ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬದ್ಧತೆ: ಹೃದಯಕ್ಕೂ ತೊಂದರೆ ಮಾಡೀತು!

Last Updated 6 ಜನವರಿ 2017, 19:30 IST
ಅಕ್ಷರ ಗಾತ್ರ

ಡಾ. ಮುಹಮ್ಮದ್ ಮಜೀದ್
ಹೊಟ್ಟೆ ಉಬ್ಬರಿಸಿದೆಯೇ? ಶೌಚಾಲಯಕ್ಕೆ ಹೋದರೂ ಪ್ರಯೋಜನವಾಗುತ್ತಿಲ್ಲವೇ? ಕಿರಿಕಿರಿ, ಕಷ್ಟವಾಗುವುದು, ಮನಸ್ಸಿನ ಭಾವಗಳು ಪದೇ ಪದೇ ಬದಲಾಗುವುದು, ಮತ್ತು ಹೊಟ್ಟೆ ತೊಳಸುವುದು, ವಾಂತಿಯಾಗುವಂತೆ ಆಗುವುದು, ಹೊಟ್ಟೆ ನೋವು ಇತ್ಯಾದಿಗಳು ಆಗುತ್ತಿವೆಯೇ? ಬಹುಶಃ ನೀವು ಮಲಬದ್ಧತೆಯಿಂದ ಬಳಲುತ್ತಿದ್ದೀರಿ.

ಇತ್ತೀಚಿನ ಸಮೀಕ್ಷೆಯೊಂದು ಹೇಳುವಂತೆ ನಗರವಾಸಿ ಭಾರತೀಯರಲ್ಲಿ ಸುಮಾರು ಶೇ. 14ರಷ್ಟು ಜನರು ಮಲಬದ್ಧತೆಯಿಂದ ಬಳಲುತ್ತಿದ್ದಾರೆ; ಜಾಗತಿಕ ಸರಾಸರಿಗಿಂತಲೂ ಇದು ಹೆಚ್ಚು. ಮೂರು ಅಥವಾ ನಾಲ್ಕು ದಿನಗಳ ಕಾಲ ಕರುಳಿನ ಚಲನೆ (ಮಲವಿಸರ್ಜನೆ) ಸರಿಯಾಗಿ ಆಗದಿದ್ದರೆ ಮಲಬದ್ಧತೆ ಆಗಿದೆಯೆಂದು ವೈದ್ಯಕೀಯಶಾಸ್ತ್ರದಲ್ಲಿ ಹೇಳಲಾಗುತ್ತದೆ. ಸಂಶೋಧನೆಯೊಂದರ ಪ್ರಕಾರ, ಐದು ಜನರಲ್ಲಿ ಮೂರು ಜನರು ತಮ್ಮ ಜೀವಿತಾವಧಿಯಲ್ಲಿ ಮಲಬದ್ಧತೆ ತೊಂದರೆ ಅನುಭವಿಸಿರುತ್ತಾರೆ.

ಆಹಾರದಲ್ಲಿ ನಾರಿನ ಮತ್ತು ನೀರಿನ ಅಂಶಗಳು ಕಡಿಮೆಯಾದಾಗ ಸಾಮಾನ್ಯವಾಗಿ ಮಲಬದ್ಧತೆ ಉಂಟಾಗುತ್ತದೆ. ದೈಹಿಕ ವ್ಯಾಯಾಮದ ಕೊರತೆ ಅಥವಾ ಯಾವುದಾದರೂ ಔಷಧಗಳ ಅಡ್ಡಪರಿಣಾಮಗಳಿಂದಲೂ ಹೀಗಾಗಬಹುದು.

ಮಲಬದ್ಧತೆಯಲ್ಲಿ ಮೂರು ಬಗೆಗಳಿವೆ: (1) ಯಾವಾಗಲೋ ಒಮ್ಮೊಮ್ಮೆ ಕಾಡುವಂಥದ್ದು, (2) ಪ್ರವಾಸಸಂಬಂಧಿಯಾಗಿರುವಂಥದ್ದು,  ಮತ್ತು, (3) ಪದೇ ಪದೇ ಆಗುವಂಥದ್ದು. ಮಹಿಳೆಯರಲ್ಲಿ ಮಲಬದ್ಧತೆಯ ಸಂಭವ ಪುರುಷರಿಗಿಂತ 2–3 ಪಟ್ಟು ಅಧಿಕ.

ದೀರ್ಘಕಾಲದ ಮಲಬದ್ಧತೆಯಿಂದ ಬಳಲುತ್ತಿರುವವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಆಗುವುದು ಸಾಮಾನ್ಯ. ಮಲಬದ್ಧತೆಯಿಂದಾಗಿ ಮಲವಿಸರ್ಜನೆಯ ಸಮಯದಲ್ಲಿ ಒತ್ತರಿಸಬೇಕಾಗುತ್ತದೆ. ಇದರಿಂದ ರಕ್ತಸಂಚಲನೆ ನಿಧಾನವಾಗುತ್ತದೆ; ರಕ್ತ ಹೆಪ್ಪುಗಟ್ಟಲೂಬಹುದು. ಇದೇ ಕೆಲವು ಸಂದರ್ಭಗಳಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಮುಖ್ಯ ಕಾರಣವೂ ಆಗಬಹುದು.

ಮಲಬದ್ಧತೆಯ ಬಗ್ಗೆ ಮುಜುಗರವಾಗಲೀ ಸಂಕೋಚವಾಗಲೀ ಪಡಬೇಕಾಗಿಲ್ಲ. ಮಲಬದ್ಧತೆಯನ್ನು ತಡೆಯಲು ಮತ್ತು ಅದರಿಂದ ಪರಿಹಾರ ಪಡೆಯಲು ಅನೇಕ ಸುರಕ್ಷಿತವಾದ ಹಾಗೂ ನೈಸರ್ಗಿಕ ವಿಧಾನಗಳಿವೆ.

ಕೆಲವು ಉಪಾಯಗಳು ಹೀಗಿವೆ: ಹೆಚ್ಚಿಗೆ ನೀರನ್ನು ಸೇವಿಸಿ: ನೀವು ಕುಡಿಯುವ ನೀರು ಮಲವಿಸರ್ಜನೆಗೆ ನೆರವಾಗುತ್ತದೆ. ನಿಮ್ಮ ಆಹಾರದಲ್ಲಿ ನಾರಿನಂಶ ಹೆಚ್ಚಿಸಿದಾಗಲಂತೂ ಹೆಚ್ಚು ನೀರನ್ನು ಸೇವಿಸುವುದು ಅತ್ಯವಶ್ಯಕ. ನಿಮ್ಮ ಆಹಾರದಲ್ಲಿ ಹಣ್ಣಿನ ರಸ, ತಿಳಿಸಾರು ಮತ್ತು ಬಿಸಿ ಚಹಾಗಳಂತಹ ದ್ರವಗಳೂ ಹೆಚ್ಚಾಗಿರಲಿ.

ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸಿ: ನಾರು ನೈಸರ್ಗಿಕ ಭೇದಿಔಷಧದಂತೆ ಕೆಲಸ ಮಾಡುತ್ತದೆ. ನಾರಿನ ಜೊತೆ ನೀರನ್ನೂ ಹೆಚ್ಚು ಸೇವಿಸಬೇಕು. ಏಕಾಏಕಿ ಆಹಾರಕ್ರಮವನ್ನು ಬದಲಿಸಬೇಡಿ. ಅದರಿಂದ ಹೊಟ್ಟೆ ಉಬ್ಬುತ್ತದೆ, ಗ್ಯಾಸ್ ತುಂಬಿಕೊಳ್ಳುತ್ತದೆ. ನಾರಿನಂಶವನ್ನು ಕ್ರಮೇಣ ಹೆಚ್ಚಿಸಿ. ನಾರಿನಂಶ ಹೆಚ್ಚಿರುವ ಆಹಾರ ಮೂಲಗಳೆಂದರೆ – ಬೆರ್ರಿಗಳು, ಹಸಿರೆಲೆ ತರಕಾರಿಗಳು, ಬೀನ್ಸ್ ಮತ್ತು ಬಸಲೆ ಇತ್ಯಾದಿ ಸೊಪ್ಪುಗಳು, ಬೀಜಗಳು ಮತ್ತು ಕಾಯಿಗಳು ಮತ್ತು ಸಂಸ್ಕರಿಸದ ಇಡೀ ಧಾನ್ಯಗಳು.

ಮೊಸರನ್ನು ಬಿಟ್ಟು ಬೇರೆ ಡೈರಿ ಉತ್ಪನ್ನಗಳು ಬೇಡ: ಚೀಸ್, ಹಾಲು ಮತ್ತಿತರ ಡೈರಿ ಉತ್ಪನ್ನಗಳಲ್ಲಿ ಲ್ಯಾಕ್ಟೋಸ್ ಇರುತ್ತದೆ. ಇದು ಗ್ಯಾಸ್‌ಗೆ ಕಾರಣವಾಗುತ್ತದೆ. ಹೊಟ್ಟೆ ಉಬ್ಬರಿಸಿ ಮಲಬದ್ಧತೆಯಾಗುತ್ತದೆ. ಮಲವಿಸರ್ಜನೆಗೆ ತೊಂದರೆಯಾಗುತ್ತಿದ್ದರೆ ಈ ಉತ್ಪನ್ನಗಳನ್ನು ತ್ಯಜಿಸಿ. ಆದರೆ ಮೊಸರನ್ನು ತಿನ್ನಬಹುದು. ಮೊಸರಿನಲ್ಲಿ ಪ್ರೋಬಯೋಟಿಕ್ ಬ್ಯಾಕ್ಟೀರಿಯಾಗಳು ಇರುತ್ತವೆ. ಇವು ಪಚನಕ್ಕೆ ನೆರವಾಗುತ್ತವೆ. ನಿತ್ಯ ಮೊಸರನ್ನು ಸೇವಿಸಿದರೆ ಮಲವಿಸರ್ಜನೆ ಚೆನ್ನಾಗಿ ಆಗುತ್ತದೆ.

ನೈಸರ್ಗಿಕ ಭೇದಿಔಷಧಗಳು: ಸಸ್ಯಮೂಲಗಳಿಂದ ಸಿಗುವ, ನಾರಿನಂಶಗಳಿಂದ ಆಗಿರುವ ನೈಸರ್ಗಿಕ ಭೇದಿಔಷಧಗಳನ್ನು ಬಳಸಿ. ಇದು ಕರಗುವ ಮತ್ತು ಕರಗದಿರುವ ನಾರಿನಂಶಗಳಾಗಿರಬಹುದು. ಇವುಗಳನ್ನು ಸೇವಿಸಿದಾಗ ನೀರನ್ನು ಹೀರಿಕೊಂಡು ಮಲದ ಪ್ರಮಾಣ ಹೆಚ್ಚಿದಂತಾಗುತ್ತದೆ. ಆಗ ಕರುಳಿನ ಚಲನೆಗೆ ಅನುಕೂಲವಾಗುತ್ತದೆ.  ಸಿಲಿಯಂ ತೌಡು (ನಾರಿನಂಶ) ಮತ್ತು ಮೆಂತ್ಯ (ಕಲನ್ ಸ್ವಚ್ಛಗೊಳಿಸುತ್ತದೆ)ಗಳಿಂದ ಮಾಡಿದ ಭೇದಿಔಷಧಗಳು ಸೌಮ್ಯವಾದರೂ ಬಹಳ ಪರಿಣಾಮಕಾರಿ.

ಮೆಗ್ನೀಷಿಯಂ ಅನ್ನು ಸೇವಿಸಿ: ಮೆಗ್ನೀಷಿಯಂ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ. ಮಲಬದ್ಧತೆಯ ನಿವಾರಣೆಗೆ ಮೆಗ್ನೀಷಿಯಂ  ಬಹಳ ಪರಿಣಾಮಕಾರಿ ಎಂಬುದು ವೈಜ್ಞಾನಿಕವಾಗಿ ತಿಳಿದಿದೆ. ಇದು ಕರುಳಿನಲ್ಲಿ ಮಲವು ಚಲಿಸಲು ನೆರವಾಗುತ್ತದೆ. ಆದರೆ ವೈದ್ಯರ ಸಲಹೆ ಪಡೆದು ಮೆಗ್ನೀಷಿಯಂ ಪೂರಕಗಳನ್ನು ತೆಗೆದುಕೊಳ್ಳಿ.

ಕರಿದ/ಹುರಿದ ಆಹಾರಗಳನ್ನು ತ್ಯಜಿಸಿ: ಕರಿದ/ಹುರಿದ ಚಿಕನ್, ಇತ್ಯಾದಿ ಜಂಕ್/ಸಂಸ್ಕರಿಸಿದ ಆಹಾರಗಳನ್ನು ಅತಿಯಾಗಿ ಸೇವಿಸುತ್ತಿದ್ದರೆ ದೀರ್ಘಕಾಲಿಕ ಮಲಬದ್ಧತೆಯಾಗುತ್ತದೆ. ಬದಲಿಗೆ ಸಿಪ್ಪೆ ತೆಗೆಯದ ಕಾಳು–ಕಡಿ/ಧಾನ್ಯಗಳನ್ನು ತಿನ್ನಿ. ಕೊಬ್ಬು/ಸಕ್ಕರೆ ಅತಿಯಾಗಿರುವ ಜಂಕ್ ಆಹಾರಗಳನ್ನು ತ್ಯಜಿಸಿ. ಕೊಬ್ಬಿಲ್ಲದ ಚಿಕನ್, ಟರ್ಕಿ ಅಥವಾ ಮೀನನ್ನು ತಿನ್ನಿ.

ವ್ಯಾಯಾಮ: ವ್ಯಾಯಾಮದ ಮಹತ್ತ್ವವನ್ನು ಎಷ್ಟು ಹೇಳಿದರೂ ಸಾಲದು. ಪ್ರತಿ ದಿನ ಕನಿಷ್ಠ ಅರ್ಧ ತಾಸಾದರೂ ವ್ಯಾಯಾಮವನ್ನು ಮಾಡಿ. ನಡೆಯಿರಿ ಅಥವಾ ಜಾಗ್ ಮಾಡಿ. ಆಹಾರಕ್ರಮ ಎಷ್ಟೇ ಉತ್ತಮವಾಗಿದ್ದರೂ ಜಡವಾದ ಜೀವನಶೈಲಿಯಿಂದಾಗಿ ಪಚನ ಸರಿಯಾಗುವುದಿಲ್ಲ; ಮಲಬದ್ಧತೆ ಉಂಟಾಗುತ್ತದೆ. ವಾರದಲ್ಲಿ ಕನಿಷ್ಠ ವ್ಯಾಯಾಮವಾದರೂ ಅಗತ್ಯ.

ಈ ಎಲ್ಲ ಕ್ರಮಗಳನ್ನು ಅನುಸರಿಸಿದರೆ ಮಲಬದ್ಧತೆಯನ್ನು ದೂರವಿಡಲು ಸಾಧ್ಯವಾಗಬಹುದು. ಸರಿಯಾಗಿ ಗಮನಕೊಟ್ಟರೆ ಮಲಬದ್ಧತೆ ಮರುಕಳಿಸುವುದೂ ಇಲ್ಲ.
(ಲೇಖಕರು ಸಮಿ ಲ್ಯಾಬ್ಸ್ ಸಂಸ್ಥಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT