ನಮಗೆ ಸಂಕ್ರಾತಿ ವಿಶೇಷ ಹಬ್ಬ. ನಾನು ಚಿಕ್ಕವಳಿದ್ದಾಗಿನಿಂದಲೂ ನಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಿಗೆ ಹೋಗಿ ಎಳ್ಳು ಬೆಲ್ಲ ಬೀರುತ್ತಿದೆ. ಇಂದಿಗೂ ಆ ಅಭ್ಯಾಸ ಮುಂದುವರಿದಿದೆ. ಈಗ ನನ್ನ ಗಂಡ ಸುಂದರ್ ಹಾಗೂ ಮಕ್ಕಳು ಕೂಡ ನನಗೆ ಸಾಥ್ ನೀಡುತ್ತಾರೆ. ನಾನು ಹಬ್ಬ ಹಾಗೂ ಹಬ್ಬದ ಮೊದಲ ದಿನದಲ್ಲಿ ಬಿಡುವು ಮಾಡಿಕೊಳ್ಳುತ್ತೇನೆ. ಹಬ್ಬಕ್ಕೆ ನಾನು ಸ್ವೀಟ್, ಖಾರ ಎರಡು ರೀತಿಯ ಪೊಂಗಲ್ ತಯಾರಿಸುವುದು ವಿಶೇಷ.
ಬೇಕಾಗುವ ಸಾಮಗ್ರಿಗಳು: ಹೆಸರು ಬೇಳೆ –ಮುಕ್ಕಾಲು ಪಾವು, ಅಕ್ಕಿ – ಒಂದು ಪಾವು, ಈರುಳ್ಳಿ (ಹಬ್ಬದ ದಿನ ಬಳಸುವುದಿಲ್ಲ), ಕಾಯಿತುರಿ– ಒಂದು ಬಟ್ಟಲು, ಬೆಳ್ಳುಳ್ಳಿ (ಹಬ್ಬದ ದಿನ ಬಳಸುವುದಿಲ್ಲ), ಹಸಿಮೆಣಸಿನಕಾಯಿ – 4, ಅರಶಿನ – ಸ್ವಲ್ಪ, ಜೀರಿಗೆ – ಸ್ವಲ್ಪ, ಕಾಳುಮೆಣಸು– 4 ಕಾಳು, ಕಾಳುಮೆಣಸಿನ ಪುಡಿ – ಒಗ್ಗರಣೆಗೆ, ಇಂಗು – ಚಿಟಿಕೆ
ಒಗ್ಗರಣೆಗೆ: ತುಪ್ಪ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಕಾಳುಮೆಣಸಿನ ಪುಡಿ, ಗೊಡಂಬಿ
ತಯಾರಿಸುವ ವಿಧಾನ: ಮೊದಲು ಹೆಸರು ಬೇಳೆ ಹಾಗೂ ಅಕ್ಕಿಯನ್ನು ತೊಳೆದು ಕುಕ್ಕುರ್ನಲ್ಲಿ ಸ್ವಲ್ಪ ಜಾಸ್ತಿ ನೀರು ಸೇರಿಸಿ ಬೇಯಿಸಿಕೊಳ್ಳಬೇಕು. ಅದು ಸ್ವಲ್ಪ ಪೇಸ್ಟ್ ರೀತಿ ಬೇಯಬೇಕು. ನಂತರ ಮಿಕ್ಸಿಗೆ ಕಾಯಿತುರಿ, ಈರುಳ್ಳಿ (ಬೇಕಿದ್ದರೆ), ಬೆಳುಳ್ಳಿ (ಬೇಕಿದ್ದರೆ), ಜೀರಿಗೆ, ಹಸಿಮೆಣಸಿನ ಕಾಯಿ, ಕಾಳುಮೆಣಸು, ಇಂಗು ಸೇರಿಸಿ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣವನ್ನು ಬೇಯಿಸಿಕೊಂಡ ಅನ್ನ ಹೆಸರುಬೇಳೆ ಮಿಶ್ರಣಕ್ಕೆ ಸೇರಿಸಬೇಕು, ಅದಕ್ಕೆ ಸ್ವಲ್ಪ ನೀರು ಸೇರಿಸಿ ಸ್ವಲ್ಪ ಕುದಿಸಬೇಕು. ನಂತರ ಬೇರೆ ಪಾತ್ರೆಯೊಂದರಲ್ಲಿ ತುಪ್ಪ, ಕರಿಬೇವು, ಇಂಗು, ಕಾಳುಮೆಣಸು, ಸಾಸಿವೆ, ಕಾಳುಮೆಣಸಿನ ಪುಡಿ, ಗೊಡಂಬಿ ಸೇರಿಸಿ ಒಗ್ಗರಣೆ ತಯಾರಿಸಿ. ಆ ಒಗ್ಗರಣೆಯನ್ನು ಕುದಿಯುತ್ತಿರುವ ಪೊಂಗಲ್ಗೆ ಸೇರಿಸದರೆ ಖಾರ ಪೊಂಗಲ್ ರೆಡಿ.