ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜೆತನ ಪುರುಷರೂ ಕಾರಣ

Last Updated 30 ನವೆಂಬರ್ 2012, 20:33 IST
ಅಕ್ಷರ ಗಾತ್ರ

ಮಕ್ಕಳಾಗದೇ ಇರುವುದಕ್ಕೆ ಮಹಿಳೆಯರಷ್ಟೇ ಕಾರಣರಲ್ಲ, ಪುರುಷರಲ್ಲೂ ಕೊರತೆ ಇರಬಹುದು. ಈ ಕಾರಣಕ್ಕಾಗಿ ಮಗು ಬೇಕು ಎಂದು ದಂಪತಿ ಬಂದಾಗ ಮೊದಲು ಗಂಡನಿಗೆ ವೀರ್ಯ ಪರೀಕ್ಷೆ ಮಾಡಿಸಬೇಕು. ಪುರುಷರಿಗೆ ವೀರ್ಯ ಪರೀಕ್ಷೆಯಲ್ಲಿ ಎಲ್ಲವೂ ಸರಿಯಾಗಿದ್ದರೆ ಅವರ ಕಡೆಯಿಂದ ಎಲ್ಲವೂ ಸರಿಯಾದಂತೆಯೇ. ಆದರೆ ಹೆಣ್ಣು ಮಕ್ಕಳಿಗೆ ಹಾಗಲ್ಲ.

ಪ್ರತಿ ತಿಂಗಳೂ ಮುಟ್ಟು ಸರಿಯಾಗಿ ಆಗುತ್ತಿದೆಯೇ, ಅಂಡಾಣು ಸರಿಯಾಗಿ ಬಿಡುಗಡೆಯಾಗುತ್ತಿದೆಯೇ,  ಡಿಂಭ ನಾಳಗಳು ತೆರೆದಿವೆಯೇ... ಹೀಗೆ ಒಂದೊಂದೇ ಪರೀಕ್ಷೆಗಳನ್ನು ನಿಧಾನವಾಗಿ ಒಂದಾದ ನಂತರ ಒಂದರಂತೆ ಅವಶ್ಯಕತೆಗೆ ತಕ್ಕಂತೆ ಮಾಡಬೇಕಾಗುತ್ತದೆ.

ಬಹಳಷ್ಟು ಪುರುಷರು ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸುವುದೆಂದರೆ ಆತ್ಮಗೌರವಕ್ಕೆ ಧಕ್ಕೆಯಾದಂತೆ ಎಂದುಭಾವಿಸುತ್ತಾರೆ. ಬಹಳಷ್ಟು ವೇಳೆ ಗಂಡನ ತಾಯಿಯೇ ಇದಕ್ಕೆ ಒಪ್ಪುವುದಿಲ್ಲ. `ನನ್ನ ಮಗನಿಗೇನು ಕಮ್ಮಿ. ರಾಜನ ಥರಾ ಕೆಂಪುಕೆಂಪಾಗಿ ಇದಾನೆ' ಎಂದು ಸಮರ್ಥಿಸಿಕೊಳ್ಳುತ್ತಾರೆ.

ರಾಧಾ ಎಂಬಾಕೆ ಹೀಗೇ ವೈದ್ಯರೊಬ್ಬರ ಬಳಿ ಹೋದಾಗ ಅವರು ಗಂಡನಿಗೆ ಪರೀಕ್ಷೆ ಮಾಡಿಸಲು ಹೇಳಿದರು. ಆಗ ಆತ `ಕಳೆದ ತಿಂಗಳಷ್ಟೇ ಪರೀಕ್ಷೆ ಮಾಡಿಸಿದ್ದೇನೆ, ಎಲ್ಲವೂ ಸರಿಯಾಗಿದೆ, ದಯವಿಟ್ಟು ಹೆಂಡತಿಗೆ ಪರೀಕ್ಷೆ ಮಾಡಿ' ಎಂದು ಕೇಳಿಕೊಂಡ. ಈ ಮಾತನ್ನು ನಂಬಿದ ವೈದ್ಯರು, ಹೆಂಡತಿಗೆ ಔಷಧಿ ಬರೆದುಕೊಟ್ಟು `ಫಾಲಿಕ್ಯುಲಾರ್ ಸ್ಟಡಿ'ಯ ಸ್ಕ್ಯಾನಿಂಗ್ ಮಾಡಿಸಿ, ಹಾರ್ಮೋನ್ ಇಂಜೆಕ್ಷನ್‌ಗಳನ್ನು ಕೊಟ್ಟರು.

ಹೀಗೇ ಮೂರು ತಿಂಗಳು ನಡೆಯಿತು. ಆದರೂ ಮಗುವಾಗಲಿಲ್ಲ ಎಂದು ಬೇಸರಿಸಿ ಆ ದಂಪತಿ ನನ್ನಲ್ಲಿ ಬಂದರು. ಗಂಡ ಮತ್ತೆ ಪರೀಕ್ಷೆ ಮಾಡಿಸದೇ ನಾನು ಚಿಕಿತ್ಸೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಮೇಲೆ ಆತ ಪರೀಕ್ಷೆ ಮಾಸಿಕೊಂಡು ಬಂದ.

ನೋಡಿದರೆ ಆತನ ವೀರ್ಯದಲ್ಲಿ ವೀರ್ಯಾಣುಗಳೇ ಇರಲಿಲ್ಲ. ಪಾಪ ರಾಧಾಗೆ ಮೂರು ತಿಂಗಳು ಮಾಡಿದ ಚಿಕಿತ್ಸೆ ವ್ಯರ್ಥವಾಗಿತ್ತು. ವೀರ್ಯ ಪರೀಕ್ಷೆ ಮಾಡಿಸಿದಾಗಷ್ಟೇ ಸತ್ಯಾಸತ್ಯತೆ ತಿಳಿಯುತ್ತದೆ. ಮುಖ ನೋಡಿ ಚೆನ್ನಾಗಿದ್ದಾನೆ ಎಂದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದಥವಲ್ಲ!

ಪುರುಷರಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ತೊಂದರೆ ಎಂದರೆ ವೀರ್ಯಾಣುಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇರುವುದು. ಬಹಳಷ್ಟು ವೇಳೆ ಇದಕ್ಕೆ ಕಾರಣ `ತಿಳಿಯದು'. ಹಾಗಾಗಿ ವೈದ್ಯರು ಹಾಗೂ ರೋಗಿಗಳಿಗೆ ಇದು ತಲೆನೋವಾಗಿ ಕಾಡುತ್ತದೆ. ಕೆಲವು ಕಾರಣಗಳು ಹೀಗಿರುತ್ತವೆ:

ವ್ಯಾರಿಕೋಸಿಲ್: ವೃಷಣ ಚೀಲದಲ್ಲಿ (ಸಾಮಾನ್ಯವಾಗಿ ಎಡಗಡೆ) ವ್ಯಾರಿಕೋಸ್ ವೆಯ್ನ ಊದಿಕೊಳ್ಳುವುದೇ ವ್ಯಾರಿಕೋಸೀಲ್. ಇದರಿಂದ ಸಾಮಾನ್ಯವಾಗಿ ನೋವು ಉಂಟಾಗುವುದಿಲ್ಲ. ಅಪಧಮನಿಗಳಲ್ಲಿ ಇರುವ ವಾಲ್ವ್‌ಗಳು ದುರ್ಬಲವಾಗಿರುವುದರಿಂದ ರಕ್ತದ ಹೊಳೆ ಅಲ್ಲೇ ನಿಂತು ಈ ಸ್ಥಿತಿಗೆ ಕಾರಣವಾಗುತ್ತವೆ.

ಬಹುಶಃ ಇದರಿಂದ ವೃಷಣಗಳಲ್ಲಿ ಉಷ್ಣತೆ ಹೆಚ್ಚಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು, ಬಹಳಷ್ಟು ವೇಳೆ ಶಸ್ತ್ರಚಿಕಿತ್ಸೆಯಿಂದ ವ್ಯಾರಿಕೋಸೀಲ್ ಸರಿಪಡಿಸಿದರೂ ಏನೂ ಪ್ರಯೋಜನವಾಗದು.

ದಾರಿ ಮುಚ್ಚುವಿಕೆ
ಶಿಶ್ನ- ವೃಷಣಗಳಿಗೆ ಮಧ್ಯೆ ಇರುವ ಮಾರ್ಗ ಮುಚ್ಚಿಹೋಗಿದ್ದರೆ ಆಗ ವೀರ್ಯದಲ್ಲಿ ವೀರ್ಯಾಣುಗಳೇ ಇರುವುದಿಲ್ಲ. ಈ ಮುಚ್ಚುವಿಕೆಯು ಸೋಂಕುಗಳು (ಗೊನೋರಿಯಾ, ಕ್ಲಾಮಿಡಿಯಾ, ಫಿಲೇರಿಯೋಸಿಸ್, ಕ್ಷಯರೋಗ) ಅಥವಾ ಹರ್ನಿಯಾ, ಹೈಡ್ರೋಸೀಲ್‌ಗಾಗಿ ಮಾಡುವ ಶಸ್ತ್ರಚಿಕಿತ್ಸೆಗಳಿಂದ ಉಂಟಾಗಿರಬಹುದು.

ಇದಕ್ಕಾಗಿ ಶಸ್ತ್ರಚಿಕಿತ್ಸೆ ನಡೆಸಿದರೂ ಉತ್ತಮ ಫಲಿತಾಂಶ ದೊರಕದೇ ಹೋಗಬಹುದು. ಮೊದಲ ಬಾರಿಗೆ ಆ ಜಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದಾಗ ಯಶಸ್ವಿಯಾಗಬಹುದು, ಮತ್ತೆ ಪುನರಾವರ್ತನೆಯಾಗಿ ಆಗ ಮಾಡಿದರೆ ಲಾಭವೇನೂ ಆಗುವುದಿಲ್ಲ.

ವೀರ್ಯ ನಾಳ ಇಲ್ಲದಿರುವಿಕೆ
ಕೆಲವರಿಗೆ ಹುಟ್ಟಿನಿಂದಲೇ ವೀರ್ಯನಾಳ ಇರುವುದಿಲ್ಲ. ಹಿಂದೆ ಸಾಂಪ್ರದಾಯಿಕವಾಗಿ ಚಿಕಿತ್ಸೆ ನೀಡಿ, ಸ್ಪರ್ಮಾಟೋಸೀಲ್ ಎಂಬ ಪುಟ್ಟ ಚೀಲವನ್ನು ಹೆಣೆದು ಅಲ್ಲಿ ವೀರ್ಯಾಣುಗಳು ಕಲೆಯುವಂತೆ ಮಾಡಿ, ಅಲ್ಲಿಂದ ವೀರ್ಯಾಣುಗಳನ್ನು ತೆಗೆದು ಕೃತಕ ಗರ್ಭಧಾರಣೆ ಮಾಡುತ್ತಿದ್ದರು. ಆದರೆ ಗರ್ಭ ಧರಿಸುವ ಅವಕಾಶ ಬಹಳ ಅಪರೂಪವಾಗಿ ಇರುತ್ತಿತ್ತು. ಹೀಗಾಗಿ ಉಖಅ ಎಂಬ ವಿಧಾನದಿಂದ ಐ್ಖಊ ಮೂಲಕ ಸಂತಾನ ಪಡೆಯಬಹುದಾಗಿದೆ.

ಒಳಗಿನಿಂದಲೇ ವಿರೋಧ
ಪ್ರಕೃತಿಯ ಆಟಗಳಲ್ಲಿ ಇದೂ ಒಂದು. ಪುರುಷರು ತಮ್ಮ ವೀರ್ಯಾಣುಗಳಿಗೆ ತಮ್ಮಳಗೇ ಆ್ಯಂಟಿಬಾಡೀಸ್ ಹೊಂದಿರುವುದು, ಸ್ತ್ರೀಯರು ತಮ್ಮ ಪತಿಯ ವೀರ್ಯಾಣುಗಳ ವಿರುದ್ಧ ಆ್ಯಂಟಿಬಾಡೀಸ್ ಬೆಳೆಸಿಕೊಳ್ಳುವುದು. ಕೆಲವರಲ್ಲಿ ಹೆಂಡತಿಯ ಗರ್ಭಗೊರಳಿನ ದ್ರವವು ವೀರ್ಯಾಣುಗಳನ್ನು ಶತ್ರುಗಳೋ ಎಂಬಂತೆ ಕೊಂದುಬಿಡುತ್ತದೆ.

ಸ್ಖಲನದ ಸಮಸ್ಯೆ
ಕೆಲವರಿಗೆ ಪ್ರೀತಿ ಮಾಡಲಾಗದೆ ತಂದೆಯಾಗಲು ಸಾಧ್ಯವಾಗುವುದಿಲ್ಲ, ಕೆಲವರಿಗೆ ನಪುಂಸಕತ್ವದ ತೊಂದರೆಯಿಂದ ಸ್ಖಲನ ಸಾಧ್ಯವಾಗುವುದಿಲ್ಲ. ಹಾರ್ಮೋನುಗಳ ತೊಂದರೆಗಳು, ಮಧುಮೇಹ, ನರದ ತೊಂದರೆಗಳಿಂದಾಗಿ ಶಿಶ್ನಕ್ಕೆ ಸರಿಯಾಗಿ ರಕ್ತ ಪರಿಚಲನೆಯಾಗದೆ ಸ್ಖಲನದ ತೊಂದರೆ ಶೇ 50ರಷ್ಟು ಜನರಲ್ಲಿ ಕಂಡುಬರುತ್ತದೆ.

ಇಳಿಯದ ವೃಷಣಗಳು
ಕೆಲವು ಮಕ್ಕಳಿಗೆ ಹುಟ್ಟುವಾಗಲೇ ವೃಷಣಗಳು ಕೆಳಗೆ ಇಳಿದಿರುವುದಿಲ್ಲ. ಸಾಮಾನ್ಯವಾಗಿ ಇದು ಮಗುವಿಗೆ ಎರಡು ವರ್ಷವಾಗುವುದರೊಳಗೆ ಸರಿಹೋಗುತ್ತದೆ. ಹಾಗಾಗದಿದ್ದಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ವೃಷಣಗಳು ಉದರದ ಗುಹೆಯೊಳಗೇ ಉಳಿದು, ಆ ಶಾಖಕ್ಕೆ ಕ್ಯಾನ್ಸರ್‌ಗೂ ತುತ್ತಾಗಬಹುದು.

ಹಾರ್ಮೋನುಗಳ ಅಸಮತೋಲನ
ಮಹಿಳೆಯರಲ್ಲಿ ಇದ್ದಂತೆ ಪುರುಷರಲ್ಲೂ ಹಾರ್ಮೋನುಗಳ ಅಸಮತೋಲನ ಕಂಡುಬರುತ್ತದೆ. ಕೆಲವೊಮ್ಮೆ ಪಿಟ್ಯುಟರಿ ಗ್ರಂಥಿಯ ಕಾರ್ಯವೈಖರಿಯಿಂದಾಗಿ ಪ್ರೊಲಾಕ್ಟಿನ್ ಹೆಚ್ಚು ಸ್ರಾವವಾಗುತ್ತದೆ. ಇದರಿಂದ ಲೈಂಗಿಕಾಸಕ್ತಿ ಕುಂದಬಹುದು ಅಥವಾ ನಪುಂಸಕತ್ವ ಉಂಟಾಗಬಹುದು.

ರಜ್ಜು ತಿರುಗುವಿಕೆ

ಕೆಲವೊಮ್ಮೆ ವೃಷಣ ರಜ್ಜು ತಿರುಗುವಿಕೆಯಿಂದಾಗಿ ರಕ್ತಪರಿಚಲನೆ ಕಡಿಮೆಯಾಗಿ ಬಿಡುತ್ತದೆ. ಇದರಿಂದಾಗಿ ವೃಷಣ ರಜ್ಜುವಿನಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಡಾಪ್ಲರ್ ಟೆಸ್ಟ್‌ನಿಂದ ಇದು ಪತ್ತೆಯಾಗುತ್ತದೆ. ಕೂಡಲೇ ಶಸ್ತ್ರಚಿಕಿತ್ಸೆ ಮಾಡುವುದು ಒಳ್ಳೆಯದು.

ಒಂದು ಮಾತನ್ನು ನೆನಪಿಡಿ, ಯಾವ ಚಿಕಿತ್ಸೆಯೂ ಇಲ್ಲದೆ ಮಕ್ಕಳಾಗುವ ಸಾಧ್ಯತೆ ಸಾಕಷ್ಟಿರುತ್ತದೆ. ದಂಪತಿಯಲ್ಲಿ ಯಾವ ತೊಂದರೆಯೂ ಇಲ್ಲದಿದ್ದರೆ, ಮೂರು ವರ್ಷಗಳಲ್ಲಿ ಯಾವ ಚಿಕಿತ್ಸೆಯೂ ಇಲ್ಲದೆ ಮಗು ಪಡೆಯುವ ಅವಕಾಶ ಮೂರರಲ್ಲಿ ಒಂದು ಇರುತ್ತದೆ. ಚಿಕಿತ್ಸೆ ಪಡೆಯುವುದರಿಂದ ನಿಮಗೆ ಮಕ್ಕಳಾಗುವ ಅವಕಾಶವನ್ನು ಹೆಚ್ಚಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT