ್ಠ ತಂಡವನ್ನು ಕಟ್ಟುತ್ತಿಲ್ಲ ಏಕೆ ಎಂದೂ ಜನರು ಪ್ರಶ್ನಿಸುವಂತಾಗಿದೆ. ಈ ವರ್ಷದ ತಂಡವನ್ನೇ ನೋಡಿ. ದುಬಾರಿ ಮೌಲ್ಯ ಪಡೆದು ಬಂದ ವೇಗಿ ಅಲ್ಜರಿ ಜೋಸೆಫ್, ರೀಸ್ ಟಾಪ್ಲಿ, ಯಶ್ ದಯಾಳ್, ಕ್ಯಾಮರಾನ್ ಗ್ರೀನ್ ಹಾಗೂ ಸ್ಪಿನ್ನರ್ ಮಯಂಕ್ ದಾಗರ್ ಅವರಿಗೆ 180 ರನ್‌ಗಳಿಗಿಂತ ಹೆಚ್ಚಿನ ಮೊತ್ತವನ್ನು ರಕ್ಷಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. 

ಬ್ಯಾಟಿಂಗ್‌ನಲ್ಲಿಯೂ ಕೊಹ್ಲಿ ಏಕಾಂಗಿಯಾಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಬೌಲರ್‌ಗಳ ಚಳಿ ಬಿಡಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಮಿಂಚುತ್ತಿದ್ದ ಫಫ್ ಡುಪ್ಲೆಸಿ, ಯುವ ಆಟಗಾರರಾದ ರಜತ್ ಪಾಟೀದಾರ್, ಅನುಜ್ ರಾವತ್ ಅವರು ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ.  ಒಂದು ಪಂದ್ಯದಲ್ಲಿ ರನ್ ಗಳಿಸಿದರೆ ಇನ್ನೊಂದರಲ್ಲಿ ವಿಫಲರಾಗುತ್ತಾರೆ. ಕೊಹ್ಲಿಗೆ ಈಗ ಎಬಿಡಿ, ಗೇಲ್ ಅವರಂತಹ ಬ್ಯಾಟರ್‌ಗಳ ಬೆಂಬಲವೂ ಇಲ್ಲ, ಅನಿಲ್ ಕುಂಬ್ಳೆ ಅವರಂತಹ ‘ಮ್ಯಾಚ್ ವಿನ್ನಿಂಗ್’ ಬೌಲರ್‌ ಬಲವೂ ಇಲ್ಲ. ಆದರೆ ಕಳೆದ 17 ವರ್ಷಗಳಿಂದ ತಂಡದೊಂದಿಗೆ ಬೆಳೆದಿರುವ ವಿರಾಟ್ ಅವರ ನಂತರ ಆರ್‌ಸಿಬಿಯ ಸ್ಥಿತಿಗತಿ ಏನು ಎಂಬ ಪ್ರಶ್ನೆಯೂ ಈಗ ಮೂಡಿದೆ.

35 ವರ್ಷದ ವಿರಾಟ್ ಅವರು ಹೆಚ್ಚೆಂದರೆ ಇನ್ನೂ ನಾಲ್ಕೈದು ವರ್ಷ ಆಡಬಹುದು. ನಂತರ ಯಾರು ಎಂಬುದಕ್ಕೆ ಉತ್ತರ ಕಂಡುಕೊಳ್ಳಲು ಕೂಡ ಇದು ಸಕಾಲ. ಈ ಸವಾಲನ್ನು ಗ್ರಹಿಸಿರುವ ಫ್ರ್ಯಾಂಚೈಸಿಯು ಬೆಂಗಳೂರಿನಿಂದಾಚೆ ಗ್ರಾಮಾಂತರ ಪ್ರದೇಶಗಳ ಅಭಿಮಾನಿಗಳತ್ತ ಗಮನಹರಿಸುತ್ತಿದೆ. ಹಳ್ಳಿಹಳ್ಳಿಗೂ ತಲುಪಲು ಕನ್ನಡದತ್ತ ವಾಲಿದೆ. ಹಾಗೆಯೇ ತಂಡದಲ್ಲಿ ರಾಜ್ಯದ ಪ್ರತಿಭೆಗಳಿಗೆ ಅವಕಾಶ ನೀಡಿ, ಕಪ್ ಗೆಲ್ಲುವತ್ತ  ಹೆಜ್ಜೆಯಿಟ್ಟರೆ ರಾಜ್ಯದ ಅಭಿಮಾನಿಗಳ ಪ್ರೀತಿಯ ಋಣ ತೀರಿಸಬಹುದೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT