ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲೂ ಖಿನ್ನತೆ!

ವಾರದ ವೈದ್ಯ
Last Updated 23 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

-ಮಕ್ಕಳಲ್ಲಿ ಖಿನ್ನತೆ ಬಗ್ಗೆ ತಿಳಿಸಿ.
`ಅವರಿಗೆ ಯಾವುದೇ ಹೊಣೆಗಾರಿಕೆ ಇಲ್ಲ, ಚಿಂತೆ-ಆತಂಕಗಳಿಲ್ಲ. ಅವರಿಗೆ ಬೇಕಿದ್ದನ್ನೆಲ್ಲ ಒದಗಿಸಿ ಕೊಡಲು ನಾವಿದ್ದೇವೆ. ಸರಿಯಾಗಿ ಶಾಲೆಗೆ ಹೋಗಿ, ಓದಿಕೊಂಡು, ಒಳ್ಳೆಯ ಮಾರ್ಕ್ಸು ತೆಗೆಯಲು ಏನು ಕಷ್ಟ?' ಎನ್ನುವುದು ಅನೇಕ ಪಾಲಕರ ವಾದ.

ಆದರೆ ನೆನಪಿಡಿ, 8ರಿಂದ 18 ವರ್ಷ ಬಹಳ  ಸೂಕ್ಷ್ಮವಾದ ಕಾಲಘಟ್ಟ. ಪರಿವರ್ತನೆಯ ಕಾಲ ಇದು. ದೇಹದಲ್ಲಿ ಉಂಟಾಗುವ ಬದಲಾವಣೆಗಳು ಮನಸ್ಸಿನ ಮೇಲೂ ಪರಿಣಾಮ ಬೀರುತ್ತವೆ. ಸಣ್ಣ-ಪುಟ್ಟ ಸಂಗತಿಗಳಿಗೂ ಅವರ ಮನಸ್ಸು ಬಹಳ ಬೇಗ ಮತ್ತು ತೀವ್ರವಾಗಿ ಘಾಸಿಗೊಳ್ಳುತ್ತದೆ. ಯಾವುದೇ ರೀತಿಯ ಒತ್ತಡವನ್ನು ಭರಿಸುವ ಶಕ್ತಿಯೂ ಇರುವುದಿಲ್ಲ. ಆಗ ಬೇಗನೇ ಖಿನ್ನತೆಗೆ ಒಳಗಾಗುತ್ತಾರೆ. ಅವರು  ನಿಮ್ಮನ್ನು ಅರ್ಥ ಮಾಡಿ     ಕೊಳ್ಳುವ ಕಾಲ ಇದಲ್ಲ, ನೀವೇ ಅವರ ಮನಸ್ಸು ಹಾಗೂ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಆ ಕಾಲಘಟ್ಟವನ್ನು ದಾಟಿ ಬಂದಿರುವ ನಿಮಗೆ ಅದರ ಅರಿವು ಇರಲೇಬೇಕು. ನಿಮ್ಮ ಮಾರ್ಗದರ್ಶನ, ಬೆಂಬಲ ಮಕ್ಕಳಿಗೆ ಬೇಕು.

-ಇಂದಿನ ಮಕ್ಕಳು ಬಹಳ ಬೇಗ ಖಿನ್ನತೆಗೆ ಜಾರುವುದು ಯಾಕೆ?
ದುಡಿಯುವ ತಂದೆ-ತಾಯಿ, ಮನೆಯಲ್ಲಿ ಹಿರಿಯರಿಲ್ಲದ ವಾತಾವರಣ, ಹೆಚ್ಚುತ್ತಿರುವ ಅಧ್ಯಯನದ ಹೊರೆ, ಸ್ಪರ್ಧೆಯಲ್ಲಿ ದಣಿವಾರಿಸಿಕೊಳ್ಳದೇ ಓಡಬೇಕಾದ ಅನಿವಾರ್ಯತೆ, ಕಲುಷಿತ ವಾತಾವರಣ, ಅವಸರದ ಜೀವನ ಶೈಲಿ... ಇದೆಲ್ಲದರ ಪರಿಣಾಮ ಮಕ್ಕಳ ಮನಸ್ಸಿನ ಮೇಲೆ ಆಗದೇ ಇರದು. ಜೊತೆಗೆ ವಿಶ್ವಾಸಾರ್ಹ ಬೆಂಬಲ ಮತ್ತು ಮಾರ್ಗದರ್ಶನದ ಕೊರತೆಯಿಂದ ಇಂದಿನ ಪೀಳಿಗೆ ಬಹಳ ಬೇಗ ತಮ್ಮ ಮೇಲಿನ ಭರವಸೆ ಹಾಗೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಒಂದು ಸಣ್ಣ ಸೋಲು ಅಥವಾ ಅವಮಾನ ಅವರನ್ನು ತೀವ್ರ ಹತಾಶೆಗೆ ಎಳೆಯುತ್ತದೆ. ಮಕ್ಕಳು ಅನೇಕ ಬಗೆಯ ಆಘಾತಗಳಿಗೆ ಒಳಗಾಗಿ ಹೇಳಿಕೊಳ್ಳಲಾಗದಷ್ಟು ದುಃಖಿತರಾಗುತ್ತಾರೆ. ಬಹುಪಾಲು ಪ್ರಕರಣಗಳಲ್ಲಿ ತೀರಾ ಕ್ಷುಲ್ಲಕ ಎನಿಸಬಹುದಾದ ಕಾರಣಗಳಿಂದ ಮಕ್ಕಳ ಮನಸ್ಸಿನ ಮೇಲೆ ದೊಡ್ಡ ಮಟ್ಟದ ಕಂದಕಗಳು ಉಂಟಾಗಿರುವುದನ್ನು ನೋಡುತ್ತೇವೆ.

-ಖಿನ್ನತೆಯ ಮೂಲ?
1) ದೈಹಿಕ ಒತ್ತಡ: ಹವಾಮಾನ, ಸೋಂಕು, ರೋಗನಿರೋಧಕ ಶಕ್ತಿಯ ಕೊರತೆಯಿಂದ ನಿರಂತರ ಕಾಯಿಲೆಗೆ ತುತ್ತಾಗುವುದು ಇತ್ಯಾದಿ. 

2) ಭಾವನಾತ್ಮಕ ಒತ್ತಡ: ಕೌಟುಂಬಿಕ ಸಮಸ್ಯೆಗಳು, ಜಗಳ, ಪೋಷಕರ ವಿಚ್ಛೇದನ, ವೈಷಮ್ಯ, ಶಾಲೆಯಲ್ಲಿನ ಸಮಸ್ಯೆಗಳು, ಕೀಳರಿಮೆ ಇತ್ಯಾದಿ.
  
-ಮಕ್ಕಳ ಖಿನ್ನತೆಯ ಲಕ್ಷಣಗಳನ್ನು ತಿಳಿಸಿ.
ಎಲ್ಲದರಲ್ಲೂ ನಿರಾಸೆ, ಕೋಪ, ಏಕಾಂಗಿತನ, ಯಾವುದರಲ್ಲೂ ಆಸಕ್ತಿ ಇಲ್ಲ, ಏನು ಮಾಡಿದರೂ ಸೋಲುತ್ತೇನೆ ಎನ್ನುವ ಭಯದಿಂದ ಎಲ್ಲದರಿಂದಲೂ ದೂರ ಉಳಿಯುವುದು, ಅತಿಯಾದ ಆಹಾರ ಸೇವನೆ ಅಥವಾ ತಿನ್ನಲು, ಓದಲು ನಿರಾಸಕ್ತಿ, ಉಗುರು ಕಡಿಯುವುದು, ಏಕಾಗ್ರತೆಯ ಕೊರತೆ, ಅತಿ ನಿದ್ರೆ ಅಥವಾ ನಿದ್ರಾಹೀನತೆ, ಇದ್ದಕ್ಕಿದ್ದಂತೆ ಅಳುವುದು, ನಿದ್ರೆಯಲ್ಲಿ ಉಗ್ಗುವುದು ಇತ್ಯಾದಿ.

-ಮಕ್ಕಳ ಖಿನ್ನತೆಯನ್ನು ಆರಂಭದಲ್ಲೇ ಗುರುತಿಸುವುದು ಹೇಗೆ?
ಖಿನ್ನತೆಗೆ ಒಳಗಾದ ಎಲ್ಲ ಮಕ್ಕಳಲ್ಲೂ ಮೇಲೆ ತಿಳಿಸಿದ ಎಲ್ಲ ಲಕ್ಷಣಗಳೂ ಕಂಡು ಬರುತ್ತವೆ ಎಂದು ಹೇಳಲಾಗದು. ಇವುಗಳಲ್ಲಿ 5-6 ಲಕ್ಷಣಗಳು ಕಾಣಿಸಿದರೂ ಅಂತಹವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಅಗತ್ಯ ಕಂಡುಬಂದರೆ ಮಕ್ಕಳ ಮನೋಚಿಕಿತ್ಸಕರ ಬಳಿ ಕರೆದುಕೊಂಡು ಹೋಗಬೇಕು.

-ಇದರ ಪರಿಣಾಮವೇನು?
ಅಂತಹ ಮಕ್ಕಳು ಶಾಲೆಯಲ್ಲಿ ಸಮಸ್ಯೆ ಎದುರಿಸಬಹುದು, ಅಧ್ಯಯನದಲ್ಲಿ ಹಿಂದೆ ಬೀಳಬಹುದು, ಮನೆಯಿಂದ ಪಲಾಯನ ಮಾಡಬಹುದು, ಚಟಗಳ ದಾಸರಾಗಬಹುದು, ಹಿಂಸಾ ಪ್ರವೃತ್ತಿ ತೋರ್ಪಡಿಸಬಹುದು, ಕೆಲವೊಮ್ಮೆ ಆತ್ಮಹತ್ಯೆಯಂತಹ ಅಪಾಯಕಾರಿ ಆಲೋಚನೆಗಳಲ್ಲೂ ಮುಳುಗಬಹುದು.

-ಇದಕ್ಕೆ ಕಾರಣಗಳೇನು?
ಕುಟುಂಬದ ಇತಿಹಾಸ, ಪರಿಸರ (ಮನೆ, ಶಾಲೆ) ಜನ (ಕುಟುಂಬದ ಸದಸ್ಯರು, ಶಿಕ್ಷಕರು, ಗೆಳೆಯರು) ಮುಂತಾದ ಅಂಶಗಳು ಕಾರಣವಾಗುತ್ತವೆ.

-ಖಿನ್ನತೆಯಿಂದ ಮಕ್ಕಳನ್ನು ಹೊರಗೆ ತರುವುದು ಹೇಗೆ?
ಯಾವುದೇ ಬಗೆಯ ಒತ್ತಡ ಅಸಹನೀಯವಾದರೂ ಮಕ್ಕಳು ದುರ್ಭರ ನೋವು, ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಹೀಗಾಗಿ ಪಾಲಕರು/ ಶಿಕ್ಷಕರು ಅವರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಕಾಲಿಕವಾಗಿ ಅವರ ನೆರವಿಗೆ ಧಾವಿಸಬೇಕು. ಮೊದಲು ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಬೇಕು. ಬರೀ ಭಾಷಣ ಮಾಡುವ ಬದಲು ಅವರಿಗೆ ಮಾತನಾಡಲು ಬಿಡಬೇಕು, ಅವರು ಹೇಳುವುದನ್ನು ಶಾಂತವಾಗಿ ಕೇಳಿಸಿಕೊಳ್ಳಬೇಕು. ಮಕ್ಕಳನ್ನು ಇತರರ ಮುಂದೆ ಟೀಕಿಸಬಾರದು. ಅವರ ಒಳ್ಳೆಯ ಗುಣಗಳನ್ನು ಪ್ರಶಂಸಿಸಬೇಕು. ಅಂತೆಯೇ ಸೂಕ್ತವಾದ ಆಹಾರ ಹಾಗೂ ವ್ಯಾಯಾಮ ಕೂಡ ಮಕ್ಕಳ ಖಿನ್ನತೆಯನ್ನು ದೂರ ಮಾಡಲು ನೆರವಾಗಬಹುದು.

-ಚಿಕಿತ್ಸೆ ಏನು?
ತೀವ್ರ ಖಿನ್ನತೆಗೆ ಗುರಿಯಾದ ಮಕ್ಕಳಿಗೆ ಮೇಲಿನ ಎಲ್ಲ ಪ್ರಯತ್ನಗಳ ಜೊತೆಗೆ ಚಿಕಿತ್ಸೆಯೂ ಅಗತ್ಯವಾಗುತ್ತದೆ. ಕೆಲವು ಪ್ರಕಾರದ ಔಷಧಿಗಳು ಹಾಗೂ ವರ್ತನಾ ಥೆರಪಿ ಮೂಲಕ ಇಂತಹ ಸಮಸ್ಯೆಯನ್ನು ಸರಿಪಡಿಸಬಹುದು.

-ಪಾಲಕರಿಗೆ ನಿಮ್ಮ ಕಿವಿಮಾತು...
ಮಕ್ಕಳಿಗೆ ಪ್ರೀತಿ, ವಿಶ್ವಾಸಗಳಿಂದ ಸೂಕ್ತ ಮಾರ್ಗದರ್ಶನ ನೀಡಿ. ಮಕ್ಕಳಿಂದ ಮಹತ್ವದ ನಿರೀಕ್ಷೆ ಹೊಂದುವ ಬದಲು, ಅವರ ಶಕ್ತಿ-ಸಾಮರ್ಥ್ಯವನ್ನು ಗಮನದಲ್ಲಿ ಇಟ್ಟುಕೊಳ್ಳಿ. ಅವರ ಆಸಕ್ತಿಯನ್ನು ಗೌರವಿಸಿ ಮತ್ತು ಪ್ರೋತ್ಸಾಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT