ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ಹಲ್ಲು!

ವೈದ್ಯ-ಹಾಸ್ಯ
Last Updated 26 ಜುಲೈ 2013, 19:59 IST
ಅಕ್ಷರ ಗಾತ್ರ

ನನ್ನ ಡೆಂಟಲ್ ಕ್ಲಿನಿಕ್ಕಿಗೆ ಬರುವ ಬಹಳಷ್ಟು ಜನ ಕೇಳುವ ಪ್ರಶ್ನೆ `ಸಾರ್ ಈ ಹಲ್ಲುಗಳು ಯಾರದ್ದು?, ಯಾವ ಊರಿನ ಸ್ಮಶಾನ ಬುಕ್ ಮಾಡ್ಕೊಂಡಿದ್ದೀರಾ, ಒಬ್ರೇ ಹೋಗ್ತೀರಾ, ಐದಾರು ಜನ ಡಾಕ್ಟ್ರು ಸೇರ‌ಕೊಂಡು ತರ‌ತೀರಾ?'

ಮತ್ತೆ ಕೆಲವರು `ಹಲ್ಲಿನ ಕೆಲಸ ಬಹಳಾ ಕೊಳಕು ಸಾರ್, ಇದೇನ್ ಸಾರ್ ನೇರ ಬಾಯಿಗೇ ಹಿಂಗ್ ಕೈಹಾಕ್ತೀರಾ. ಛೀ, ಥೂ, ಯ್ಯಾ ನೀವು ದಿನಾ ಹೆಂಗ್ ಊಟ ಮಾಡ್ತೀರೋ ಏನೋ' ಎನ್ನುತ್ತಾ ನಮ್ಮನ್ನೇ ಗಲಿಬಿಲಿಗೊಳಿಸುತ್ತಾರೆ. `ಸಾರ್ ನನಗೆ ನಿಮ್ ಮುಂದೆ ಬಾಯಿ ತೆಗೀಬೇಕು ಅಂದ್ರೆ ತುಂಬಾ ನಾಚ್ಕೆ ಆಗುತ್ತೆ. ನಾನು ಈವರೆಗೂ ಯಾರ ಮುಂದೆನೂ ಬಾಯೇ ತೆಗ್ದಿಲ್ಲ' ಅಂತ ಹೇಳಿ ಮೂರ‌್ನಾಲ್ಕು ನಿಮಿಷ ತಡಕಾಡಿ, ನಾಚಿಕೆಯಿಂದ ಬಾಯಿ ತೆಗೆದು ಕಣ್ಣು ಮುಚ್ಚಿಕೊಳ್ಳುವವರೂ ಇದ್ದಾರೆ!
* * *
ಒಮ್ಮೆ ಹಲ್ಲು ತೆಗೆಸಲು ಬಂದಿದ್ದ ರೋಗಿಯೊಬ್ಬ, ತೆಗೆದ ನಂತರ ಕಸದ ಡಬ್ಬಿಗೆ ಹಾಕುವುದನ್ನು ನೋಡಿದ. `ಇದೇನ್ ಸಾರ್ ಹಲ್ಲು ತೆಗೆದು ಹೀಗೆ ಬಿಸಾಕ್ತೀರಾ? ನೇತ್ರದಾನ, ರಕ್ತದಾನ, ಅಂಗದಾನದ ಥರಾ ನಾನು ನಿಮಗೆ ದಂತದಾನ ಮಾಡಿದ್ದೀನಿ. ಅವಶ್ಯಕತೆ ಇರುವವರಿಗೆ ಹಾಕಿ, ನಿಮ್ಮ ಕ್ಲಿನಿಕ್‌ನಲ್ಲಿ ದಾನಿಗಳ ಪಟ್ಟಿಹಾಕಿ ಅದರಲ್ಲಿ ನನ್ನ ಹೆಸರು ಹಾಕಿ' ಎಂದ. ನಾನು ಕಿತ್ತ ಹಲ್ಲು ಮತ್ತೊಬ್ಬರಿಗೆ ಹಾಕಲು ಬರುವುದಿಲ್ಲ. ಬಿಸಾಡಬೇಕು ಎಂದು ತಿಳಿಹೇಳುವಷ್ಟರಲ್ಲಿ ಸಾಕಾಯಿತು.
* * *
ಒಮ್ಮೆ 60 ವರ್ಷದ ಹಿರಿಯರೊಬ್ಬರು ಮುರಿದಿದ್ದ ತಮ್ಮ ಹಲ್ಲಿನ ಸೆಟ್‌ನ್ನು ರಿಪೇರಿಗೆಂದು ತಂದಿದ್ದರು. ನಾನು ಎರಡು ದಿನದ ನಂತರ ಲ್ಯಾಬ್‌ನಲ್ಲಿ ರಿಪೇರಿ ಮಾಡಿಸಿ ಕೊಡುವೆನೆಂದು ಹೇಳಿದೆ. ಅದರಂತೆ ಅವರು ಎರಡು ದಿನ ಬಿಟ್ಟು ಬಂದಾಗ ಅನಿವಾರ‌್ಯ ಕಾರಣದಿಂದ ಶಿವಮೊಗ್ಗದ ಲ್ಯಾಬ್‌ನಿಂದ ಸೆಟ್ ಬರುವುದು ತಡವಾಗಿತ್ತು. `ಮರುದಿನ ತರಿಸಿ ಕೊಡುವೆ, ಬಂದ ಕೂಡಲೇ ಫೋನ್ ಮಾಡುತ್ತೇನೆ' ಎಂದು ಹೇಳಿ ಕಳುಹಿಸಿದೆ.

ನನ್ನ ದುರದೃಷ್ಟಕ್ಕೆ ಐದು ದಿನವಾದರೂ ಸೆಟ್ ಬರಲಿಲ್ಲ. ದಿನಗಳೆದಂತೆ ಆ ವ್ಯಕ್ತಿಯ ತಾಳ್ಮೆಯ ಮಿತಿ ಮೀರಿತು. ಆರನೇ ದಿನ ಲ್ಯಾಬ್‌ನವರಿಗೆ ಹಲ್ಲು ಸೆಟ್ ಬೇಕೇ ಬೇಕೆಂದು ಒತ್ತಾಯಿಸಿದೆ (ಅವರ ಮನೆಯಲ್ಲಿ ಸದಸ್ಯರೊಬ್ಬರು ತೀರಿಕೊಂಡಿದ್ದರಿಂದ ಲ್ಯಾಬ್‌ಗೆ ರಜೆ ಇದ್ದು, ಕೆಲಸ  ತಡವಾಗಿತ್ತು) ಕಷ್ಟವಾದರೂ ಮಾಡಿಕೊಡುವುದಾಗಿ ತಿಳಿಸಿ, ಒಂದೆರಡು ದಿನಗಳಲ್ಲಿ ತಲುಪಿಸುವುದಾಗಿ ಭರವಸೆ ಕೊಟ್ಟರು. ಆವರೆಗೂ ಆ ವ್ಯಕ್ತಿ ಸುಮಾರು 30-35 ಬಾರಿ ಫೋನ್ ಮಾಡಿ `ಬಂತಾ ಡಾಕ್ಟ್ರೇ' ಅಂತ ಕೇಳುತ್ತಲೇ ಇದ್ದರು. ಸ್ನಾನಕ್ಕೆ ಹೋದಾಗ, ಟಿಫಿನ್ ಮಾಡುವಾಗಲೆಲ್ಲ  ಪದೇ ಪದೇ ಫೋನ್ ಮಾಡುತ್ತಿದ್ದ ಅವರಿಗೆ ಸಬೂಬು ಹೇಳಿ ಹೇಳಿ ನನಗೆ ಸಾಕಾಗಿ ಹೋಯಿತು.

`ಸೆಟ್ ಬರುವ ದಿನ 11 ಗಂಟೆಗೆ ಬನ್ನಿ ಕೊಡುತ್ತೇನೆ' ಎಂದೆ. ಆಸಾಮಿ ಬೆಳಿಗ್ಗೆ 8 ಗಂಟೆಗೇ ಕ್ಲಿನಿಕ್ಕಿಗೆ ಬಂದು ಕಾಯುತ್ತಿದ್ದರು. 10 ಗಂಟೆಗೆ ನಾನು ಬಂದ ತಕ್ಷಣ `ಸಾರ್ ಇವತ್ತು ಕೊಡ್ರಿ' ಅಂದರು. ನಾನು `ಆಗ್ಲಿ ತಪ್ಪಿಸೋಲ್ಲ' ಅಂದೆ. 11 ಗಂಟೆ ಆಯ್ತು, ಪಾರ್ಸಲ್ ಬರುವುದು ತಡವಾಯ್ತು. ಅದು ತಲುಪಲು ಇನ್ನೂ ಒಂದೆರಡು ಗಂಟೆ ತಡವಾಗುವ ಬಗ್ಗೆ ಮಾಹಿತಿ ಬಂತು.

ಅಷ್ಟರೊಳಗೆ ಆತ `ರೀ ಎಷ್ಟ್ ಸುಳ್ಳು ಹೇಳ್ತೀರಾ? ನನ್ನ ಸೆಟ್ ಬೇರೆಯವರಿಗೆ ಬಾಡಿಗೆಗೆ ಕೊಟ್ಟಿದ್ದೀರಾ, ಇಲ್ಲ ಮಾರಿಕೊಂಡಿದ್ದೀರಾ? ನಮಗೆ ನೂರು ಕಾರಣ ಹೇಳ್ತೀರಾ. ಇಲ್ಲಾಂದ್ರೆ ರಿಪೇರಿಗೆ ಏಳೆಂಟು ದಿನ ಆಗುತ್ತಾ?' ಎಂದೆಲ್ಲ ಕೂಗಾಡಿಬಿಟ್ಟರು. ನಾನು ಏನೇ ಹೇಳಿದರೂ ಅವರು ಒಪ್ಪುವ ಲಕ್ಷಣ ಕಾಣಲಿಲ್ಲ. ವರಾಂಡದಲ್ಲಿದ್ದ ರೋಗಿಗಳ ಬಳಿಯೂ `ಡಾಕ್ಟ್ರು ನನ್ನ ಹಲ್ಲು ಸೆಟ್‌ನ ಯಾರಿಗೋ ಬಾಡಿಗೆ ಆಸೆಗೆ ಕೊಟ್‌ಬಿಟ್ಟಿದ್ದಾರೆ' ಎನ್ನುತ್ತಿದ್ದರು. ಅದಕ್ಕೆ ನಾನು `ರೀ ಅದು ಶರ್ಟ್, ಪ್ಯಾಂಟ್ ಥರಾ ಅಲ್ಲ, ಒಬ್ಬರಿಗೆ ಕೂರುವ ಸೆಟ್ ಮತ್ಯಾರಿಗೂ ಹೊಂದೋಲ್ಲ' ಎಂದೆ. ಅಷ್ಟರೊಳಗೆ ಆತನ ಸೆಟ್ ನನ್ನ ಕೈಸೇರಿತು. ಸದ್ಯ ತಲುಪಿಸಿದರೆ ಸಾಕು ಎಂಬಂತೆ ಆಗಿತ್ತು ನನ್ನ ಸ್ಥಿತಿ.

ಅದಾದ 10-15 ದಿನಗಳ ಬಳಿಕವೂ ಆತನ ಪರಿಚಯಸ್ಥರಾಗಿದ್ದ ನನ್ನ ರೋಗಿಗಳು `ಸಾರ್ ಅವ್ರ ಸೆಟ್ ಕೊಟ್ರ ಸಾರ್, ಕೊಟ್‌ಬಿಡಿ ಸಾರ್, ಪಾಪ ತಿಂಗಳುಗಟ್ಟಲೇ ಯಾಕ್ ಓಡಾಡಿಸ್ತೀರಾ' ಎಂದು ಹೇಳುತ್ತಲೇ ಇದ್ದರು. ನನಗಂತೂ ಆ ಹಲ್ಲು ಸೆಟ್‌ನ ಪ್ರಕರಣ ಅಷ್ಟೊಂದು ಸತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT