ಬುಧವಾರ, ಮಾರ್ಚ್ 3, 2021
19 °C

ಹೊರ ರಾಜ್ಯದ ವಿದ್ಯಾರ್ಥಿಗಳ ಅಟಾಟೋಪ: ಹೈಕೋರ್ಟ್ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ಹೊರ ರಾಜ್ಯಗಳ ವಿದ್ಯಾರ್ಥಿಗಳ ಅಟಾಟೋಪ ರಾಜ್ಯದಲ್ಲಿ ಹೆಚ್ಚಾಗಿದೆ’ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ನಗರದ ಡೀಮ್ಡ್ ವಿಶ್ವವಿದ್ಯಾಲಯದ ಐದು ವರ್ಷಗಳ ಕಾನೂನು ವಿದ್ಯಾರ್ಥಿನಿಗೆ ಸಹಪಾಠಿಗಳು ಮಾನಸಿಕ ದೌರ್ಜನ್ಯ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವಿದ್ಯಾರ್ಥಿನಿ ಪರ ವಾದ ಮಂಡಿಸಿದ ಹಿರಿಯ ವಕೀಲೆ ಜಯ್ನಾ ಕೊಠಾರಿ, ‘ದೆಹಲಿಯಿಂದ ಇಲ್ಲಿ ಬಂದು ಕಲಿಯುತ್ತಿರುವ ಇಬ್ಬರು ಸಹಪಾಠಿಗಳು ವಿದ್ಯಾರ್ಥಿನಿಗೆ ಮೊಬೈಲ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿಗೆ ದೂರು ನೀಡಿದರೆ, ಆಡಳಿತ ಮಂಡಳಿ ತುಂಬಾ ಲಘುವಾಗಿ ವರ್ತಿಸುತ್ತಿದೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ಗರಂ ಆದ ನ್ಯಾಯಮೂರ್ತಿ ಬಿ.ವೀರಪ್ಪ, ‘ಕಾಲೇಜು ಕ್ಯಾಂಪಸ್ ಗಳಲ್ಲಿ ಈ ರೀತಿಯ ಚಟುವಟಿಕೆಗಳನ್ನು ನಿಯಂತ್ರಣ ಮಾಡುವ ಬದಲಿಗೆ ನೀವು ಡೊನೇಷನ್ ಮರ್ಜಿಯಲ್ಲಿ ಸುಮ್ಮನಿದ್ದೀರಾ’ ಎಂದು ವಿ.ವಿ‌ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು.

‘ಇನ್ನೂ 19 ಹರಯದಲ್ಲಿರುವ ಇಂತಹ ವಿದ್ಯಾರ್ಥಿಗಳು ಸಮಾಜ ಘಾತುಕ ಶಕ್ತಿಗಳಾಗಿ ಬೆಳೆಯುತ್ತಿದ್ದಾರೆ. ರಾಜ್ಯಕ್ಕೆ, ದೇಶಕ್ಕೆ ಕೆಟ್ಟ ಹೆಸರು ತರುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅವರ ಅಪ್ಪ ಅಮ್ಮ ಕಷ್ಟಪಟ್ಟು ದುಡಿದು ಹಣ ಕಳುಹಿಸಿ ಇವರನ್ನು ಓದಿಸುತ್ತಿದರೆ, ಇವರಿಲ್ಲಿ ಮೋಜಿನ ಜೀವನ ನಡೆಸುತ್ತಿದ್ದಾರೆ. ಇಂತಹವರನ್ನೆಲ್ಲಾ ಒದ್ದು ಆಚೆಗೆ ಹಾಕಬೇಕು’ ಎಂದು ಕಿಡಿ ಕಾರಿದರು.

‘ಶಿಕ್ಷಣ ಸಂಸ್ಥೆಗಳು ಲಾಭದ ಆಸೆಗಾಗಿ ಇಂತಹ ಕಿಡಿಗೇಡಿಗಳನ್ನು ಸುಮ್ಮನೇ ಬಿಡುತ್ತಾರೆ. ಕಠಿಣ ಶಿಕ್ಷೆ ನೀಡುವುದಿಲ್ಲ. ಸಾಮಾಜಿಕ ಹೊಣೆಗಾರಿಕೆ ಎಂಬುದು ಈ ರೀತಿಯ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲವಾಗಿದೆ. ವಿದ್ಯಾರ್ಥಿಗಳನ್ನು ಮಿಲಿಟರಿ ಶಿಸ್ತಿನಲ್ಲಿ ಸೆದೆ ಬಡಿದರೆ ಬುದ್ಧಿ ಬರುತ್ತದೆ’ ಎಂದು ಆಕ್ರೋಶ ಹೊರ ಹಾಕಿದರು.

ಇದೇ ವೇಳೆ ಆರೋಪಿಗಳ ಪರ ಹಾಜರಿದ್ದ ವಕೀಲ ಪಿ.ಪಿ.ಹೆಗ್ಡೆ, ‘ಅಕಸ್ಮಾತ್ ಆಗಿ ಈ ರೀತಿಯ ಸಂದೇಶಗಳು ಮೊಬೈಲ್‌ನಲ್ಲಿ ರವಾನೆಯಾಗಿವೆ. ಅರ್ಜಿದಾರರು ಮುಗ್ಧರು’ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.

ಇದಕ್ಕೆ ಮತ್ತಷ್ಟು ರೇಗಿದ ವೀರಪ್ಪ, ‘ನೀವು ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷರು ಎಂಬುದನ್ನು ಮರೆಯಬೇಡಿ. ಕಾನೂನು ಕಾಲೇಜಿನಲ್ಲಿ ಈ ರೀತಿಯ ಚಟುವಟಿಕೆ ನಡೆಯುತ್ತಿವೆ ಎಂದಾದರೆ ನೀವೇನು ಮಾಡುತ್ತಿದ್ದೀರಿ. ನಿಮಗೆ ಬರೀ ಪರಿಷತ್ ಚುನಾವಣೆಯದ್ದೇ ಧ್ಯಾನ’ ಎಂದು ತಿವಿದರು.

ಈ ಪ್ರಕರಣ ಎರಡೂ ಕಡೆಯ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಜಯ್ನಾ ಕೊಠಾರಿ ಮತ್ತು ನೀವು ಇಬ್ಬರೂ ಕುರಿತು ಮಾತುಕತೆಯ ಮುಖಾಂತರ ಸಮಸ್ಯೆಗೆ ಪರಿಹಾರ ಕಂಡುಕೊಂಡು ಕೋರ್ಟ್‌ಗೆ ತಿಳಿಸಿ ಎಂದು ಸೂಚಿಸಿದರು.

ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು